- ‘ರಾಷ್ಟ್ರೀಯ ಭದ್ರತೆ’ಯ ಕಾರಣ ನೀಡಿ ಕ್ರಮಕೈಗೊಳ್ಳಲು ಸಾಧ್ಯವಿಲ್ಲ
- ನಾಲ್ಕು ವಾರಗಳಲ್ಲಿ ಚಾನಲ್‌ಗೆ ನವೀಕರಣ ಪರವಾನಗಿ ನೀಡಲು ಸೂಚನೆ
ಮಲಯಾಳಂ ಸುದ್ದಿವಾಹಿನಿ ಮೀಡಿಯಾ ವನ್ ಮೇಲೆ ಕೇಂದ್ರ ಸರ್ಕಾರ ವಿಧಿಸಿದ್ದ ನಿಷೇಧವನ್ನು ರದ್ದುಗೊಳಿಸಿ ಸುಪ್ರೀಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ನಾಗರಿಕರ ಹಕ್ಕುಗಳನ್ನು ನಿರಾಕರಿಸಲು ‘ರಾಷ್ಟ್ರೀಯ ಭದ್ರತೆ’ಯ ಕಾರಣ ನೀಡಿ ನಾಗರಿಕರ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಚಾನೆಲ್ ನಡೆಸುತ್ತಿರುವ ಮಾಧ್ಯಮಮ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್ (ಎಂಬಿಎಲ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಚಾನೆಲ್‌ನ ಕೆಲವು ಕಾರ್ಯಕ್ರಮಗಳು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಕೇಂದ್ರ ಸರ್ಕಾರದ ವಾದವನ್ನು ತಳ್ಳಿ ಹಾಕಿರುವು ಸುಪ್ರೀಂ ಕೋರ್ಟ್, ರಾಷ್ಟ್ರೀಯ ಭದ್ರತಾ ಹಕ್ಕುಗಳನ್ನು ಗಾಳಿಯಿಂದ ಮಾಡಲಾಗುವುದಿಲ್ಲ. ಅದನ್ನು ಬೆಂಬಲಿಸುವ ಸಂಗತಿಗಳು ದಾಖಲೆಯ ರೂಪದಲ್ಲಿ ಇರಬೇಕು ಎಂದು ಉನ್ನತ ನ್ಯಾಯಾಲಯವು ಎಚ್ಚರಿಸಿದೆ.
ಚಾನಲ್‌ನ ಪ್ರಸಾರ ಪರವಾನಗಿಯನ್ನು ನವೀಕರಿಸದಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರವನ್ನು ಈ ಹಿಂದೆ ಕೇರಳ ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಚಾನೆಲ್‌ನ ಸಂಪಾದಕ ಪ್ರಮೋದ್ ರಾಮನ್ ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಸುಪ್ರೀಂ ಕೋರ್ಟಿನಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿತ್ತು.
ಈ ಬಗ್ಗೆಯೂ ತೀರ್ಪಿನಲ್ಲಿ ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, “ಈ ತೀರ್ಮಾನಕ್ಕೆ ಹೈಕೋರ್ಟ್ ಯಾವುದೇ ವಿವರಣೆ ನೀಡಿಲ್ಲ” ಎಂದು ತಿಳಿಸಿದ್ದು, “ನಾಲ್ಕು ವಾರಗಳಲ್ಲಿ ಚಾನಲ್‌ಗೆ ನವೀಕರಣ ಪರವಾನಗಿಯನ್ನು ನೀಡಬೇಕು” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ಚಾನೆಲ್‌ಗೆ ಪರವಾನಗಿಯನ್ನು ನವೀಕರಿಸದಿರುವುದು ವಾಕ್ ಸ್ವಾತಂತ್ರ್ಯದ ಮೇಲಿನ ನಿರ್ಬಂಧವಾಗಿದೆ ಮತ್ತು ಆರ್ಟಿಕಲ್ 19 (2) ಅಡಿಯಲ್ಲಿ ಮಾತ್ರ ಅದನ್ನು ವಿಧಿಸಬಹುದು ಎಂದು ಪೀಠ ಹೇಳಿದೆ.
ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯು ಮೀಡಿಯಾ ಒನ್ ಚಾನಲ್‌ನ ಷೇರುದಾರರು ಎಂದು ಉಲ್ಲೇಖಿಸಿದ್ದ ಕೇಂದ್ರ ಸರ್ಕಾರದ ವಾದವನ್ನು ಬೊಟ್ಟು ಮಾಡಿದ ಸುಪ್ರೀಂ ಕೋರ್ಟ್, ಇದು ಚಾನೆಲ್‌ನ ಹಕ್ಕುಗಳನ್ನು ನಿರ್ಬಂಧಿಸಲು ಕಾನೂನುಬದ್ಧ ಆಧಾರವಲ್ಲ ಎಂದು ಹೇಳಿದೆ.
2022ರ ಮಾರ್ಚ್ 15ರಂದು ಅಂತಿಮ ನಿರ್ಧಾರದವರೆಗೆ ಚಾನೆಲ್ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.