- ಸಿಕ್ಕಿಂನ ಗಾಂಗ್ಟಕ್-ನಾತು ಲಾ ರಸ್ತೆಯಲ್ಲಿ ಸಂಭವಿಸಿದ ಹಿಮಪಾತ
- ಸುಮಾರು 20ರಿಂದ 30 ಪ್ರವಾಸಿಗರು ಹಿಮದಡಿ ಸಿಲುಕಿರುವ ಆತಂಕ
ಮಂಗಳವಾರ ಮಧ್ಯಾಹ್ನ ಸಿಕ್ಕಿಂನ ಗಾಂಗ್ಟಕ್-ನಾತು ಲಾ ರಸ್ತೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಏಳು ಮಂದಿ ಪ್ರವಾಸಿಗರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.
ಹಿಮಪಾತ ಅಡಿಯಲ್ಲಿ ಸಿಲುಕಿದವರೆಲ್ಲರೂ ಪ್ರವಾಸಿಗರು ಮತ್ತು ಪ್ರವಾಸಿ ವಾಹನಗಳು ಎಂದು ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಹೇಳಿದೆ.
ಬಿಆರ್‌ಒ ಪ್ರಕಾರ ಗಾಂಗ್ಟಕ್‌ನಿಂದ ನಾತು ಲಾ ಪಾಸ್ ಸಂಪರ್ಕಿಸುವ ಜವಾಹರ್‌ಲಾಲ್ ನೆಹರು ರಸ್ತೆಯ 14ನೇ ಮೈಲಿಯಲ್ಲಿ ಹಿಮಪಾತ ಉಂಟಾಗಿದೆ. ಅಂದಾಜು ಪ್ರಕಾರ 20-30 ಪ್ರವಾಸಿಗರು ಹಿಮದಡಿ ಸಿಲುಕಿದ್ದಾರೆ. 5-10 ಪ್ರವಾಸಿ ವಾಹನಗಳು ಹಿಮಪಾತಕ್ಕೆ ಸಿಲುಕಿದ್ದವು.
“ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಹಿಮಪಾತ ಸಂಭವಿಸಿದಾಗ ಸಿಕ್ಕಿಬಿದ್ದ 14 ಮಂದಿಯನ್ನು ರಕ್ಷಿಸಲಾಗಿದೆ. ಅವರನ್ನು ಸಮೀಪದ ಸೇನಾ ವೈದ್ಯಕೀಯ ಚಿಕಿತ್ಸಾಲಯಕ್ಕೆ ಕಳುಹಿಸಲಾಗಿದೆ. ಆದರೆ, ಏಳು ಮಂದಿ ಮೃತಪಟ್ಟಿದ್ದಾರೆ. ಉಳಿದ ಏಳು ಮಂದಿಗೆ ಗಾಂಗ್ಟಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಸೇನೆ ಹೇಳಿದೆ.