“ತಾವು ಕೊಟ್ಟರೆ ಅಮೃತ, ಬೇರೆಯವರು ಕೊಟ್ಟರೆ ವಿಷ”, ಇದು ಬಿಜೆಪಿಯವರ ದ್ವಿಮುಖ ನೀತಿ

Date:

ಈಗ ತಾನೇ ಸರಕಾರ ರಚಿಸಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಅನುಷ್ಠಾನವೇ ಆಗುವುದಿಲ್ಲ ಎನ್ನುವ ರೀತಿ ವರ್ತನೆ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. ಒಂದು ವೇಳೆ ಸರಕಾರ ಸದರಿ ಗ್ಯಾರಂಟಿಗಳನ್ನು ಅನುಷ್ಠಾನ ಮಾಡದಿದ್ದಲ್ಲಿ ವಿರೋಧ ಪಕ್ಷವಾಗಿ ತಮಗೇನು ಕೆಲಸ? ಆಗ ಹೋರಾಟ ಮಾಡಬಹುದಲ್ಲವೇ? ಅದು ಬಿಟ್ಟು ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುವುದು ಏತಕ್ಕೆ? 

ರಾಜ್ಯದಲ್ಲಿ ನೂತನವಾಗಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟದೊಂದಿಗೆ ಸರಕಾರ ಅಧಿಕಾರಕ್ಕೆ ಬಂದಿದೆ. ಮೊದಲ ಹಂತದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಸೇರಿದಂತೆ 10 ಮಂತ್ರಿಗಳ ಸರಕಾರ ರಚನೆಯಾಗಿ, ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಎಲ್ಲಾ 5 ಗ್ಯಾರಂಟಿಗಳನ್ನು ಜಾರಿಗೆ ತಾತ್ವಿಕ ಅನುಮೋದನೆ ನೀಡಿ ಆದೇಶಿಸಲಾಗಿದೆ. ನಂತರ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿದೆ. ಈಗ ಗ್ಯಾರಂಟಿ ಯೋಜನೆಗಳ ಜಾರಿಗೆ ಚಾಲನೆ ಸಿಕ್ಕಿದೆ.

ರಾಜ್ಯದ ಜನ ಬಿಜೆಪಿ ಪಕ್ಷದ ಸರಕಾರದ ದುರಾಡಳಿತಕ್ಕೆ ಬೇಸತ್ತು ಪೂರ್ಣ ಬಹುಮತದ ಕಾಂಗ್ರೆಸ್ ಪಕ್ಷದ ಸರಕಾರಕ್ಕೆ ಅಧಿಕಾರ ನೀಡಿದ್ದಾರೆ. ದೇಶದ ಪ್ರಧಾನಿ ಸೇರಿದಂತೆ ಬಹುತೇಕ ಕೇಂದ್ರ ಸಚಿವರು ಪ್ರಚಾರ ಮಾಡಿದ್ದರೂ ಸಹ ಕೇವಲ 66 ಸೀಟುಗಳಿಗೆ ಬಿಜೆಪಿ ನಿಲ್ಲಬೇಕಾಯಿತು. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಧಾನಿಯೇ ಬಂದು ಅಪಪ್ರಚಾರ ಮಾಡಿದ್ದರೂ ರಾಜ್ಯದ ಜನ ಕ್ಯಾರೆ ಎನ್ನಲಿಲ್ಲ ಎನ್ನುವುದು ವಿಶೇಷವಾದದ್ದು. ಗ್ಯಾರಂಟಿಗಳ ಬಗ್ಗೆ ಸಾಕಷ್ಟು ವ್ಯಂಗ್ಯಕ್ಕೊಳಪಡಿಸಲಾಯಿತು. ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಇಲ್ಲ, ಇನ್ನೂ ಅವರ ಗ್ಯಾರಂಟಿಗಳ ಗತಿಯೇನು? ಚುನಾವಣೆಯ ಕೊನೆಯ ದಿನದವರೆಗೂ ಕಾಂಗ್ರೆಸ್ ಮುಕ್ತವಾಗುತ್ತದೆ ಎಂದು ಹೇಳಲಾಯಿತು. ಆದರೆ ಪಲಿತಾಂಶವೇ ಬೇರೆಯಾಗಿತ್ತು.

ರಾಜ್ಯದಲ್ಲಿ ಸುಮಾರು 9 ಜಿಲ್ಲೆಗಳಲ್ಲಿ ಬಿಜೆಪಿಯ ಒಬ್ಬರೂ ಶಾಸಕರಿಲ್ಲ. ಅಲ್ಲದೇ 10 ಜಿಲ್ಲೆಗಳಲ್ಲಿ ಕೇವಲ ಒಬ್ಬರು ಶಾಸಕರು ಮಾತ್ರ ಬಿಜೆಪಿಯಿಂದ ಗೆದ್ದಿದ್ದಾರೆ. ವಿಶೇಷವಾಗಿ ಉತ್ತರ ಕನ್ನಡ, ಬಾಗಲಕೋಟೆ, ಹಾವೇರಿ ದಾವಣಗೆರೆಯಂತಹ ಹಿಂದುತ್ವದ ಅಜೆಂಡಾ ಮೇಲೆಯೇ ಚುನಾವಣೆ ಮಾಡುತ್ತಿದ್ದ ಬಿಜೆಪಿ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿಯೇ ಒಬ್ಬೊಬ್ಬರು ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿರುವುದು ಬಿಜೆಪಿ ನಾಯಕರಿಗೆ ನಿದ್ದೆಗೆಡಿಸಿದೆ ಎಂದು ಅನಿಸುತ್ತಿದೆ. ಹಾಗಾಗಿ ಬಹುತೇಕ ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರುವುದನ್ನು ಜೀರ್ಣಿಸಿಕೊಳ್ಳಲಾಗದೇ ಪರದಾಡುತ್ತಿರುವುದು ಎದ್ದು ಕಾಣುತ್ತಿದೆ.

ಇನ್ನೂ ಕೆಲವು ಜಿಲ್ಲೆಗಳಲ್ಲಿ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯ ಮಾಜಿ ಶಾಸಕರು, ಮಾಜಿ ಸಚಿವರು ನಮ್ಮ ಪಕ್ಷದ ಸೋಲಿಗೆ ಮುಸ್ಲಿಂ ಸಮಾಜವೇ ಕಾರಣವೆಂದು ಬಹಿರಂಗವಾಗಿ ದ್ವೇಷದ ಮಾತನಾಡುತ್ತಿರುವುದು ಕಾಣುತ್ತಿದೆ. ಶಹಾಪುರದ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ, ಕೋಲಾರದ ಸಂಸದ ಮುನಿಸ್ವಾಮಿ, ನಳಿನ್‌ಕುಮಾರ್‌ ಕಟೀಲು ಸೇರಿದಂತೆ ಬಿಜೆಪಿಯ ಬಹುತೇಕ ನಾಯಕರು ತಮ್ಮ ಪಕ್ಷದ ಸೋಲಿಗೆ ಮುಸ್ಲಿಂ ಸಮಾಜವನ್ನು ದೂಷಿಸುತ್ತಿದ್ದಾರೆ. ಮುಸ್ಲಿಂ ಸಮಾಜಕ್ಕೆ ತಮ್ಮ ಸರಕಾರ ಇದ್ದಾಗ ಮಾಡಿರುವ ಶೋಷಣೆ ಬಿಜೆಪಿಯ ಎಲ್ಲಾ ನಾಯಕರು ಮರೆತಂತಿದೆ. ಮುಸ್ಲಿಂ ಸಮಾಜ ದೇಶದ ಸಂವಿಧಾನ ನೀಡಿರುವ ಮತದಾನ ಹಕ್ಕು ಎನ್ನುವ ಅಸ್ತ್ರವನ್ನು ಸೂಕ್ತ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಪ್ರಯೋಗಿಸಿ ಬಿಜೆಪಿ ಸೋಲಿಗೆ ಕಾರಣವಾಗಿರುವುದು ಸತ್ಯ. ಮುಸ್ಲಿಮರು ಬಹುತೇಕ ಬಿಜೆಪಿಗೆ ಮತ ನೀಡುವುದಿಲ್ಲ. ಆದರೆ ಒಗ್ಗಟ್ಟಾಗಿ ಮತಗಳು ಒಡೆಯದಂತೆ ಒಂದೇ ಪಕ್ಷಕ್ಕೆ ಮತ ನೀಡುವುದರ ಮೂಲಕ ಮತವಿಭಜನೆಯಾಗದಂತೆ ಮತಚಲಾವಣೆ ಮಾಡಿ ಬಿಜೆಪಿಯ ಸೋಲಿಗೆ ಕಾರಣರಾಗಿದ್ದಾರೆ.

ಬಿಜೆಪಿ ಸರಕಾರ ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ಮೀಸಲಾತಿ ತೆಗೆದು ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ಹಂಚುವ ಮೂಲಕ ಈ ಮೂರು ಸಮುದಾಯಗಳ ನಡುವೆ ಬಿರುಕು ಮೂಡಿಸುವ ಕೆಲಸ ಮಾಡಲು ಪ್ರಯತ್ನಿಸಿತು. ಮುಸ್ಲಿಂರ ಮೀಸಲಾತಿ ತೆಗೆದದ್ದರಿಂದ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ, ಆಗ ಮುಸ್ಲಿಮರು ಒಕ್ಕಲಿಗರ ಮತ್ತು ಲಿಂಗಾಯತರ ವಿರುದ್ದ ಇದ್ದಾರೆ ಎಂದು ತೋರಿಸುವುದರ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂಡಿಸುವ ಅವರ ಕನಸು ನನಸು ಆಗಲೇ ಇಲ್ಲ. ರಾಜ್ಯದ ಬಹುತೇಕ ಪ್ರಜ್ಞಾವಂತರು ಸರಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿದರು. ಸುಪ್ರೀಂ ಕೋರ್ಟ್‌ ಸಹ ಸರಕಾರದ ನಡೆಯನ್ನು ಖಂಡಿಸಿತು. ಅಲ್ಲದೆ, ಜಾಗೃತಗೊಂಡ ಒಕ್ಕಲಿಗರ ಮತ್ತು ಲಿಂಗಾಯತ ಸಮುದಾಯದ ಸ್ವಾಮಿಜಿಗಳು ಬೇರೆಯವರಿಂದ ಕಿತ್ತುಕೊಂಡ ಮೀಸಲಾತಿ ನಮಗೆ ಬೇಡವೆಂದು ಬಹಿರಂಗವಾಗಿ ಹೇಳುವುದರ ಮೂಲಕ ಸಮಾಜದಲ್ಲಿ ಆಗಬಹುದಾದ ಅನಾಹುತಗಳನ್ನು ತಡೆದರು. ಮುಸ್ಲಿಂ ಸಮಾಜವೂ ಸಹ ಎಲ್ಲಿಯೂ ಬಹಿರಂಗವಾಗಿ ರಸ್ತೆಗೆ ಇಳಿದು ಹೋರಾಟ ಮಾಡದೇ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದರ ಮೂಲಕ ಶಾಂತಿಯನ್ನು ಕಾಪಾಡಲು ಸಹಕರಿಸಿದರು. ಕೇಂದ್ರದ ಗೃಹ ಸಚಿವ ಅಮಿತ ಶಾ ಚುನಾವಣೆಯ ಪ್ರತಿಯೊಂದು ರ್ಯಾಲಿಯಲ್ಲಿ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡಿರುವುದು ಒಂದು ಸಾಹಸವೆಂದು, ಅದನ್ನು ನಾವು ಬಿಟ್ಟು ಯಾರೂ ಮಾಡಲು ಸಾಧ್ಯವಿಲ್ಲವೆಂದು ಭಾಷಣ ಮಾಡಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷ ಮುಸ್ಲೀಮರಿಗೆ ಮೀಸಲಾತಿ ನೀಡುವುದಾದಲ್ಲಿ ಯಾರಿಂದ ಕಿತ್ತುಕೊಂಡು ನೀಡುತ್ತದೆ ಎಂದು ಕೆಣಕಿದರು. ಆದರೆ ಕಾಂಗ್ರೆಸ್ ಪಕ್ಷ ಸಹ ಈ ವಿಷಯದಲ್ಲಿ ಎಲ್ಲಿಯೂ ಎಡವಲಿಲ್ಲ. ಮತದಾರರು ಬಿಜೆಪಿಯ ಈ ಷಡ್ಯಂತ್ರವನ್ನು ಅರ್ಥೈಸಿಕೊಂಡು ಬಿಜೆಪಿಯ ದುರಾಡಳಿತದ ವಿರುದ್ದ ಮತ ಚಲಾವಣೆ ಮಾಡಿದರು.

ಬಿಜೆಪಿ ನಾಯಕರು ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ತಕ್ಷಣ ಅನುಷ್ಠಾನವಾಗಬೇಕೆಂದು ಜನರನ್ನು ಸರಕಾರದ ನೌಕರರ ವಿರುದ್ದ ಎತ್ತಿಕಟ್ಟುವುದರ ಮೂಲಕ ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಇದರಿಂದ ಸರಕಾರಿ ನೌಕರರ ಕೆಲಸಗಳಿಗೆ ಅಡ್ಡಿ ಮಾಡುವುದು, ದೌರ್ಜನ್ಯ, ಹೊಡೆದಾಟ ನಡೆದು ಜನರ ಮೇಲೆಯೇ ಕ್ರಿಮಿನಲ್ ಕೇಸ್ ಬೀಳುವ ಸಾಧ್ಯತೆಯಿದೆ. ರಾಜ್ಯದ ಕೆಲವು ಕಡೆ ತಮ್ಮ ಕಾರ್ಯಕರ್ತರ ಮೂಲಕ ಸಾರಿಗೆ ಬಸ್ ಕಂಡಕ್ಟರ್ ಜೊತೆಗೆ ಜಗಳ ಮಾಡಿಸುವುದು, ವಿದ್ಯುತ್ ಬಿಲ್‌ ಕೇಳಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು, ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತಿರಿಸುವುದು, ಇದರ ಮೂಲಕ ರಾಜ್ಯದ ಜನ ಕಾಂಗ್ರೆಸ್ ಪಕ್ಷದ ವಿರುದ್ದ ಇದ್ದಾರೆ ಎಂದು ತೋರಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನು ಓದಿ ಗ್ಯಾರಂಟಿ ಗಲಾಟೆಯಲ್ಲಿ ಕಾಣೆಯಾಯಿತು ಒಕ್ಕೂಟ ಸರ್ಕಾರ ಮಾಡುತ್ತಿರುವ ಅನ್ಯಾಯದ ಚರ್ಚೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸರಕಾರ ಈಗಾಗಲೇ ಗ್ಯಾರಂಟಿಗಳ ಜಾರಿಗೆ ಸಂಪುಟದಲ್ಲಿ ನಿರ್ಣಯ ಮಾಡಿದ್ದರೂ ಅನಗತ್ಯವಾಗಿ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಈಗಾಗಲೇ ಸರಕಾರ ಗ್ಯಾರಂಟಿಗಳ ಅನುಷ್ಠಾನಕ್ಕೆ ಬೇಕಾಗುವ ಪೂರ್ವ ತಯಾರಿ ಮಾಡುತ್ತಿದೆ. ವಿವಿಧ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ ಎಷ್ಟು ಅನುದಾನ ಬೇಕಾಗುತ್ತದೆ ಎಂದು ಅಂದಾಜು ಹೇಳಿದ್ದಾರೆ. ಹಾಗೂ ಅದಕ್ಕೆ ತಗಲುವ ಹೆಚ್ಚುವರಿ ಅನುದಾನವನ್ನು ಯಾವ ರೀತಿ ಹೊಂದಾಣಿಕೆ ಮಾಡಬಹುದೆಂದು ಪತ್ರಿಕಾಗೋಷ್ಠಿಯ ಮೂಲಕ ಹೇಳಿದ ಮೇಲೂ ಬಿಜೆಪಿ ನಾಯಕರಿಗೆ ಸೋಲನ್ನು ಅರಗಿಸಿಕೊಳ್ಳಲಾಗದೇ ಚಡಪಡಿಸುತ್ತಿರುವುದು ನೋಡಿದರೆ ಅಯ್ಯೋ ಪಾಪ ಅನಿಸುತ್ತಿದೆ.

ಬಿಜೆಪಿ ಪಕ್ಷಕ್ಕೆ ಜನರಿಗೆ ನೀಡಿರುವ ಭರವಸೆಗಳ ಬಗ್ಗೆ ಅಷ್ಟೊಂದು ಕಾಳಜಿ ಇದ್ದಲ್ಲಿ, ತಮ್ಮದೇ ಪಕ್ಷ 2018ರ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ನಾಲ್ಕು ವರ್ಷ ಸರಕಾರ ಆಡಳಿತ ನಡೆಸಿದ ಮೇಲೂ ಯಾಕೆ ಅನುಷ್ಠಾನ ಮಾಡಿಲ್ಲ ಎಂದು ಜನರಿಗೆ ವಿವರಿಸಲು ಸಾಧ್ಯವೇ?

2018ರ ಬಿಜೆಪಿ ಪ್ರಣಾಳಿಕೆಯಲ್ಲಿ ನೂರಾರು ಭರವಸೆಗಳನ್ನು ನೀಡಿತ್ತು, ಅವುಗಳ ಗತಿ ಏನಾಯಿತು ಎಂದು ಅವರೇ ಹೇಳಬೇಕು. ಬಿಜೆಪಿಯ ಪ್ರಣಾಳಿಕೆ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.

  1. ಮೊದಲ ಸಚಿವ ಸಂಪುಟದಲ್ಲಯೇ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕಗಳಲ್ಲಿ ಇರುವ ರೈತರ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುತ್ತೇವೆ.
  2. ರೈತರ ಬೆಳೆಗಳಿಗೆ ಒಂದುವರೆ ಪಟ್ಟು ಬೆಂಬಲ ಬೆಲೆ ನಿಗದಿಗೊಳಿಸುವುದು.
  3. 1000 ರೈತರಿಗೆ ಪ್ರತಿ ವರ್ಷ ಚೈನಾ ಮತ್ತು ಇಸ್ರೇಲ್ ದೇಶಗಳಿಗೆ ಅಧ್ಯಯನಕ್ಕಾಗಿ ಕಳುಹಿಸಲಾಗುವುದು.
  4. ತ್ರಿ ಫೇಸ್ ವಿದ್ಯುತ್ತನ್ನು ರೈತರ ಪಂಪಸೆಟ್‌ಗೆ ನಿರಂತರ 10 ಗಂಟೆ ಸರಬರಾಜು ಮಾಡಲಾಗುವುದು.
  5. ʼಮುಖ್ಯಮಂತ್ರಿ ಸ್ಮಾರ್ಟ್‌ಫೋನ್ ಯೋಜನೆʼಯಡಿಯಲ್ಲಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ಉಚಿತವಾಗಿ ಸ್ಮಾರ್ಟ್‌ಫೋನ್ ನೀಡುವುದು.
  6. ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗೆ ಇರುವ ಒಂದು ಲಕ್ಷದ ಮೆಚ್ಯುರಿಟಿ ಮೊತ್ತವನ್ನು 2 ಲಕ್ಷಕ್ಕೆ ಏರಿಸುವುದು.
  7. ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಯುವತಿಯ ಮದುವೆಗೆ 3 ಗ್ರಾಂ ಚಿನ್ನ ಹಾಗೂ ರೂ.25000 ನೀಡುವುದು.
  8. ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಉಚಿತವಾಗಿ ಲ್ಯಾಪ್‍ಟಾಪ್ ವಿತರಿಸುವುದು.
  9. ʼಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್ʼ ಯೋಜನೆಯಡಿಯಲ್ಲಿ 300 ಕ್ಕೂ ಹೆಚ್ಚು ಕ್ಯಾಂಟೀನ್‌ಗಳನ್ನು ಪ್ರಾರಂಭಿಸುವುದು.
  10. ಪರಿಶಿಷ್ಠ ಪಂಗಡದ ಸಮುದಾಯಕ್ಕೆ 6500 ಕೋ.ರೂ ಅನುದಾನದಲ್ಲಿ ʼಮದಕರಿ ನಾಯಕ ವಸತಿ ಯೋಜನೆʼ.
  11. ʼಮಾದಾರ ಚೆನ್ನಯ್ಯ ವಸತಿ ಯೋಜನೆʼ ಅಡಿಯಲ್ಲಿ 8500 ಕೋ.ರೂ ಅನುದಾನದ ಮೀಸಲಿಡುವುದು.
  12. 7500 ಕೋ.ರೂ ಅನುದಾನದಲ್ಲಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಮನೆಗಳ ಸಮುಚ್ಚಯ ನಿರ್ಮಾಣದ ಯೋಜನೆ.
  13. ಪರಿಶಿಷ್ಟ ಜಾತಿಯ 600 ವಿದ್ಯಾರ್ಥಿಗಳನ್ನು ʼಬಾಬು ಜಗಜೀವನ ರಾಮ್‌ ವಿದ್ಯಾರ್ಥಿವೇತನʼದ ಅಡಿಯಲ್ಲಿ ವಿದೇಶ ವ್ಯಾಸಂಗಕ್ಕೆ ಕಳುಹಿಸಲು 3000 ಕೋ.ರೂ ಅನುದಾನ ಮೀಸಲಿಡುವುದು.
  14. ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಂಪರ್ಕಿಸುವ ʼಕರ್ನಾಟಕ ಮಾಲಾ 6 ಪಥದ ಹೆದ್ದಾರಿʼ ನಿರ್ಮಾಣ ಯೋಜನೆ.
  15. ರಾಜ್ಯದಲ್ಲಿ ಏಮ್ಸ್ ಮಾದರಿಯಲ್ಲಿ ʼಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ʼ ಎರಡು ಸಂಸ್ಥೆಗಳನ್ನು ಸ್ಥಾಪಿಸುವುದು.

    ಇಲ್ಲಿ 2018ರ ಬಿಜೆಪಿ ಪ್ರಣಾಳಿಕೆಯಲ್ಲಿ ಇದ್ದಂತಹ ಆಯ್ದ ಕೆಲವೇ ಭರವಸೆಗಳ ಬಗ್ಗೆ ಉಲ್ಲೇಖಿಸಲಾಗಿದೆ, ಇದರಲ್ಲಿ ಒಂದಾದರೂ ಯೋಜನೆ ಅನುಷ್ಠಾನಕ್ಕೆ ಬಂದಿದೆಯೇ? ಇದು ಬಿಜೆಪಿ ನಾಯಕರು ತಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯಗಳು. ಇದರಲ್ಲಿ ಉಚಿತ ಯೋಜನೆಗಳು ಇಲ್ಲವೇ? “ತಾವು ಕೊಟ್ಟರೆ ಅಮೃತ, ಬೇರೆಯವರು ಕೊಟ್ಟರೆ ವಿಷ” ಎನ್ನುವ ಬಿಜೆಪಿಯವರ ಮನೋಭಾವವನ್ನು ರಾಜ್ಯದ ನಾಗರಿಕರು ಅರ್ಥಮಾಡಿಕೊಳ್ಳಬೇಕು.

    ಇದನ್ನು ಓದಿ ಕುಸ್ತಿಪಟುಗಳ ಪ್ರತಿಭಟನೆ | ಸಾಕ್ಷಿ ಮಲಿಕ್, ವಿನೇಶಾ ಪೋಗಟ್ ಅವರದು ಮಾದರಿ ನಾಯಕತ್ವ

    ಅಲ್ಲದೇ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಇಡುತ್ತಿದ್ದಾರೆ. ಇವರ ಪ್ರಧಾನಿ ಇತ್ತೀಚಿಗೆ ರಾಜಸ್ಥಾನದಲ್ಲಿ ಕರ್ನಾಟಕದ ಗ್ಯಾರಂಟಿಗಳ ಬಗ್ಗೆ ಮಾತನಾಡಿ, ಇದೇ ರೀತಿ ಉಚಿತ ಯೋಜನೆಗಳನ್ನು ನೀಡುತ್ತ ಹೋದರೆ ದೇಶ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯ ಹಾಳಾಗುತ್ತದೆ ಎಂದು ಹೇಳಿದ್ದಿದೆ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷ ಎಲ್ಲಾ ಗ್ಯಾರಂಟಿಗಳನ್ನು ಯಾವುದೇ ಶರತ್ತು ಇಲ್ಲದೇ ಅನುಷ್ಠಾನ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಇದು ಬಿಜೆಪಿಯ ದ್ವಿಮುಖ ನೀತಿ ಎನ್ನುವುದು ಸ್ಪಷ್ಟವಾಗಿದೆ. ಜನರ ದಾರಿ ತಪ್ಪಿಸುವುದೇ ಇವರ ಕೆಲಸವೆನ್ನುವುದು ಗೊತ್ತಾಗುತ್ತಿದೆ. ಮೊದಲಿಗೆ ಬಿಜೆಪಿ ನಾಯಕರು ಒಂದು ಕಡೆ ಕುಳಿತು ಚರ್ಚೆ ಮಾಡಲಿ. ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳನ್ನು ವಿರೋಧ ಮಾಡಬೇಕಾ? ಅಥವಾ ಅನುಷ್ಠಾನಕ್ಕೆ ಒತ್ತಾಯಿಸಬೇಕಾ ಎನ್ನುವುದು. ತಮಗೆ ಸ್ಪಷ್ಟತೆ ಇಲ್ಲದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಏನು ಸಂದೇಶ ಕೊಡಲು ಮುಂದಾಗಿದ್ದಾರೆ.

    ಈಗ ತಾನೇ ಸರಕಾರ ರಚಿಸಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಅನುಷ್ಠಾನವೇ ಆಗುವುದಿಲ್ಲ ಎನ್ನುವ ರೀತಿ ವರ್ತನೆ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. ಒಂದು ವೇಳೆ ಸರಕಾರ ಸದರಿ ಗ್ಯಾರಂಟಿಗಳನ್ನು ಅನುಷ್ಠಾನ ಮಾಡದಿದ್ದಲ್ಲಿ ವಿರೋಧ ಪಕ್ಷವಾಗಿ ತಮಗೇನು ಕೆಲಸ, ಆಗ ಹೋರಾಟ ಮಾಡಬಹುದಲ್ಲವೇ? ಅದು ಬಿಟ್ಟು ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುವುದು ಏತಕ್ಕೆ? ನೀವು ನೀಡಿದ ಭರವಸೆಗಳು ಯಾಕೆ ಈಡೇರಿಸಲಿಲ್ಲ ಎಂದು ಜನರಿಗೆ ಹೇಳಬೇಕಲ್ಲವೇ? ಕಳೆದ ನಾಲ್ಕು ವರ್ಷದಲ್ಲಿ ಯಾವುದೇ ಬಿಟ್ಟಿ ಯೋಜನೆ (ಬಿಜೆಪಿಯವರು ಹೇಳುವ ಮಾತು)ಗಳು ನೀಡದೇ 3 ಲಕ್ಷ ಕೋ.ರೂ ಸಾಲ (ಈಗ ರಾಜ್ಯದ ಒಟ್ಟು ಸಾಲ 5.45 ಲಕ್ಷ ಕೋ.ರೂ) ಮಾಡಿದ್ದೇವೆ ಎಂದು ಜನರಿಗೆ ಹೇಳಬೇಕಲ್ಲವೇ? ನಿಮ್ಮ ಸೋಲಿಗೆ ನಿಮ್ಮ ಆಡಳಿತದ ವೈಖರಿಯೇ ಕಾರಣ ಎನ್ನುವುದು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು.

ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...