ತೆಪ್ಪಕಾಡಿನ ಮುದುಮಲೈ ಹುಲಿ ಸಂರಕ್ಷಣಾ ಜಾಡು ಮತ್ತು ತೇಕುಪಾಡಿಯ ಬೆಳ್ಳಿಯೊಂದಿಗೆ…

Date:

ಬೆಳ್ಳಿಯ ಮೊದಲ ಪತಿ ಚೆನ್ನನ್ 1995ರಲ್ಲಿ ಕಾಡಿನ ಹುಲಿಗೆ ಆಹುತಿಯಾದ ಮೇಲೆ ಬೆಳ್ಳಿ ಮತ್ತು ಬೊಮ್ಮನ್ ಜತೆಯಾದವರು. ಅಷ್ಟೊತ್ತಿಗಾಗಲೇ ಬೆಳ್ಳಿಗೆ ಲಕ್ಮಿ , ಮಂಜುಳ, ಕಾಳನ್ ಹೀಗೆ ಮೂವರು ಮಕ್ಕಳಿದ್ದರು. ಕಾಳನ್ ಕೂಡಾ ಆನೆಗಳ ಶಿಬಿರದ ಸಂಗಾತಿ. 

ಅದು ತಮಿಳುನಾಡಿನ ನೀಲಗಿರಿ ಪರ್ವತ ಶ್ರೇಣಿಗಳ ದಟ್ಟನೆಯ ಅರಣ್ಯವಲಯ. ಎಪ್ರಿಲ್ ತಿಂಗಳ ಕಡೆಯ ವಾರದ ಕಡು ಬೇಸಿಗೆಯಲ್ಲಿ ನೀಲಗಿರಿ ಬೆಟ್ಟಗಳ ಆಸುಪಾಸು ತಿರುಗಾಟದ ಮೂರು ದಿವಸಗಳ ಫ್ಯಾಮಿಲಿ ಟ್ರಿಪ್. ಊಟಿ ಮತ್ತದರ ಸುತ್ತಮುತ್ತ ಎತ್ತರದ ಹೇರ್ಪಿನ್ ಕರ್ವ್ ಗಳ ಹತ್ತಿ ತಿರುಗುವಾಗ ಜೀವ ಝಲ್ಲೆನ್ನುವ ಉಲ್ಲಾಸ. ಮುದುಮಲೈ ಕಾಡಿನ ಹತ್ತಾರು ಕಿ. ಮೀ. ಗಳ ಸಫಾರಿ ಮಾಡಿಬಂದ ಒಣ ನೆನಪುಗಳು ಹಚ್ಚ ಹಸಿರಾಗಿವೆ.

ಅದು ಮುದುಮಲೈ ಬೆಟ್ಟದ ಮಾಸಿನಗುಡಿಯ ‘ಸಿಂಗಾರ’ ಹೆಸರಿನ ಜಂಗಲ್ ರೆಸಾರ್ಟ್. ಬೆಟ್ಟಕುರುಬರ ಸಿದ್ದೇಗೌಡನೆಂಬ ರೆಸಾರ್ಟ್ ಮ್ಯಾನೇಜರ್ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಹೀಗೆ ನಾಲ್ಕೈದು ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಿದ್ದ. ಸಹಜವಾಗಿ ರೆಸಾರ್ಟ್ ಮಾಲಿಕ, ಕಾಡುಪರಿಸರ ಇತ್ಯಾದಿ ವಿವರಗಳನ್ನು ನಾವು ಕೇಳುತ್ತಿದ್ದರೇ ಅವನು ಬ್ರಿಟಿಷ್ ಕಾಲದ ಕತೆಗಳನ್ನೇ ಹೇಳತೊಡಗಿದ. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಸವೆಯುತ್ತಿರುವ ಮತ್ತು ಬಂಡವಾಳಶಾಹಿ ಹಿಡಿತದಲ್ಲಿ ಸಿಲುಕಿದ ಅರಿವಿರದ ಅವನಂತಹ ಇನ್ನೂ ಕೆಲವರು ಅವನ ಜತೆಯಲ್ಲಿ ಇರಬಹುದೆನಿಸಿತು.

ನೂರು ವರ್ಷಗಳ ಹಿಂದೆ ರಾಜಸ್ಥಾನದ ಮಾರ್ವಾಡಿ ಕುಟುಂಬವೊಂದು ಮೂರು ಸಾವಿರಕ್ಕೂ ಅಧಿಕ ಎಕರೆಗಳಷ್ಟು ನೀಲಗಿರಿ ಅರಣ್ಯ ಭೂಮಿ ಪಡೆದು ಟೀ, ಕಾಫಿ ತೋಟಗಳನ್ನು ಅಭಿವೃದ್ಧಿಪಡಿಸಿದ್ದು. ತನ್ನ ತಂದೆಯ ಕಾಲದಿಂದಲೇ ತಾವಿಲ್ಲಿ ಆಶ್ರಯ ಪಡೆದದ್ದು. ಅದರಲ್ಲೂ ವಿಶೇಷವಾಗಿ ಇತ್ತೀಚಿನ ಕೊರೊನಾ ದುರಿತಕಾಲದಲ್ಲಿ ಮಾರ್ವಾಡಿ ತಮ್ಮನ್ನೆಲ್ಲ ಕೈ ಬಿಡದೇ ಸಾಕಿದ್ದು, ಶಿಬಿರದ ಆನೆಯೊಂದಕ್ಕೆ ಬೆಂಕಿ ತಗುಲಿದ ಸಣ್ಣ ಪುಟ್ಟ ಕತೆಗಳನ್ನು ರುಚಿಕಟ್ಟಾಗಿ ಹೇಳುತ್ತಿದ್ದರೆ ಇನ್ನೂ ಕೇಳಬೇಕೆನಿಸುತ್ತಿತ್ತು. ಅಲ್ಲಿನ ಪ್ರಭುತ್ವ ಮತ್ತು ಭೂಮಾಲಿಕ ಹಿಡಿತಗಳ ಒಳಹೇತುಗಳ ಕುರಿತು ವಿವರಿಸಲು ನನಗಿಲ್ಲಿ ಈ ಕ್ಷಣದಲ್ಲಿ ಆಸಕ್ತಿ ಇಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಂದು ಬೆಳಗಿನ ಜಾವ ಏಳುಗಂಟೆಗೆ ತೆಪ್ಪಕಾಡಿನ ಫಾರೆಸ್ಟ್‌ ಸಫಾರಿ ಟಿಕೆಟ್ ಕೌಂಟರಿನಲ್ಲಿ ಬಂದು ಕುಳಿತರೂ ಉಪಯೋಗ ಎನಿಸಲಿಲ್ಲ. ತುಸು ತಡವಾಗಿಯೇ ನಮ್ಮನ್ನು ಸಫಾರಿಗೆ ತನ್ನ ತೆರೆದ ಜೀಪಿನಲ್ಲಿ ಕರೆದುಕೊಂಡು ಹೋದವನು ಸದುವಿನಯದ ದಾಸನ್. ಆದಿವಾಸಿ ಕಾಡುನಾಯಕ ಕುಲದ ದಾಸನ್ ಮೂಲತಃ ಕರ್ನಾಟಕದ ನಂಜನಗೂಡು ಗುಂಡ್ಲುಪೇಟೆ ಕಡೆಯ ಕಾಡು ನಾಯಕರಂತೆ. ತನ್ನ ತಾತನ ಕಾಲದಲ್ಲೇ ನೀಲಗಿರಿ ಕಾಡಿಗೆ ಬಂದು ಆನೆಗಳನ್ನು ಸಾಕಿ ಸಲಹುವ ಕಾವಾಡಿಗ ಕಾಯಕ ಅವರ ಕುಟುಂಬದ್ದು. ಅದನ್ನು ವರ್ತಮಾನದ ದಾಸನ್ ತನಕ ಹಾಗೆಯೇ ಮುಂದುವರೆದುಕೊಂಡು ಬಂದು ದಾಸನ್ ಸದ್ಯ ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರ.

ಕಾಡಿನಲ್ಲೇ ಜೀವನ ಸಾಗಿಸಿಕೊಂಡು ಬಂದ ತನ್ನ ತಾತ ಮತ್ತು ತಂದೆಯ ಕಾಲದಿಂದಲೂ ನೀಲಗಿರಿ ಬೆಟ್ಟಗಳ ಪ್ರದೇಶವೇ ಅವರ ಬದುಕಿನೊಡನಾಟದ ನರನಾಡಿಗಳು. ಬೆಟ್ಟದ ಸಕಲೆಂಟು ಜೀವ ಸಂಕುಲಗಳೊಂದಿಗೆ ಬಾಳುತ್ತಲೇ ಬಂದಿರುವ ಕತೆಗಳನ್ನು ದಾಸನ್ ತನ್ನ ತಮಿಳುಗನ್ನಡದ ಶೈಲಿಯಲ್ಲಿ ಸೊಗಸಾಗಿ ಹೇಳುತ್ತಲೇ ಇದ್ದ. ತಾಸೊತ್ತು ಸುತ್ತಿದರೂ ಒಂದೇ ಒಂದು ಹುಲಿಯ ಸುಳಿವಿರಲಿಲ್ಲ. ಆದರೆ ಅದರ ಹಿಂದಿನ ದಿನ ಹುಲಿಯೊಂದು ಕಾಣಿಸಿಕೊಂಡ ಸಂಗತಿಯನ್ನು ಹುರುಪಿನಿಂದ ಹೇಳಿ, ಹುಲಿ ಪ್ರತ್ಯಕ್ಷವಾದ ಸ್ಥಳದಲ್ಲಿ ಜೀಪು ನಿಲ್ಲಿಸಿ ಅದನ್ನು ನಮಗೆ ಹೂಬಾ ಹೂಬಾ ಜರುಗಿದಂತೆ ವಿವರಿಸಿದ.

ಜಿಂಕೆ, ಸಾರಂಗ, ಮೂಶೆಮಂಗ, ನವಿಲು, ಕಾಡೆಮ್ಮೆ ಹಿಂಡು ಹಿಂಡಾಗಿ ಪ್ರಾಣಿ ಪಕ್ಷಿಗಳು ಕಾಣ ಸಿಗುತ್ತಿದ್ದವು. ತುಸು ದೂರ ಕ್ರಮಿಸಿದ ಮೇಲೆ ಹೊಂಡದ ದಂಡೆಯಲ್ಲಿ ಮಲಗಿದ್ದ ಪುಟ್ಟ ಮೊಸಳೆ ಕಂಡಿತು. ಕೊನೆಗೂ ನಮಗೆ “ಹುಲಿಯ ದರ್ಶನ ಆಗಲಿಲ್ಲ ದಾಸನ್” ಅಂದೆವು. ಅದಕ್ಕೆಲ್ಲ ಅದೃಷ್ಟ ಬೇಕು ಸಾಮಿ. ನಿಮ್ಮದಿರಲಿ ತಿಂಗಳ ಹಿಂದೆ “ನಿಮ್ಮ ಬಂಡೀಪುರಕ್ಕೆ ಅದಕ್ಕೆಂದೇ ಬಂದಿದ್ದ ಪ್ರಧಾನಿ ಮೋಡಿ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋಗಲಿಲ್ಲವೇ?” ಎಂದು ದಾಸನ್ ನಮ್ಮನ್ನೇ ಮರು ಪ್ರಶ್ನಿಸಿದ. ತಮಿಳುಗನ್ನಡದ ಮುದದಲ್ಲಿ ಮುಗ್ದತೆ ತುಂಬಿ ಮಾತನಾಡುತ್ತಾ ಅವನು ಮೋದಿಯನ್ನು ‘ಮೋಡಿ’ ಅಂತ ಕರೆದದ್ದು ನಮಗೆ ಮೋಜೆನಿಸಿತು.

ಇತ್ತೀಚೆಗಷ್ಟೇ “ಎಲೆಫೆಂಟ್ ವ್ಹಿಸ್ಪರರ್ಸ್” ಎಂಬ ಸಾಕ್ಷ್ಯಚಿತ್ರ ಜಾಗತಿಕ ಮಟ್ಟದ ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಪಡೆಯಿತು. ಅದು ಇದೇ ಕಾಡಿನಲ್ಲಿ ನಿರಂತರ ಒಂಬತ್ತು ತಿಂಗಳ ಕಾಲ ಚಿತ್ರೀಕರಿಸಿದ ಸಾಕ್ಷ್ಯಚಿತ್ರ. ಅದು ಅನಾಥ ಕೂಸು ಆನೆ ಪೋಷಣೆಯ ಅಪೂರ್ವ ಜೋಡಿಯ ಅತ್ಯುತ್ತಮ ಸಿನೆಮಾಟೋಗ್ರಫಿ ಚಿತ್ರ. ಅದನ್ನು ನಾನಂತೂ ಕೇವಲ ಡಾಕ್ಯುಮೆಂಟರಿ ಎಂದು ಪರಿಗಣಿಸಿಲ್ಲ. ಅಂತೆಯೇ ಅದು ಪ್ರಾಣಿ ಮತ್ತು ಮನುಷ್ಯ ಸಂಬಂಧದ ಸೂಕ್ಷ್ಮ ಸಂವೇದನೆಗಳ ಜೀವಚಿತ್ರ. ಸಹಜವಾಗಿ ಚಿತ್ರ ಕುರಿತು ಅದಕ್ಕೆ ಆಸ್ಕರ್ ಅವಾರ್ಡ್ ಬಂದಿರುವ ಕುರಿತು, ಚಿತ್ರದ ಅನುಪಮ ಜೋಡಿ ಜೀವಗಳಾದ ಬೆಳ್ಳಿ ಮತ್ತು ಬೊಮ್ಮನ್ ಹೆಸರು ಹೇಳುತ್ತಿದ್ದಂತೆ ದಾಸನ್ “ಅವರು ನಮ್ಮ ಸಂಬಂಧಿಕರು ಸರ್” ಎಂದು ಜೀಪಿನ ವೇಗ ಕುಗ್ಗಿಸಿ ಅವರ ಬಗ್ಗೆ ಹೇಳತೊಡಗಿದ. ಅಂತೆಯೇ ಮರುದಿನವೇ ಬೆಳ್ಳಿ ಬೊಮ್ಮನ್ ಎಂಬ ಕಾಡು ಕುಸುಮಗಳ ಭೇಟಿಗೆ ಸಿದ್ಧಗೊಂಡೆವು.

ಅಂದು ಮುಂಜಾನೆ ನಮ್ಮ ಕಾರು ಬುಡಕಟ್ಟು ಜೋಡಿಯ ಹಾಡಿಯತ್ತ ಹೊರಟಿತು. ಅದು ತೆಪ್ಪಕಾಡಿನ ಮಾಸಿನಗುಡಿ ಪಂಚಾಯತಿಗೆ ಸೇರಿದ ತೇಕುಪಾಡಿಯ ಹಾಡಿ. ಹಾಡಿಯ ಸಣ್ಣ ಗುಡ್ಡ ಏರಿ ಕಾರು ನಿಲ್ಲಿಸಿ ಅವರ ಪುಟ್ಟ ಮನೆಯತ್ತ ನಡೆದು ಹೋದೆವು. ಮನೆಯ ಮುಂದೆ ಕೋಲು ಹಿಡಿದುಕೊಂಡ ಕಪ್ಪನೆಯ ಯುವಕ ಕುಂತಿದ್ದ. ನಾವು ಬೆಳ್ಳಿ ಬೊಮ್ಮನ್ ಹೆಸರು ಹೇಳುತ್ತಿದ್ದಂತೆ ಅವನು ಪುಳಕದ ಧ್ವನಿ ಹೊರಡಿಸಿ “ಅವರು ಆನೆ ಕ್ಯಾಂಪ್ ಹತ್ತಿರ ಹೋಗಿದ್ದಾರೆ‌. ಬನ್ನಿ ಕುಳಿತುಕೊಳ್ಳಿ ಇನ್ನೇನು ಅವರು ಬರುವ ಸಮಯ” ಎಂದು ಗಾಯಗೊಂಡ ಎಡಗಾಲನ್ನು ಎಳೆದುಕೊಂಡು ಎದ್ದುನಿಂತ.

ಆತ ಕಾಳನ್ ಎಂತಲೂ ತಾನು ಬೆಳ್ಳಿಯ ಮಗ ಎಂತಲೂ ತಮಿಳ್ಗನ್ನಡದಲ್ಲಿ ಪರಿಚಯ ಹೇಳಿಕೊಂಡ. ನಮ್ಮ ಮಾತುಕತೆಗೆ ಅಷ್ಟು ಸಾಕಿತ್ತು. ಅಷ್ಟರಲ್ಲೇ ಅಷ್ಟು ದೂರದ ಕಾಡಿನಿಂದ ಬರಿಗಾಲಲ್ಲಿ ‘ಬೆಳ್ಳಿ’ ನಡಕೊಂಡು ಬರುತ್ತಿದ್ದುದನ್ನು ಕಂಡು ನಮಗೆಲ್ಲ ಖುಷಿಯೋ ಖುಷಿ. ಅಡಿಕೆ ಎಲೆ ಉಂಡ ನಾಲಗೆ, ಒಣಗಿದ ತುಟಿಯ ಕಪ್ಪನೆಯ ಅವಳ ಮುಖದಲ್ಲಿ ಪ್ರಕೃತಿ ಸಹಜದ ಜವಾರಿತನ ರಾರಾಜಿಸುತಿತ್ತು. ಬೆಳ್ಳಿಗೆ ಕನ್ನಡ ಅರ್ಥವಾಗ್ತದೆ ಆದರೆ ಮಾತಾಡಲು ಬರಲ್ಲ. ನಮ್ಮ ಪ್ರಶ್ನೆಗಳಿಗೆ ಆಕೆ ತಮಿಳಿನಲ್ಲೇ ಉತ್ತರಿಸ ತೊಡಗಿದಳು. ನನ್ನ ಹೆಂಡತಿಗೆ ತಕ್ಕಮಟ್ಟಿಗೆ ಮಾತಾಡುವಷ್ಟು ತಮಿಳು ಬರುತ್ತಿದ್ದರಿಂದ ಸಂವಹನಕ್ಕೆ ಕಷ್ಟವೆನಿಸಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ನಿಮ್ಮನ್ನು ಭೆಟ್ಟಿ ಮಾಡಲು ಬಂದಿದ್ರು. ಆಗ ನಿಮಗೇನು ಅನಿಸ್ತು. ಅವರು ನಿಮಗೇನು ಕೊಟ್ಟರು? ನಮ್ಮ ಮೊದಲ ಪ್ರಶ್ನೆ. “ನನಗೇನು ಅನಿಸಲಿಲ್ಲ. ಅವರು ನನಗೇನೂ ಕೊಡಲಿಲ್ಲ” ತುಂಬ ಸರಳ ಸಹಜ ಮತ್ತು ನಿರುದ್ವಿಗ್ನ ಸ್ವರದಲ್ಲಿ ಉತ್ತರಿಸಿದಳು ಬೆಳ್ಳಿ. ಈಗ್ಗೆ ಮೂರು ವರ್ಷಗಳ ಹಿಂದೆ ಪಂಚಾಯತ್ ವತಿಯಿಂದ ಮೂರುಲಕ್ಷ ವೆಚ್ಚದ ಪುಟ್ಟದೊಂದು ಮನೆ ನಿರ್ಮಿಸಿಕೊಡಲಾಗಿದೆ. ಅದಕ್ಕೆ ಮೊದಲು ಪತರಾಸು ತಗಡಿನ ಹೊದಿಕೆ. ಮೊದಲು ಹುಲ್ಲಿನ ಗುಡಿಸಲು ಅದಾಗಿತ್ತು.

ಆನೆ ಜೊತೆ ಬೆಳ್ಳಿ

ಬೆಳ್ಳಿಯ ಮೊದಲ ಪತಿ ಚೆನ್ನನ್ 1995ರಲ್ಲಿ ಕಾಡಿನ ಹುಲಿಗೆ ಆಹುತಿಯಾದ ಮೇಲೆ ಬೆಳ್ಳಿ ಮತ್ತು ಬೊಮ್ಮನ್ ಜತೆಯಾದವರು. ಅಷ್ಟೊತ್ತಿಗಾಗಲೇ ಬೆಳ್ಳಿಗೆ ಲಕ್ಮಿ , ಮಂಜುಳ ಎಂಬ ಇಬ್ಬರು ಹೆಣ್ಣು ಮತ್ತು ಕಾಳನ್ ಎಂಬ ಗಂಡುಮಗ. ಕಾಳನ್ ಕೂಡಾ ಆನೆಗಳ ಶಿಬಿರದ ಸಂಗಾತಿ. ಮೊನ್ನೆಯಷ್ಟೇ ಅವನಿಗೆ ಕಾಡಾನೆಯೊಂದು ತಿವಿದು ಅವನ ಎಡಕಾಲಿಗೆ ತೀವ್ರವಾದ ಪೆಟ್ಟಾಗಿದ್ದು ಇದೀಗ ಸುಧಾರಿಸಿಕೊಳ್ಳುತ್ತಿರುವುದಾಗಿ ಕಾಳನ್ ತಿಳಿಸಿದ. ತನ್ನ ತಾಯಿ ‘ಬೆಳ್ಳಿಯಮ್ಮ’ ತಮಗಿಂತಲೂ ಅನಾಥ ಮರಿಯಾನೆಗಳನ್ನೇ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆ ಹೆಚ್ಚು ತಾಯ್ತನದ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಅಮ್ಮನ ಸಾಂಗತ್ಯದ ಪರಿಮಳವೇ ಆನೆ ಮರಿಗಳಿಗೆ ಪ್ರಿಯವಾದುದು. ಅವನ ಮಾತಿನಲ್ಲಿ ಎಳ್ಳರ್ಧ ಕಾಳಿನಷ್ಟೂ ಸುಳ್ಳಿರಲಿಲ್ಲ.

ಇದನ್ನು ಓದಿ ಬಿಬಿಸಿ ಸಾಕ್ಷ್ಯಚಿತ್ರ: ಅವರ ಪರ ಸಾಕ್ಷಿಯಲ್ಲವೇ?

ಹೌದು ಅವರಿಬ್ಬರದು ನಿಸರ್ಗದ ನಡುವೆ ಅರಳಿದ ಬಹುಶೃತ ಮಾನವೀಯ ಎಚ್ಚರ. ಮುಖ್ಯವಾಗಿ ಅದು ಪ್ರಾಣಿದಯೆ ಎಂಬ ತೋರಿಕೆಯ ಮಾತಲ್ಲ. ಪ್ರಾಣಿಗಳಲ್ಲಿನ ಮಾನವೀಯ ಪ್ರೀತಿ, ಅಂತಃಕರಣ, ಜೀವಸ್ಪಂದನೆಯ ಗುಣಗಳನ್ನು ಗುರುತಿಸಿ ಅವುಗಳೊಂದಿಗೆ ಉಂಡುಟ್ಟು ಬಾಳಿ ಬದುಕಿದವರು. ಬುಡಕಟ್ಟು ಸಂಸ್ಕೃತಿಗೆ ಪ್ರಾಣಿ, ಪಕ್ಷಿಗಳ‌ ಅದಮ್ಯ ಪ್ರೀತಿ, ತಾಯ್ತನದ ಜೀವಂತಿಕೆಯ ಧಾರೆ ಎರೆದವರು. ಮೊದಲ ಗಂಡ ಮತ್ತು ಮಗಳನ್ನು ಕಳಕೊಂಡ ಬೆಳ್ಳಿ ತಾನು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವಿನಂತೆ ಅಮ್ಮು ಆನೆ ಮರಿಯನ್ನು ಪೊರೆದ ಪರಿ ಅನನ್ಯವಾದುದು. ರಾತ್ರಿ ಒಂದೆರಡು ಗಂಟೆಯಲ್ಲಿ ಶಿಬಿರಕ್ಕೆ ಹೋಗಿ ಹೆತ್ತಮ್ಮನಂತೆ ಹಾಲು ಕುಡಿಸಿ ಬರುತ್ತಿದ್ದ ಸಾಕಷ್ಟು ನಿದರ್ಶನಗಳಿವೆ.

ರಘು ಎಂಬ ಮತ್ತೊಂದು ಆನೆ ಇವರಿಗೆ ತುಂಬಾ ಆಪ್ತವಾದುದು. ರಘು ಮತ್ತು ಅಮ್ಮು ಸಹಜೀವಿಗಳು. ಅಂದಹಾಗೆ ಈ ಎರಡೂ ಆನೆಗಳಿಗೆ ಬೊಮ್ಮಣ್ಣ ಮತ್ತು ಬೆಳ್ಳಿ ಇಬ್ಬರು ಅಪ್ಪ ಅವ್ವಗಳೇ ಆಗಿದ್ದಾರೆ. ಅವು ಕೂಡಾ ಇವರ ಸಂಕಟ ಸಂತಸಗಳಿಗೆ ಸಹಸ್ಪಂದನ ತೋರುತ್ತವೆ. ಆದರೆ ಅವಕ್ಕೆ ಮಾತು ಬರಲ್ಲ ಎಂಬುದಷ್ಟೇ ಫರಕು. ಬೊಮ್ಮಣ್ಣ ಎಲೆಫೆಂಟ್ ಕ್ಯಾಂಪಿನಿಂದ ಬರುವುದು ಸಂಜೆಗೆಂದು ಗೊತ್ತಾಯಿತು. ದೊಡ್ಡ ದೊಡ್ಡ ಕ್ಯಾಮೆರಾಗಳು ಇವರ ಭೇಟಿಗೆ ಬರತೊಡಗಿದವು. ಹೌದು ಈ ಕಾಡು ಕುಸುಮಗಳೀಗ ಸೆಲೆಬ್ರಿಟಿಗಳು.

ಮಲ್ಲಿಕಾರ್ಜುನ ಕಡಕೋಳ
+ posts

ಸಾಹಿತಿ

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಮಲ್ಲಿಕಾರ್ಜುನ ಕಡಕೋಳ್ ಸತ್ವಪೂರ್ಣ ಬರಹಗಾರರು. ಯಾವುದೇ
    ವಿಷಯವಿರಲಿ ಅದನ್ನು ಸಹಜವಾಗಿ, ಓದುಗನ ಎದೆ ತಟ್ಟುವಂತೆ
    ವಿವರಿಸುವ ಕಲೆ ಅವರಿಗೆ ಸಿದ್ಧಿಸಿದೆ. ಬಡವರ ಬಗ್ಗೆ ಅನುಕಂಪ ಮತ್ತು
    ಬಂಡವಾಳಶಾಹಿಗಳ ದೌರ್ಜನ್ಯಗಳನ್ನು ಕುರಿತಂತೆ ಅವರು ನೀಡುವ
    ವಿವರಗಳು ಓದುಗನ ಹೃದಯದಲ್ಲಿ ಅವನಿಗೇ ಅರಿವಾಗದಂಥ ವಿಸ್ಮೃತಿ
    ಕವಿಸಿಬಿಡುತ್ತದೆ. ಅಂಥ ಬರೆವಣಿಗೆ ಅವರದು. ಎಷ್ಟೋ ಸಂದರ್ಭದಲ್ಲಿ
    ” ಇವರು ಎಷ್ಟೊಂದು ಛಂದ ಬರೆಯುತ್ತಾರೆ, ಈ ಶೈಲಿಯಲ್ಲಿ ನನಗೆ
    ಬರೆಯಲು ಏಕೆ ಸಾಧ್ಯವಿಲ್ಲ ” ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಂಡಿದ್ದೇನೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...