ಲಿಂಗಾಯಿತರಿಗೆ 65 ಸೀಟು ಕೇಳುವವರು ಲಿಂಗಾಯಿತರ ವಿರೋಧಿಗಳು

Date:

ಲಿಂಗಾಯಿತರಿಗೆ (ಅಥವಾ ವೀರಶೈವ ಲಿಂಗಾಯಿತರಿಗೆ) ಕಾಂಗ್ರೆಸ್‌ ಪಕ್ಷದಿಂದ 65 ಟಿಕೆಟ್‌ ಕೊಡಬೇಕೆಂದು ಕೆಲವು ನಾಯಕರು ಕೇಳಿದ್ದಾರೆಂದು ವರದಿಯಾಗಿದೆ. ಈ ರೀತಿ ಕೇಳಿರುವವರು ಸ್ವಾರ್ಥಿಗಳು ಮತ್ತು ಲಿಂಗಾಯಿತ ಸಮುದಾಯದ ವಿರೋಧಿಗಳಾಗಿದ್ದಾರೆ. ತಕ್ಷಣದಲ್ಲಿ ಮತ್ತು ದೀರ್ಘಕಾಲದಲ್ಲಿ ಇದರಿಂದ ಸಮುದಾಯಕ್ಕೆ ದೊಡ್ಡ ತೊಂದರೆಯಾಗಲಿದೆ. ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾದ ಇಂತಹ ನಡೆಗಳು, ಸಮುದಾಯಗಳಿಗೂ ಯಾವ ರೀತಿ ತೊಂದರೆ ಮಾಡುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಇದು ಕೇವಲ ಒಂದು ಪಕ್ಷಕ್ಕೆ ಸೀಮಿತವಾದ ವಿಚಾರವಲ್ಲ. ಒಂದು ಸಮುದಾಯಕ್ಕೆ ಸೀಮಿತವಾದ ವಿಚಾರವೂ ಅಲ್ಲ. ನೇಕಾರ ಸಮುದಾಯಕ್ಕೆ ಸೇರಿದವರು ಇಂದೇ… ಸೀಟುಗಳನ್ನು ಕೇಳಿದ್ದಾರೆಂದು ವರದಿಯಾಗಿದೆ. ಎರಡು ದಿನಗಳ ಕೆಳಗೆ ಇನ್ನೂ ಎರಡು ಸಮುದಾಯಗಳಿಗೆ ಸಂಬಂಧಿಸಿ ಸುದ್ದಿಗಳು ಪ್ರಕಟವಾಗಿದ್ದವು. ಅದು ಬಲಿಜ ಮತ್ತು ತಿಗಳ ಸಮುದಾಯಕ್ಕೆ ಸೇರಿದವರು ರಾಜ್ಯದಲ್ಲಿ ಸುಮಾರು 40 ಲಕ್ಷ ಜನರು ಇದ್ದಾರೆ ಎಂಬ ಸುದ್ದಿಗಳು. ಅಂತಿಮವಾಗಿ ತಮ್ಮ ಜನಸಂಖ್ಯೆ ಎಷ್ಟೆಂದು ಆಯಾ ಸಮುದಾಯದವರು ಹೇಳಿಕೊಳ್ಳುತ್ತಾರೋ ಅವೆಲ್ಲವನ್ನೂ ಕೂಡಿಸಿದರೆ ರಾಜ್ಯದ ಒಟ್ಟು ಜನಸಂಖ್ಯೆಯ ಮೂರು ಪಟ್ಟಾದರೂ ಆಗುತ್ತದೆ. ಅಧಿಕೃತವಾಗಿ ಖಚಿತ ಮಾಹಿತಿ ಇರುವುದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಮರು ಹಾಗೂ ಇನ್ನಿತರ ಅಲ್ಪಸಂಖ್ಯಾತ ಸಮುದಾಯಗಳ ಜನಸಂಖ್ಯೆಯದ್ದು ಮಾತ್ರವೇ. ಆದರೆ, ಅವರೆಲ್ಲರೂ ಮಾತು ಸತ್ತ ಸಮುದಾಯಗಳಾಗಿರುವುದರಿಂದ ಸಾಂವಿಧಾನಿಕವಾಗಿ ಸಿಕ್ಕ ಪ್ರಾತಿನಿಧ್ಯದ ಅವಕಾಶವನ್ನು ಮಾತ್ರ ಪಡೆದುಕೊಂಡಿದ್ದರು. ಅದಿಲ್ಲದೇ ಹೋಗಿದ್ದರೆ ಪ್ರತೀ ಕ್ಷೇತ್ರದಲ್ಲೂ ಇರುವ, ಆದರೆ ಬಹುತೇಕ ಎಲ್ಲೂ ಶೇ.50 ದಾಟದ ಶೋಷಿತ ಸಮುದಾಯಗಳು ಒಂದು ಸ್ಥಾನವನ್ನೂ ಪಡೆದುಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ನಮ್ಮ ಸಾಮಾಜಿಕ ರಚನೆ ಇದೆ. ದಲಿತ ಚಳವಳಿ ಪ್ರವರ್ಧಮಾನಕ್ಕೆ ಬಂದ ನಂತರ ಆಯಾ ಸಮುದಾಯಗಳು ಒಂದಷ್ಟು ಪ್ರಾತಿನಿಧ್ಯ ಪಡೆದುಕೊಂಡರಷ್ಟೇ. ಅದರ ಮುಂದುವರಿಕೆಯಾಗಿ ಇಂದು ಒಳಮೀಸಲಾತಿಯ ಪ್ರಶ್ನೆಯೂ ಮೇಲೇಳುತ್ತಿದೆ. ಇನ್ನು ಅಲ್ಪಸಂಖ್ಯಾತರು ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಇರುವುದರಿಂದ ಅಲ್ಪಸ್ವಲ್ಪ ಅವಕಾಶ ಪಡೆದುಕೊಳ್ಳುತ್ತಿದ್ದಾರೆ ಅಷ್ಟೇ. ಇಲ್ಲದಿದ್ದರೆ ಅವರಿಗೆ ಒಂದು ಸೀಟೂ ದಕ್ಕದ ರೀತಿಯ ಸಾಮಾಜಿಕ ಸನ್ನಿವೇಶವನ್ನು ಸೃಷ್ಟಿಸಲಾಗಿದೆ.

ಲಿಂಗಾಯಿತರ ವಿಚಾರಕ್ಕೆ ಬರುವುದಾದರೆ, ಅವರ ಜನಸಂಖ್ಯೆಯನ್ನು ರಾಜ್ಯದಲ್ಲಿ ಶೇ.17ರಷ್ಟಿದೆ ಎಂದೇ ಬಹುತೇಕ ಎಲ್ಲರೂ ಇದುವರೆಗೆ ಹೇಳಿದ್ದಾರೆ. ಅಂದರೆ 224 ಕ್ಷೇತ್ರಗಳ ಪೈಕಿ 38 ಸ್ಥಾನಗಳನ್ನು ಪಡೆದುಕೊಳ್ಳಬಹುದು. ಇದೇ ರೀತಿಯ ತರ್ಕ ಒಕ್ಕಲಿಗರು ಮತ್ತು ಬ್ರಾಹ್ಮಣರಿಗೂ ಅನ್ವಯಿಸುತ್ತದೆ. ಈ ಸಮುದಾಯಗಳು ರಾಜ್ಯದ ವಿಧಾನಸಭೆಯಲ್ಲಿ ಪ್ರತಿ ಸಾರಿಯೂ ತಮ್ಮ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತಿವೆ. ಹೀಗಿರುವಾಗ ಹೆಚ್ಚು ಕಡಿಮೆ ಅದರ ಎರಡು ಪಟ್ಟು ಹೆಚ್ಚು ಟಿಕೆಟುಗಳು ತಮಗೆ ಸಿಗಬೇಕೆಂದು ಸಮುದಾಯವೊಂದರ ಪ್ರತಿನಿಧಿಗಳು ಬೇಡಿಕೆ ಮುಂದಿಡುವುದಕ್ಕೆ ಕಾರಣವೇನು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2018ರಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ, ಜೆಡಿಎಸ್‌ ವತಿಯಿಂದ ಮಂತ್ರಿಗಳಾದವರಲ್ಲಿ ಕಣ್ಣಿಗೆ ಕುಕ್ಕುವಷ್ಟು ಸಂಖ್ಯೆಯ ಒಕ್ಕಲಿಗ ಮಂತ್ರಿಗಳಿದ್ದರು. ಆ ಪಕ್ಷದಿಂದ ಗೆದ್ದವರಲ್ಲೂ ಬಹುತೇಕರು ಒಕ್ಕಲಿಗರೇ ಆಗಿರುವಾಗ ಇದು ಸಹಜ ಎಂದು ಅನ್ನಿಸಬಹುದು. ಹಾಗಾದರೆ, ಆ ಪಕ್ಷದಿಂದ ಗೆದ್ದವರಲ್ಲಿ ಎಲ್ಲರೂ ಯಾಕೆ ಒಕ್ಕಲಿಗರೇ ಇದ್ದರು ಎಂಬ ಪ್ರಶ್ನೆ ಏಳಬೇಕು. ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಗಣನೀಯ ಪ್ರಮಾಣದಲ್ಲಿ ಇರುವ ಪ್ರದೇಶದಲ್ಲೇ ಜೆಡಿಎಸ್‌ ಪ್ರಬಲವಾಗಿದೆ ಎಂಬುದು ಅದಕ್ಕೆ ಕಾರಣವೆನ್ನುವುದಾದರೆ, ಆ ಭಾಗದಲ್ಲೂ ಒಕ್ಕಲಿಗರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ಉದಾಹರಣೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 1952ರಿಂದ ಇಲ್ಲಿಯವರೆಗೆ ಗೆದ್ದಿರುವ ಎಲ್ಲರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಈ ಮಧ್ಯೆ ಎರಡು ಬಾರಿ ಸೋತ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಾದತ್‌ ಅಲಿ ಖಾನ್‌ ಅವರಿದ್ದುದು ಬಿಟ್ಟರೆ 1952ರಿಂದ ಇಲ್ಲಿಯವರೆಗೆ ಸೋತವರಲ್ಲಿ ಅಷ್ಟಕ್ಕೆ ಅಷ್ಟೂ ಜನರು ಒಕ್ಕಲಿಗರೇ ಆಗಿದ್ದಾರೆ.

ಎಸ್‌ ಟಿ ಮೀಸಲನ್ನು ಹೊರತುಪಡಿಸಿದ ʼಸಾಮಾನ್ಯʼ ಕ್ಷೇತ್ರಗಳಲ್ಲಿ ಕೆಲವರು ಎಸ್‌ ಟಿ ಸಮುದಾಯಕ್ಕೆ ಸೇರಿದವರು ಗೆದ್ದಿದ್ದಾರೆ ಮತ್ತು ಗೆಲ್ಲುತ್ತಿದ್ದಾರೆ ಎಂಬುದನ್ನು ಬಿಟ್ಟರೆ ಉಳಿದ ದಲಿತ ಸಮುದಾಯಕ್ಕೆ ಅಂತಹ ಅವಕಾಶವೇ ಇಲ್ಲ. ಇದಕ್ಕಿಂತ ಕೆಟ್ಟ ಪರಿಸ್ಥಿತಿ, ಸಣ್ಣ ಸಂಖ್ಯೆಯಲ್ಲಿರುವ ಜಾತಿಗಳದ್ದು. ವಿಧಾನಸಭೆಯೊಳಗೆ ಯಾವ ಸಮುದಾಯಗಳಿಗೆ ಎಷ್ಟು ಅವಕಾಶ ಸಿಕ್ಕಿದೆ ಎನ್ನುವುದರ ಪಟ್ಟಿ ಮಾಡಿದರೆ, ಈ ರಾಜ್ಯದಲ್ಲಿ ನೂರಾರು ಜಾತಿ ಸಮುದಾಯಗಳಿಗೆ ಒಮ್ಮೆಯೂ ಅವಕಾಶ ಸಿಕ್ಕಿಯೇ ಇಲ್ಲ ಎಂಬುದು ಕಾಣುತ್ತದೆ.

ಇಂತಹ ಪರಿಸ್ಥಿತಿ ಇರುವಾಗ ಲಿಂಗಾಯಿತರು ತಮಗೆ 65 ಸೀಟು ಬೇಕು ಎಂದು ಕೇಳುವುದರ ಔಚಿತ್ಯ ಪ್ರಶ್ನೆಗೊಳಗಾಗಬೇಕು. ಇದಕ್ಕೆ ಕಾರಣ ಸ್ಪಷ್ಟ. ಬಿಜೆಪಿಯಲ್ಲಿ ಅದಕ್ಕಿಂತ ಹೆಚ್ಚು ಲಿಂಗಾಯಿತರಿಗೆ ಟಿಕೆಟ್‌ ಕೊಡುತ್ತಾರಾದ್ದರಿಂದ ತಮಗೂ ಅಷ್ಟು ಕೊಡಬೇಕು. ಹಾಗೆ ನೋಡಿದರೆ ಲಿಂಗಾಯಿತರು ಈ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಹುಸಂಖ್ಯಾತರಲ್ಲ. ಪ್ರಬಲ ಸಮುದಾಯ ಹೌದು; ಬಹುಸಂಖ್ಯಾತ ಸಮುದಾಯ ಅಲ್ಲ. ಒಕ್ಕಲಿಗರಾದರೂ ರಾಜ್ಯದ ಏಳೆಂಟು ಕ್ಷೇತ್ರಗಳಲ್ಲಿ ಹತ್ತಿರ ಹತ್ತಿರ ಅರ್ಧದಷ್ಟು ಜನರಿರಬಹುದು. ಲಿಂಗಾಯಿತ ಸಮುದಾಯವು ಶೇ.17ರಷ್ಟಿದ್ದರೂ ಇಡೀ ರಾಜ್ಯಾದ್ಯಂತ ಹರಡಿಹೋಗಿದೆ. ಅದು ಕೇವಲ ಉತ್ತರ ಕರ್ನಾಟಕದ ಸಮುದಾಯವಲ್ಲ. ತುಮಕೂರು, ಚಾಮರಾಜನಗರದಂತಹ ತೀರಾ ದಕ್ಷಿಣ ಕರ್ನಾಟಕದ ಹಲವು ಕ್ಷೇತ್ರಗಳಲ್ಲೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹೀಗಿದ್ದೂ ಕೆಲವರನ್ನು ʼಪ್ರಬಲʼ ಎಂದು ಪದೇ ಪದೇ ಬಿಂಬಿಸುತ್ತಾ ಹೋಗುವುದರ ಹಿಂದೆಯೇ ಒಂದು ಹುನ್ನಾರವಿದೆ.

ಇದನ್ನು ಅರ್ಥ ಮಾಡಿಕೊಂಡು ಭಿನ್ನ ರೀತಿಯ ರಾಜಕಾರಣವನ್ನು ಮುನ್ನೆಲೆಗೆ ತಂದವರು, ದೇವರಾಜ ಅರಸರು. 1972ರ ವಿಧಾನಸಭಾ ಚುನಾವಣೆಯಲ್ಲಿ ಇದ್ದಕ್ಕಿದ್ದಂತೆ ರಾಜ್ಯ ವಿಧಾನಸಭೆಗೆ ಸಣ್ಣ ಸಂಖ್ಯೆಯಲ್ಲಿರುವ ಜಾತಿಗಳಿಗೆ ಸೇರಿದವರೂ ಸೇರಿದಂತೆ ವಿವಿಧ ಹಿಂದುಳಿದ ಸಮುದಾಯಗಳಿಗೆ ಸೇರಿದವರು ಪ್ರವೇಶಿಸಿದರು. ಅದೇ ಪ್ರಜಾಪ್ರಭುತ್ವದಲ್ಲಿ ಆಗಬೇಕಿರುವುದು. ಆದರೆ, ನಿಧಾನಕ್ಕೆ ಮತ್ತೆ ʼಪ್ರಬಲʼ ಜಾತಿಗಳು, ʼಬಲಾಢ್ಯʼ ಸಮುದಾಯಗಳ ಚರ್ಚೆಯೇ ಹೆಚ್ಚಾಗಿದೆ. ಅದರ ಪರಿಣಾಮ ಏನಾಗಬಹುದು?

ಅದರ ಪರಿಣಾಮವೆಂದರೆ, ಒಟ್ಟುಗೂಡಿದರೆ ಎಲ್ಲರಿಗಿಂತ ಹೆಚ್ಚಾಗಬಹುದಾದ, ಆದರೆ ಬಿಡಿಬಿಡಿಯಾಗಿ ಅತ್ಯಂತ ಚಿಕ್ಕದಾಗ ಉಳಿದ ಸಮುದಾಯಗಳಲ್ಲಿ ಅಸಮಾಧಾನ, ಅನಾಥಭಾವ ಹೆಚ್ಚಾಗುತ್ತಲೇ ಹೋಗುತ್ತದೆ. ಇದು ಕಾಲಾಂತರದಲ್ಲಿ ಈ ʼಬಲಾಢ್ಯʼ ಸಮುದಾಯಗಳ ವಿರುದ್ಧದ ಭಾವನೆಯಾಗಿ ನೆಲೆಗೊಂಡರೆ ಅದಕ್ಕೆ ಕಾರಣ ಯಾರು? ಈ ರೀತಿ 65 ಟಿಕೆಟ್‌ ಕೇಳುವವರು ಮತ್ತು ಕೊಡುವವರು ಇಬ್ಬರೂ ಆಗಿದ್ದಾರೆ. ಮೂರೂ ಪಕ್ಷಗಳೂ ಇದಕ್ಕೆ ಕಾರಣವಾಗಿದ್ದರೂ, ಜೆಡಿಎಸ್‌ ಹೆಚ್ಚು ಒಕ್ಕಲಿಗರಿಗೂ, ಬಿಜೆಪಿ ಹೆಚ್ಚು ಲಿಂಗಾಯಿತರಿಗೂ ಟಿಕೆಟ್‌ ಕೊಡುವುದು ಎದ್ದು ಕಾಣುತ್ತದೆ. ಇಂತಹ ರಾಜಕಾರಣವು ತಮಗೇ ಮಾರಕ ಎಂದು ಲಿಂಗಾಯಿತರು ಅರ್ಥ ಮಾಡಿಕೊಳ್ಳಬೇಕು.

ಇದು ಒಕ್ಕಲಿಗರಿಗೂ ಅನ್ವಯಿಸುತ್ತದೆ. ಬ್ರಾಹ್ಮಣರ ವಿಚಾರದಲ್ಲಿ ಇದು ಕೇವಲ ರಾಜಕಾರಣಕ್ಕೆ ಸೀಮಿತವಲ್ಲ. ವಿವಿಧ ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮ ಒಟ್ಟು ಜನಸಂಖ್ಯೆಯ ಪ್ರಮಾಣಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಇರುವುದು ಅಪ್ರಜಾತಾಂತ್ರಿಕ ಮತ್ತು ಬಹುಸಂಖ್ಯಾತ ಸಮುದಾಯಗಳು ತಮ್ಮ ಬಗ್ಗೆ ಅಸಹನೆ ಹೊಂದಿರುವುದಕ್ಕೆ ಅದು ಕಾರಣವೇ ಹೊರತು, ಯಾರದ್ದೋ ಜನ್ಮಜಾತ ಗುಣದ ಕಾರಣಕ್ಕಲ್ಲ ಎಂಬುದನ್ನು ಬ್ರಾಹ್ಮಣರು ಎಷ್ಟು ಬೇಗ ಅರ್ಥ ಮಾಡಿಕೊಂಡರೆ ಅಷ್ಟು ಒಳಿತು.

ಲಿಂಗಾಯಿತರು ಇನ್ನೂ ಒಂದು ಕಾರಣಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಲಿಂಗಾಯಿತ ಧರ್ಮದ ಹುಟ್ಟೇ ಇಂತಹ ಅಸಮಾನತೆ ವಿರುದ್ಧ ಆಗಿತ್ತು. ವಿವಿಧ ಕಾಯಕ ಸಮುದಾಯಗಳನ್ನು ಜೊತೆಗೂಡಿಸಿ ಕೊಂಡಿದ್ದು ಲಿಂಗಾಯಿತ ಧರ್ಮ, ಶರಣ ಚಳವಳಿ. ಆ ಪ್ರಕ್ರಿಯೆ ಪೂರ್ಣಗೊಂಡು, ರಾಜ್ಯದ ಎಲ್ಲಾ ಕಾಯಕ ಸಮುದಾಯಗಳೂ ಒಂದು ಧರ್ಮವಾಗಿ ಒಗ್ಗೂಡಲಿಲ್ಲ ಎಂಬುದು ವಾಸ್ತವ. ಹಾಗಾಗಿ ಲಿಂಗಾಯಿತವೂ ಒಂದು ಜಾತಿಯಾಗಿ (ಅದರೊಳಗೆ ವಿವಿಧ ಉಪಪಂಗಡಗಳೂ ಇವೆ) ನೆಲೆಗೊಂಡಿದೆಯಾದರೂ, ತಾತ್ವಿಕವಾಗಿ ಎಲ್ಲಾ ಕಾಯಕ ಸಮುದಾಯಗಳ ಪರವಾಗಿ ಚಿಂತಿಸಬೇಕಾದ್ದು ಲಿಂಗಾಯಿತರ ʼಧಾರ್ಮಿಕʼ ಕರ್ತವ್ಯವೂ ಹೌದು.

ಈ ಅರ್ಥದಲ್ಲೂ ತಮಗೇ ಸಿಂಹಪಾಲು ಬೇಕೆಂದು ಕೇಳುವ ಲಿಂಗಾಯಿತ (ಅಥವಾ ಇತರ ʼಮೇಲ್ಜಾತಿʼ)ರು ಲಿಂಗಾಯಿತ ವಿರೋಧಿಗಳಲ್ಲದೇ ಬೇರೇನೂ ಅಲ್ಲ. ಇಂದು ಸಹಜವಾಗಿ ಮೇಲೆದ್ದು ಬಂದಿರುವ ಬ್ರಾಹ್ಮಣ ವಿರೋಧವು ಲಿಂಗಾಯಿತರ ವಿರುದ್ಧವೂ ಸಮಾಜದಲ್ಲಿ ಹೆಚ್ಚಿದರೆ, ಅದಕ್ಕೆ ಲಿಂಗಾಯಿತರೇ ಕಾರಣರಾಗುತ್ತಾರೆ. ಬ್ರಾಹ್ಮಣರ ಬ್ರಾಹ್ಮಣ್ಯದ ವಿರುದ್ಧ ಸಮಾಜದಲ್ಲಿ ಅಸಹನೆ ಇದ್ದರೆ ಅದಕ್ಕೆ ಬ್ರಾಹ್ಮಣರೇ ಹೇಗೆ ಕಾರಣವೋ, ಹಾಗೆ.

ಒಂದು ವೇಳೆ ತಮ್ಮ ಸಂಖ್ಯೆಯನ್ನು ಹಿಗ್ಗಿಸಿ ಹೆಚ್ಚಿನ ಪಾಲನ್ನು ಕೆಲವು ಹಿಂದುಳಿದ ಸಮುದಾಯಗಳು ಕೇಳಿದರೆ ಅದರ ಕುರಿತು ಅಂತಹ ದೊಡ್ಡ ಆಕ್ಷೇಪಣೆಯೇನೂ ಇರಬೇಕಾದ್ದಿಲ್ಲ. ಏಕೆಂದರೆ ಅವರು ಇದುವರೆಗೂ ಅಂತಹ ಪ್ರಾತಿನಿಧ್ಯವನ್ನು ಪಡೆದುಕೊಂಡಿಲ್ಲ. ಆದರೆ ಈ ʼಬಲಾಢ್ಯʼ ಜಾತಿಗಳು ಅಂತಹದ್ದನ್ನು ಮಾಡಬಾರದು. ಕಳೆದ ವಿಧಾನಸಭೆಯಲ್ಲಿ ಅಥವಾ 1952ರಿಂದ ಇಲ್ಲಿಯವರೆಗಿನ ವಿಧಾನಸಭೆಗಳಲ್ಲಿ ತಮ್ಮ ಜಾತಿಯವರು ಅಧಿಕಾಂಶ ಇದ್ದರೆಂಬುದು ಕನಿಷ್ಠ ಪಾಪಪ್ರಜ್ಞೆಯನ್ನು ಹುಟ್ಟಿಸದಿದ್ದರೆ ಹೇಗೆ? ಬಸವಣ್ಣನಾಣೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....