ಬಾಂಗ್ಲಾದೇಶದಲ್ಲಿ ವಿವಾದ ಸೃಷ್ಟಿಸಿರುವ ಅದಾನಿ ವಿದ್ಯುತ್ ಒಪ್ಪಂದ

Date:

ಪ್ರಧಾನಿ ಮೋದಿ ಅವರ ಆಪ್ತರೆಂದೇ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಗೌತಮ್ ಅದಾನಿ ಈಗ ಬಾಂಗ್ಲಾ ದೇಶದ ಸಂಸತ್ತಿನಲ್ಲೂ ಗದ್ದಲವೆಬ್ಬಿಸಿದ್ದಾರೆ. ಅದಾನಿ ವಿದ್ಯುತ್‌ ಇಂದ ಆಗುವ ಪರಿಸರ ನಾಶದ ಬಿಸಿ ಭಾರತಕ್ಕೆ; ದುಬಾರಿ ವಿದ್ಯುತ್ ಬಾಂಗ್ಲಾದೇಶಕ್ಕೆ; ಒಟ್ಟು ಯೋಜನೆಯ ತೆರಿಗೆ ಲಾಭ ಮಾತ್ರ ಅದಾನಿ ಕಂಪನಿಗೆ ಸಿಗುತ್ತಿದೆ!

ಉದ್ಯಮಿ ಗೌತಮ್ ಅದಾನಿ ಕುರಿತು ಭಾರತೀಯ ಸಂಸತ್ತಿನಲ್ಲಿ ಮಾತ್ರವಲ್ಲ, ಬಾಂಗ್ಲಾದೇಶದ ಸಂಸತ್ತಿನಲ್ಲೂ ಗದ್ದಲ ಸೃಷ್ಟಿಯಾಗಿದೆ. ಬಾಂಗ್ಲಾದೇಶದ ವಿಪಕ್ಷಗಳು ಅದಾನಿ ವಿದ್ಯುತ್‌ ಒಪ್ಪಂದ ವಿರೋಧಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯ ನೇತೃತ್ವದಲ್ಲಿ ಜಾರ್ಖಂಡ್ ರಾಜ್ಯದಲ್ಲಿರುವ ಗೊಡ್ಡಾ ವಿದ್ಯುತ್‌ ಘಟಕವನ್ನು 1.7 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಕಲ್ಲಿದ್ದಲು ಆಧರಿಸಿದ ಈ 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕದಿಂದ ವಿದ್ಯುತ್ ವರ್ಗಾವಣೆ ಪರೀಕ್ಷೆ ಇನ್ನೂ ನಡೆದಿಲ್ಲ. ಆಗಲೇ ಎರಡೂ ದೇಶಗಳಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿದೆ. ಅದಾನಿ ಕಂಪನಿ ಪರವಾಗಿರುವ ವಿದ್ಯುತ್ ಒಪ್ಪಂದಕ್ಕೆ ಶೇಕ್ ಹಸೀನಾ ಸರ್ಕಾರ ಸಹಿ ಹಾಕಿರುವುದಕ್ಕೆ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ.

ಅದಾನಿ ಕಂಪನಿ ಪರ ಒಪ್ಪಂದ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅದಾನಿ ಕಂಪನಿಯ ವಿದ್ಯುತ್ ಘಟಕಕ್ಕೆ ಹಲವು ಮಟ್ಟದಲ್ಲಿ ತೆರಿಗೆ ಲಾಭವಾಗುವಂತೆ ಹೆಚ್ಚುವರಿ ಮುತುವರ್ಜಿವಹಿಸಿ ಒಪ್ಪಂದ ಸಿದ್ಧಪಡಿಸಿದೆ ಎನ್ನುವ ಆರೋಪ ಎರಡೂ ದೇಶಗಳಿಂದ ಕೇಳಿ ಬಂದಿದೆ.

ಕಲ್ಲಿದ್ದಲು ಘಟಕದಿಂದ ಆಗುವ ಪರಿಸರ ನಾಶ ಮತ್ತು ಜನರ ಆರೋಗ್ಯ ಹಾನಿಯ ಬಿಸಿಯನ್ನು ಭಾರತವೇ ಭರಿಸುತ್ತಿದೆ. ಉತ್ಪಾದಿಸಿದ ವಿದ್ಯುತ್ ಮಾತ್ರ ಬಾಂಗ್ಲಾದೇಶಕ್ಕೆ ಹೋಗಲಿದೆ. ಒಟ್ಟು ಯೋಜನೆಯ ತೆರಿಗೆ ಲಾಭ ಮಾತ್ರ ಅದಾನಿ ಕಂಪನಿಗೆ ಸಿಗುತ್ತಿದೆ!

ಒಪ್ಪಂದದ ಪ್ರಕಾರ, ಗೊಡ್ಡಾ ಘಟಕ ವಿಶೇಷ ಆರ್ಥಿಕ ವಲಯದಲ್ಲಿದ್ದರೂ (ಎಸ್‌ಇಜೆಡ್‌) ಅದಾನಿ ಪವರ್ ಲಿಮಿಟೆಡ್‌ನಿಂದ ವಿದ್ಯುತ್ ಖರೀದಿಸಿದಾಗ ತೆರಿಗೆ ವಿನಾಯಿತಿಯನ್ನೂ ಬಾಂಗ್ಲಾದೇಶಕ್ಕೆ ನೀಡಲಾಗಿಲ್ಲ. ಎಸ್‌ಇಜೆಡ್‌ಗೆ ಇರುವ ವಿನಾಯಿತಿ ನಿಯಮಾನುಸಾರ ಬಾಂಗ್ಲಾದೇಶಕ್ಕೆ ಸಿಗಬೇಕಿತ್ತು. ಆದರೆ ಒಪ್ಪಂದದಲ್ಲಿ ಬಾಂಗ್ಲಾದೇಶದ ಬದಲಾಗಿ ಅದಾನಿ ಕಂಪನಿಯ ಲಾಭಕ್ಕೆ ವಿನಾಯಿತಿ ಬಳಸಿಕೊಳ್ಳಲಾಗಿದೆ.

ಈ ಘಟಕದಿಂದ ವಾಣಿಜ್ಯ ಉದ್ದೇಶಕ್ಕಾಗಿ ವಿದ್ಯುತ್ ಸರಬರಾಜು ಮುಂದಿನ ತಿಂಗಳಲ್ಲಷ್ಟೇ ಆರಂಭವಾಗಲಿದೆ. ಆದರೆ ಭಾರತದ ಜೊತೆಗಿನ ಬಾಂಗ್ಲಾದೇಶದ ಈ ವಿದ್ಯುತ್ ಒಪ್ಪಂದದ ನಿಯಮಗಳನ್ನು ಬಹಿರಂಗಪಡಿಸದೆ ಇರುವುದನ್ನು ಅಲ್ಲಿನ ವಿಪಕ್ಷಗಳು ಪ್ರಶ್ನಿಸಿವೆ. ಬಾಂಗ್ಲಾದೇಶ ವಿದ್ಯುತ್‌ ಖರೀದಿಗೆ ಪಾವತಿಸುವ ಹಣದ ವಿವರವೂ ಗುಪ್ತವಾಗಿರುವುದು ಗೊಂದಲಕ್ಕೆ ಕಾರಣವಾಗಿದೆ. ಇಂತಹ ತಾರತಮ್ಯದ ವಿದ್ಯುತ್ ಒಪ್ಪಂದಕ್ಕೆ ಸಹಿ ಹಾಕಿರುವ ಸರ್ಕಾರವನ್ನು ಬಾಂಗ್ಲಾದೇಶದ ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.

ಇತರ ಕಲ್ಲಿದ್ದಲು ಆಧಾರಿತ ಘಟಕಗಳಿಗೆ ಹೋಲಿಸಿದಲ್ಲಿ ಅದಾನಿ ವಿದ್ಯುತ್ ಘಟಕ ಕಾರ್ಯನಿರ್ವಹಿಸಲು ಭಾರತ ಸರ್ಕಾರ ಎಲ್ಲಾ ಕಡೆಗಳಿಂದಲೂ ಅನುಕೂಲ ಮಾಡಿಕೊಟ್ಟಿರುವುದು ಖಚಿತ. ಏಕೆಂದರೆ, ಒಂದೆಡೆ ಅದಾನಿ ಕಂಪನಿಯಿಂದ ಬಾಂಗ್ಲಾದೇಶ ಅತಿಯಾದ ಬೆಲೆ ತೆತ್ತು ವಿದ್ಯುತ್ ಖರೀದಿಸುತ್ತಿದೆ. ಈ ಘಟಕಕ್ಕೆ ಆಸ್ಟ್ರೇಲಿಯದಲ್ಲಿರುವ ಅದಾನಿ ಗುತ್ತಿಗೆ ಪಡೆದಿರುವ ಗಣಿಯಿಂದ ಅದಾನಿ ಮಾಲೀಕತ್ವದ ಭಾರತೀಯ ಬಂದರಿನ ಮೂಲಕ ಅದಾನಿ ಸಂಸ್ಥೆಯ ಗೊಡ್ಡಾ ಘಟಕಕ್ಕೆ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಆಸ್ಟ್ರೇಲಿಯದ ಜೊತೆಗೆ ಉದ್ಯಮಿ ಗೌತಮ್ ಅದಾನಿ ಕಲ್ಲಿದ್ದಲು ಗಣಿಗಾರಿಕೆಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಎರಡೂ ರಾಷ್ಟ್ರಗಳ ಹಿರಿಯ ನಾಯಕರ ಒತ್ತಾಸೆ ಇದೆ ಎಂಬ ಬಗ್ಗೆ ಆಸ್ಟ್ರೇಲಿಯದಲ್ಲೂ ವಿವಾದ ಸೃಷ್ಟಿಯಾಗಿತ್ತು. ಈಗಲೂ ಆಸ್ಟ್ರೇಲಿಯದ ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅದಾನಿ ಕಲ್ಲಿದ್ದಲು ಗಣಿಗಾರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ.

ಅದಾನಿ ಕಂಪನಿಗೆ ಮಾತ್ರ ಲಾಭ

ಇದೀಗ ಗೊಡ್ಡಾದಲ್ಲಿರುವ ಅದಾನಿ ವಿದ್ಯುತ್ ಉತ್ಪಾದನಾ ಘಟಕದ ವಿಚಾರಕ್ಕೆ ಬಂದರೆ, ಒಟ್ಟು ಯೋಜನೆಯಲ್ಲಿ ನಾಲ್ವರು ಪಾಲುದಾರರು; ಭಾರತ ಸರ್ಕಾರ, ಬಾಂಗ್ಲಾದೇಶ ಸರ್ಕಾರ, ಎರಡೂ ದೇಶಗಳ ಜನರು ಮತ್ತು ಗೌತಮ್ ಅದಾನಿಯವರ ವಿದ್ಯುತ್ ಕಂಪನಿ.

ಆದರೆ ಅಂತಿಮವಾಗಿ ಲಾಭವಾಗುತ್ತಿರುವುದು ಅದಾನಿ ವಿದ್ಯುತ್ ಕಂಪನಿಗೆ ಮಾತ್ರ ಎನ್ನುವುದು ಸ್ಪಷ್ಟ. ಭಾರತದ ಜನರು ಪರಿಸರ- ಆರೋಗ್ಯ ಹಾನಿಯ ಬಿಸಿ ಎದುರಿಸಿದರೆ, ಬಾಂಗ್ಲಾದೇಶಿ ಪ್ರಜೆಗಳು ವಿದ್ಯುತ್‌ಗೆ ದುಬಾರಿ ಬೆಲೆ ತೆರುತ್ತಿದ್ದಾರೆ. ಭಾರತ ಸರ್ಕಾರಕ್ಕೂ ಈ ಒಪ್ಪಂದದಿಂದ ಲಾಭವಾಗಿಲ್ಲ. ಹೀಗಾಗಿ ಒಟ್ಟಾರೆ ಯೋಜನೆಯಿಂದ ಲಾಭಪಡೆದುಕೊಂಡಿರುವುದು ಅದಾನಿ ಕಂಪನಿ!

ಹಾಗಿದ್ದರೂ, ಭಾರತ ಅಥವಾ ಬಾಂಗ್ಲಾದೇಶ ಸರ್ಕಾರಗಳು ಯೋಜನೆಯ ಒಪ್ಪಂದ ಪುನರ್‌ಪರಿಶೀಲಿಸುವ ಉದ್ದೇಶ ಹೊಂದಿಲ್ಲ. ಇದೇ ಕಾರಣಕ್ಕೆ ಬಾಂಗ್ಲಾದೇಶದ ವಿಪಕ್ಷಗಳು ಅಲ್ಲಿನ ಸರ್ಕಾರದ ವಿರುದ್ಧ ಪ್ರತಿಭಟನೆಯ ಕಹಳೆ ಊದಿವೆ.

ಅದಾನಿ ಮತ್ತು ಬಾಂಗ್ಲಾದೇಶ ಸರ್ಕಾರದ ನಡುವಿನ ಈ ವಿದ್ಯುತ್ ಒಪ್ಪಂದ ಆರು ವರ್ಷ ಹಳೆಯದಾಗಿದ್ದರೂ ಈಗ ಅದು ಕಾರ್ಯರೂಪಕ್ಕೆ ಬರುತ್ತಿರುವುದು ಮತ್ತು ಅದಾನಿ ಕುರಿತ ಹಿಂಡನ್‌ಬರ್ಗ್ ಸಂಶೋಧನಾ ವರದಿ ಕಾರಣದಿಂದ ಹೆಚ್ಚು ಬೆಳಕಿಗೆ ಬಂದಿದೆ. ಅಲ್ಲದೆ, ಈ ಒಪ್ಪಂದದ ವಿವರಗಳನ್ನು ಈವರೆಗೂ ರಹಸ್ಯವಾಗೇ ಇಡಲಾಗಿತ್ತು. ಮಧ್ಯಪ್ರಾಚ್ಯದ ಸುದ್ದಿ ವೆಬ್‌ಸೈಟ್ ‘ಅಲ್‌ಜಜೀರಾ’  ಈ ಒಪ್ಪಂದದ ಪ್ರತಿ ಪಡೆದುಕೊಂಡ ಮೇಲೆ ವಿವರ ಬಹಿರಂಗವಾಗಿದೆ.

ಬಾಂಗ್ಲಾದೇಶದಲ್ಲೂ ಅದಾನಿ ಜೊತೆಗಿನ ಒಪ್ಪಂದಕ್ಕೆ ಚಾಪೆ ಕೆಳಗೆ ತೂರುವ ಪ್ರಯತ್ನವನ್ನು ಅಲ್ಲಿನ ಸರ್ಕಾರ ಮಾಡಿದೆ. ಬಾಂಗ್ಲಾದೇಶದ ವಿವಾದಾತ್ಮಕ ಸ್ಪೆಷಲ್ ಆಕ್ಟ್ ಆಫ್ ಬಾಂಗ್ಲಾದೇಶ್ (ಬಾಂಗ್ಲಾದೇಶದ ವಿಶೇಷ ಕಾಯ್ದೆ) ಅಡಿಯಲ್ಲಿ ಅಲ್ಲಿನ ಸರ್ಕಾರವು ಈ ಒಪ್ಪಂದ ಮಾಡಿಕೊಂಡಿದೆ. ಈ ಕಾಯ್ದೆಯ ಅಡಿಯಲ್ಲಿ ಸರ್ಕಾರಿ-ಖಾಸಗಿ ಒಪ್ಪಂದದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಿದೆ.

ನಿಯಮ ಗಾಳಿಗೆ ತೂರಿದ ಬಾಂಗ್ಲಾದೇಶ

ಅದಾನಿ ಕಂಪನಿಯಿಂದ ವಿದ್ಯುತ್ ಸಿಕ್ಕಲ್ಲಿ ಬಾಂಗ್ಲಾದೇಶದ ಅವಾಮಿ ಲೀಗ್ (ಎಎಲ್‌) ಪಕ್ಷದ ಸರ್ಕಾರಕ್ಕೆ ಚುನಾವಣೆಯಲ್ಲಿ ಉತ್ತಮ ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೆ, ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಆಪ್ತ ಸ್ನೇಹ ತಿಳಿದಿರುವುದರಿಂದ, ಅದಾನಿ ಜೊತೆಗಿನ ವ್ಯವಹಾರದ ಮೂಲಕ ಭಾರತದ ಪ್ರಧಾನಿ ಜೊತೆಗೆ ಅತ್ಯುತ್ತಮ ಸಂಬಂಧ ದಿಂದ ರಾಜಕೀಯ ಲಾಭ ಸಿಗಬಹುದೆನ್ನುವ ಸತ್ಯ ಅಲ್ಲಿನ ಸರ್ಕಾರಕ್ಕೆ ತಿಳಿದಿದೆ ಎಂದು ಅಂತಾರಾಷ್ಟ್ರೀಯ ಸಂಬಂಧದ ವಿಶ್ಲೇಷಕರು ಮಾಧ್ಯಮಗಳಲ್ಲಿ ಒಟ್ಟಾರೆ ಬೆಳವಣಿಗೆಯನ್ನು ವಿಮರ್ಶಿಸಿದ್ದಾರೆ.

ಅವಾಮಿ ಲೀಗ್‌ಗೆ ಬಾಂಗ್ಲಾದೇಶದಲ್ಲಿ ರಾಜಕೀಯವಾಗಿ ಸುಭದ್ರವಾಗಿರಲು ಭಾರತದ ಜೊತೆಗೆ ಉತ್ತಮ ಸಂಬಂಧದ ಅಗತ್ಯವಿದೆ. 2014ರಲ್ಲಿ ವಿವಾದಾತ್ಮಕ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಪಕ್ಷ, ಪ್ರಾದೇಶಿಕವಾಗಿ ದೃಢವಾಗಿರುವ ಭಾರತದ ಜೊತೆಗೆ ಉತ್ತಮ ಸಂಬಂಧದ ಮೂಲಕ ದೃಢವಾಗಿ ನೆಲೆಯೂರುವ ಪ್ರಯತ್ನದಲ್ಲಿದೆ.

ಆರಂಭದಲ್ಲಿ ಈ ವಿದ್ಯುತ್ ಒಪ್ಪಂದಕ್ಕೆ ಬಾಂಗ್ಲಾದೇಶದಲ್ಲಿ ಕಂಡುಬಂದ ವಿರೋಧವನ್ನು ಅಲ್ಲಿನ ಸರ್ಕಾರ ಯಶಸ್ವಿಯಾಗಿ ಹತ್ತಿಕ್ಕಿತ್ತು. ಆದರೆ 2022ರ ನಂತರ ಬೆಲೆಯೇರಿಕೆ, ವಿದೇಶಿ ವಿನಿಮಯದ ಕೊರತೆ, ಹಣದುಬ್ಬರ, ಬ್ಯಾಂಕ್‌ಗಳ ಲಕ್ಷಾಂತರ ಹಣ ದುರುಪಯೋಗ ಮೊದಲಾದ ವಿದ್ಯಮಾನಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.

ಹೀಗಾಗಿ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಬಹಳ ಸಮಯದ ನಂತರ ವಿಪಕ್ಷಗಳು ಯಶಸ್ವಿಯಾಗಿ ರಾಜಕೀಯ ಪ್ರತಿಭಟನೆಗಳನ್ನು ಆಯೋಜಿಸಲು ಸಾಧ್ಯವಾಗಿದೆ. ಈ ವರ್ಷದ ಆರಂಭದಲ್ಲಿ ಪ್ರಕಟವಾದ ಹಿಂಡನ್‌ಬರ್ಗ್ ವರದಿ ಪ್ರತಿಭಟನಾಕಾರರಿಗೆ ಪುರಾವೆಯನ್ನೂ ಒದಗಿಸಿದೆ.

ಈ ಸುದ್ದಿ ಓದಿದ್ದೀರಾ?: ಅದಾನಿ ಸಮೂಹ ವಹಿವಾಟಿನಲ್ಲಿ ನಿಯಮಗಳ ಉಲ್ಲಂಘನೆ; ಸೆಬಿ ತನಿಖೆ

ಪ್ರಧಾನಿ ಮೋದಿ ಬಾಂಗ್ಲಾ ಭೇಟಿಯ ಪ್ರತಿಫಲ

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅದಾನಿ ನೇತೃತ್ವದ ಗೊಡ್ಡಾ ವಿದ್ಯುತ್ ಘಟಕದಿಂದ ವಿದ್ಯುತ್ ಖರೀದಿಯ ಬಗ್ಗೆ ಮಾತುಕತೆ ನಡೆದಿತ್ತು. 2015ರಲ್ಲಿ ಬಾಂಗ್ಲಾದಲ್ಲಿ ಇದ್ದ 8,177 ಮೆಗಾವ್ಯಾಟ್ ಬೇಡಿಕೆಗೆ ವಿರುದ್ಧವಾಗಿ 12,000 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವಷ್ಟೇ ಇತ್ತು. ಆ ಸಂದರ್ಭದಲ್ಲಿ ಬಾಂಗ್ಲಾದೇಶದ ಅರ್ಥವ್ಯವಸ್ಥೆ ವೇಗವಾಗಿ ವೃದ್ಧಿಯಾಗುತ್ತಿತ್ತು. 2030ರ ಹೊತ್ತಿಗೆ ಬಾಂಗ್ಲಾದೇಶಕ್ಕೆ ಅಭಿವೃದ್ಧಿಯ ವೇಗವನ್ನು ಉಳಿಸಿಕೊಳ್ಳಲು 34,000 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿತ್ತು.

ಈ ಭೇಟಿಯ ಎರಡು ವರ್ಷಗಳ ನಂತರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆ ಸಂದರ್ಭದಲ್ಲಿ ಬಾಂಗ್ಲಾದೇಶದ ಬಳಿ 2025ರವರೆಗೆ ಇರುವ ಬೇಡಿಕೆಗೆ ತಕ್ಕ ವಿದ್ಯುತ್ ಸ್ವಂತ ನೆಲೆಯಲ್ಲಿ ಉತ್ಪಾದಿಸುವ ಸಾಮರ್ಥ್ಯವಿತ್ತು. ಅಲ್ಲಿನ ಕಲ್ಲಿದ್ದಲು ಆಧಾರಿತ ಘಟಕಗಳಾದ ಪಯ್ರಾ, ಬನ್‌ಶಕಲಿ ಹಾಗೂ ರಾಂಪಾಲ್ ಘಟಕಗಳಿಂದ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವೂ ಇತ್ತು.

 2018ರಲ್ಲಿ ಅಮೆರಿಕ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಎನರ್ಜಿ ಇಕನಾಮಿಕ್ಸ್ ಮತ್ತು ಫೈನಾನ್ಷಿಯಲ್ ಅನಾಲಿಸ್ (ಐಇಇಎಫ್‌ಎ) ನೀಡಿದ ವರದಿಯ ಪ್ರಕಾರ ಅದಾನಿ ಜೊತೆಗಿನ ಬಾಂಗ್ಲಾದೇಶದ ವಿದ್ಯುತ್ ಒಪ್ಪಂದ ಅತಿ ದುಬಾರಿ ಸ್ವರೂಪದಲ್ಲಿದೆ.

ಆರಂಭದಲ್ಲಿ ಗೊಡ್ಡಾ ವಿದ್ಯುತ್ ಘಟಕಕ್ಕೆ ಜಾರ್ಖಂಡ್‌ನ ಸ್ಥಳೀಯ ಘಟಕಗಳಿಂದ ಕಲ್ಲಿದ್ದಲು ಪಡೆಯಲು ಉದ್ದೇಶಿಸಲಾಗಿತ್ತು. ಆದರೆ ನಂತರ ಆಸ್ಟ್ರೇಲಿಯದ ಗಣಿಯಿಂದ ಕಡಿಮೆ ಶಕ್ತಿಯಿರುವ ಹೆಚ್ಚು ಬೂದಿ ಇರುವ ಕಲ್ಲಿದ್ದಲನ್ನು ತರಲು ತೀರ್ಮಾನಿಸಲಾಗಿತ್ತು. ಈ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಬಾಂಗ್ಲಾದೇಶ ಒಪ್ಪಂದ ಮಾಡಿಕೊಂಡಿದೆ ಎಂದು ಐಇಇಎಫ್‌ಎ ವರದಿ ಹೇಳಿದೆ.

ಬಾಂಗ್ಲಾದೇಶ ತನ್ನ ದೇಶದ ಕಲ್ಲಿದ್ದಲು ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ಆಮದಿಗೆ ಮೆಟ್ರಿಕ್ ಟನ್‌ಗೆ 250 ಡಾಲರ್ ತೆರುತ್ತದೆ. ಆದರೆ ಅದಾನಿ ವಿದ್ಯುತ್ ಘಟಕಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ 400 ಡಾಲರ್ ತೆರುತ್ತಿದೆ ಎಂದು ಅಲ್ಲಿನ ವಿಪಕ್ಷಗಳು ಆರೋಪಿಸಿವೆ. ಆದರೆ ಇಷ್ಟೊಂದು ವೆಚ್ಚದಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿರುವ ಮಾಹಿತಿಯನ್ನು ಅದಾನಿ ವಿದ್ಯುತ್ ಕಂಪನಿ ನಿರಾಕರಿಸಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಂದ್ರಬಾಬು ನಾಯ್ಡು ಜಾಮೀನು ಷರತ್ತು ಸಡಿಲಿಸಿದ ಸುಪ್ರೀಂ; ರ‍್ಯಾಲಿ, ಸಭೆಗಳಲ್ಲಿ ಭಾಗವಹಿಸಲು ಅನುಮತಿ

ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಷರತ್ತಾಗಿ ಸಾರ್ವಜನಿಕ...

ಜನತಾ ದರ್ಶನದ ಮೂಲಕ ರಾಜ್ಯದ ‘ಆಡಳಿತ’ ಸಿಎಂಗೆ ಮನವರಿಕೆಯಾಗಿರಬಹುದು: ಕುಮಾರಸ್ವಾಮಿ

ಎಲ್ಲದಕ್ಕೂ ಸರ್ಕಾರವನ್ನು ಟೀಕಿಸಲ್ಲ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ ನಮ್ಮ ಶಕ್ತಿ...

ಜಾಹೀರಾತಿನಲ್ಲಿ ಮತ ಯಾಚನೆ ಮಾಡಿಲ್ಲ, ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ: ಡಿ ಕೆ ಶಿವಕುಮಾರ್

ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹೀರಾತಿನಲ್ಲಿ ತಿಳಿಸಿಲ್ಲ ಚುನಾವಣಾ...

ನಿಗಮ ಮಂಡಳಿ ನೇಮಕಾತಿಯಲ್ಲಿ ಯಾರ ಅಭಿಪ್ರಾಯವನ್ನೂ ಪಡೆದಿಲ್ಲ: ಸಿದ್ದರಾಮಯ್ಯ

ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಕಾನೂನುಬಾಹಿರ ನ್ಯಾಯಾಲಯದ ಮೊರೆ...