ಸನಾತನ ಧರ್ಮದ ಆತ್ಮವೇ ಬ್ರಾಹ್ಮಣ್ಯ

Date:

ಸನಾತನ ಧರ್ಮವೆಂದರೆ ಪುರಾತನ, ಪ್ರಾಚೀನ, ಪ್ರಕೃತಿ ವಿರೋಧಿ, ಜೀವ ವಿರೋಧಿ ಜೀವನ ವಿಧಾನವೆಂದು ಮಾನವೀಯತೆಯನ್ನು ಸಮರ್ಥಿಸುವ ಚಿಂತಕರು ಬಣ್ಣಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಕೆಳವರ್ಗಗಳನ್ನು ಶೋಷಣೆಗೆ ಗುರಿಪಡಿಸುವುದು ಹಿಂದೂ ಧರ್ಮದ ಒಂದು ಅಮಾನವೀಯ ಜೀವನ ವಿಧಾನವಾಗಿದೆ.  

ಬೌದ್ಧ ಧರ್ಮಕ್ಕಿಂತ ಹಿಂದಿನ ಸನಾತನ ಹಿಂದೂ ಧರ್ಮವನ್ನು ಕುರಿತು ಅಂಬೇಡ್ಕರ್ ಹೀಗೆ ವಿಶ್ಲೇಷಿಸಿದ್ದಾರೆ. “ಸನಾತನ ಧರ್ಮ ಅಸಮಾನತೆಯ ತವರು. ಅದು ಏಣಿ ಇಲ್ಲದ, ಪ್ರವೇಶದ್ವಾರವಿಲ್ಲದ, ಅನೇಕ ಮಹಡಿಗಳುಳ್ಳ ಗೋಪುರ. ಒಂದು ಮಹಡಿಯಲ್ಲಿ ಹುಟ್ಟಿದ ಜನ ಅಲ್ಲಿಯೇ ಸತ್ತು ಕೊಳೆಯಬೇಕು”.

ಅಸ್ಪೃಶ್ಯರು ಶತಶತಮಾನಗಳ ಬಡತನದಿಂದ ನರಳಿ ಸಾಯುವಲ್ಲಿ ಹಿಂದೂ ಧರ್ಮದ ಕಟ್ಟುಪಾಡುಗಳನ್ನು ಜನತೆಯ ಮೇಲೆ ಹೇರಿದ ಸನಾತನವಾದಿಗಳು ಪ್ರಮುಖವಾಗಿ ಕಾರಣರಾಗಿದ್ದಾರೆ. ಹಿಂದೂ ಧರ್ಮ ಸಮಸ್ತ ಭಾರತೀಯರಿಗೆ ಧಾರ್ಮಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳು ಮತ್ತು ಕ್ಷೇತ್ರಗಳಲ್ಲಿ ಸಮಾನ ಹಕ್ಕುಗಳನ್ನು ನಿರಾಕರಿಸಿ ಅನಾಗರಿಕತೆಯನ್ನು ಮೆರೆದಿದೆ. ಬಹುಜನ ಭಾರತೀಯರ ಬದುಕುವ ಹಕ್ಕನ್ನು ಹಿಂದೂ ಧರ್ಮ ಅಮಾನುಷವಾಗಿ ಕಸಿದುಕೊಂಡಿದೆ.

ಪ್ರಾಚೀನ ಭಾರತದಲ್ಲಿ ಮುಖ್ಯವಾಗಿ ಬುಡಕಟ್ಟು ಜನರು ಪ್ರಕೃತಿಯೊಂದಿಗೆ ಸಮಸಮನಾಗಿ ಅರ್ಥಪೂರ್ಣ ಬದುಕನ್ನು ನಿರ್ವಹಿಸಿದ್ದಾರೆ. ಮೂಲ ನಿವಾಸಿಗಳು ಯಾವುದೇ ಧರ್ಮ, ದೇವರು ಮತ್ತು ಕಟ್ಟುಪಾಡುಗಳಿಗೆ ಗುರಿಯಾಗದೇ ಅತ್ಯಂತ ಸರಳವಾದ ಮತ್ತು ಮಾನವೀಯವಾದ ಬದುಕನ್ನು ನಡೆಸಿದ್ದಾರೆ. ಆದರೆ ಆರ್ಯರು ಭಾರತದ ಮೇಲೆ ದಾಳಿ ನಡೆಸಿ ಭಾರತೀಯ ಮೂಲನಿವಾಸಿಗಳನ್ನು ನಿರಂತರವಾಗಿ ಗುಲಾಮರನ್ನಾಗಿಸಲು ಅವರದೇ ಆದ ಸಿದ್ಧಾಂತಗಳು ಮತ್ತು ಕಟ್ಟುಪಾಡುಗಳನ್ನು ರೂಪಿಸಿದ್ದಾರೆ. ಪುರಾತನ ಭಾರತದಲ್ಲಿ ಧಾರ್ಮಿಕ ಪರಿವರ್ತನೆಯಿಲ್ಲದೆ ರಾಷ್ಟ್ರೀಯತೆ ಬದಲಾಗುವುದು ಸಾಧ್ಯವೇ ಇರಲಿಲ್ಲ. ಪ್ರಾಚೀನ ಭಾರತದಲ್ಲಿ ರಾಷ್ಟ್ರೀಯತೆಯ ಬದಲಾವಣೆಯೆಂದರೆ ಧಾರ್ಮಿಕ ಪರಿವರ್ತನೆಯ ಮೂಲಕವೇ ಆಗಬೇಕಿತ್ತೆಂಬುದು ಸ್ಪಷ್ಟ. ವಿದ್ಯುಕ್ತ ಆಚರಣೆಗಳು ಮತ್ತು ಪ್ರಾಯೋಗಿಕ ಬಳಕೆಗಳೇ ಸನಾತನ ಧರ್ಮದ ಸರ್ವಸ್ವವೆಂದು ಸ್ಪಷ್ಟವಾಗಿ ಹೇಳಬಹುದು.

ಸನಾತನ ಧರ್ಮವೆಂದರೆ ಪುರಾತನ, ಪ್ರಾಚೀನ, ಪ್ರಕೃತಿ ವಿರೋಧಿ, ಜೀವ ವಿರೋಧಿ ಜೀವನ ವಿಧಾನವೆಂದು ಮಾನವೀಯತೆಯನ್ನು ಸಮರ್ಥಿಸುವ ಚಿಂತಕರು ಬಣ್ಣಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಕೆಳವರ್ಗಗಳನ್ನು ಶೋಷಣೆಗೆ ಗುರಿಪಡಿಸುವುದು ಹಿಂದೂ ಧರ್ಮದ ಒಂದು ಅಮಾನವೀಯ ಜೀವನ ವಿಧಾನವಾಗಿದೆ. ಕೆಳವರ್ಗಗಳನ್ನು ಧಾರ್ಮಿಕ ಆಚರಣೆಗಳು ಮತ್ತು ಸಮಾಜದ ಮುಖ್ಯವಾಹಿನಿಯಿಂದ ದೂರವಿಡುವುದು ಆರ್ಯರ ಕುತಂತ್ರವಾಗಿದೆ. ಶೂದ್ರಾತಿ ಶೂದ್ರರ ಸಾಮಾಜಿಕ ಜೀವನದ ಹಕ್ಕುಗಳನ್ನು ಅವರಿಂದ ಕಸಿದುಕೊಂಡು ರಾಷ್ಟ್ರೀಯ ಮುಖ್ಯವಾಹಿನಿಯಿಂದ ಅವರನ್ನು ದೂರವಿಡುವುದಕ್ಕೆ ಅವಶ್ಯಕವಾದ ಕಟ್ಟುಪಾಡುಗಳನ್ನು ಸನಾತನ ವಾದಿಗಳೆಂದು ಕರೆಯಲ್ಪಡುವ ಧಾರ್ಮಿಕ ಮೂಲಭೂತವಾದಿಗಳು ರೂಪಿಸಿದ್ದಾರೆ.

ಸನಾತನ ಧರ್ಮದ ದೈವಿಕ ಪ್ರಭುತ್ವ ಯೋಜನೆಯಲ್ಲಿ ವ್ಯಕ್ತಿಗಿಂತ ಧರ್ಮವೇ ಪ್ರಮುಖವಾಗುತ್ತದೆ ಎಂಬ ಅಂಶವನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಸನಾತನ ಮೂಲಭೂತ ವಾದಿಗಳು ಶುದ್ಧ ಜಾತ್ಯಾತೀತವಾಗಿ ಸಂಯುಕ್ತಗೊಂಡ ಧಾರ್ಮಿಕ ಆದರ್ಶಕ್ಕಿರುವ ಶಕ್ತಿ ಮತ್ತು ಪ್ರಭಾವಗಳನ್ನು ತಿಳಿಯುವಲ್ಲಿ ವಿಫಲವಾಗಿದ್ದಾರೆ. ಸನಾತನ ಧರ್ಮ ಸಮಾನತೆಯನ್ನು ಖಂಡಿತ ಒಪ್ಪುವುದಿಲ್ಲ. ಜಾತಿವ್ಯವಸ್ಥೆಯ ಒಂದು ವಿಶಿಷ್ಟ ಲಕ್ಷಣವೆಂದರೆ ವಿವಿಧ ಜಾತಿಗಳೆಲ್ಲ ಸಮಾನಾಂತರವಾಗಿ ಏಕ ನೆಲೆಯಲ್ಲಿ ನಿಂತಿಲ್ಲದಿರುವುದು. ಸನಾತನ ಧರ್ಮದಲ್ಲಿ ವಿವಿಧ ಜಾತಿಗಳು ಶ್ರೇಣೀಕೃತವಾಗಿ ಒಂದರ ಮೇಲೊಂದು ನಿಂತಿವೆ. ವರ್ಣವೇ ಜಾತಿಯ ಮೂಲವಾಗಿದೆ. ಹಿಂದೂ ಧಾರ್ಮಿಕ ಮೂಲಭೂತವಾದಿಗಳು ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದರೆ, ಮನು ಜಾತಿ ವ್ಯವಸ್ಥೆಯ ಸಮರ್ಥ ಪ್ರವರ್ತಕನಾಗಿದ್ದನೆಂದು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಸನಾತನ ಧರ್ಮಕ್ಕೆ ಆಧಾರವಾಗಿರುವ ಮನುಧರ್ಮಶಾಸ್ತ್ರ ಪ್ರಕೃತಿ ವಿರೋಧಿ ಹಾಗೂ ಜೀವ ವಿರೋಧಿ ಸಾಮಾಜಿಕ ವ್ಯವಸ್ಥೆಯಾಗಿದೆ. ಆಧುದರಿಂದ ಭಾರತೀಯ ಸಂವಿಧಾನದಲ್ಲಿ ಸನಾತನ ಧರ್ಮವನ್ನು ದೂರವಿಡಲಾಗಿದೆ.

ಮನು ಗುಲಾಮ ಪದ್ಧತಿಯನ್ನು ಭಾರತದಲ್ಲಿ ಸಾಂಸ್ಥೀಕರಣಗೊಳಿಸಿದ ಅತ್ಯಂತ ಕೆಟ್ಟ ಸನಾತನವಾದಿ. ಮನುವಿನ ಯೋಜನೆಯಲ್ಲಿ ಬ್ರಾಹ್ಮಣನು ಪ್ರಥಮ ಹಂತದಲ್ಲಿ ಬರುತ್ತಾನೆ. ಅದರ ಕೆಳಗೆ ಕ್ಷತ್ರಿಯ, ಕ್ಷತ್ರಿಯನ ಕೆಳಗೆ ವೈಶ್ಯರು ಬರುತ್ತಾರೆ. ಇನ್ನೂ ಕೆಳಗೆ ಶೂದ್ರ ಮತ್ತೂ ಕೆಳಗೆ ಅತಿಶೂದ್ರ, ಅಂದರೆ ಅಸ್ಪೃಶ್ಯ ಜನವರ್ಗಗಳು ಬರುತ್ತವೆ. ಈ ರೀತಿಯ ಹಂತಗಳ ನಿರ್ಮಾಣ ಮತ್ತು ಮೇಲು-ಕೀಳಿನ ಅಂತರಗಳನ್ನು ಅಂಗೀಕರಿಸುವುದೆಂದರೆ ಅಸಮಾನತೆಯನ್ನು ಸ್ಥಿರಗೊಳಿಸುವ ಮತ್ತೊಂದು ವಿಧಾನವೆಂದೇ ಹೇಳಬಹುದು. ಮನು ಮತ್ತು ಅವನ ವಾರಸುದಾರರು ಗುಲಾಮಗಿರಿಯನ್ನೇ ಒಪ್ಪಿಕೊಳ್ಳುತ್ತಾ ಅದರ ಅನುಸರಣೆಯು ವರ್ಣಪದ್ಧತಿಯಲ್ಲಿ ವಿಲೋಮವಾಗಿರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಸನಾತನವಾದಿಗಳ ಪ್ರಕಾರ ಬ್ರಾಹ್ಮಣನು ಉಳಿದ ಯಾವುದೇ ವರ್ಣದವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಬಹುದು. ಆದರೆ, ಉಳಿದವರು ಯಾರನ್ನೂ ಗುಲಾಮರಂತೆ ಪರಿಗಣಿಸಬಾರದೆಂದು ಸನಾತನ ಧರ್ಮ ಹೇಳುತ್ತದೆ. ಈ ಧರ್ಮದಲ್ಲಿ ಅಂತರ್‍ಜಾತಿ ವಿವಾಹಗಳನ್ನು ವಿರೋಧಿಸಲಾಗುತ್ತದೆ. ಹಿಂದೂ ಧರ್ಮದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸವೆಂಬ ವಿವಿಧ ಘಟ್ಟಗಳು ಪ್ರಕೃತಿ ಧರ್ಮಕ್ಕೆ ವಿರುದ್ಧವಾಗಿವೆ. ಬಹುಮುಖ್ಯವಾಗಿ ದಲಿತರು ಮತ್ತು ಮಹಿಳೆಯರ ಬದುಕನ್ನು ಹಿಂದೂ ಧಾರ್ಮಿಕ ಕಟ್ಟುಪಾಡುಗಳು ಬೌದ್ಧ ಧರ್ಮದ ಉಗಮಕ್ಕಿಂತ ಮೊದಲು ಕಸಿದುಕೊಂಡಿರುವುದನ್ನು ಐತಿಹಾಸಿಕ ದಾಖಲೆಗಳು ಮತ್ತು ವಿಶ್ಲೇಷಣೆಗಳು ಸ್ಪಷ್ಟಪಡಿಸುತ್ತವೆ.

ಈ ಹಿನ್ನೆಲೆಯಲ್ಲಿ ಅಸ್ಪೃಶ್ಯತೆ ಮತ್ತು ಅಸಮಾನತೆಗಳಿಗೆ ಪೂರಕವಾದ ಸನಾತನ ಧರ್ಮಕ್ಕೆ ಪರ್ಯಾಯವಾಗಿ ಬೌದ್ಧ ಧರ್ಮ, ಜೈನಧರ್ಮ, ಸಿಖ್ ಧರ್ಮ ಮೊದಲಾದವುಗಳು ಭಾರತದಲ್ಲಿ ಬೆಳೆದವು. ತುಳಿತಕ್ಕೆ ಒಳಗಾದ ಜನವರ್ಗಗಳನ್ನು ಹೀನಾಯಗೊಳಿಸುವ ಪ್ರವೃತ್ತಿ. ಆರ್ಯರು ಮೂಲಭೂತವಾಗಿ ಹೊರಗಿನಿಂದ ಬಂದ ಆಕ್ರಮಣಕಾರರು ಮತ್ತು ಭಾರತೀಯ ಮೂಲನಿವಾಸಿಗಳ ಬದುಕುವ ಹಕ್ಕನ್ನು ಕಸಿದುಕೊಂಡ ಸಮಾನತೆಯ ವಿರೋಧಿಗಳು. ಆರ್ಯರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಅನೇಕ ಕಂದಾಚಾರಗಳು ಮತ್ತು ದುರಾಚಾರಗಳನ್ನು ರೂಪಿಸಿದ್ದಾರೆ. ಪ್ರಾಚೀನ ಸನಾತನ ಹಿಂದೂ ಸಮಾಜದಲ್ಲಿ ಮದ್ಯಪಾನವು ಮೊದಲಿನ ವರ್ಣಗಳಾದ ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಮಾತ್ರ ಮೀಸಲಾಗಿತ್ತು. ಮಹಿಳೆಯರು ಸಹ ಮದ್ಯಪಾನವನ್ನು ಮಾಡುತ್ತಿದ್ದರು. ಊರಿನ ಅರಮನೆಗಳಲ್ಲಿ ಜೂಜು ಕೇಂದ್ರಗಳನ್ನು ತೆರೆಯುವುದು ಸರ್ವೆಸಾಮಾನ್ಯವಾಗಿತ್ತು. ಎಲ್ಲಾ ರಾಜರುಗಳು ಜೂಜು ಆಟದಲ್ಲಿ ಪರಿಣತಿ ಪಡೆದವರಾಗಿದ್ದರು. ರಾಜರುಗಳು ರಾಜಧಾನಿಗಳನ್ನು, ತಮ್ಮ ಆಶ್ರಯದಾತರನ್ನು, ಬಂಧುಗಳನ್ನು ಗುಲಾಮರನ್ನು, ಸೇವಕರನ್ನು ಪಣಕ್ಕೆ ಇಡುತ್ತಿದ್ದರು. ಯಜ್ಞ, ಯಾಗ, ಕಟ್ಟುಪಾಡುಗಳು ಮೊದಲಾದವುಗಳ ನೆಪದಲ್ಲಿ ಸನಾತನ ಧರ್ಮ ಪ್ರಾಚೀನ ಭಾರತೀಯರನ್ನು ಕತ್ತಲೆಗೆ ದಬ್ಬಿದೆ. ಇತ್ತೀಚೆಗೆ ಕೆಲವು ಸನಾತನವಾದಿಗಳು ಸನಾತನ ಧರ್ಮ ಅತ್ಯಂತ ವೈಜ್ಞಾನಿಕ ಧರ್ಮವೆಂದು ಪ್ರತಿಪಾದಿಸುತ್ತಿರುವುದು ಸತ್ಯಕ್ಕೆ ದೂರವಾಗಿದೆ.

ಪುರೋಹಿತ ವೃತ್ತಿಯು ಆರ್ಯ ಸಮಾಜದಲ್ಲಿ ಬ್ರಾಹ್ಮಣರ ಏಕಸ್ವಾಮ್ಯವಾಗಿತ್ತು. ಬ್ರಾಹ್ಮಣರು ಪುರೋಹಿತರಾಗಿದ್ದು ವಿಲಾಸಿ ಜೀವನವನ್ನು ನಡೆಸುತ್ತಿದ್ದರು. ಮನುವಿನ ವಾರಸುದಾರರು ಶೂದ್ರಾತಿ ಶೂದ್ರರು ಮತ್ತು ಮಹಿಳೆಯರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಿದ್ದಾರೆ. ಗೌತಮನ ಪ್ರಕಾರ “ಒಬ್ಬ ಶೂದ್ರನು ಉದ್ದೇಶಪೂರ್ವಕವಾಗಿ ಅದನ್ನು ಬಳಿಕ ನೆನಪಿಸಿಕೊಳ್ಳುವ ಸಲುವಾಗಿ-ವೇದ ಪಾಠವನ್ನು ಕೇಳಿಸಿಕೊಂಡರೆ, ಅವನ ಕಿವಿಯಲ್ಲಿ ಕಾದ ಸೀಸವನ್ನು ಮತ್ತು ಅರಗನ್ನು ತುಂಬಬೇಕು; ವೇದವನ್ನೇನಾದರೂ ಅವನು ಉಚ್ಚರಿಸಿದರೆ ನಾಲಗೆಯನ್ನು ಕತ್ತರಿಸಬೇಕು; ಅವನು ವೇದದಲ್ಲಿ ಪರಿಣತಿಯನ್ನೇ ಸಂಪಾದಿಸಿದರೆ ಅವನ ದೇಹವನ್ನೇ ತುಂಡು ತುಂಡಾಗಿ ಕತ್ತರಿಸಿ ಹಾಕಬೇಕು” ಎಂಬಂತಹ ಕ್ರೂರ ಕಟ್ಟುಪಾಡುಗಳು ಮತ್ತು ಅವ್ಯವಸ್ಥೆಗಳನ್ನು ಆಧರಿಸಿದ ಸನಾತನ ಧರ್ಮ ಪ್ರಾಚೀನ ಭಾರತದಲ್ಲಿ ಮೂಲನಿವಾಸಿಗಳಿಗೆ ಸರಿಸಮನಾಗಿ ಬದುಕುವ ಮೂಲಭೂತ ಹಕ್ಕನ್ನು ನಿರಾಕರಿಸಿತು. ಹಿಂದೂ ಧರ್ಮ ವಾಸ್ತವವಾಗಿ ಭ್ರಾತೃಘಾತಕವಾಗಿದೆ ಎಂದು ಅಂಬೇಡ್ಕರ್ ತಿಳಿಸುತ್ತಾರೆ.

ಇದನ್ನು ಓದಿ ಸನಾತನ ಧರ್ಮ ಬೇಕೋ? ’ಪ್ರತೀತ್ಯ ಸಮುತ್ಪಾದ’ ಬೇಕೋ?

ಸನಾತನವಾದಿಗಳು ಸಾವಿರಾರು ವರ್ಷಗಳಿಂದಲೂ ಧರ್ಮದ ವೇಷ ಹಾಕಿಕೊಂಡು ವಂಚಿಸಿ ತಮ್ಮ ಬಹುಕೆಟ್ಟ ಜೀವನ ವಿಧಾನವನ್ನು ಧರ್ಮವೆಂದೇ ತಪ್ಪಾಗಿ ಪ್ರತಿಪಾದಿಸಿದ್ದಾರೆ. ಅದಕ್ಕಾಗೇ ಯಾವ ರಾಜ ಬಂದರೂ ʼರಾಜ ಧರ್ಮʼ ಅಂದರೆ ವರ್ಣ ವ್ಯವಸ್ಥೆಯನ್ನು ಕಾಪಾಡುವುದೇ ಆಗಿತ್ತು. ಹಿಂದೂವಾಗಿ ಇರುವುದು ಅಂದರೆ ಇದ್ದಕಡೆ ಇರುವ ಶ್ರೇಣಿಯಲ್ಲಿ ಬಿದ್ದಿರು ಎಂದೇ ಅರ್ಥ. ಸನಾತನ ಧರ್ಮದಲ್ಲಿ ನಾಲ್ಕು ವರ್ಣಗಳು ಬೇರೆ ಬೇರೆಯಾಗಿ ಸಮತಲ ಕ್ಷೇತ್ರದಲ್ಲಿ ಇಲ್ಲ, ಬದಲು ಲಂಬರೇಖೆಯಲ್ಲಿವೆ. ಅವು ಬೇರೆಯಾಗಿರುವುದು ಮಾತ್ರವಲ್ಲ, ಅಸಮಾನಸ್ಥಾನ ಹೊಂದಿವೆ. ಈ ಶ್ರೇಣೀಕೃತ ಅಸಮಾನತೆಯ ತತ್ವದ ನಿಯಂತ್ರಣಕ್ಕೆ ಒಳಪಡದಿರುವ ಯಾವುದೇ ಜೀವನ ಕ್ಷೇತ್ರವಿಲ್ಲ. ಇದಕ್ಕೆ ಆಧಾರವಾಗಿ ಮನುಸ್ಮೃತಿಯಿಂದ ಅಸಂಖ್ಯಾತ ನಿದರ್ಶನಗಳನ್ನು ಕೊಡಬಹುದು.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಕುರಿತು ಮಂಡಿಸಿದ ವಿಚಾರಧಾರೆ ಸರಿಯಾಗಿದೆ. ಭಾರತೀಯ ಸಂವಿಧಾನ ವೈಚಾರಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳನ್ನು ಎಲ್ಲ ಪ್ರಜೆಗಳಿಗೂ ನೀಡಿರುವ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್‌ ಅವರ ವಿಚಾರಧಾರೆಯನ್ನು ವಿರೋಧಿಸಿ ಅವರ ತಲೆಯನ್ನು ಕಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡಿರುವುದಾಗಿ ಘೋಷಿಸಿರುವ ಅಯೋಧ್ಯೆಯ ಪರಮ ಹಿಂಸಾಚಾರ್ಯರನ್ನು ಸ್ವಯಂ ಪ್ರೇರಣೆಯಿಂದ ಸರ್ವೋಚ್ಛ ನ್ಯಾಯಾಲಯ ನ್ಯಾಯಾಂಗ ತನಿಖೆಗೆ ಗುರಿಪಡಿಸಿ ಭಾರತೀಯ ಸಮಾಜದಲ್ಲಿ ಸನಾತನ ಧರ್ಮ ಸೃಷ್ಟಿಸಿರುವ ಕೆಡುಕುಗಳನ್ನು ನಿವಾರಿಸುವುದು ಅನಿವಾರ್ಯವಾಗಿದೆ.

ಡಾ. ಮಹೇಶ್‌ ಚಂದ್ರ ಗುರು
+ posts

ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

ಪೋಸ್ಟ್ ಹಂಚಿಕೊಳ್ಳಿ:

ಡಾ. ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂವಿಧಾನ ಕಗ್ಗೊಲೆ ಮಾಡುತ್ತಿರುವ ಕೊಲೆಗಡುಕರು : ವಿ ಎಲ್ ನರಸಿಂಹಮೂರ್ತಿ ಬರೆಹ

ಸಂವಿಧಾನವನ್ನು ಗೌರವಿಸುವ ನಾಟಕವಾಡುತ್ತಲೇ ದೇಶ ಒಪ್ಪಿಕೊಂಡಿರುವ ಸಂವಿಧಾನದ ಮೌಲ್ಯಗಳನ್ನು ಮತ್ತು ದೇಶ...

ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ

ಕಂದಾಯ ಇಲಾಖೆ ಕೆಲಸ ಎಂದರೆ ರೈತರು ಬೆಚ್ಚಿಬೀಳುತ್ತಾರೆ. ಸಕಾಲದಡಿ ಇಂತಿಷ್ಟೇ ಅವಧಿಯಲ್ಲಿ...

ಮಹಿಳಾ ಮೀಸಲಾತಿ | 15 ವರ್ಷಗಳಿಂದ ಮಂಡನೆಯಾಗದ ಮಸೂದೆ; ವಿರೋಧಿಗಳು ಯಾರು?

ಮಹಿಳಾ ಮೀಸಲಾತಿಯ ಚರ್ಚೆ ಮತ್ತೆ ಮುನ್ನೆಲೆಯಲ್ಲಿದೆ. ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು...

ಕಲ್ಯಾಣ ಕರ್ನಾಟಕ | ಹೆಸರು ಬದಲಾದರೂ ಹಸನಾಗದ ಬದುಕು

ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಎರಡು ಸ್ವಾತಂತ್ರ್ಯ ಸಂಭ್ರಮದ ದಿನಗಳು, ಒಂದು...