ಮೋದಿ ಸರ್ಕಾರದ ತೆರಿಗೆ ನೀತಿ; ಕರ್ನಾಟಕದ ಜನರ ಪಾಲಿಗೆ ಮರಣ ಶಾಸನ

Date:

ಕೇಂದ್ರವು ಜಿಎಸ್‌ಟಿ ವ್ಯವಸ್ಥೆ ಜಾರಿಗೆ ತಂದ ಮೇಲೆ ತೆರಿಗೆ ಸಂಗ್ರಹದಲ್ಲಿ ಶೇ 14ರಷ್ಟು ಪ್ರಗತಿಯಾಗದಿದ್ದರೆ ರಾಜ್ಯಗಳಿಗೆ ಪರಿಹಾರ ಕೊಡಬೇಕೆಂಬುದು ನಿಯಮವಾಗಿತ್ತು. ಆ ನಿಯಮವು 2022ರ ಜೂನ್ ತಿಂಗಳ ಅಂತ್ಯಕ್ಕೆ ಮುಗಿಯಿತು. ಆದರೆ 2026ರವರೆಗೂ ಪರಿಹಾರದ ಸೆಸ್ಸುಗಳನ್ನು ಜನರಿಂದ ಸಂಗ್ರಹಿಸುತ್ತದೆ

ಮೋದಿಯವರ ನೀತಿಯಿಂದಾಗಿರುವ ಅನ್ಯಾಯಗಳನ್ನು ಕರ್ನಾಟಕದ ಜನ ಅರ್ಥಮಾಡಿಕೊಳ್ಳಬೇಕು.

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕದಿಂದ ಅಪರಿಮಿತವಾದ ಸಂಪತ್ತನ್ನು ಸಂಗ್ರಹಿಸುತ್ತಿದೆ. ಅಂದಾಜುಗಳ ಪ್ರಕಾರ ಸುಮಾರು ೪.೭೫ ಲಕ್ಷ ಕೋಟಿರೂಪಾಯಿಗಳಷ್ಟು ತೆರಿಗೆ ಮತ್ತು ಸೆಸ್ಸುಗಳನ್ನು ಕರ್ನಾಟಕವೊಂದರಿಂದಲೆ ಸಂಗ್ರಹಿಸುತ್ತಿದೆ (2023-24ರಲ್ಲಿ ಸಂಗ್ರಹವಾಗಬಹುದಾದ ಮೊತ್ತ ನೇರ ತೆರಿಗೆಯಿಂದ 2.4 ಲಕ್ಷ ಕೋಟಿ, ಜಿಎಸ್‌ಟಿಯಿಂದ 1.3 ಲಕ್ಷ ಕೋಟಿ, ಕಸ್ಟಮ್ಸ್ ತೆರಿಗೆ ಸುಮಾರು 45 ಸಾವಿರ ಕೋಟಿ, ಪೆಟ್ರೋಲ್ ಡೀಸೆಲ್ ಮೇಲಿನ ಸೆಸ್ಸುಗಳು ಸುಮಾರು 35 ಸಾವಿರ ಕೋಟಿ, ಜಿಎಸ್‌ಟಿ ಸೆಸ್ಸು ಸುಮಾರು 12 ಸಾವಿರ ಕೋಟಿ. ಇತರೆ ಸೆಸ್ಸುಗಳು ಸುಮಾರು 13 ಸಾವಿರ ಕೋಟಿಗೂ ಹೆಚ್ಚು). ಇದಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಝಾಗಳ ಮೂಲಕ 3 ಸಾವಿರ ಕೋಟಿಗೂ ಹೆಚ್ಚು ಸಂಗ್ರಹಿಸುತ್ತಿದ್ದಾರೆ. ರೈಲ್ವೆಯ ಮೂಲಕ 20 ಸಾವಿರ ಕೋಟಿಗೂ ಹೆಚ್ಚು ಸಂಪತ್ತು ಸಂಗ್ರಹವಾಗುತ್ತಿದೆ. ಬಂದರುಗಳು, ವಿಮಾನ ನಿಲ್ದಾಣಗಳಲ್ಲಿ ಸಂಗ್ರಹವಾಗುವ ಹಣಕ್ಕೆ ಲೆಕ್ಕವಿಲ್ಲ. ಇವೆಲ್ಲದರ ಜೊತೆಗೆ ಕರ್ನಾಟಕ ಮೂಲದಿಂದ 11 ಲಕ್ಷ ಕೋಟಿಗೂ ಹೆಚ್ಚಿನ ಮೌಲ್ಯದ ವಸ್ತುಗಳನ್ನು ರಫ್ತು ಮಾಡಲಾಗುತ್ತಿದೆ. ರಫ್ತುಗಳ ಮೂಲಕವೂ ಅತ್ಯಧಿಕ ಆದಾಯವನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ಇದರ ಲೆಕ್ಕವೂ ನಮ್ಮ ಬಳಿ ಇಲ್ಲ.

ಕೇಂದ್ರ ಸರ್ಕಾರವು ಸಂಗ್ರಹಿಸುವ ಒಟ್ಟಾರೆ ತೆರಿಗೆ ಮತ್ತು ಸೆಸ್ಸುಗಳಲ್ಲಿ ಮಹಾರಾಷ್ಟ್ರವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಕೊಡುಗೆ ಶೇ 60ರಷ್ಟಿದೆ.
ತೆರಿಗೆ ಮತ್ತು ಸೆಸ್ಸುಗಳ ಸಂಗ್ರಹದಲ್ಲಿ ಕರ್ನಾಟಕವು ಮಹಾರಾಷ್ಟ್ರದ ನಂತರ ಎರಡನೆ ಸ್ಥಾನದಲ್ಲಿದೆ. ಆದರೆ ತೆರಿಗೆ ಹಂಚಿಕೆಯಲ್ಲಿ ಮಾತ್ರ ಇಡೀ ದೇಶದಲ್ಲಿಯೆ ಮಹಾರಾಷ್ಟ್ರದ ನಂತರ ಕಡೆಯ ಸ್ಥಾನದಲ್ಲಿದೆ. ಮಹಾರಾಷ್ಟ್ರಕ್ಕೆ ತೆರಿಗೆ ಹಂಚಿಕೆ ಕಡಿಮೆ ಮಾಡುತ್ತಿದ್ದಾರೆ ಎಂಬುದು ನಿಜವಾದರೂ, ಭಾರತೀಯ ರಿಸರ್ವ್ ಬ್ಯಾಂಕಿನ ದಾಖಲೆಗಳ ಪ್ರಕಾರ ಆ ರಾಜ್ಯದಲ್ಲಿ 2014ರ ಮಾರ್ಚಿಯಿಂದ 2022ರ ಮಾರ್ಚಿಯವರೆಗೆ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಸುಮಾರು 12,068 ಕಿಮೀಗಳಿಗೂ ಹೆಚ್ಚು ನಿರ್ಮಾಣವಾಗಿದೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಕೇವಲ 1,479 ಕಿಮೀಗಳಷ್ಟು ಹೆದ್ದಾರಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳು ಮಹಾರಾಷ್ಟ್ರವೂ ಸೇರಿದಂತೆ ಹಲವು ರಾಜ್ಯಗಳಿಗೆ ಹರಿದು ಹೋಗುತ್ತವೆ. ಆದರೆ ಎಲ್ಲ ಕಡೆಯಿಂದಲೂ ಹೊಡೆತ ತಿನ್ನುತ್ತಿರುವುದು ಕರ್ನಾಟಕ ಮಾತ್ರ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕದ ಜನರು ಮನೆ ಕಟ್ಟಲು ನಿಗದಿಪಡಿಸುವ ಗುರಿಯೆ ಕಡಿಮೆಯಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆಂದು ನೀಡುವ ಗ್ರಾಮಸಡಕ್ ಯೋಜನೆಗೆ ಕರ್ನಾಟಕಕ್ಕೆ ಅನುದಾನವನ್ನೆ ನೀಡುವುದಿಲ್ಲ.

ಕರ್ನಾಟಕದಿಂದ 4.75 ಲಕ್ಷ ಕೋಟಿಗೂ ಹೆಚ್ಚಿನ ತೆರಿಗೆ ಮತ್ತು ಮೇಲ್ತೆರಿಗೆಗಳನ್ನು ಸಂಗ್ರಹಿಸಿದರೂ ಸಹ 2023-24ರಲ್ಲಿ 37,025 ಕೋಟಿ ರೂಪಾಯಿಗಳಷ್ಟನ್ನು ತೆರಿಗೆ ಪಾಲು ಕೊಡುವುದಾಗಿ ಮೋದಿ ಸರ್ಕಾರ ಬಜೆಟ್‌ನಲ್ಲಿ ಹೇಳಿದೆ. ನಮ್ಮ ರಾಜ್ಯದಿಂದ 1 ರೂಪಾಯಿ ಸಂಗ್ರಹಿಸಿದರೆ ನಮಗೆ ಕೇವಲ 08 ಪೈಸೆಯನ್ನು ಕೊಡಲಾಗುತ್ತಿದೆ. ಇದನ್ನು ಆರೋಗ್ಯಕರ ವ್ಯವಸ್ಥೆ ಎನ್ನಲು ಸಾಧ್ಯವೆ? 100 ರೂಪಾಯಿ ಕೊಟ್ಟು 8 ರೂಪಾಯಿ ವಾಪಸ್ಸು ಪಡೆದರೆ ಆ ಮನೆ ಉದ್ಧಾರವಾಗಲು ಸಾಧ್ಯವೆ?

ಜಿಎಸ್‌ಟಿ ವ್ಯವಸ್ಥೆ ಬಂದ ಮೇಲೆ ತೆರಿಗೆ ವಿಧಿಸುವ ರಾಜ್ಯದ ಅಧಿಕಾರಗಳೆಲ್ಲ ಕೈ ಬಿಟ್ಟು ಹೋದವು. ಇದರಿಂದಾಗಿ ರಾಜ್ಯದ ಸ್ವಂತ ತೆರಿಗೆ ಸಂಗ್ರಹದ ಗುರಿ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರಗಳು ಜನರ ಶೋಷಣೆಯನ್ನು ಹೆಚ್ಚು ಮಾಡಬೇಕೆಂದು ಕೇಂದ್ರ ಸರ್ಕಾರವು ಪರೋಕ್ಷವಾಗಿ ಪದೇ ಪದೇ ಪ್ರಸ್ತಾಪಿಸುತ್ತಿದೆ. ಹಾಗಾಗಿಯೆ ನಲ್ಲಿ ನೀರಿಗೆ ಮೀಟರುಗಳು ಬರುತ್ತಿವೆ. ರೈತರ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸುವ ಪ್ರಸ್ತಾಪ ಇದೆ. ಅಬಕಾರಿ ಸುಂಕ ವಿಪರೀತವಾಗಿದೆ. ರಾಜ್ಯ ಸರ್ಕಾರವು ಪೆಟ್ರೋಲ್ ಡೀಸೆಲ್ ಮೇಲೆಯೂ ದೊಡ್ಡ ಮಟ್ಟದ ತೆರಿಗೆ ವಿಧಿಸುತ್ತಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಷ್ಟಕ್ಕಾಗದ ಮೋದಿ, ಈಗ ಇಷ್ಟಪಟ್ಟು ಮೈಮೇಲೆ ಬೀಳುತ್ತಿದ್ದಾರೆ ಯಾಕೆ?

ಇದು ಸಾಲದೆಂಬಂತೆ ರಾಜ್ಯದ ಸಾಲ 2018ರ ಮಾರ್ಚ್‌ನಿಂದ ಈಚೆಗೆ 3.76ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಪ್ರತಿ ವರ್ಷ ಸಾಲ ತೀರಿಸಲು 55ರಿಂದ 60 ಸಾವಿರ ಕೋಟಿಗಳಷ್ಟು ಮೀಸಲಿಡಬೇಕಾಗಿದೆ. ಸಾಲ ತೀರಿಸಲು ಸಾಲ ಮಾಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವವಾಗುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇದೂ ಸಾಲದೆಂಬಂತೆ ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಮಾಣ ತೀವ್ರವಾಗಿ ಹೆಚ್ಚಳ ಕಂಡಿದೆ.

ಕೇಂದ್ರ ಸರ್ಕಾರವು ಜಿಎಸ್‌ಟಿ ವ್ಯವಸ್ಥೆ ಜಾರಿಗೆ ತಂದ ಮೇಲೆ ತೆರಿಗೆ ಸಂಗ್ರಹದಲ್ಲಿ ಶೇ 14ರಷ್ಟು ಪ್ರಗತಿಯಾಗದಿದ್ದರೆ ರಾಜ್ಯಗಳಿಗೆ ಪರಿಹಾರ ಕೊಡಬೇಕೆಂಬುದು ನಿಯಮವಾಗಿತ್ತು. ಆ ನಿಯಮವು 2022ರ ಜೂನ್ ತಿಂಗಳ ಅಂತ್ಯಕ್ಕೆ ಮುಗಿಯಿತು. ಆದರೆ 2026ರ ವರೆಗೂ ಜಿಎಸ್‌ಟಿ ಪರಿಹಾರದ ಸೆಸ್ಸುಗಳನ್ನು ಜನರಿಂದ ಸಂಗ್ರಹಿಸುತ್ತದೆ. ಅದರಲ್ಲಿ ರಾಜ್ಯಗಳಿಗೆ ಪಾಲು ಇರುವುದಿಲ್ಲ. ಕೊರೋನಾ ಕಾಲದಲ್ಲಿ ರಾಜ್ಯಗಳಿಗೆ ಕೊಟ್ಟ ಸಾಲ ತುಂಬಿಕೊಳ್ಳಲು ಅದನ್ನು ಬಳಸಿಕೊಳ್ಳುವುದಾಗಿ ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ನಿಲ್ಲಿಸಿದ ಕಾರಣದಿಂದಾಗಿ ಕರ್ನಾಟಕಕ್ಕೆ ಪ್ರತಿ ವರ್ಷ ಕನಿಷ್ಠ 10 ಸಾವಿರ ಕೋಟಿ ರೂಗಳಿಂದ ಗರಿಷ್ಠ 23 ಸಾವಿರ ಕೋಟಿಗಳವರೆಗೂ ನಷ್ಠ ಸಂಭವಿಸುತ್ತದೆ. ಇದನ್ನು ಸರಿದೂಗಿಸಿಕೊಳ್ಳುವುದು ಹೇಗೆ?

ರಾಜ್ಯ ಸರ್ಕಾರವು ತನ್ನ ಹಣಕಾಸಿನ ಬಿಕ್ಕಟ್ಟುಗಳನ್ನು ನಿಭಾಯಿಸಲು ಆಡಳಿತಾತ್ಮಕ ಸುಧಾರಣೆಗಳನ್ನು ಮಾಡಬೇಕು ಎಂದು ತೀರ್ಮಾನಿಸಿದೆ. ಅದಕ್ಕೋಸ್ಕರ ಈಗಾಗಲೆ ಸಮಿತಿಯೊಂದು ರಚನೆಯಾಗಿದೆ. ಆಡಳಿತಾತ್ಮಕ ಸುಧಾರಣೆ ಎಂದರೆ ಸರ್ಕಾರಿ ಉದ್ಯೋಗಗಳ ನಷ್ಟ ಎಂದು ಅರ್ಥ. ಅಂದರೆ ನಮ್ಮ ಯುವಜನರ ಉದ್ಯೋಗದ ಕನಸಿನ ಮೇಲೆ ಶಾಶ್ವತ ಚಪ್ಪಡಿ ಎಳೆಯುವುದು ಇದರ ಉದ್ದೇಶ.

ನಮ್ಮ ಜನರ ಕಡೆಯ ಹನಿ ರಕ್ತವನ್ನೂ ಹೀರಿದಂತೆ ತೆರಿಗೆ ಸಂಗ್ರಹಿಸುವ ಮೋದಿ ಸರ್ಕಾರ ನಮಗೆ ಕೊಡಬೇಕಾದ್ದನ್ನು ಕೊಡದೆ ರಾಜ್ಯವನ್ನು ನರಕಕ್ಕೆ ತಳ್ಳುತ್ತಿದೆ. ಆದರೂ ನಮ್ಮ ಕೆಲ ಯುವಜನರು ಮೋದಿ ಮೋದಿ ಎನ್ನುತ್ತಿದ್ದಾರೆ. ಇದು ದುರಂತದ ಸಂಗತಿ. ಯುವಜನರಿಗೆ ಉದ್ಯೋಗವಿಲ್ಲ. ಜನರ ಜೇಬಿನಲ್ಲಿ ಹಣ ಇಲ್ಲ. ಜನರ ಕಲ್ಯಾಣಗಳಿಗೆ ಕೊಡಲು ಸರ್ಕಾರ ಸಾಲ ಮಾಡಬೇಕಾಗಿದೆ. ಆದರೆ ನಮ್ಮ ತೆರಿಗೆ ಹಣದಲ್ಲಿ ಉತ್ತರದ ರಾಜ್ಯಗಳು ಮಜಾ ಮಾಡುತ್ತಿವೆ. ಉತ್ತರದ ರಾಜ್ಯಗಳಿಗೆ ಅನುದಾನ ನೀಡಬೇಕಾದ ಕೇಂದ್ರ ಸರ್ಕಾರ ಅದಾನಿ ಅಂಬಾನಿಗಳ ತೆರಿಗೆ ಕಡಿಮೆ ಮಾಡುತ್ತಿದೆ. ಅವರ ಸಾಲ ಮನ್ನಾ ಮಾಡುತ್ತಿದೆ. ಮೋದಿ ಸರ್ಕಾರದ ನೀತಿಯಿಂದಾಗಿ ಸಂಪತ್ತು ಉತ್ಪಾದಿಸುವ ರಾಜ್ಯಗಳು ಬಡತನದತ್ತ ಸಾಗುತ್ತಿವೆ. ಅದರ ನೇರ ಪರಿಣಾಮ ನಮ್ಮ ಯುವಜನರ ಕನಸುಗಳ ಮೇಲೆ, ಬಡ ಜನರ ಹೊಟ್ಟೆಯ ಮೇಲೆ, ರೈತರ, ಕಾರ್ಮಿಕರ ಬದುಕಿನ ಮೇಲೆ ಆಗುತ್ತಿದೆ. ದುಡಿಯುವ ವರ್ಗದ ಜನರ ಬಳಿ ಹಣ ಇಲ್ಲದಿದ್ದರೆ ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲು ಸಾಧ್ಯವಿಲ್ಲ. ಶಿಕ್ಷಣ ಇಲ್ಲದಿದ್ದರೆ ಉತ್ತಮ ಉದ್ಯೋಗವೂ ಇಲ್ಲ. ಮತ್ತೆ ಬಡತನದ ಚಕ್ರಕ್ಕೆ ಸಿಲುಕಿ ರೈಲುಗಾಲಿಗೆ ಸಿಕ್ಕ ಕುರಿಮರಿಯಂತಾಗಿ ಅಳಿದು ಹೋಗುವುದಷ್ಟೆ ಆಗುತ್ತಿದೆ. ಇದೆಲ್ಲದಕ್ಕೆ ಕಾರಣ ನೇರವಾಗಿ ನರೇಂದ್ರ ಮೋದಿಯವರೆ ಆಗಿದ್ದಾರೆ.

ಕರ್ನಾಟಕದ ಬ್ಯಾಂಕುಗಳು, ಯುಜಿಸಿ ಕಛೇರಿ, ಸಿಆರ್‌ಪಿಎಫ್ ಬೆಟಾಲಿಯನ್ನು, ಇಸ್ರೋದ ಅಂಗಸಂಸ್ಥೆ ಎಲ್ಲವನ್ನೂ ಕಿತ್ತುಕೊಂಡರು. ನಮ್ಮ ರಾಜ್ಯದ ತೆರಿಗೆ ಅಧಿಕಾರವನ್ನೂ ಕಿತ್ತುಕೊಂಡರು. ನಮ್ಮ ಮಕ್ಕಳು, ಮಹಿಳೆಯರ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗುತ್ತಿದೆ. ಪ್ರತಿಭಾವಂತ ಪದವೀಧರರು ಸ್ವಿಗ್ಗಿ, ಝೊಮ್ಯಾಟೊಗಳಲ್ಲಿ ದುಡಿಯುತ್ತಿದ್ದಾರೆ. ರಾಜ್ಯದ ಹಲವು ಕಂಪೆನಿಗಳಲ್ಲಿ ಹಿಂದಿ ಭಾಷಿಕರು ಭೋರ್ಗರೆಯುತ್ತಿದ್ದಾರೆ. ನಮ್ಮ ಯುವಜನರು ಹಸಿದು ಅರ್ಧ ಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ರಾಜ್ಯ ಬಡವಾಗುತ್ತಿದೆ. ನಮ್ಮ ತಟ್ಟೆಯ ಅನ್ನವನ್ನು ಮೋದಿ ಸರ್ಕಾರ ಕಬಳಿಸಿದೆ. ಜನರ ಕನಸುಗಳು ಮಣ್ಣುಪಾಲಾಗುತ್ತಿವೆ. ನಮ್ಮ ಈ ಎಲ್ಲ ಕಷ್ಟಗಳಿಗೆ ಮೋದಿಯವರ ಆರ್ಥಿಕ ನೀತಿಗಳೇ ಕಾರಣ. ಮೋದಿಯವರ ನೀತಿಯಿಂದಾಗಿರುವ ಅನ್ಯಾಯಗಳನ್ನು ಕರ್ನಾಟಕದ ಜನ ಅರ್ಥಮಾಡಿಕೊಳ್ಳಬೇಕು.

ಡಾ. ಬಿ ಸಿ ಬಸವರಾಜು
+ posts

ಮೂಲತಃ ಮಂಡ್ಯದವರು. ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರು.

ಪೋಸ್ಟ್ ಹಂಚಿಕೊಳ್ಳಿ:

ಡಾ. ಬಿ ಸಿ ಬಸವರಾಜು
ಡಾ. ಬಿ ಸಿ ಬಸವರಾಜು
ಮೂಲತಃ ಮಂಡ್ಯದವರು. ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...