ಮುಸ್ಲಿಮರ ಮೀಸಲಾತಿ ರದ್ದು| ಸಂಘ ಪರಿವಾರ – ಮೇಲ್ಜಾತಿಗಳ ಹುನ್ನಾರದ ಒಂದು ಆಟ

Date:

ಮುಸಲ್ಮಾನರಿಂದ ಕಿತ್ತುಕೊಂಡ ಹಕ್ಕು ನಮಗೆ ಬೇಡ. ಅವರ ಪಾಲನ್ನು ಅವರಿಗೆ ಹಿಂದಿರುಗಿಸಿ. ಅಷ್ಟು ಮಾತ್ರವಲ್ಲ, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಅವರ ಪಾಲನ್ನು ಹೆಚ್ಚಿಸಿ’ ಎಂದು ಎಲ್ಲರಿಗಿಂತ ಮೊದಲು ಪ್ರತಿಭಟಿಸಬೇಕಾದವರು ಒಕ್ಕಲಿಗ, ಲಿಂಗಾಯತ ಮತ್ತು ಬ್ರಾಹ್ಮಣರು

ಕರ್ನಾಟಕ ಸರಕಾರವು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಒದಗಿಸಿದ ಮೀಸಲಾತಿ 2ಬಿ ಪ್ರವರ್ಗದ ಕೆಳಗೆ ಮುಸಲ್ಮಾನರಿಗೆಂದು ಇರುವ ಶೇಕಡಾ ನಾಲ್ಕರ ಪಾಲನ್ನು ತೆಗೆದು ಹಾಕಿ, ಅದನ್ನು ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತ ಸಮುದಾಯಗಳಿಗೆ ಶೇಕಡಾ ಎರಡರಂತೆ ಹಂಚಿರುವುದು ಬಹುದೊಡ್ಡ ಅನ್ಯಾಯದ ನಡೆ. ಸರಕಾರವು ಮುಸಲ್ಮಾನ ಸಮುದಾಯದ ಪಾಲನ್ನು ಕಿತ್ತುಕೊಂಡು, ಆ ಎರಡು ಸಮುದಾಯಗಳಿಗೆ ಕೊಟ್ಟಿದ್ದು ಮಾತ್ರ ತಪ್ಪೆಂದಲ್ಲ; ಹಾಗೆ ಕಿತ್ತುಕೊಂಡದ್ದನ್ನು ಅದು ಬೇರೆ ಯಾವುದೇ ಸಮುದಾಯ ಇಲ್ಲವೆ ಸಮುದಾಯಗಳಿಗೆ ಕೊಟ್ಟಿದ್ದರೂ ಅದು ದೊಡ್ಡ ಅನ್ಯಾಯವೇ ಆಗಿರುತ್ತಿತ್ತು.

ಮುಸಲ್ಮಾನರಿಗೆ ಇನ್ನು ಮೇಲೆ ಅರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್‍ ) ಒದಗಿಸಿದ ಸವಲತ್ತನ್ನು ಕೊಡಲಾಗುತ್ತದೆ ಎಂದು ಸರಕಾರವು ಜಾರಿಗೆ ತಂದಿರುವ ಹೊಸ ನೀತಿ ಕೂಡ ದೊಡ್ಡ ಅನ್ಯಾಯದ ನಡೆಯೇ.ಇಡಬ್ಲ್ಯುಎಸ್ ಕೋಟಾದ ಅಡಿ, ಮುಸಲ್ಮಾನರು ಈಗಾಗಲೇ ಸಾಮಾಜಿಕ ಬಂಡವಾಳ (ಸೋಷಿಯಲ್ ಕ್ಯಾಪಿಟಲ್) ಇರುವ ಬ್ರಾಹ್ಮಣರೇ ಮೊದಲಾದ ಪ್ರಬಲ ಜಾತಿಯ ಅಭ್ಯರ್ಥಿಗಳ ಜೊತೆಗೆ ಸ್ಪರ್ಧಿಸಬೇಕಾಗುತ್ತದೆ. ಹಾಗಾಗಿ ಅದು ತುಂಬ ಅಸಮವಾದ ಆಡುಂಬೊಲವೇ ಆಗಿದ್ದು, ಅಲ್ಲಿ ಮುಸಲ್ಮಾನರ ಹಕ್ಕುಗಳಿಗೆ ಖಂಡಿತವಾಗಿಯೂ ಧಕ್ಕೆ ಆಗುತ್ತದೆ.

ಇದೆಲ್ಲವೂ ಮುಸಲ್ಮಾನರ ಪಾಲಿನ ಇದ್ದಬದ್ದ ಹಕ್ಕನ್ನೂ ಕಿತ್ತುಕೊಂಡು ಅವರನ್ನು ಸಾಮಾಜಿಕ ಅವಕಾಶಗಳಿಂದ ಸಂಪೂರ್ಣ ದೂರಮಾಡುವ ಬಿಜೆಪಿ-ಸಂಘ ಪರಿವಾರ ಹಾಗೂ ಬಲಿಷ್ಠ ಜಾತಿಗಳವರು ಆಡುತ್ತಿರುವ ಆಟ; ಒಕ್ಕಲಿಗರು, ಲಿಂಗಾಯತರು ಮತ್ತು ಬ್ರಾಹ್ಮಣರ ವಿರುದ್ಧ ಮುಸಲ್ಮಾನರನ್ನೂ, ಮುಸಲ್ಮಾನರ ವಿರುದ್ಧ ಆ ಎಲ್ಲ ಸಮುದಾಯಗಳವರನ್ನೂ ಎತ್ತಿಕಟ್ಟಲು ಹೂಡಿರುವ ಹೂಟ.

ಕರ್ನಾಟಕ ಸರಕಾರದ ಈ ನೀತಿಯ ವಿರುದ್ಧ ದನಿ ಎತ್ತಿ, ‘ಮುಸಲ್ಮಾನರಿಂದ ಕಿತ್ತುಕೊಂಡ ಹಕ್ಕು ನಮಗೆ ಬೇಡ. ಅವರ ಪಾಲನ್ನು ಅವರಿಗೆ ಹಿಂದಿರುಗಿಸಿ. ಅಷ್ಟು ಮಾತ್ರವಲ್ಲ, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಅವರ ಪಾಲನ್ನು ಹೆಚ್ಚಿಸಿ,’ ಎಂದು ಎಲ್ಲರಿಗಿಂತ ಮೊದಲು ಪ್ರತಿಭಟಿಸಬೇಕಾದವರು ಒಕ್ಕಲಿಗ, ಲಿಂಗಾಯತ ಮತ್ತು ಬ್ರಾಹ್ಮಣ ಸಮುದಾಯದವರು. ಅವರನ್ನು ಪ್ರತಿನಿಧಿಸುವ ಒಕ್ಕಲಿಗರ ಸಂಘ, ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಬ್ರಾಹ್ಮಣ ಮಹಾಸಭಾ, ಮತ್ತು ಆ ಸಮುದಾಯಗಳವರ ಬೇರೆಲ್ಲ ಒಕ್ಕೂಟಗಳು.

ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‍ ಕೂಡ ಸರಕಾರದ ಈ ಕ್ರಮದ ವಿರುದ್ಧ ಪ್ರತಿಭಟಿಸಬೇಕು. ಜೊತೆಗೆ, ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಅಧ್ಯಾಪಕರ ಸಂಘಗಳು, ಸರಕಾರಿ ನೌಕರರ ಸಂಘಗಳು, ಶಾಲಾಶಿಕ್ಷಕರ ಸಂಘಗಳು, ಕಾರ್ಮಿಕ-ರೈತ ಸಂಘಟನೆಗಳು ಹಾಗೂ ಕರ್ನಾಟಕ ಲೇಖಕಿಯರ ಸಂಘದಂಥ ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಕೂಡ ಈ ಅನ್ಯಾಯವನ್ನು ದೊಡ್ಡ ರೀತಿಯಲ್ಲಿ ಖಂಡಿಸಬೇಕು. ಎಲ್ಲರೂ ಸೇರಿ ಸರಕಾರವು ಈ ನೀತಿಯನ್ನು ಹಿಂದಕ್ಕೆ ಪಡೆಯುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ಕರ್ನಾಟಕದ ಹೆಸರಲ್ಲಿ, ಕನ್ನಡಿಗರ ಹೆಸರಲ್ಲಿ ಈ ಸರಕಾರ ಮಾಡುತ್ತಿರುವ ಈ ಅಧರ್ಮದ ಕೆಲಸದಲ್ಲಿ ನಾವೆಲ್ಲ ಶಾಮೀಲಾದಂತಾಗುತ್ತದೆ.

ರಘುನಂದನ
+ posts

ಕವಿ, ನಾಟಕಕಾರ, ರಂಗನಿರ್ದೇಶಕ

ಪೋಸ್ಟ್ ಹಂಚಿಕೊಳ್ಳಿ:

ರಘುನಂದನ
ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ

1 COMMENT

  1. ಬ್ರಾಹ್ಮಣರಿಗೆ ಮೀಸಲಾತಿಯೇ ಇಲ್ಲ. ಸುಮ್ಮನೆ ಬ್ರಾಹ್ಮಣರನ್ನು ನಿಮ್ಮ ವೈಯಕ್ತಿಕ ದ್ವೇಷಕ್ಕೆ ಇಲ್ಲಿ ತರಬೇಡಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸ ಸರ್ಕಾರ | ಸಮರ್ಥ ಸಚಿವರನ್ನು ನೇಮಿಸಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬಲ್ಲುದೇ?

ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿದ್ದ ಜಯಮಾಲರವರು ವಿಧಾನಸೌಧದ ತಮ್ಮ ಕಚೇರಿಗೆ...

ಇಮ್ರಾನ್‌ ಖಾನ್ | ಅಂದು ಹೀರೋ, ಇಂದು ವಿಲನ್; ಇಬ್ಭಾಗವಾಗಲಿದೆಯಾ ಪಾಕಿಸ್ತಾನ?

70 ವರ್ಷದ ಇಮ್ರಾನ್ ಖಾನ್‌ ಅಷ್ಟೇ ಅಲ್ಲ, ಪಾಕಿಸ್ತಾನಕ್ಕೂ ಇದು ಅಗ್ನಿಪರೀಕ್ಷೆಯ...

ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಕಾಂಗ್ರೆಸ್‌ನ ಅತ್ಯುತ್ತಮ ನಿರ್ಧಾರ: 9 ಕಾರಣಗಳು

ಈ ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯುವ ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನು ಉಳಿಸಿಕೊಳ್ಳುವ,...