ದೆಹಲಿಯಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಸಮಾನ ಮನಸ್ಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ, ಅಥ್ಲೀಟ್ ರೀತ್ ಅಬ್ರಹಾಂ, ಈಜುಪಟು ನಿಶಾ ಮಿಲೆಟ್ ಮೊದಲಾದವರು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಮಚಂದ್ರ ಗುಹಾ ಅವರು, ʻʻಸಮಾಜ ಮತ್ತು ಕ್ರೀಡಾ ಕ್ಷೇತ್ರದಲ್ಲಿರುವ ಅಸಮಾನತೆ, ಭ್ರಷ್ಟಾಚಾರ ಮತ್ತು ಪುರುಷಾಧಿಪತ್ಯದ ವಿರುದ್ಧ ನಮ್ಮ ಕುಸ್ತಿಪಟುಗಳು ಹೋರಾಟ ನಡೆಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಟ್ಟಂತಹ ಕ್ರೀಡಾಪಟುಗಳು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಕಣ್ಣು ಕಿವಿ ಇಲ್ಲದಂತೆ ವರ್ತಿಸುತ್ತಿರುವುದು ಅವಮಾನಕರʼʼ ಎಂದು ಬೇಸರ ವ್ಯಕ್ತಪಡಿಸಿದರು.
ʻʻಕುಸ್ತಿ, ಸೈಕ್ಲಿಂಗ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್ ಸೇರಿ ಇವೆಲ್ಲವೂ ವಿಶ್ವ ಮಟ್ಟದ ಕ್ರೀಡೆಗಳು. ಈ ಕ್ಷೇತ್ರದಲ್ಲಿ ಸಾಧನೆ ಮಾಡುವುದೆಂದರೆ ಕಠಿಣ ಪರಿಶ್ರಮ ಅಗತ್ಯ. ಇಂತಹ ಕುಸ್ತಿಪಟುಗಳು ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಸಮಸ್ಯೆ ಆಲಿಸದ ಸರ್ಕಾರ ಕುಸ್ತಿಪಟುಗಳೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಖಂಡನೀಯʼʼ ಎಂದು ಅವರು ಹೇಳಿದರು.
ಕ್ರೀಡಾಪಟು ರೀತ್ ಅಬ್ರಹಾಂ ಅವರೂ ರಾಷ್ಟ್ರಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತಂದಿರುವ ಕ್ರೀಡಾಪಟುಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿದ್ದಾರೆ. ʻʻಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿರುವ ಕುಸ್ತಿಪಟುಗಳು ಇಂದು ಬೀದಿಗಿಳಿದಿದ್ದಾರೆ ಎಂದರೆ, ಉಳಿದ ಅಥ್ಲೀಟ್‌ಗಳ ಪರಿಸ್ಥಿತಿ ಹೇಗಿರಬಹುದು ನೀವೇ ಯೋಚಿಸಿ. ಕಳೆದ ನಲವತ್ತು ವರ್ಷಗಳ ಕ್ರೀಡಾ ಕ್ಷೇತ್ರದ ಅನುಭವದಲ್ಲಿ ಹೇಳುವುದಾದರೆ, ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರದಲ್ಲಿ ಇದ್ದ ಪರಿಸ್ಥಿತಿ ಈಗಲೂ ಹಾಗೆಯೇ ಇದೆ. ಪ್ರಸ್ತುತ ಮೂಲಭೂತ ಸೌಲಭ್ಯಗಳು ಹೆಚ್ಚಾಗಿವೆ. ಕ್ರೀಡಾಪಟುಗಳು ಪ್ರಶ್ನಿಸುವುದನ್ನು ಕಲಿತಿದ್ದಾರೆʼʼ ಎಂದರು.
ʻʻಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿರುವ ಬೃಜ್ ಭೂಷಣ್ ಸಿಂಗ್ ಅವರಿಗೆ, ರಾಜಕೀಯ ಬೆಂಬಲವಿದೆ ಎನ್ನುವ ಕಾರಣಕ್ಕೆ ಈವರೆಗೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇತರ ಕ್ರೀಡಾ ಒಕ್ಕೂಟಗಳಲ್ಲಿಯೂ ರಾಜಕೀಯ ವ್ಯಕ್ತಿಗಳೇ ಇದ್ದಾರೆ. ಕ್ರೀಡಾ ಕ್ಷೇತ್ರದ ಪ್ರಮುಖ ಸ್ಥಾನಗಳಲ್ಲಿ ರಾಜಕಾರಣಿಗಳಿಗೆ ಅವಕಾಶ ನೀಡಬಾರದುʼʼ ಎಂದು ಅವರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ‘ಈ ದಿನ’ ಸಂಪಾದಕೀಯ | ಒಡಿಶಾ ಎದುರಿಸುತ್ತಿರುವ ಮಾಸಾಶನ ಸಮಸ್ಯೆ ಕರ್ನಾಟಕವನ್ನು ಕಾಡದಿರಲಿ
ಕುಸ್ತಿಪಟುಗಳು ನ್ಯಾಯಕ್ಕಾಗಿ ಆಗ್ರಹಿಸಿ ಮಳೆ, ಚಳಿಯನ್ನು ಲೆಕ್ಕಿಸದೇ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಮುಂಬರುವ ಪೀಳಿಗೆಯ ಅಥ್ಲೀಟ್‌ಗಳಿಗಾಗಿ ನಾವು ಕ್ರೀಡಾಕ್ಷೇತ್ರದಲ್ಲಿನ ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕಿದೆ. ಆಡಳಿತ ವ್ಯವಸ್ಥೆಯಿಂದ ಉತ್ತಮ ವ್ಯವಸ್ಥೆ ಪಡೆಯಬೇಕಿದ್ದ ಕ್ರೀಡಾಪಟುಗಳು ಉತ್ತಮ ವ್ಯವಸ್ಥೆಗಾಗಿ ಆಗ್ರಹಿಸಿ ಬೀದಿಗಿಳಿದಿರುವುದು ಬೇಸರದ ಸಂಗತಿ ಎಂದು ಈಜುಪಟು ನಿಶಾ ಮಿಲ್ಲೆಟ್ ಬೇಸರ ವ್ಯಕ್ತಪಡಿಸಿದರು.
ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಮೋದಿಯವರು ಕುಸ್ತಿಪಟುಗಳ ಪರವಾಗಿ ನಿಲ್ಲುತ್ತಿಲ್ಲವೇಕೆ? ನಮ್ಮ ದೇಶಕ್ಕೆ ಗೌರವ ತಂದುಕೊಟ್ಟ ಕುಸ್ತಿಪಟುಗಳಿಗೆ ನ್ಯಾಯ ಸಿಗಲೇಬೇಕು. ಬೃಜ್ ಭೂಷಣ್ ಸಿಂಗ್‌ನನ್ನು ಈ ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.