‘ರಾಜ್ಯ ಸರ್ಕಾರದ ಒಳಮೀಸಲಾತಿ ಆದೇಶ ಗೊಂದಲದ ಗೂಡು’ ಎಂದ ಹೋರಾಟ ಸಮಿತಿ

Date:

  • ಒಳಮೀಸಲಾತಿ ಬಗ್ಗೆ ಮೋದಿ-ಅಮಿತ್ ಶಾ ಮಾತುಕತೆ ನಡೆಸಬೇಕು
  • ಯಾವುದೇ ಪಕ್ಷವನ್ನು ಬೆಂಬಲಿಸಲ್ಲ, ತಟಸ್ಥ ನಿಲುವು : ಶಿವರಾಯ ಅಕ್ಕರಕಿ

ಒಳಮೀಸಲಾತಿ ಸಂಬಂಧ ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರ ಹೊರಡಿಸಿರುವ ಆದೇಶವು ಗೊಂದಲದ ಗೂಡಾಗಿದ್ದು, ತನಗೆ ತೋಚಿದ ವರ್ಗದವರನ್ನು ಬೇಕಾದೆಡೆಗೆ ಸೇರಿಸಲು ಆಗುವುದಿಲ್ಲ” ಎಂದು ಹೋರಾಟ ಸಮಿತಿ ತಿಳಿಸಿದೆ.

ಕಳೆದ 111 ದಿನಗಳಿಂದ ಬೆಂಗಳೂರಿನ ಫ್ರೀಡಂಪಾರ್ಕ್‌‌ನಲ್ಲಿ ನಡೆಸುತ್ತಿದ್ದ ಹೋರಾಟವನ್ನು ಶನಿವಾರ ತಾತ್ಕಾಲಿಕವಾಗಿ ಕೈಬಿಟ್ಟ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಸುದ್ದಿಗೋಷ್ಠಿ ನಡೆಸಿತು.

ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್.ಮಾರಪ್ಪ, ‘ಒಳಮೀಸಲಾತಿ ಜಾರಿಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಸರ್ಕಾರದ ನಿರ್ಣಯ ಗೊಂದಲದ ಗೂಡಾಗಿ ಬಿಟ್ಟಿದೆ. ಇದು ಉದ್ದೇಶಪೂರ್ವಕವೋ, ತಿಳಿಯದೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಇದು ಅವೈಜ್ಞಾನಿಕ’ ಎಂದರು.

“ಮೀಸಲಾತಿ ವರ್ಗೀಕರಣದ ವೇಳೆ ಮೂಲ ಸಮುದಾಯಗಳನ್ನು ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಗುಂಪುಗಳಾಗಿ ವರ್ಗೀಕರಿಸಬೇಕೇ ಹೊರತು, ತಮಗೆ ಬೇಕಾದಂತೆ ಪಲ್ಲಟ ಮಾಡಲು ಸಾಧ್ಯವಿಲ್ಲ. ಸರ್ಕಾರ ಮಾಡಿರುವ ಆದೇಶದಲ್ಲಿ ಆದಿಕರ್ನಾಟಕ (ಎ.ಕೆ.) ಮತ್ತು ಆದಿದ್ರಾವಿಡ (ಎ.ಡಿ.) ವರ್ಗೀಕರಣ ಅವೈಜ್ಞಾನಿಕವಾಗಿದೆ. ನಿರ್ದಿಷ್ಟ ಸಮುದಾಯವೇ ಎ.ಕೆ. ಅಥವಾ ಎ.ಡಿ. ಎಂದು ತಿಳಿಸುವುದಕ್ಕೆ ಇವರೇನು ತಜ್ಞರಾ? ಸರ್ಕಾರ ನೇಮಿಸಿದ್ದ ಸಚಿವ ಸಂಪುಟ ಉಪಸಮಿತಿಯಲ್ಲಿ ಯಾರಾದರೂ ತಜ್ಞರು ಇದ್ದರೇ?” ಎಂದು ಪ್ರಶ್ನಿಸಿದರು.

“ಅಭಿವೃದ್ಧಿ ಹೊಂದಿದ ಕೆಲವು ಸಮುದಾಯಗಳನ್ನು ಗ್ರೂಪ್‌ 4ರಲ್ಲಿ ಸೇರಿಸಲಾಗಿದೆ. ಅಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳಿವೆ. ಬಲಾಢ್ಯರೊಂದಿಗೆ ಈ ಅಲೆಮಾರಿಗಳು ಸ್ಪರ್ಧೆ ಮಾಡಲು ಸಾಧ್ಯವೇ? ಈ ರೀತಿಯ ತೊಡಕುಗಳಿವೆ. ಇವು ಆಡಳಿತಾತ್ಮಕವಾಗಿ ಸರಿಪಡಿಸುವುದು ಕಷ್ಟವೇನಲ್ಲ” ಎಂದು ಸ್ಪಷ್ಟಪಡಿಸಿದರು.

“ಮೈಸೂರು ಭಾಗದಲ್ಲಿ ಹೊಲೆಯ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಎ.ಕೆ.ಯಲ್ಲಿದೆ. ಬೆಂಗಳೂರಿನಿಂದ ಕೊಪ್ಪಳದವರೆಗೂ ಮಾದಿಗರು ಎ.ಕೆ.ಯಲ್ಲಿದ್ದಾರೆ. ಒಂದಿಷ್ಟು ಭಾಗದಲ್ಲಿ ಎ.ಡಿ.ಯಲ್ಲಿ ಹೊಲೆಯರಿದ್ದರೆ, ಮತ್ತೊಂದಿಷ್ಟು ಭಾಗದಲ್ಲಿ ಮಾದಿಗರಿದ್ದಾರೆ. ಆದರೆ ಆದಿ ಕರ್ನಾಟಕದವರೆಲ್ಲ ಹೊಲೆಯರು, ಆದಿ ದ್ರಾವಿಡರೆಲ್ಲ ಮಾದಿಗರು ಎಂದು ಸರ್ಕಾರ ನಿಲುವು ತಾಳಿದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ” ಎಂದರು.

“ಸದ್ಯಕ್ಕೆ ಒಂದು ಹಂತದ ಗೆಲುವು ನಮಗೆ ದೊರಕಿದೆ. ಸಂವಿಧಾನದ ವಿಧಿ 341ಕ್ಕೆ ತಿದ್ದುಪಡಿಯಾಗಬೇಕು ಎಂಬುದು ನಮ್ಮ ಆಗ್ರಹ. ಮುಂದಿನ ಲೋಕಸಭಾ ಚುನಾವಣೆಯವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಕರ್ನಾಟಕಕ್ಕೆ ಆಗಾಗ್ಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಷಾ ಅವರಲ್ಲಿ ನಮ್ಮ ಬೇಡಿಕೆಗಳನ್ನು ಇಟ್ಟು, ಮಾತುಕತೆ ನಡೆಸಬೇಕಾದ ಅನಿವಾರ್ಯತೆ ಇದೆ. ಸದ್ಯಕ್ಕೆ ಚುನಾವಣೆಯ ಹಿನ್ನೆಲೆಯಲ್ಲಿ ಹೋರಾಟವನ್ನು ಮೊಟಕುಗೊಳಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಮೀಸಲಾತಿಯ ಪ್ರಮಾಣ 50% ಮೀರಿದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಮಾರಪ್ಪ ಅವರು, ಛತ್ತೀಸ್‌ಘಡದಲ್ಲಿ ಶೇ.82ರಷ್ಟು ಮೀಸಲಾತಿ ಇದ್ದರೆ, ಕೆಲವು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.60ನ್ನು ಮೀರಿದೆ. ಹೀಗಾಗಿ ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಿಸುವುದು ಸಮಸ್ಯೆಯಾಗುವುದಿಲ್ಲ. ಎಸ್‌ಸಿ, ಎಸ್‌ಟಿಗಳೆಲ್ಲರೂ ಮೀಸಲಾತಿ ಹೆಚ್ಚಳಕ್ಕೆ ಒಕ್ಕೊರಲಿನಿಂದ ಆಗ್ರಹಿಸಬೇಕು” ಎಂದರು.

‘ಒಳಮೀಸಲಾತಿ ಜಾರಿಗೊಳಿಸಿದ ಮೋದಿ ಮತ್ತು ಅಮಿತ್ ಷಾ ಅವರಿಗೆ ಅಭಿನಂದನೆ’ ಎಂಬ ರೀತಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ನಡೆ ತಪ್ಪು. ವಿಜಯೋತ್ಸವ ಆಚರಿಸಿಕೊಳ್ಳುವುದಕ್ಕೆ ತಕರಾರು ಇಲ್ಲ. ಆದರೆ ಒಳಮೀಸಲಾತಿ ಇನ್ನೂ ಜಾರಿಯಾಗಿಲ್ಲ. ವಿಜಯೋತ್ಸವ ಮಾಡಿಕೊಳ್ಳುವ ಸಮಯ ಇದಲ್ಲ. ನಮ್ಮ ಕೆಲಸ ಇನ್ನೂ ಬಾಕಿ ಇದೆ. ರಾಜಕೀಯಕ್ಕಾಗಿ ಸುಳ್ಳು ಹೇಳಬಾರದು” ಎಂದು ತಿಳಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ ಮಾತನಾಡಿ, “ನಮ್ಮ ವೇದಿಕೆಯ ವತಿಯಿಂದ ಯಾವುದೇ ರಾಜಕೀಯ ನಿಲುವುಗಳನ್ನು ತೆಗೆದುಕೊಂಡಿಲ್ಲ. ತಟಸ್ಥ ನೀತಿ ನಮ್ಮದಾಗಿದೆ. ಸಮುದಾಯದ ಜನತೆ ತಮಗೆ ಇಷ್ಟವಾದವರಿಗೆ ಬೆಂಬಲ ನೀಡಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.

ಮುಖಂಡರಾದ ಕರಿಯಪ್ಪ ಗುಡಿಮನಿ, ನಂದಕುಮಾರ್‌, ಜೆ.ಡಿ.ರಾಜು, ಹನುಮೇಶ್ ಗುಂಡೂರು, ಪ್ರೊ.ಸಿ.ಕೆ.ಮಹೇಶ್‌ ಮತ್ತಿತರರಿದ್ದರು.

ಸಮಿತಿ ತೆಗೆದುಕೊಂಡ ನಿರ್ಣಯಗಳು ಹೀಗಿದೆ.

  1. ಗ್ರೂಪ್ ನಂಬರ್ ಒಂದು ಹಾಗೂ ಎರಡಕ್ಕೆ ಸಂಬಂಧಿಸಿದ ಸಮುದಾಯಗಳಾದ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಉಪಜಾತಿ ಪದಗಳನ್ನು ಮತ್ತೆ ಮಾದಿಗ ಮತ್ತು ಹೊಲೆಯ ಸಂಬಂಧಿತ ಜಾತಿಗಳ ಗುಂಪುಗಳಿಗೆ ಯಥಾವತ್ತಾಗಿ ಸೇರಿಸಬೇಕು.
  2. ನಾಲ್ಕನೇ ಗುಂಪಿನಲ್ಲಿರುವ ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳ ಜೊತೆ ಯಾವುದೇ ಕಾರಣಕ್ಕೂ ಮಾದಿಗ, ಹೊಲೆಯ, ತ್ರಿಮತಸ್ಥ ಚರ್ಮಕಾರರು, ಮೊಗೇರ ಇನ್ನಿತರ ಸಮುದಾಯಗಳನ್ನು ಸೇರಿಸದೆ ಮೇಲೆ ತಿಳಿಸಿದ ಸಮುದಾಯಗಳನ್ನು ಅವರ ಮೂಲ ಸಮುದಾಯಗಳ ಗುಂಪಿಗೆ ಸೇರಿಸಬೇಕು.
  3. ಈಗ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದಂತೆ ತೆಗೆದುಕೊಂಡ ತೀರ್ಮಾನವನ್ನು ಹಾಗೂ ಅದರ ಶಿಫಾರಸ್ಸನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಸಂವಿಧಾನದ ಅನುಚ್ಛೇಧ 341(3)ಗೆ ತಿದ್ದುಪಡಿ ಮಾಡಬೇಕು.
  4. ತ್ರ‍್ರಿಮತಸ್ಥರಿಗೆ, ಚರ್ಮಕಾರರಿಗೆ (ಮೋಚಿ, ಡೋಹರ, ಸಮಗಾರ) ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
  5. ಎಲ್ಲ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ಮತ್ತು ಛಲವಾದಿ ಸಮುದಾಯಗಳ ಜನಸಂಖ್ಯೆಗೆ ತಕ್ಕಂತೆ ತಲಾ 15 ಶಾಸನಸಭಾ ಪ್ರಾತಿನಿಧ್ಯ ಕಲ್ಪಿಸಬೇಕು.
  6. ಕರ್ನಾಟಕ ರಾಜ್ಯದಲ್ಲಿರುವ 43,000 ಪೌರಕಾರ್ಮಿಕ ಹಾಗೂ ವಾಹನ ಚಾಲಕರನ್ನು ಖಾಯಂಗೊಳಿಸಬೇಕು.
  7. ರಾಜ್ಯದಲ್ಲಿ ಪಿಟಿಸಿಎಲ್ ಕಾಯ್ದೆಗೆ ಕೂಡಲೇ ತಿದ್ದುಪಡಿ ತಂದು ದಲಿತರಿಗೆ ಭೂ ಹಂಚಿಕೆ ಮಾಡಬೇಕು.
  8. ಒಳ ಮೀಸಲಾತಿ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಈ ಕೂಡಲೇ ರದ್ದುಪಡಿಸಬೇಕು.
  9. ಪರಿಶಿಷ್ಟ ಜಾತಿಗಳ ಉಪ ಹಂಚಿಕೆ (ಎಸ್‌ಸಿಎಸ್‌ಎ) ಅನುದಾನವನ್ನು ಒಳಮೀಸಲಾತಿ ಶೇಕಡ 6+5.5+4.5+1 ಅನುಪಾತದಂತೆ ಹಂಚಿಕೆ ಮಾಡಬೇಕು. ಎಸ್‌ಸಿಎಸ್‌ಎ ಅನುದಾನ ದುರುಪಯೋಗಕ್ಕೆ ಕಾರಣವಾದ 7(ಡಿ)ಯನ್ನು ರದ್ದುಪಡಿಸಬೇಕು.
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸರು ದಲಿತರ ಹಿತಾಸಕ್ತಿಗೆ ವಿರುದ್ಧವಿದ್ದಾರೆ: ಮಾಜಿ ಐಎಎಸ್‌ ಅಧಿಕಾರಿ ಆರೋಪ

ತಿರುನಲ್ವೇಲಿ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ)...

ಜಮ್ಮು-ಕಾಶ್ಮೀರ | ಕಂದಕಕ್ಕೆ ಉರುಳಿದ ಬಸ್‌; 36 ಮಂದಿ ದುರ್ಮರಣ

ಬಸ್‌ವೊಂದು ಕಂದಕಕ್ಕೆ ಉರುಳಿಬಿದ್ದಿದ್ದು 36 ಮಂದಿ ಮೃತಪಟ್ಟಿರುವ ಘಟನೆ ಜಮ್ಮು ಮತ್ತು...

ಮ್ಯಾನುಯಲ್ ಸ್ಕ್ಯಾವೆಂಜಿಂಗ್ | ಕೊಳಚೆ ಸ್ವಚ್ಛಗೊಳಿಸಲು ಗುಂಡಿಗೆ ಇಳಿದಿದ್ದ ನಾಲ್ವರು ಕಾರ್ಮಿಕರು ಸಾವು

ಕೈಯಲ್ಲಿ ಮಲ ಬಾಚುವಿಕೆ, ಮಲದ ಗುಂಡಿಗಳಿಗೆ ಪೌರ ಕಾರ್ಮಿಕರನ್ನು ಇಳಿಸುವುದನ್ನು ಕಾನೂನಾತ್ಮಕವಾಗಿ...

ಕೇರಳ | ಯಾರಲ್ಲೂ ಕೈಚಾಚದೆ ತಂದೆ ಕಳೆದುಕೊಂಡ ಸಹಪಾಠಿಗೆ ಸುಸಜ್ಜಿತ ಮನೆ ನಿರ್ಮಿಸಿದ ವಿದ್ಯಾರ್ಥಿಗಳು

ಕೆಲ ತಿಂಗಳ ಹಿಂದೆಯಷ್ಟೇ ತಂದೆ ಕಳೆದುಕೊಂಡ ಸಹಪಾಠಿಯೋರ್ವಳಿಗೆ ಆಕೆಯ ಸ್ನೇಹಿತರ ಬಳಗ...