ಡ್ರಗ್ಸ್ ದಂಧೆ | ₹ 2,000 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ : ಚಿತ್ರ ನಿರ್ಮಾಪಕ ಬಂಧನ

ಜಾಫರ್ ಸಾದಿಕ್
ಜಾಫರ್ ಸಾದಿಕ್

₹2,000 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ದ್ರವ್ಯವನ್ನು ದೇಶದಿಂದ ಹೊರಕ್ಕೆ ಸಾಗಿಸಿದ ಆರೋಪದ ಮೇಲೆ ತಮಿಳು ಚಿತ್ರರಂಗದ ಚಲನಚಿತ್ರ ನಿರ್ಮಾಪಕ ಹಾಗೂ ಡಿಎಂಕೆಯ ಮಾಜಿ ಪದಾಧಿಕಾರಿ ಜಾಫರ್ ಸಾದಿಕ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದೆ ಎಂದು ಶನಿವಾರ ತಿಳಿಸಿದೆ. ಫೆಬ್ರವರಿ 15ರಿಂದ ನಿರ್ಮಾಪಕ ಪರಾರಿಯಾಗಿದ್ದರು ಎಂದು ಹೇಳಿದೆ.

ಭಾರತ – ಆಸ್ಟ್ರೇಲಿಯಾ – ನ್ಯೂಜಿಲೆಂಡ್ ಡ್ರಗ್ಸ್ ಕಳ್ಳಸಾಗಣೆ ಜಾಲದ ‘ಕಿಂಗ್‌ಪಿನ್’ ಸಾದಿಕ್ ಎಂದು ಎನ್‌ಸಿಬಿ ಹೆಸರಿಸಿದೆ. ಅವರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ₹2,000 ಕೋಟಿ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.

”ಸಾದಿಕ್ 3,500 ಕೆಜಿ ಸೂಡೊಫೆಡ್ರಿನ್ ಅನ್ನು 45ಕ್ಕೂ ಹೆಚ್ಚು ಬಾರಿ ಆಸ್ಟ್ರೇಲಿಯಾಕ್ಕೆ ಕಳುಹಿಸಿದ್ದಾರೆ. ಸೂಡೊಫೆಡ್ರಿನ್ ಅನ್ನು ತೆಂಗಿನಕಾಯಿ ಮತ್ತು ಒಣ ಹಣ್ಣುಗಳಲ್ಲಿ ಮರೆಮಾಡಿ ವಿದೇಶಕ್ಕೆ ಕಳುಹಿಸಲಾಗಿದೆ. ಇದನ್ನು ಮೆಥಾಂಫೆಟಮೈನ್ ಅಥವಾ ಕ್ರಿಸ್ಟಲ್ ಮೆಥ್ ಉತ್ಪಾದನೆಯಲ್ಲಿ ಬಳಸಲಾಗುತ್ತದೆ ಮತ್ತು ಇದು ಭಾರತದಲ್ಲಿ ನಿಯಂತ್ರಿತ ವಸ್ತುವಾಗಿದೆ” ಎಂದು ಎನ್‌ಸಿಬಿ ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

”ಸಾದಿಕ್ ಅವರು ತಿರುವನಂತಪುರ, ಮುಂಬೈ, ಪುಣೆ ಮತ್ತು ಹೈದರಾಬಾದ್ ಮೂಲಕ ಜೈಪುರಕ್ಕೆ ಪರಾರಿಯಾಗಿದ್ದರು. ಮಾದಕವಸ್ತು ಕಳ್ಳಸಾಗಣೆ ಮೂಲಕ ಕೋಟಿಗಟ್ಟಲೆ ಹಣ ಸಂಪಾದಿಸಿದ ಸಾದಿಕ್ ರಿಯಲ್ ಎಸ್ಟೇಟ್ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಬಂದ ಹಣವನ್ನು ಹೂಡಿಕೆ ಮಾಡಿದ್ದರು. ಅವರು ಮಾದಕವಸ್ತು ಹಣವನ್ನು ಹೋಟೆಲ್ ಖರೀದಿಸಲು ಬಳಸಿದ್ದರು” ಎಂದು ಸಿಂಗ್ ಹೇಳಿದರು.

”ಸಾದಿಕ್ ಇಲ್ಲಿಯವರೆಗೆ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವುಗಳ ಪೈಕಿ ಒಂದು ಈ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಫೆಬ್ರವರಿ 29 ರಂದು ಮಧುರೈನಲ್ಲಿ 36 ಕೆಜಿ ಡ್ರಗ್ಸ್ ಕಳ್ಳಸಾಗಣೆಗಾಗಿ ಒಂದೆರಡು ರೈಲು ಪ್ರಯಾಣಿಕರನ್ನು ಅಧಿಕಾರಿಗಳು ಹಿಡಿದಿದ್ದರು. ಆತನ ವಿಚಾರಣೆ ಆಧರಿಸಿ ಚೆನ್ನೈನ ಕೊಡುಂಗೈಯೂರ್ ಡಂಪಿಂಗ್ ಯಾರ್ಡ್ ನಿಂದ ₹180 ಕೋಟಿ ಮೌಲ್ಯದ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯಗಳನ್ನು ಶ್ರೀಲಂಕಾಕ್ಕೆ ಕಳ್ಳಸಾಗಣೆ ಮಾಡಬೇಕಿತ್ತು” ಎಂದು ಅಧಿಕಾರಿಗಳು ಹೇಳಿದ್ದಾರೆ.

”ಫೆಬ್ರವರಿ 29ರಂದು ಚೆನ್ನೈನ ಕೊಡುಂಗೈಯೂರ್ ಡಂಪ್ ಯಾರ್ಡ್‌ನಿಂದ ಪ್ರಯಾಣಿಕ ದಂಪತಿಯಿಂದ ಒಟ್ಟು ₹36 ಕೆಜಿ ಮತ್ತು ಇನ್ನೊಂದೆಡೆ 6 ಕೆಜಿ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ವಶಪಡಿಸಿಕೊಂಡ ನಂತರ ದಂಪತಿಯನ್ನು ಬಂಧಿಸಲಾಯಿತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಪ್ರಕಾರ, ಮೆಥಾಂಫೆಟಮೈನ್ ಅನ್ನು ಆಡುಮಾತಿನಲ್ಲಿ ಐಸ್ ಅಥವಾ ಕ್ರಿಸ್ಟಲ್ ಮೆತ್ ಎಂದು ಕರೆಯಲಾಗುತ್ತದೆ. ಮೆಥಾಂಫೆಟಮೈನ್ ಹೆಚ್ಚು ವ್ಯಸನಕಾರಿ ಸೈಕೋಸ್ಟಿಮ್ಯುಲಂಟ್ ಡ್ರಗ್ ಆಗಿದ್ದು, ಇದು ಕೊಕೇನ್‌ನಂತೆಯೇ ಶಕ್ತಿಯುತವಾದ ಯೂಫೋರಿಕ್ ಪರಿಣಾಮಗಳನ್ನು ಪ್ರದರ್ಶಿಸುತ್ತದೆ. ಮಾರಣಾಂತಿಕ ಪರಿಣಾಮಗಳನ್ನು ಹೊಂದಿದೆ” ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಹೇಳಿದೆ.

ಡ್ರಗ್ಸ್ ದಂಧೆಯ ನಂತರ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದು, “ತಮಿಳುನಾಡು ಭಾರತದ ಡ್ರಗ್ಸ್ ರಾಜಧಾನಿಯಾಗಿದೆ” ಎಂದು ಹೇಳಿದ್ದಾರೆ.

ಈ ಅಂತಾರಾಷ್ಟ್ರೀಯ ಡ್ರಗ್ಸ್‌ ಸಿಂಡಿಕೇಟ್‌ಗೆ ಸಂಬಂಧಿಸಿದ ಇನ್ನಿತರ ಮೂವರನ್ನು ಇತ್ತೀಚೆಗೆ ದೆಹಲಿಯಿಂದ ಎನ್‌ಸಿಬಿ ಬಂಧಿಸಿದೆ. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಕೂಡ ಡ್ರಗ್ಸ್ ತನಿಖೆಯಲ್ಲಿ ಭಾರತೀಯ ಏಜೆನ್ಸಿಯೊಂದಿಗೆ ಸಹಕರಿಸುತ್ತಿದೆ.

ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಶಂಕಿತನ ಪತ್ತೆಗಾಗಿ ನಾಲ್ಕು ಫೋಟೋ ಬಿಡುಗಡೆ ಮಾಡಿದ ಎನ್‌ಐಎ

ಜಾಫರ್ ಸಾದಿಕ್ ಯಾರು?

ಸಾದಿಕ್ ಚಿತ್ರರಂಗದ ಜತೆಗೆ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದಾರೆ. ಅವರು ಇದುವರೆಗೆ ನಾಲ್ಕು ಸಿನಿಮಾ ಮಾಡಿದ್ದಾರೆ. ಇರೈವನ್ ಮಿಗ ಪೆರಿಯವನ್, ಮಾಯಾವಲೈ ಮತ್ತು ಮಂಗೈ ಈ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಅವರ ನಾಲ್ಕನೇ ಚಿತ್ರ VR07 ಈ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.

2010ರಲ್ಲಿ ಜಾಫರ್ ರಾಜಕೀಯ ಪ್ರವೇಶಿಸಿದ್ದರು. ಅವರು ಡಿಎಂಕೆಯ ಎನ್‌ಆರ್‌ಐ ವಿಭಾಗದ ಚೆನ್ನೈ ವೆಸ್ಟ್ ಉಪ ಸಂಘಟಕರಾಗಿದ್ದರು. ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಾದಿಕ್ ಅವರನ್ನು ಕಳೆದ ತಿಂಗಳು ಡಿಎಂಕೆಯಿಂದ ಉಚ್ಛಾಟಿಸಲಾಗಿತ್ತು.

LEAVE A REPLY

Please enter your comment!
Please enter your name here