ಭಾರತ 2023 | ದ್ವೇಷ ರಾಜಕಾರಣದ ಸಾಧನವೀಗ ಸರಕಾರಿ ಯೋಜನೆಯಾಗುತ್ತಿದೆ!

Date:

ಮೆಟಾ ಸಂಸ್ಥೆಯು ಭಾರತೀಯ ನಾಗರಿಕ ಸಮಾಜದ ಸಂಘಟನೆಗಳ ಯೋಚನೆಗಳಿಗೆ ಸೊಪ್ಪು ಹಾಕದಿರಬಹುದು. ಆದರೆ, ಶೇರುದಾರರು ಮತ್ತು ತನ್ನ ಗ್ರಾಹಕರು ಪ್ರತಿಭಟನೆ ತೋರಿದರೆ, ಅದನ್ನು ಸಂಪೂರ್ಣವಾಗಿ ಅವಗಣಿಸಲು ಸಾಧ್ಯವಿಲ್ಲ. ಇದು ತಕ್ಷಣವೇ ಪರಿಹಾರವಾಗಬಲ್ಲ ಸಮಸ್ಯೆ ಅಲ್ಲವಾದುದರಿಂದ ಸಂಸ್ದೆಯ ಮೇಲೆ ಒತ್ತಡ ಹೇರುವ ಸಲುವಾಗಿ ಬಳಕೆದಾರರು ಇಲ್ಲಿ ಚರ್ಚಿಸಿದ ವಿಷಯಗಳ ಕುರಿತು ಜಾಗೃತಿ ಹೊಂದಿರುವುದು ಅಗತ್ಯವಾಗಿದೆ

ಹತ್ತಿರ ಹತ್ತಿರ ನಾಲ್ಕು ದಶಕಗಳ ಕಾಲ ಒಬ್ಬಳು ಪತ್ರಕರ್ತಳಾಗಿ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತೆಯಾಗಿ ಸಾಕಷ್ಟು ಧಾರ್ಮಿಕ ಧ್ರುವೀಕರಣ ಮತ್ತು ಅದಕ್ಕೆ ಸಂಬಂಧಿಸಿದ ಹಿಂಸಾಚಾರಗಳಿಗೆ ಸಾಕ್ಷಿಯಾಗಿದ್ದೇನೆ.

ಈ ಅವಧಿಯಲ್ಲಿ ನಾನು 1984ರ ಮುಂಬಯಿ-ಭಿವಂಡಿ ಕೋಮುಗಲಭೆ, 1984ರಲ್ಲಿ ದಿಲ್ಲಿಯಲ್ಲಿನಡೆದ ಸಿಖ್ ವಿರೋಧಿ ಗಲಭೆ, ಹೆಚ್ಚಾಗಿ ಮುಸ್ಲಿಮರೇ ಇರುವ 900ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡ 1993ರ ಮುಂಬಯಿ ಗಲಭೆ, ಮತ್ತೆ ಮುಸ್ಲಿಮರೇ ಹೆಚ್ಚಾಗಿದ್ದ 2000ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ 2002ರ ಗುಜರಾತ್ ನರಮೇಧ, ವರ್ಷಗಳಲ್ಲಿ ಮಾಲೆಗಾಂವ್, ನಾಸಿಕ್, ಧುಲೆ ಮತ್ತು ಅಕೋಲದಲ್ಲಿ ನಡೆದ ಕೋಮು ಉದ್ವಿಗ್ನತೆಯ ಸ್ಫೋಟ ಇತ್ಯಾದಿ ಹಲವನ್ನು ಪ್ರತ್ಯಕ್ಷ ಕಂಡು ಬರೆದಿದ್ದೇನೆ. ಕೋಮು ಹಿಂಸಾಚಾರವನ್ನು ಸ್ಥಳದಲ್ಲೇ ಕಂಡು ಬರೆಯುವುದು ವರದಿಗಾರರಿಗೆ ತನ್ನದೇ ಪಾಠವನ್ನು ಕಲಿಸುತ್ತದೆ ಮತ್ತು ಅದು ಈಗಿನ ಟೆಲಿವಿಷನ್ ಸ್ಟುಡಿಯೋ ಆಧರಿತ ಮತ್ತು ಸಾಮಾಜಿಕ ಮಾಧ್ಯಮ ಪ್ರೇರಿತ ಪತ್ರಿಕೋದ್ಯಮದಲ್ಲಿ ದುರದೃಷ್ಟವಶಾತ್ ಕಾಣೆಯಾಗಿದೆ.

ರಾಜಿ ಮಾಡಿಕೊಳ್ಳಲಾಗದ್ದು
ಸಂಘರ್ಷ ನಡೆದ ಸ್ಥಳಕ್ಕೆ ಭೇಟಿ, ಸಮಾಜ ಮತ್ತು ಸರಕಾರ ನಿರ್ಮಿಸಿರುವ ಮಾನಸಿಕ ವಾಸ್ತವಿಕ ಗಡಿಗಳನ್ನು ಮೀರಿ ಎಲ್ಲಾ ಕಡೆಗಳವರ ಜೊತೆಗೆ ಮಾತನಾಡುವುದು; ಪೊಲೀಸರ ವರದಿ, ಮಾಧ್ಯಮ ಪ್ರಕಟಣೆ, ಆವೃತ್ತಿ ಮತ್ತು ಟ್ವೀಟ್‌ಗಳನ್ನು ನಂಬದಿರುವುದು; ಬರಹ, ಭಾಷಣಗಳ ಸಹಿತ ಮಾಡಲಾಗುವ ಹಿಂಸಾಚಾರ ಪೂರ್ವದ ವದಂತಿ ಮತ್ತು ದ್ವೇಷ ಹರಡುವಿಕೆಯನ್ನು ಗಮನಿಸುವುದು- ಇವೆಲ್ಲವೂ ಪತ್ರಕರ್ತರು ರಾಜಿ ಮಾಡಿಕೊಳ್ಳಲಾಗದ, ಮಾಡಿಕೊಳ್ಳಬಾರದ ವಿಷಯಗಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೊದಲ ಕಲ್ಲನ್ನು ಯಾರು ಎಸೆದರು ಎಂಬುದು ಕಾಲದ ಪರೀಕ್ಷೆಗೆ ಒಳಗಾಗಿರುವ ಪತ್ರಿಕಾ ವೃತ್ತಿಧರ್ಮ- ನಾನು ಕಠಿಣವಾದ ಅನುಭವದ ಮೂಲಕ ರೂಪಿಸಿಕೊಂಡಿರುವಂತದ್ದು. ಜೊತೆಗೆ ಹೆಚ್ಚುವರಿಯಾಗಿ, 1960ರ ನಂತರ ನಡೆದ ಕೋಮುಗಲಭೆಗಳ ಕುರಿತು ತನಿಖೆ ಮಾಡಲು ಹಾಲಿ ಮತ್ತು ನಿವೃತ್ತ ಹಿರಿಯ ನ್ಯಾಯಾಧೀಶರುಗಳ ನೇತೃತ್ವದಲ್ಲಿ ನೇಮಿಸಲಾದ ಮೂರು ಡಜನ್ ಅಥವಾ ಹೆಚ್ಚು ನ್ಯಾಯಾಂಗ ಆಯೋಗಗಳ ವರದಿಯನ್ನು ನಾನು ಆಳವಾಗಿ ಅಧ್ಯಯನ ಮಾಡಿರುವುದೂ ಸೇರಿದೆ.

ಕಲಿಕೆ
ದ್ವೇಷದ ಮಾತುಗಳು ಅಥವಾ ಭಾಷಣಗಳು- ಸಂಘರ್ಷ ಉಲ್ಭಣಿಸಿರುವಂತೆ ಮಾಡುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಪ್ರಚೋದಕ ಶಬ್ದಗಳು ಮತ್ತು ಬರಹಗಳು ಅವುಗಳ ವ್ಯವಸ್ಥಿತ ಬಳಕೆ ಮತ್ತು ಪ್ರಚಾರಗಳ ಹಾಗೂ ಕಳಂಕ ಹಚ್ಚುವುದರ ಮೂಲಕ ಉದ್ದೇಶಿತ ಗಲಭೆ ಭುಗಿಲೇಳಲು ಅನುಕೂಲಕರವಾದ ಸಾಮಾಜಿಕ ವಾತಾವರಣವನ್ನು ಎಚ್ತರಿಕೆಯಿಂದ ರೂಪಿಸುತ್ತವೆ.

ಬಹುಸಂಖ್ಯಾತ ಜನರು ಸುಮ್ಮನಿರುವ ಮೂಲಕ ಪರೋಕ್ಷವಾಗಿ ಶಾಮೀಲಾಗುವಂತೆ ಈ ದ್ವೇಷದ ಆರಾಧಕರು ಮಾಡುತ್ತಾರೆ. ಮತ್ತು ಪೊಲೀಸರು- ಪೂರ್ವಾಗ್ರಹಪೀಡಿತ ವಿಚಾರಗಳು, ತಿರುಚಿ ಹೊಂದಿಸಿದ ಇತಿಹಾಸ, ಮೌಖಿಕವಾಗಿ-ಬಹಿರಂಗವಾಗಿ ಹಿಂಸಾತ್ಮಕವಾದ ಕಳಂಕ ಹಚ್ಚುವ ಚಿಕ್ಕಚಿಕ್ಕ ಡೋಸುಗಳಿಂದ ಬಾಧಿತರಾಗಿ- ಜೀವ ಉಳಿಸುವ ಕಾರ್ಯ ಕೈಗೊಳ್ಳಲು ವಿಫಲರಾಗುತ್ತಾರೆ ಮತ್ತು ಶಾಮೀಲಾತಿಯ ಇನ್ನೂ ತೀವ್ರ ಹಂತದಲ್ಲಿ ಸ್ವತಃ ಹಿಂಸಾಚಾರದಲ್ಲಿ ಭಾಗವಹಿಸುತ್ತಾರೆ.

ಹೀಗಿದ್ದರೂ, 2014ರಲ್ಲಿ ಬಹುಸಂಖ್ಯಾತವಾದಿ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿ ಪ್ರಧಾನಿಯಾದ ನಂತರ- ಅದರಲ್ಲೂ 2019ರಲ್ಲಿ ಆತ ಪುನರಾಯ್ಕೆ ಆದ ನಂತರ- ಛೂ ಬಿಡಲಾದ ಮುಸ್ಲಿಮರ (ಮತ್ತು ಕ್ರೈಸ್ತರು, ದಲಿತರು, ಮಹಿಳೆಯರ) ವಿರುದ್ಧದ ದ್ವೇಷಕ್ಕೆ ನನ್ನ ಜೀವನಕಾಲದ ಅನುಭವವೂ ನನ್ನನ್ನು ಸಿದ್ಧಗೊಳಿಸಿರಲಿಲ್ಲ.

ಇಸ್ಲಾಮೋಫೋಬಿಯಾ ಮತ್ತು ಇತರ ಅಲ್ಪಸಂಖ್ಯಾತ ವಿರೋಧಿ ದ್ವೇಷ ಎಂಬುದು ಹೊಸ ಸಾಮಾನ್ಯ ಸ್ಥಿತಿ ಆಗಿರುವುದು ಮಾತ್ರವಲ್ಲದೇ, ನಮ್ಮ ‘ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್’ ಸಂಸ್ಥೆಯ ‘ಹೇಟ್ ಹಠಾವೋ’ ಅಭಿಯಾನದ ಭಾಗವಾಗಿ ನಮ್ಮ ತಂಡಗಳು , ಕಣ್ಗಾವಲಿರಿಸಿ ದಾಖಲಿಸುವ ವರದಿಗಳ ಸರಣಿಯಲ್ಲಿ, ನಿತ್ಯವೂ ನಾವಿದಕ್ಕೆ ವಾಸ್ತವಿಕವಾದ ಸಾಕ್ಷ್ಯವನ್ನು ನೋಡುತ್ತೇವೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ, ವಿಶೇಷವಾಗಿ ಮೆಟಾ ಫೇಸ್‌ಬುಕ್‌ನಲ್ಲಿ ಯಾವುದೇ ನಿಯಂತ್ರಣ ಇಲ್ಲದ ಅಲ್ಗಾರಿದಂ ಮೂಲಕ ದ್ವೇಷದ ಪ್ರಸರಣವು ತ್ವರಿತವಾಗಿ ಹೆಚ್ಚುತ್ತಿರುವುದು ಗಂಭೀರವಾದ ಬೆದರಿಕೆಯಾಗುತ್ತಿದೆ.

ದ್ವೇಷವು ಇಂದು ಭಾರತದಲ್ಲಿ ಸರಕಾರಿ ಯೋಜನೆಯಾಗಿದ್ದು, ಇಲ್ಲಿ ಅಧಿಕಾರದಲ್ಲಿ ಇರುವ ರಾಜಕೀಯ ಸಂರಚನೆ, ಅದರ ಕಾವಲುಗಾರ ಸಂಘಟನೆಗಳು ಮತ್ತು “ಕಂದು ಅಂಗಿಗಳು” (ಹಿಟ್ಲರನ ಪರವಾಗಿ ಅನಧಿಕೃತ ಪೊಲೀಸ್‌ಗಿರಿ ಮಾಡುತ್ತಿದ್ದ ನಾಝಿ ಗೂಂಡಾಗಳನ್ನು ‘ಬ್ರೌನ್ ಶರ್ಟ್ಸ್’ ಎಂದು ಕರೆಯಲಾಗುತ್ತಿತ್ತು)- ಮಾನಸಿಕವಾಗಿ ಮತ್ತು ದೈಹಿಕವಾಗಿ ದ್ವೇಷದ ಅಪಪ್ರಚಾರದಿಂದ ಸಜ್ಜಿತರಾಗಿ, ಹಿಂಸಾತ್ಮಕವಾಗಿ ಧಾರ್ಮಿಕ ಅಲ್ಪಸಂಖ್ಯಾತರು, ಮಹಿಳೆಯರು, ದಲಿತ ಬಲಿಪಶುಗಳ ಮೇಲೆ ದಾಳಿ ಮಾಡುತ್ತಿವೆ. ಪೂರ್ವಾಗ್ರಹ ಪೀಡಿತ ವಿಚಾರಗಳು, ಪೂರ್ವಗ್ರಹದ ಕೃತ್ಯಗಳು, ತಾರತಮ್ಯ ಮತ್ತು ಹಿಂಸಾಚಾರ- ಇವೇ ನರಮೇಧಕ್ಕೆ ಮೊದಲಿನ ನಾಲ್ಕು ಹಂತಗಳನ್ನು ಬೋಧಿಸಲಾಗುತ್ತಿದೆ. ಕ್ರೈಸ್ತ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸುರಕ್ಷಿತರಲ್ಲದಿದ್ದರೂ, ಅತ್ಯಂತ ನಿರ್ದಿಷ್ಟವಾಗಿ ಮುಸ್ಲಿಮರ ವಿರುದ್ಧದ ದ್ವೇಷದ ಬಡಬಡಿಕೆಗಳನ್ನು ವಾಟ್ಸಪ್ ಫಾರ್ವರ್ಡ್‌ಗಳು, ಟೆಲಿವಿಷನ್ ಕಾರ್ಯಕ್ರಮಗಳು, ಡಿಜಿಟಲ್ ಮಾಧ್ಯಮಗಳು, ರಾಜಕೀಯ ಸಭೆಗಳು ಮತ್ತು ಧಾರ್ಮಿಕ ಸರ್ವಾಧಿಕಾರ (ಹಿಂದೂ ರಾಷ್ಟ್ರ)ದ ಪ್ರತಿಪಾದಕರು ಬರೆಯುವ ಪತ್ರಿಕಾ ಲೇಖನಗಳ ಮೂಲಕ ಕೂಡಾ ಪ್ರಸಾರ ಮಾಡಲಾಗುತ್ತಿದೆ.

ಮುದ್ರಣ ಮಾಧ್ಯಮದ ಸಂಪಾದಕೀಯ ಪುಟದಲ್ಲಿ ಗಮನಾರ್ಹವಾದ ಬದಲಾವಣೆ ಎಂದರೆ, ಇಂತಾ “ಸಿದ್ಧಾಂತಿ”ಗಳಿಗೆ ಕೊಡಲಾಗುತ್ತಿರುವ ಜಾಗದ ಪ್ರಮಾಣದ ಹೆಚ್ಚಳ. ಈ ಜಾಗವು ಅವರಿಗೆ ಭಾರತೀಯ ಮಾಧ್ಯಮದಲ್ಲಿ ಮತ್ತು ಸಾರ್ವಜನಿಕ ದೃಷ್ಟಿಯಲ್ಲಿ ನ್ಯಾಯಸಮ್ಮತತೆಯನ್ನು ಒದಗಿಸುತ್ತದೆ. ‌‌‌‌‌‌‌‌‌‌‌‌‌‌‌‌‌‌ಇಂತಾ ಒಂದು ಬದಲಾದ ರಾಷ್ಟ್ರದ (ಹಿಂದೂರಾಷ್ಟ್ರ) ಕುರಿತ ಚರ್ಚೆಯೇ ಸಂವಿಧಾನ ವಿರೋಧಿ ಎಂಬುದನ್ನು ಬದಿಗಿಡಿ. ಬಹುತೇಕ, ಗಮನಾರ್ಹವಾದ ದ್ವೇಷದ ಮಾತುಗಳಿಗೆ ಬಾಯಿ ನೀಡುವುದು ಸಾಮಾಜಿಕ ಮಾಧ್ಯಮಗಳು, ನಿರ್ದಿಷ್ಟವಾಗಿ ಫೇಸ್‌ಬುಕ್ ಮತ್ತು ವಾಟ್ಸಪ್ ಎಂದು ವಾದಿಸಬಹುದು: ಇವೆರಡೂ ಮೆಟಾ ಇನ್‌ಕಾರ್ಪರೇಟೆಡ್ (Meta Inc.) ಮಾಲಕತ್ವದ ವೇದಿಕೆಗಳು. ಇದೇ ಹೊತ್ತಿಗೆ ಮಸ್ಕ್ ಮಾಲಕತ್ವದ ಟ್ವಿಟ್ಟರ್ ಮತ್ತು ಇತರ ಹೊಸ ಆವೃತ್ತಿಗಳೂ ಹಿಂದೆ ಬಿದ್ದಿಲ್ಲ!

ಭಾರತದ ಅತ್ಯಂತ ದೊಡ್ಡ ಅಲ್ಪಸಂಖ್ಯಾತರ ಮಹಿಳೆಯರು ಮತ್ತು ಹುಡುಗಿಯರು 2021-2022ರ ನಡುವೆ ಟ್ವಿಟ್ಟರ್ ಖಾತೆಗಳಲ್ಲಿ, ಗಿಟ್‌ಹಬ್ ಮತ್ತು ಕ್ಲಬ್‌ಹೌಸ್ ವೇದಿಕೆಗಳಲ್ಲಿ ಅಸಹನೆ ಮತ್ತು ಅವಮಾನಗಳಿಗೆ ಗುರಿಯಾಗಿದ್ದಾರೆ. ಇಲ್ಲಿ ಅವರನ್ನು ಬಹಿರಂಗವಾಗಿ ಹರಾಜು ಹಾಕುವ ಭಯಾನಕ ಮತ್ತು ನಾಚಿಕೆಗೇಡಿನ ವಿದ್ಯಮಾನವೂ ನಡೆದಿದೆ. ಇವೆಲ್ಲವೂ ನಡೆಯುತ್ತಿರುವಾಗ, ದಿಲ್ಲಿಯಲ್ಲಿ ಅಧಿಕಾರದಲ್ಲಿ ಇರುವ ರಾಜಕೀಯ ನಾಯಕರ ಸಂಪೂರ್ಣ ಮೌನವು- ಇವುಗಳಿಗೆ ಸ್ಪಷ್ಟವಾಗಿಯೇ ಒಪ್ಪಿಗೆಯನ್ನು ಸೂಚಿಸುತ್ತದೆ. ಆದುದರಿಂದ, ದ್ವೇಷದ ಮಾತು, ಭಾಷಣಗಳಿಗೆ ಉನ್ನತ ಮಟ್ಟದ ರಕ್ಷಣೆಯಿದೆ. ಈ ನರಮೇಧದ ಗೋಪುರದಲ್ಲಿ ಮೇಲ್ಮುಖವಾಗಿ ಚಲಿಸುವ ಈ ದ್ವೇಷದ ಹರಡುವಿಕೆಯಲ್ಲಿ ಫೇಸ್‌ಬುಕ್ ಭಾಗವಹಿಸಬಹುದು ಎಂಬುದೇ ಆಘಾತಕಾರಿ ಮತ್ತು ಅಸ್ವೀಕಾರಾರ್ಹ.

ನಾನು ಮೊದಲ ಬಾರಿಗೆ ವರದಿಗಾರ್ತಿಯಾಗಿ ಕೆಲಸ ಮಾಡಲಾರಂಭಿಸಿದ 1983 ಮತ್ತು ಈಗಿನ ನಡುವಿನ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಡಿಜಿಟಲ್ ಮಾಧ್ಯಮ ಇಂದಿನ ವಾಸ್ತವಗಳು. ಎರಡೂ ಸಾಂಪ್ರದಾಯಿಕವಾದ ಪತ್ರಿಕೆಗಳು ಮತ್ತು ಟೆಲಿವಿಷನ್‌‌ಗಳಿಗಿಂತ ಹೆಚ್ಚು ವಿಸ್ತಾರವಾದ ಓದುಗರನ್ನು ತಲಪುತ್ತವೆ. ಅದರ ಅರ್ಥವೆಂದರೆ, ಅವು ‌‌‌‌‌‌‌‌‌‌‌‌ಹೆಚ್ಚು ವಿಸ್ತಾರವಾದ ಜನರಿಗೆ (ಓದುವ, ಬರೆಯುವ) ಅವಕಾಶವನ್ನು ಒದಗಿಸುತ್ತವೆ ಮತ್ತು ಅದಕ್ಕಿಂತ ಮುಖ್ಯವಾಗಿ ಮುಖ್ಯವಾಹಿನಿಯ ಮಾಧ್ಯಮಗಳಿಗಿಂತ ಹೆಚ್ಚು ವಿಷಯಗಳನ್ನು ಉತ್ಪಾದಿಸುತ್ತವೆ. ಭಾರತವು ಇಂದು 31.4 ಕೋಟಿಗೂ ಹೆಚ್ಚು ಫೇಸ್‌ಬುಕ್ ಬಳಕೆದಾರರನ್ನು ಹೊಂದಿದ್ದು, ಇದು 17.5 ಕೋಟಿ ಬಳಕೆದಾರರನ್ನು ಹೊಂದಿ ಎರಡನೇ ಸ್ಥಾನದಲ್ಲಿರುವ ಯುಎಸ್ಎಗಿಂತ ದುಪ್ಪಟ್ಟು ಇದೆ. ಹಾಗಾಗಿ, ದ್ವೇಷ ಬಯಸುವ ಹಿಂದೂ ಶ್ರೇಷ್ಟತಾವಾದಿ ರಾಜಕಾರಣಿಗಳು ಮತ್ತು ಕಾರ್ಯಕರ್ತರಿಗೆ ಹಿಂಬಾಲಕರನ್ನು ಪಡೆಯಲು, ಎಫ್‌ಬಿಯನ್ನು (ಮತ್ತು ಇತರ ವೇದಿಕೆಗಳನ್ನು) ದುರ್ಬಳಕೆ ಮಾಡಿಕೊಂಡು, ‘ವಿಷ’ಯಗಳನ್ನು ಇನ್ನಷ್ಟು ಹರಡಿ, ಬಹುಸಂಖ್ಯಾತವಾದಕ್ಕೆ ಬೆಂಬಲ ಒದಗಿಸಲು ಸಾಮಾಜಿಕ ಮಾಧ್ಯಮಗಳು ಆದರ್ಶ ವೇದಿಕೆಗಳಾಗುತ್ತವೆ.

ಬಿಜೆಪಿ ಮತ್ತು ಅದರ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಲವಾರು ಹೆಸರು ಮತ್ತು ಗುರುತುಗಳ ಮೂಲಕ ಸೃಷ್ಟಿಸಲಾಗಿರುವ ಡಜನ್‌ಗಟ್ಟಲೆ ಮರಿ ಸಂಘಟನೆಗಳು (ಕೆಲವನ್ನು ಹೆಸರಿಸಬೇಕಾದರೆ, ಸಕಲ್ ಹಿಂದೂ ಸಮಾಜ್, ಹಿಂದೂ ಜನಜಾಗೃತಿ ಸೇನಾ, ರಾಮ ಸೇನೆ… ಇತ್ಯಾದಿ) ಇವುಗಳೆಲ್ಲವೂ ಹಿಂದುತ್ವದ ಸಂಘಟನೆ ಮತ್ತು ಕ್ರೋಢೀಕರಣಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಬೇಕಾದ ಅಗತ್ಯದ ಕುರಿತು ಮುಕ್ತವಾಗಿ ಮಾತಾಡಿವೆ.

ಕೆಲವೇ ಉದಾಹರಣೆಗಳು
ಅಕ್ಟೋಬರ್ 2018ರಲ್ಲಿ ನಾವು ಫೇಸ್‌ಬಕ್‌ನ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾರ್ವಜನಿಕ ನೀತಿಯ ನಿರ್ದೇಶಕಿ ಅಂಕಿ ದಾಸ್ ಅವರಿಗೆ- ತೀವ್ರವಾದಿಗಳು ಪ್ರಧಾನಿಯ ಸಂಸದೀಯ ಕ್ಷೇತ್ರವಾದ ವಾರಾಣಸಿಯಲ್ಲಿ ಸೈಂಟ್ ಥೋಮಸ್ ಚರ್ಚನ್ನು ನಾಶ ಮಾಡಿದ ಬಗ್ಗೆ, ಅದನ್ನು ಮಾಡುವ ಮೊದಲು ಅವರಲ್ಲಿ ಕೆಲವರು ಕ್ರೈಸ್ತ ಸಮುದಾಯವನ್ನು ಗುರಿಪಡಿಸಿ ಪ್ರಚೋದನಾತ್ಮಕ ವಿಷಯಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ದೂರು ನೀಡಿದ್ದೆವು. ನಮಗೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

ನಂತರ 2019ರಲ್ಲಿ ನಮ್ಮ ‘ಹೇಟ್ ವಾಚ್’ ಕಾರ್ಯಕ್ರಮವು ದಕ್ಷಿಣದ ಒಂದು ರಾಜ್ಯವಾದ ತೆಲಂಗಾಣದಲ್ಲಿ ಆಳುವ ಬಿಜೆಪಿಯ ಪ್ರಭಾವಿ ಚುನಾಯಿತ ಪದಾಧಿಕಾರಿಯೊಬ್ಬರು ವದಂತಿಯೊಂದನ್ನು ಹೇಗೆ ದೊಡ್ಡದು ಮಾಡಿ, ತಾನು ಐದು ಲಕ್ಷ ನೋಡುಗರನ್ನು ಹೊಂದಿರುವ ಫೇಕ್‌ಬುಕ್ ಖಾತೆಯಲ್ಲಿ ತನ್ನದೇ ಆದ ದ್ವೇಷದ ಮಾತುಗಳನ್ನು ಸೇರಿಸಿ ಬರೆದರು ಎಂಬುದನ್ನು ವಿಶ್ಲೇಷಣೆ ಮಾಡಿತು.

ಒಂದು ವರ್ಷ ಮೊದಲು ಅವರು ಅಮರನಾಥ ಯಾತ್ರೆಯ ವೇಳೆ ಭಯೋತ್ಪಾದಕ ಕಾಶ್ಮೀರಿಗಳನ್ನು ಆರ್ಥಿಕವಾಗಿ ಬಹಿಷ್ಕರಿಸುವಂತೆ ದುಷ್ಟತನದ ಕರೆಯೊಂದನ್ನು ನೀಡಿದ್ದರು ಮತ್ತು ಅದನ್ನು 3 ಲಕ್ಷ ಜನರು ನೋಡಿದ್ದರು. ಅಂತಿಮವಾಗಿ, ಆಗಸ್ಟ್ 2020ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಈತನನ್ನು ಮುಖ್ಯವಾಗಿ ಹೆಸರಿಸಿ, ಸಂಸ್ಥೆಯು ಭಾರತದಲ್ಲಿ ತನ್ನ ವ್ಯಾಪಾರಿ ಹಿತಾಸಕ್ತಿಗಳನ್ನು ಕಾಪಾಡಲು ಬಿಜೆಪಿ ನಾಯಕರು ಮಾಡುವ ದ್ವೇಷದ ಮಾತು, ಭಾಷಣಗಳನ್ನು ಹೇಗೆ ಅವಗಣಿಸುತ್ತಿದೆ ಎಂದು ವರದಿ ಮಾಡಿತ್ತು. ಅವರೇ ಟಿ. ರಾಜಾ ಸಿಂಗ್.

ಬಿಜೆಪಿ ಶಾಸಕ ರಾಜಾ ಸಿಂಗ್

ಮಾರ್ಚ್ 2021ರ ಹೊತ್ತಿಗೆ, ಕೊನೆಗೂ ಫೇಸ್‌ಬುಕ್- ಈ ರಾಜಾಸಿಂಗ್- ತನ್ನದೇ ಕಮ್ಯುನಿಟಿ ಸ್ಟಾಂಡರ್ಡ್ (ಆಕ್ಷೇಪಾರ್ಹ ವಿಷಯಗಳು), ಹಿಂಸೆ ಮತ್ತು ಕ್ರಿಮಿನಲ್ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಒಪ್ಪಿಕೊಂಡು, ಆತನನ್ನು ಫೇಸ್‌ಬುಕ್‌ನಿಂದ ಕಿತ್ತುಹಾಕಿತು. ಆದರೆ ಆತನ ಫ್ಯಾನ್ ಪೇಜ್‌ಗಳಲ್ಲಿ ಒಂದು 2,19,420 ಮತ್ತು ಇನ್ನೊಂದು 17,018 ಹಿಂಬಾಲಕರೊಂದಿಗೆ ಇಂದೂ ಮುಂದುವರಿದಿದ್ದು ಪ್ರಚೋದನಾತ್ಮಕ ವಿಷಯಗಳನ್ನು ಹರಡುತ್ತಲೇ ಇದೆ.

ಇಂದು ಆಳುವ ಬಿಜೆಪಿಯ ʼಅಮಾನತುಗೊಂಡʼ ಶಾಸಕನಾಗಿರುವ ಆತ ಹೊಸ ನೆಲಮಟ್ಟದ ಅವತಾರವೆತ್ತಿದ್ದು, ಆಳುವ ಪಕ್ಷದ ದ್ಷೇಷಾಕಾಂಕ್ಷಿಗಳ ನೆಚ್ಚಿನ ನಾಯಕನಾಗಿರುವುದಲ್ಲದೇ, ಮಹಾರಾಷ್ಟ್ರ, ಕರ್ನಾಟಕ ಮತ್ತು, ರಾಜಸ್ಥಾನ ರಾಜ್ಯಗಳ ಉದ್ದಗಲಕ್ಕೂ ವಿಷ ಹರಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಪಕ್ಷವು ಮುಂದಿನ ವರ್ಷ ಕಠಿಣ ಚುನಾವಣಾ ಸ್ಪರ್ಧೆಯನ್ನು ಎದುರಿಸುತ್ತಿದೆ (ಮೇ 2024ರಲ್ಲಿ ಸಾರ್ವತ್ರಿಕ ಚುನಾವಣೆ ಮತ್ತು ಆಗಸ್ಟ್ -ಸೆಪ್ಟೆಂಬರ್ 2024ರಲ್ಲಿ ವಿಧಾನಸಭಾ ಚುನಾವಣೆ). ಅಲ್ಲಿ ಆತ ಏಳು ಸಭೆಗಳಲ್ಲಿ ಭಾಗವಹಿಸಿದ್ದು, ನಾಲ್ಕು ಎಫ್ಐಆರ್‌ಗಳು ದಾಖಲಾಗಿವೆ. ರಾಜಸ್ಥಾನದಲ್ಲಿಯೂ ಒಂದು ದಾಖಲಾಗಿದೆ. ಆತನ ನಿಂದನಾತ್ಮಕ ಚುನಾವಣಾ ಭಾಷಣಕ್ಕಾಗಿ ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್ (ಸಿಜೆಪಿ) ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಮುಂದಿನ ಕ್ರಮಕ್ಕಾಗಿ ಸಂಬಂಧಿತರಿಗೆ ಸಲ್ಲಿಸಲಾಗಿದೆ. ಇನ್ನೊಬ್ಬನೆಂದರೆ ಸುದರ್ಶನ ನ್ಯೂಸ್ ‌‌‌‌‌ನ ಸುರೇಶ್ ಚವ್ಹಾಂಕೆ.

ಎಲ್ಲ ಕಡೆ ಸಿಗುತ್ತಿರುವ ವಿನಾಯಿತಿಯಿಂದ ನಿಜವಾಗಿಯೂ ಧೈರ್ಯಗೊಂಡಿರುವ ಈ ʼಅಮಾನತುಗೊಂಡಿರುವʼಶಾಸಕ, ಹಲವಾರು ಸಂದರ್ಭಗಳಲ್ಲಿ ತನ್ನ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿರುವ ಟಿ. ರಾಜಾ ಸಿಂಗ್, ಮೇ 2023ರಲ್ಲಿ ರಾಜಸ್ಥಾನದ ಕೋಟಾದಲ್ಲಿ ಸಭಿಕರ ಮುಂದೆ ಕೆಳಗಿನಂತೆ ಘೋಷಿಸಿದರು:

“ನಾನು ಪ್ರಧಾನ ಮಂತ್ರಿ ಮೋದಿ ಮತ್ತು ಇತರ ಮಂತ್ರಿಗಳಿಗೆ ಇದನ್ನು ಹೇಳಲು ಬಯಸುತ್ತೇನೆ: ಈಗ, ಯಾರು ಕೂಡಾ ನಮ್ಮನ್ನು ಹಿಂದೂ ರಾಷ್ಟ್ರ ಸ್ಥಾಪಿಸದಂತೆ ತಡೆಯಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕ ನಾವು ಈ ಸಂದೇಶ ಖಾತರಿಯಾಗಿ ಪ್ರಧಾನ ಮಂತ್ರಿಗೆ ತಲಪುವಂತೆ ಮಾಡಬೇಕು. ಇದು ಭಾರತದಲ್ಲಿರುವ ಎಲ್ಲಾ ಮಂತ್ರಿಗಳಿಗೆ ತಲಪುವುದನ್ನು ಖಾತರಿಪಡಿಸಬೇಕು. ಅದೇನೆಂದರೆ, ಭಾರತದಲ್ಲಿ ಜಾತ್ಯತೀತತೆ ಕೆಲಸ ಮಾಡದು ಮತ್ತು ಅದು ರಾಜಸ್ಥಾನದಲ್ಲಿಯೂ ಕೆಲಸ ಮಾಡದು. ಇನ್ನು ಮುಂದೆ ಹಿಂದೂಗಳ ಆಡಳಿತ ಮತ್ತು ಹಿಂದುತ್ವ ಮಾತ್ರ ಇರುವುದು”

ಬೇರೆ ಮಾತುಗಳಲ್ಲಿ, ಈತ ತನ್ನ ಬೆಂಬಲಿಗರಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿ, ಭಾರತದಲ್ಲಿ ಹಿಂದೂ ಧರ್ಮಾಡಳಿತ ಸ್ಥಾಪಿಸುವಂತೆ ಪ್ರಧಾನಿಯನ್ನು ಒತ್ತಾಯಿಸಬೇಕೆಂದು ಹೇಳುತ್ತಿದ್ದಾರೆ. ಸಂವಿಧಾನದ ಅಡಿಯಲ್ಲಿ ಅದರ ಗಣರಾಜ್ಯ ಮತ್ತು ಎಲ್ಲರನ್ನೂ ಒಳಗೊಳ್ಳುವ ತತ್ವಗಳಿಗೆ ನಿಷ್ಟನಾಗಿರುವುದಾಗಿ ಪ್ರಮಾಣವಚನ ಸ್ವೀಕರಿಸಿರುವ ವಿಧಾನಸಭೆಯ ಚುನಾಯಿತ ಪ್ರತಿನಿಧಿಯೊಬ್ಬ ತನ್ನ ಅಜೆಂಡಾವನ್ನು ಮುಂದುವರಿಸಲು ಸಾಮಾಜಿಕ ಮಾಧ್ಯಮದ ಮೊರೆಹೋಗುವುದೆಂದರೆ, ಅದು ಹಿಂದೂತ್ವದ ಕ್ರೋಢೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದರ ಕುರಿತು ಬಹಳಷ್ಟನ್ನು ಹೇಳುತ್ತದೆ. 2021ರಲ್ಲಿ ಈತ- ಹಲವು ಭಾರತೀಯರ ಆಕ್ರೋಶ ಸ್ಫೋಟಿಸುವಂತೆ ಮಾಡಿದ, ಸುಪ್ರೀಂ ಕೋರ್ಟಿನಲ್ಲೂ ದ್ವೇಷ ಭಾಷಣದ ಪ್ರಕರಣವು ಸ್ವಲ್ಪ ಮುಂದುವರಿಯುವಂತೆ ಮಾಡಿದ- ಮುಸ್ಲಿಮರನ್ನು ಕೊಲ್ಲುವ ನರಮೇಧದ ಕರೆ ನೀಡುವುದಕ್ಕೆ ನಾಲ್ಕು ವರ್ಷಗಳ ಹಿಂದಿನಿದಲೇ ನಾವು ನರಮೇಧದ ಕತೆಯ ಕೇಂದ್ರದಲ್ಲಿರುವ ನರಸಿಂಗಾನಂದ ಸರಸ್ವತಿ ಎಂಬ ವ್ಯಕ್ತಿಯ ಕುರಿತು ದೃಢತೆಯಿಂದ, ನಿರಂತರವಾಗಿ ಜಾಡುಹಿಡಿದು ವರದಿ ಮಾಡುತ್ತಾ, ದಾಖಲಿಸುತ್ತಾ, ದೂರು ನೀಡುತ್ತಾ ಇದ್ದು, ಆತ ಸೃಷ್ಟಿಸಿದ ದ್ವೇಷದ ವಾತಾವರಣವನ್ನು ಬೆಟ್ಟು ಮಾಡಿ ತೋರಿಸುತ್ತಾ ಬಂದಿದ್ದೇವೆ.

ಈ ಕಷ್ಟಕರ ಪ್ರಕ್ರಿಯೆಯ ವೇಳೆಯೇ, ನವೆಂಬರ್ 2018ರಲ್ಲಿ- ಅಂದರೆ, ಆತ ಡಿಸೆಂಬರ್ 2021ರಲ್ಲಿ ನರಮೇಧದ ಕರೆ ನೀಡುವುದಕ್ಕೆ ನಾಲ್ಕು ವರ್ಷಗಳ ಮೊದಲೇ- ಈತನ ಫೇಸ್‌ಬುಕ್ ಪೋಸ್ಟೊಂದರಲ್ಲಿ ಹಿಂದೂಗಳು ತಮ್ಮ ಧರ್ಮವನ್ನು ರಕ್ಷಿಸಲು 24×7 ಶಸ್ತ್ರಸಜ್ಜಿತರಾಗಿರಬೇಕೆಂದೂ, ಇಸ್ಲಾಂ ಕ್ಯಾನ್ಸರ್ ಎಂದೂ ಬರೆದಿರುವುದರ ಕುರಿತು ಸಿಜೆಪಿಯ ಸದಸ್ಯರೊಬ್ಬರು ದೂರು ನೀಡಿದ್ದರು. ಅದು ತಮ್ಮ ಸಮುದಾಯ ನೀತಿಗೆ ವಿರುದ್ಧವಾಗಿಲ್ಲವೆಂದೂ, ನಮಗೆ ಆಕ್ಷೇಪ ಇದ್ದರೆ ನಾವು ಆತನನ್ನು ಬ್ಲಾಕ್ ಮಾಡಬಹುದು ಅಥವಾ ಆತನ ಪೇಜನ್ನು ಅನ್ ಫಾಲೊ ಮಾಬಹುದೆಂದೂ ಭಾರತದ ಫೇಸ್‌ಬುಕ್ ನಮಗೆ ಹೇಳಿತ್ತು. ‌

ಚುಟುಕಾಗಿ ಹೇಳುವುದಾದರೆ, ಏನೇ ಆದರೂ ನಾವು ನಮ್ಮ ಕೆಲಸ ಮಾಡಿದ್ದೇವೆ, ಅವಕಾಶ ಸಿಕ್ಕಿದಾಗಲೆಲ್ಲಾ ವಿವರವಾದ ಪತ್ರ ವ್ಯವಹಾರ ನಡೆಸಿದ್ದೇವೆ, ಒಂದೂವರೆ ಡಜನ್‌ಗೂ ಹೆಚ್ಚು ಸೂಕ್ಷ್ಮವಾದ ಪ್ರಕರಣ ಅಧ್ಯಯನಗಳನ್ನು ಸಲ್ಲಿಸಿದ್ದೇವೆ, ಮತ್ತಷ್ಟು ದೂರುಗಳನ್ನು ನೀಡಿದ್ದೇವೆ. ಆದರೆ, ದುರದೃಷ್ಟವಶಾತ್ ಇವೆಲ್ಲವೂ ಅತೃಪ್ತಿಕರ ಫಲಿತಾಂಶ ಕಂಡಿವೆ. ಈ ಎಲ್ಲಾ ಕೆಲಸಗಳು- ಸರಕಾರ ವಿಷಕಾರಿಯಾಗಿ ನಮ್ಮನ್ನು ಗುರಿಪಡಿಸಿದ್ದುದರಿಂದ- ಅಪಾಯ ಮತ್ತು ದೊಡ್ಡ ವೆಚ್ಚದ ನಡುವೆ ನಡೆದವು.

ಅಡೆತಡೆ ಇರುವುದು ಎಲ್ಲಿ?
ಸಾರ್ವಜನಿಕ ಸುರಕ್ಷೆ, ದ್ವೇಷ ಭಾಷಣಗಳು, ಹಿಂಸೆ, ತಾರತಮ್ಯ ಇತ್ಯಾದಿಗಳ ಬಗ್ಗೆ ಫೇಸ್‌ಬುಕ್ ಎಂಬ ಮೆಗಾ ಕಾರ್ಪೋರೇಷನ್ ನಿಗದಿಪಡಿಸಿರುವ ಸ್ವಂತ ನಿಯಮಾವಳಿಗಳಿಗೆ ಹೊರತಾಗಿಯೂ, ಭಾರತದ ಫೇಸ್‌ಬುಕ್, ಇಲ್ಲಿನ ಹಿಂದೂ ಶ್ರೇಷ್ಟತಾವಾದಿ ವಾತಾವರಣ ಮತ್ತು ಕೋಮು ಉದ್ವಿಗ್ನ ರಾಜಕೀಯದ ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳಲು ವಿಫಲವಾಗಿದೆಯೆ? ದ್ವೇಷದ ಮಾತುಗಳು ಮತ್ತು ಮಾತಿನ ಸ್ವಾತಂತ್ರ್ಯ (ಅಭಿವ್ಯಕ್ತಿ ಸ್ವಾತಂತ್ರ್ಯ)ಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸಿ ಅರಗಿಸಿಕೊಳ್ಳಲು ಭಾರತದ ವೈವಿಧ್ಯತೆ, ಕ್ರೂರವಾದ ಗುರಿ ನಿರ್ದೇಶಿತ ಕೋಮು ಹಿಂಸಾಚಾರದ ಹಿನ್ನೆಲೆಯ ಕುರಿತು ತಿಳುವಳಿಕೆ ಹೊಂದಿರುವ, ಮುಕ್ತವಾದ ಸಂವಾದ ಬೇಕಾಗುತ್ತದೆ. ಈ ರೀತಿಯಲ್ಲಿ ದ್ವೇಷದ ಮಾತುಗಳು, ಭಾಷಣಕ್ಕೆ ಅವಕಾಶ ನೀಡುವುದರಿಂದ ಫೇಸ್‌ಬುಕ್ ಇಂತಾ ವಿಷಯಗಳಿಗೆ ನ್ಯಾಯಸಮ್ಮತತೆಯನ್ನೂ ಒದಗಿಸುತ್ತದೆ ಮತ್ತು ನ್ಯಾಯಾಲಯಗಳು ಕೂಡಾ – ನಿಧಾನವಾಗಿಯೇ ಆದರೂ- ಅವುಗಳನ್ನು ಒಪ್ಪಿಕೊಳ್ಳುತ್ತಿವೆ.

ಫೇಸ್‌ಬುಕ್‌ನ ಸ್ವಯಂಚಾಲಿತ ಫಿಲ್ಟರ್‌ಗಳು ದ್ವೇಷದ ಮಾತು, ಭಾಷಣಗಳನ್ನು ಕೂಡಾ ಗುರುತಿಸುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಅವು ಭಾರತದಲ್ಲಿ ಇಂಗ್ಲೀಷ್ ಬಿಟ್ಟು ಬೇರೆ ಭಾಷೆಗಳಲ್ಲಿ ಎಡವುತ್ತವೆ. ಇಂದು ಯಾವುದೇ ಫೇಸ್‌ಬುಕ್ ಬಳಕೆದಾರರು- ಈ ಫಿಲ್ಟರ್‌ಗಳು ಗುರುತಿಸಿ ಹೊರಗಿಡದ ಕೆಲವೇ ನಿರ್ದಿಷ್ಟ ಪದಗಳನ್ನು ಸರ್ಚ್ ಮಾಡುವುದರ ಮೂಲಕ- ದ್ವೇಷ ಕಾರುವ ವಿಷಯಗಳನ್ನು ನೋಡಬಹುದು. ಉದಾಹರಣೆಗೆ ಕಟ್ಟರ್ ಹಿಂದೂ. ಹಿಂದಿಯಲ್ಲಿ पंचर पुत्र पंचरछाप, मुल्ले, मुल्ला, कटुआ, हलाला, हलाला की औलाद, बाबरकी औलाद ಇತ್ಯಾದಿ ಪದಗಳು (ಪಂಚರ್ ಪುತ್ರರು, ಪಂಚರ್ ಛಾಪ್, ಮುಲ್ಲಾ, ಕತ್ತರಿ (ಮುಂಜಿ), ಹಲಾಲ್, ಹಲಾಲ್ ಸಂತಾನ, ಬಾಬರ್ ಸಂತಾನ) ಸುಲಭವಾಗಿ ಫಿಲ್ಟರ್‌ಗಳಿಂದ ತಪ್ಪಿಸಿಕೊಳ್ಳುತ್ತವೆ. ‌ಇವೆಲ್ಲವೂ ಕುತ್ಸಿತವಾದ ಅವಹೇಳನಕಾರಿ, ವೃತ್ತಿ ಮತ್ತು ಧರ್ಮನಿಂದನೆಯ ಅಡ್ಡಪದಗಳು.

ಇದನ್ನು ಓದಿ ಭವನ ಪ್ರಜಾಪ್ರಭುತ್ವದ್ದು, ಭಾವನೆ ರಾಜಪ್ರಭುತ್ವದ್ದು!

ಇದು ಹೀಗಿರುವಾಗ, ಇಸ್ಲಾಮೋಫೋಬಿಯಾ ಮತ್ತು ದ್ವೇಷ ಹರಡುವುದಕ್ಕೆ ಸಾಮಾಜಿಕ ಮಾಧ್ಯಮಗಳು ಕೇಂದ್ರವಾಗಿರುವುದಕ್ಕೆ ಕಾರಣವೆಂದರೆ, ಮೆಟಾದಂತಾ ಸಂಸ್ಥೆಗಳು ತಮ್ಮ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ವಿಷಯಗಳಿಗೆ ಸಂಬಂಧಿಸಿದಂತೆ ಮಧ್ಯವರ್ತಿ ಪಾತ್ರ ವಹಿಸುವಲ್ಲಿ ಹೀನಾಯವಾಗಿ ವಿಫಲವಾಗಿರುವುದು. ಸಿಜೆಪಿಯಲ್ಲಿ ನಾವು ಫೇಸ್‌ಬುಕ್ ಮತ್ತು ವಾಟ್ಸಪ್‌ಗಳಲ್ಲಿ ‌ ಇಸ್ಲಾಮೋಫೋಬಿಕ್ ವಿಷಯ ವೈರಲ್ ಆದ ಹಲವಾರು ಸಂದರ್ಭಗಳನ್ನು ದಾಖಲಿಸಿದ್ದೇವೆ. ಒಂದು ನಿರ್ದಿಷ್ಟ ಸಮುದಾಯಕ್ಕೆ ಮಸಿಬಳಿದು, ಅವಹೇಳನ ಮಾಡುವ ಯಾವುದೇ ಮಾತುಗಳನ್ನು ಸ್ಪಷ್ಟವಾಗಿ ನಿಷೇಧಿಸುವ ಮೆಟಾದ ಸ್ವಂತ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಿದ್ದರೂ, ಫೇಸ್‌ಬುಕ್ ಮತ್ತು ವಾಟ್ಸಪ್ ವೇದಿಕೆಗಳು ಅವುಗಳನ್ನು ಕಿತ್ತುಹಾಕಿಲ್ಲ.

ಮೆಟಾ ತನ್ನ ವೇದಿಕೆಗಳಲ್ಲಿ ಯಾಕೆ ದ್ವೇಷದ ಮಾತುಗಳು ಅಥವಾ ಭಾಷಣಗಳನ್ನು ಸಹಿಸಿಕೊಳ್ಳುತ್ತದೆ? ಬಹುಶಃ, ಭಾಗಶಃ ಕಾರಣವೆಂದರೆ, ಸಂಸ್ಥೆಯು ತನ್ನ ಭಾರತೀಯ ಕಾರ್ಯಾಚರಣೆಯಲ್ಲಿ ವಿಷಯಗಳ ಮಧ್ಯಸ್ಥಿಕೆ ವಹಿಸಲು ಸಾಕಷ್ಟು ಹೂಡಿಕೆ ಮಾಡಿಲ್ಲ. ಇದರ ಅರ್ಥವೆಂದರೆ, ದೇಶದಲ್ಲಿ ಪ್ರಕಟವಾಗುವ ಬಹಳಷ್ಟು ಪೋಸ್ಟ್‌ಗಳು- ಮುಖ್ಯವಾಗಿ ಭಾರತೀಯ ಭಾಷೆಗಳಲ್ಲಿ- ಯಾವುದೇ ಕಣ್ಗಾವಲು ಇಲ್ಲದೆ ಹಾಗೆಯೇ ಪ್ರಸಾರವಾಗುತ್ತಿವೆ. ಇದೇ ಹೊತ್ತಿಗೆ ಮೆಟಾ ಸಂಸ್ಥೆಯು ಮತ್ತೆ ಮತ್ತೆ ಹೊತ್ತಿರುವ ಇನ್ನೊಂದು ಆರೋಪವೆಂದರೆ, ಅದರ ಭಾರತೀಯ ಸಿಬ್ಬಂದಿಗಳಲ್ಲಿ ಹೆಚ್ಚಿನವರು ಬಿಜೆಪಿ ಮತ್ತು ಅದರ ಕಾರ್ಯಕ್ರಮಗಳ ಕುರಿತು ಒಲವು ಹೊಂದಿರುವವರಾಗಿದ್ದು, ಇಸ್ಲಾಮೋಫೋಬಿಕ್ ದ್ವೇಷದ ಮಾತುಗಳಿಗೆ ಕುರುಡುಗಣ್ಣಾಗಿರುತ್ತಾರೆ ಎಂಬುದು. 2020ರ ದಿಲ್ಲಿ ಗಲಭೆಗಳ ವೇಳೆ ಹಿಂದೂ ಧಾರ್ಮಿಕ ನಾಯಕನೊಬ್ಬ ಬಹಿರಂಗವಾಗಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡುವ ವಿಡಿಯೋವನ್ನು ಮೆಟಾದ ವಿವಿಧ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಹಲವಾರು ವರದಿ, ದೂರುಗಳ ನಂತರವೂ ಅದನ್ನು ಕಿತ್ತ ಹಾಕದೇ ಇದ್ದಾಗ ಇದು ಮುನ್ನೆಲೆಗೆ ಬಂತು.

ಇದನ್ನು ಓದಿ ಈ ದಿನ ಸಂಪಾದಕೀಯ | ಕುಸ್ತಿಪಟುಗಳ ಕಣ್ಣೀರು ಮತ್ತು ಪ್ರಚಂಡ ಪ್ರಧಾನಿಯ ಮೌನ

ನಾನಿಲ್ಲಿ ಕೆಲವೇ ಕೆಲವು ಉದಾಹರಣೆಗಳನ್ನು ಉಲ್ಲೇಖಿಸಿದ್ದೇನೆ. ಹಿಂದೂ ಶ್ರೇಷ್ಟತಾವಾದಿಗಳು ಪ್ರತೀ ದಿನ ಮುಸ್ಲಿಮರನ್ನು ಗುರಿಪಡಿಸಿದ ಪ್ರಚೋದನಾತ್ಮಕ ಮತ್ತು ಹಿಂಸಾತ್ಮಕವಾದ ಪೋಸ್ಟ್‌ಗಳನ್ನು ಹಾಕಲು ಫೇಸ್‌ಬುಕ್ ಮತ್ತು ವಾಟ್ಸಪನ್ನು ಬಳಸುತ್ತಿದ್ದಾರೆ. ಅವರಿದನ್ನು ಮಾಡುತ್ತಿರುವುದು ಏಕೆಂದರೆ, ಮೆಟಾ ಇದಕ್ಕೆ ತಮ್ಮನ್ನು ಉತ್ತರದಾಯಿ ಮಾಡುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಇದರ ಪರಿಣಾಮವೆಂದರೆ: ಮೆಟಾ ಸಂಸ್ಥೆಯು ಸಂಪೂರ್ಣ ಸುರಕ್ಷಿತವಾಗಿ ಇಸ್ಲಾಮೋಫೋಬಿಯಾವನ್ನು ಹುಲುಸಾಗಿ ಬೆಳೆದು ಹರಡಬಹುದಾದ ವೇದಿಕೆಗಳನ್ನು ಸೃಷ್ಟಿಸಿದಂತಾಗಿದೆ. ಸಿಜೆಪಿ, ಅಲ್ಟ್ ನ್ಯೂಸ್, ಕನ್ನಡದ ‘ಹೇಟ್ ಸ್ಪೀಚ್ ಬೇಡ’ ಮತ್ತು ಇತರ ಭಾರತೀಯ ನಾಗರಿಕ ಸಮಾಜದ ಸಂಘಟನೆಗಳು ಮೆಟಾ ವೇದಿಕೆಗಳಲ್ಲಿ ದ್ವೇಷದ ಮಾತುಗಳನ್ನು ಗುರುತಿಸಿ, ವರದಿ ಮಾಡಲು ಗಮನಾರ್ಹವಾದ ಸಂಪನ್ಮೂಲಗಳನ್ನು ವಿನಿಯೋಗಿಸಿವೆ. ಈ ಕಾರ್ಯಗಳು ಇಷ್ಟರ ವರೆಗೆ ಮಾತ್ರ ಮುಂದೆ ಹೋಗಲು ಸಾಧ್ಯ. ನಿಜವಾಗಿಯೂ- ಮೆಟಾ ತನ್ನ ಭಾರತೀಯ ವೇದಿಕೆಗಳ ಜವಾಬ್ದಾರಿಯನ್ನು ತಾನೇ ತೆಗೆದುಕೊಳ್ಳದ ಹೊರತು- ನಮ್ಮ ಕಾರ್ಯಗಳು ಅಲ್ಪವಾಗಿಯೇ ಉಳಿಯುತ್ತವೆ. ಕೊನೆಗೂ ಈ ಸಂಸ್ಥೆಯು ಯಾವುದೇ ವ್ಯಕ್ತಿ ಅಥವಾ ಗುಂಪುಗಳಿಗಿಂತ ಹೆಚ್ಚಿನ ಬಲವನ್ನು ಹೊಂದಿರುವುದೇ ಸತ್ಯ.

ಈ ಕಾರಣಗಳಿಗಾಗಿಯೇ ಮೇ 31ರಂದು ನಡೆದ ಮೆಟಾದ ವಾರ್ಷಿಕ ಮಹಾಸಭೆ ಮಹತ್ವದ್ದಾಗಿದೆ. ಇದರಲ್ಲಿ “ಮೆಟಾದ ಅತೀ ದೊಡ್ಡ ಮಾರುಕಟ್ಟೆಯಲ್ಲಿ ತಾರತಮ್ಯದ ಕಾರ್ಯಾಚರಣೆಯ ಆರೋಪದ ಆಂದಾಜು” ಎಂಬ ಪ್ರಸ್ತಾಪ ಇತ್ತು. ಇದು ಒಟ್ಟು 13 ಪ್ರಸ್ತಾಪಗಳಲ್ಲಿ ಏಳನೆಯದಾಗಿದ್ದು, ಮೆಟಾದ ಭಾರತೀಯ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಸ್ತಾಪ ಇದೊಂದೇ ಇದ್ದದ್ದು. ಇಸ್ಲಾಮೋಫೋಬಿಕ್ ದ್ವೇಷ ಹರಡುವುದು, ವಿಷಯಗಳ ಕುರಿತು ಮಧ್ಯಸ್ಥಿಕೆಯ ತೀವ್ರ ಕೊರತೆ, ಸಂಸ್ಥೆಯ ಕಾರ್ಯವಿಧಾನಗಳ ಕುರಿತು ಪಾರದರ್ಶಕತೆಯ ಕೊರತೆ, ರಾಜಕೀಯ ತಾರತಮ್ಯ ಇತ್ಯಾದಿಗಳ ಕುರಿತು ಈ ಪ್ರಸ್ತಾಪದಲ್ಲಿ ಉಲ್ಲೇಖಿಸಲಾಗಿದ್ದು, ಅದರ ಬಗ್ಗೆ ಚರ್ಚಿಸಲು, ಸಾಕ್ಷ್ಯ ಮಂಡಿಸಲು, ಪರ-ವಿರೋಧ ಮತ ಹಾಕಲು ಶೇರುದಾರರಿಗೆ ಅವಕಾಶವಿತ್ತು. ಈ ಏಳನೇ ವಿಷಯಗಳ ಬಗ್ಗೆ ಚರ್ಚಿಸಿ, ಮುಖ್ಯವಾಗಿ ಶೇರುದಾರರಲ್ಲಿ ಜಾಗೃತಿ ಮೂಡಿಸಲು Ekō, India Civil Watch International (ICWI), and Internet Freedom Foundation (IFF) ಸಂಘಟನೆಗಳು ಜಂಟಿ ಅಭಿಯಾನ ನಡೆಸಿ, ಮೆಟಾ ಸಂಸ್ಥೆಯು ಮೇಲೆ ಹೇಳಿದ ಗಂಭೀರ ಸಮಸ್ಯೆ ಮತ್ತು ಬಿಕ್ಕಟ್ಟುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ವಿಫಲವಾಗಿರುವ ಪ್ರಕರಣಗಳ ಕುರಿತು ಬೆಳಕು ಚೆಲ್ಲಿ, ಎತ್ತಿತೋರಿಸಿದ್ದವು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ
ತೀಸ್ತಾ ಸೆಟಲ್ವಾಡ್‌
+ posts

ಪತ್ರಕರ್ತೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ

ಪೋಸ್ಟ್ ಹಂಚಿಕೊಳ್ಳಿ:

ತೀಸ್ತಾ ಸೆಟಲ್ವಾಡ್‌
ತೀಸ್ತಾ ಸೆಟಲ್ವಾಡ್‌
ಪತ್ರಕರ್ತೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...