ದೇಶದ ಎರಡು ರಾಜ್ಯಗಳಲ್ಲಿ ಶುಕ್ರವಾರ (ಮಾರ್ಚ್ 24) ಬೆಳಿಗ್ಗೆ ಮಧ್ಯಮ ಪ್ರಮಾಣದ ಭೂಕಂಪ ಉಂಟಾಗಿದೆ. ಆದರೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ಬಳಿ ಬೆಳಿಗ್ಗೆ 10.31ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ದಾಖಲಾಗಿದೆ. ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಬೆಳಿಗ್ಗೆ 10.28ಕ್ಕೆ ಭೂಮಿ ಕಂಪಿಸಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ಆಗ್ನೇಯಕ್ಕೆ 28 ಕಿಮೀ ದೂರದಲ್ಲಿ ಅಕ್ಷಾಂಶ 26.01 ಮತ್ತು ರೇಖಾಂಶ 78.35ರ ನಡುವೆ ಭೂಕಂಪ ಉಂಟಾಗಿದೆ. ಇದು 10 ಕಿಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಹೇಳಿದೆ.
ಛತ್ತೀಸ್‌ಗಢದ ಅಂಬಿಕಾಪುರದಲ್ಲಿ 6 ಸೆಕೆಂಡುಗಳ ಕಾಲ ಭೂಮಿ ನಡುಗಿದೆ. ಇದರಿಂದ ಭಯಭೀತರಾದ ಪ್ರದೇಶದ ನಿವಾಸಿಗಳು ಮನೆಯಿಂದ ಹೊರಗೆ ಓಡಿದ್ದಾರೆ.
ಅಂಬಿಕಾಪುರದಿಂದ 12 ಕಿಮೀ ದೂರದಲ್ಲಿ ಅಕ್ಷಾಂಶ 23.08 ಮತ್ತು ರೇಖಾಂಶ 83.08ರ ನಡುವೆ ಭೂಕಂಪ ಸಂಭವಿಸಿದೆ. ಇದು 10 ಕಿಮೀ ಆಳದಲ್ಲಿತ್ತು ಎಂದು ಎನ್‌ಸಿಎಸ್ ಟ್ವೀಟ್ ಮಾಡಿದೆ.
ಆದರೆ ಯಾವುದೇ ಜೀವ ಹಾನಿ, ಆಸ್ತಿ ನಷ್ಟವಾದ ಬಗ್ಗೆ ವರದಿಯಾಗಿಲ್ಲ.