ನುಡಿನಮನ | ನ್ಯಾಯನಿಷ್ಠುರಿ ಪ್ರೊ ಜಿ ಎಚ್‌ ನಾಯಕ

Date:

ತಳ ಸಮುದಾಯಗಳಿಗೆ, ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಬೇಕಾದ ನ್ಯಾಯ ಸಿಕ್ಕಲೇಬೇಕು, ಅವರ ಪಾಲು ಅವರದೇ ಆಗಬೇಕು ಎಂಬುದು ಅವರ ನಿಲುವಾಗಿತ್ತು. ಅವರ ಚಿಂತನೆಯ ದಿಕ್ಕೂ ಇದೇ ಆಗಿತ್ತು. ಅದಕ್ಕಾಗಿ ಅವರು ಎಂಥ ನಿಷ್ಠುರತೆಗೂ ಸಿದ್ಧವಾಗಿಯೇ ಇರುತ್ತಿದ್ದರು

ಲೋಕವಿರೋಧಿ ಶರಣನಾರಿಗಂಜುವನಲ್ಲ…ʼ

ಬಸವಣ್ಣನವರ ವಚನದ ಈ ಸಾಲುಗಳು ಪ್ರಸಿದ್ಧವಾಗಿದ್ದರೂ, ನ್ಯಾಯನಿಷ್ಠುರಿಗಳು ಸಿಕ್ಕುವುದು ತೀರಾ ಅಪರೂಪ. 88 ವರ್ಷಗಳ ತುಂಬು ಬಾಳನ್ನು ಬಾಳಿ ಈ ಭೂಮಿಗೆ ವಿದಾಯ ಹೇಳಿದ (ಮೇ 27, 2023) ಪ್ರೊ. ಜಿ.ಎಚ್‌. ನಾಯಕರ ಬದುಕನ್ನು, ಅವರ ಒಳಬಾಳಿನ ತಿರುಳನ್ನು, ನಿಲುವು ನೋಟಗಳನ್ನು, ಹೋರಾಟದ ಕೆಚ್ಚನ್ನು ಕಂಡವರಿಗೆ ಬಸವಣ್ಣನವರ ʼನ್ಯಾಯ ನಿಷ್ಠುರಿʼ ನಮ್ಮ ನಾಯಕರೇ ಎಂದೆನಿಸುತ್ತದೆ.

ನಾಯಕರು ಅಂಕೋಲೆಯ ಸೂರ್ವೆಯವರು. ಸ್ವಾತಂತ್ರ್ಯ ಹೋರಾಟದ ಮನೆತನಕ್ಕೆ ಸೇರಿದವರು. ಅವರ ಅಪ್ಪ, ಅಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆವಾಸ ಅನುಭವಿಸಿದವರು. ತಮ್ಮ ಜಮೀನು ಕಳೆದುಕೊಂಡವರು. ಇಡೀ ಕುಟುಂಬವೇ ಇದಕ್ಕಾಗಿ ಹಲಬಗೆಯ ಕಷ್ಟ ನಷ್ಟಗಳಿಗೆ ಎದೆಕೊಟ್ಟದ್ದು ಬರೆಯದ ಇತಿಹಾಸದ ಪುಟಗಳನ್ನು ತುಂಬಿದೆ. ಕುಟುಂಬ ನಂಬಿಕೊಂಡಿದ್ದ ಮೌಲ್ಯಗಳು, ಸಮುದಾಯ ನಿಷ್ಠೆ, ತ್ಯಾಗಬುದ್ಧಿ, ಹೋರಾಟದ ಕೆಚ್ಚು- ಎಲ್ಲವೂ ನಾಯಕರಲ್ಲಿದ್ದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಂಕೋಲೆಯಿಂದ ವಿದ್ಯಾಭ್ಯಾಸಕ್ಕೆಂದು ಮೈಸೂರಿಗೆ ಬರಿಗೈಲಿ ಬಂದು, ಏಳು ದಶಕಗಳ ಅವಧಿಯಲ್ಲಿ ನಾಯಕರು ಬೆಳೆದ ರೀತಿ, ಮೈಸೂರು ಮಾತ್ರವಲ್ಲ, ಇಡೀ ಕರ್ನಾಟಕವನ್ನು ಆವರಿಸಿದ ರೀತಿ ಮಹಾನ್‌ ಸಾಧಕನೊಬ್ಬ ನೆಲ-ಮುಗಿಲಿಗೆ ನಿಂತ ಚಿತ್ರವನ್ನು ಮನದಲ್ಲಿ ಮೂಡಿಸುತ್ತದೆ.

ಇಡೀ ಬದುಕಿನಲ್ಲಿ ನಾಯಕರು ನ್ಯಾಯಕ್ಕಾಗಿ ಸೆಣಸಿದರು. ತಮ್ಮ ವೃತ್ತಿಜೀವನದಲ್ಲಿ ತಮಗೆ ಅನ್ಯಾಯವಾಗಿ, ಅದರಿಂದ ಅಪಾರ ಮಾನಸಿಕ ಸಂಕಟ, ತೊಳಲಾಟಗಳಿಗೆ ಈಡಾದರೂ ನಾಯಕರು ಎಂದೂ ರಾಜಿಗೆ, ಹೊಂದಾಣಿಕೆಗೆ ಮುಂದಾಗಲಿಲ್ಲ. ಅವರ ಬದುಕಿನ ನಿಷ್ಠೆ, ಆದರ್ಶಗಳಲ್ಲಿ ಎಲ್ಲಿಯೂ ಒಳದಾರಿಗಳಿರಲಿಲ್ಲ. ಅವರು ನಡೆದದ್ದು ನ್ಯಾಯದ, ತೆರೆದ ದಾರಿ. ಅಲ್ಲಿ ಮುಚ್ಚು ಮರೆಗಳಿರಲಿಲ್ಲ. ಪಾರದರ್ಶಕತೆ ಎನ್ನುವುದು ಅವರ ಒಳ-ಹೊರಗುಗಳನ್ನು ಸದಾ ತೋರಿಸುತ್ತಿತ್ತು. ತಮ್ಮ ನಡೆ-ನುಡಿಯ ನಡುವೆ ಬಿರುಕಿಲ್ಲದಂತೆ ಬಾಳಬೇಕೆಂಬುದೇ ಅವರ ಬದುಕಿನ ಬಹುದೊಡ್ಡ ಆದರ್ಶವಾಗಿತ್ತು. ಹೋರಾಟದ ಕೆಚ್ಚಿನಂತೆಯೇ ಧೀರ ನಿಲುವು ಅವರ ವ್ಯಕ್ತಿತ್ವದ ಮುಖ್ಯ ಅಂಶಗಳೇ ಅಗಿದ್ದವು.

ಅವರ ವೈಚಾರಿಕ ಚಿಂತನೆ, ಗಾಂಧಿ, ಲೋಹಿಯಾ, ಅಂಬೇಡ್ಕರ್‌ ಚಿಂತನೆಗಳಿಂದ ರೂಪಗೊಂಡಿತ್ತು. ಅವರ ಕಾಳಜಿಯ ಹಿಂದೆ ಅಂಬೇಡ್ಕರ್‌ ಅವರ ಚಿಂತನೆ ಸ್ಪಷ್ಟವಾಗಿ ಇರುವುದು ಕಾಣುತ್ತಿತ್ತು. ಸಂವಿಧಾನವನ್ನು ಎದೆಯಲ್ಲಿಟ್ಟುಕೊಂಡೇ ಅವರು ನಮ್ಮೆಲ್ಲರ ಬದುಕಿನ ಆಗುಹೋಗುಗಳನ್ನು, ಸ್ಥಿತಿಗತಿಗಳನ್ನು ಕುರಿತು ಚಿಂತಿಸುತ್ತಿದ್ದರು. ನ್ಯಾಯಬದ್ಧ ಹೋರಾಟಗಳು ಈ ಚೌಕಟ್ಟಿನಲ್ಲಿಯೇ ನಡೆಯಬೇಕೆಂಬ ಹಟವೂ ಅವರಲ್ಲಿತ್ತು. ಇಂಥ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿಯೇ ಇರುತ್ತಿದ್ದರು. ಕನ್ನಡಕ್ಕಾಗಿ ನಡೆದ ಗೋಕಾಕ್‌ ಚಳವಳಿ, ಕೋಮು ಸಾಮರಸ್ಯಕ್ಕಾಗಿ ಮೈಸೂರಿನಲ್ಲಿ ನಡೆದ ʼದ್ವೇಷಬಿಟ್ಟು ದೇಶಕಟ್ಟುʼ ಹೋರಾಟ, ದಲಿತ ಚಳವಳಿಯ ದಿಕ್ಕುದೆಸೆಯನ್ನು ನಿರ್ಧರಿಸುವ ಚಿಂತನ ಗೋಷ್ಠಿಗಳು, ವಿಚಾರ ಸಂಕಿರಣಗಳು, ಸಭೆಗಳು; ಸರಳ ವಿವಾಹದ ಚಟುವಟಿಕೆಗಳು, ಮಹಿಳಾಪರ ಹೋರಾಟಗಳು, ಚಿಂತನೆಗಳು ಎಲ್ಲ ಕಡೆಯಲ್ಲೂ ನಾಯಕರ ಧ್ವನಿ ಮುಖ್ಯಧ್ವನಿಯೇ ಆಗಿರುತ್ತಿತ್ತು. ನಾಯಕರ ಬಾಳ ಸಂಗಾತಿ ಮೀರಾ ನಾಯಕರು ಇತರ ಹೋರಾಟಗಾರ್ತಿಯರ ಜೊತೆ ಪ್ರತಿ ಬುಧವಾರವೂ ನಡೆಸುತ್ತಿದ್ದ ಸಭೆಗೆ ನಾಯಕರ ಮನೆಯೇ ಕೇಂದ್ರಸ್ಥಾನವಾಗಿತ್ತು.

ನಾಯಕರ ಚಿಂತನೆ ಸದಾ ವಿಶಿಷ್ಟವೂ, ವಿಭಿನ್ನವೂ ಆಗಿತ್ತು. ಆಳಕ್ಕಿಳಿದು, ಸೂಕ್ಷ್ಮವಾಗಿ, ಸ್ವೋಪಜ್ಞವಾಗಿ ಚಿಂತಿಸುವುದು, ಬರೆಯುವುದು, ಸಮಾಜಮುಖಿಯಾಗಿ ನಿಲುವು ತಳೆಯುವುದು ಅವರ ನಿಷ್ಠೆಯನ್ನು ತೋರಿಸುವಂತಿರುತ್ತಿತ್ತು. ಅಂಬೇಡ್ಕರ್‌ ನೀಡಿದ ಸಂವಿಧಾನ ಬಹುದೊಡ್ಡ ಕೊಡುಗೆ. ಅದನ್ನು ಬಹಳ ನಿಷ್ಠೆಯಿಂದ ನೋಡಬೇಕು. ನಮ್ಮ ಸರ್ಕಾರಗಳ ನಿಲುವು ಅದಕ್ಕೆ ಬದ್ಧವಾಗಿರಬೇಕೆಂದೇ ನಾಯಕರು ಬಯಸುತ್ತಿದ್ದರು. ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಚಾಮುಂಡಿ ವಿಗ್ರಹವನ್ನಿಟ್ಟು ಮೆರವಣಿಗೆ ಮಾಡುವುದನ್ನು ಅವರು ವಿರೋಧಿಸಿದ್ದರು. ಅದಕ್ಕೆ ಕಾರಣ, ಸರ್ಕಾರ ನಡಸುವ ದಸರಾ ಜಾತ್ಯತೀತ ತತ್ವವನ್ನು ಪಾಲಿಸುವಂತಿರಬೇಕು. ಎಲ್ಲ ಸಮುದಾಯಗಳು, ಎಲ್ಲ ಧಾರ್ಮಿಕ ನಂಬಿಕೆಯವರು ಇದರಲ್ಲಿ ಭಾಗವಹಿಸುವಾಗ, ಹಿಂದೂ ದೇವತೆಯಾದ ಚಾಮುಂಡೇಶ್ವರಿಯನ್ನು ಕೂರಿಸಿ ಮೆರವಣಿಗೆ ಮಾಡುವುದು ಎಷ್ಟು ಸರಿ? ಮೂರ್ತಿ ಪೂಜೆಯನ್ನೇ ನಿರಾಕರಿಸುವ ಸಮುದಾಯಗಳು ಇದರಿಂದ ಕಸಿವಿಸಿಗೊಳ್ಳುವುದಿಲ್ಲವೇ? ಎಂಬ ಪ್ರಶ್ನೆಯನ್ನು ಎತ್ತುತ್ತಿದ್ದ ನಾಯಕರ ಈ ವಿಚಾರ ಸಾಕಷ್ಟು ವಿವಾದವನ್ನೇ ಎಬ್ಬಿಸಿತ್ತು. ಆದರೂ ನಾಯಕರು ತಮ್ಮ ನಿಲುವಿನಿಂದ ಅಲ್ಲಾಡಿರಲಿಲ್ಲ.

ಜನಪ್ರಿಯವಾದ ಆಚರಣೆಗಳನ್ನು ವಿವೇಚನೆ ಇಲ್ಲದೆ ಒಪ್ಪಿಕೊಳ್ಳಬಾರದೆಂಬ ಮನೋಧರ್ಮವೂ ನಾಯಕರ ಚಿಂತನೆಯಲ್ಲಿ ಇರುತ್ತಿತ್ತು. ಸೆಪ್ಟೆಂಬರ್‌ 5 ಶಿಕ್ಷಕರ ದಿನಾಚರಣೆ. ನಮ್ಮ ರಾಷ್ಟ್ರಪತಿಗಳಾಗಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುವುದು ತಪ್ಪು. ಯಾಕೆಂದರೆ ರಾಧಾಕೃಷ್ಣನ್‌ ಅವರದು ಶುಭ್ರಶೀಲ ವ್ಯಕ್ತಿತ್ವವಲ್ಲ, ಅವರ ಮಗನೇ ಬರೆದ ಪುಸ್ತಕದಲ್ಲಿ ರಾಧಾಕೃಷ್ಣನ್‌ ಅವರ ಶೀಲ ಎಂಥದೆಂಬುದು ದಾಖಲಾಗಿದೆ, ನೋಡಿ ಎಂದು ನಾಯಕರು ವಾದಿಸುತ್ತಿದ್ದರು. ಈ ನಿಲುವು ಕೂಡಾ ವಿವಾದಕ್ಕೆ ಕಾರಣವಾಗಿತ್ತು. ಎಂಥ ವಿರೋಧವನ್ನೂ ಎದುರಿಸಿ ನಿಲ್ಲುವ ಎದೆಗಾರಿಕೆ ನಾಯಕರಲ್ಲಿತ್ತು.

ತಳ ಸಮುದಾಯಗಳಿಗೆ, ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಬೇಕಾದ ನ್ಯಾಯ ಸಿಕ್ಕಲೇಬೇಕು, ಅವರ ಪಾಲು ಅವರದೇ ಆಗಬೇಕು ಎಂಬುದು ಅವರ ನಿಲುವಾಗಿತ್ತು. ಅವರ ಚಿಂತನೆಯ ದಿಕ್ಕೂ ಇದೇ ಆಗಿತ್ತು. ಅದಕ್ಕಾಗಿ ಅವರು ಎಂಥ ನಿಷ್ಠುರತೆಗೂ ಸಿದ್ಧವಾಗಿಯೇ ಇರುತ್ತಿದ್ದರು.

ವಿಮರ್ಶೆ ಎನ್ನುವುದು ನಾಯಕರಿಗೆ ಕೇವಲ ಸಾಹಿತ್ಯಕ್ಕೆ ಮೀಸಲಾದ ಸಂಗತಿಯಾಗಿರಲಿಲ್ಲ. ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಸಾಮಾಜಿಕ ವಿದ್ಯಮಾನಗಳು, ಧಾರ್ಮಿಕ ಆಚರಣೆಗಳು-ವಿಚಾರಗಳು ಎಲ್ಲವನ್ನೂ ಹರಿತವಾದ, ನ್ಯಾಯಬದ್ಧವಾದ, ಸಮುದಾಯಗಳ ಸಮಗ್ರ ದೃಷ್ಟಿ ಧೋರಣೆಯಿಂದ ನೋಡುವ ವಿಧಾನವೇ ವಿಮರ್ಶೆ ಎಂದು ಗಾಢವಾಗಿ ನಂಬಿದ್ದ ನಾಯಕರು ಆ ದಿಕ್ಕಿನ ಕಡೆಗೆ ಚಲಿಸಲು ನೋಡುತ್ತಿದ್ದರು.

ಆಳವಾದ ಪಾಂಡಿತ್ಯ, ಸೂಕ್ಷ್ಮಸಂವೇದನೆ, ಖಚಿತ ಮತ್ತು ಸ್ಪಷ್ಟ ನಿಲುವು, ಅಪರೂಪದ ಒಳನೋಟಗಳು ನಾಯಕರ ವಿಮರ್ಶೆಗೆ ಘನತೆಯನ್ನು, ಗೌರವವನ್ನು ತಂದಿದ್ದವು. ನಾಯಕರ ಒಂದು ಮಾತಿಗಾಗಿ, ಅಭಿಪ್ರಾಯಕ್ಕಾಗಿ ಕಾತರಿಸುವ ಲೇಖಕರ, ಓದುಗರ ಸಮುದಾಯವೇ ಇತ್ತು ಎಂಬುದು ನಾಯಕರ ವಿಮರ್ಶೆಯ ಸ್ಥಾನವನ್ನು ಕೂಡಾ ಪರೋಕ್ಷವಾಗಿ ಸೂಚಿಸುತ್ತದೆ.

ಇದನ್ನು ಓದಿ ನುಡಿನಮನ | ನಮ್ಮೂರ ಗೋವಿಂದ್ರಾಯಣ್ಣ ಬಾರದೂರಿಗೆ ಹೊರಟುಹೋಗಿದ್ದಾರೆ…

ವ್ಯಕ್ತಿಯಾಗಿ ನಾಯಕರು ಬಹಳ ವಿನಯವಂತರು; ನಾಚಿಕೆಯ ಸ್ವಭಾವದವರು; ಅಪಾರ ಪ್ರೀತಿಯನ್ನು ಒಡಲಲ್ಲಿ ತುಂಬಿಕೊಂಡವರು. ಅವರ ಮೊದಲ ಮಗಳ ಹೆಸರು ʼಪ್ರೀತಿʼ. ಮನೆಯ ಹೆಸರು ಕೂಡಾ ʼಪ್ರೀತಿʼಯೇ. ಹತ್ತಿರದಿಂದ ಬಲ್ಲವರಿಗೆ ಈ ಪ್ರೀತಿಯ ಸ್ವರೂಪ ತಿಳಿದೇ ಇರುತ್ತದೆ. ದಿಟ್ಟ ನಿಲುವು, ವೈಚಾರಿಕ ಚಿಂತನೆ, ಕೆಚ್ಚೆದೆಯ ಹೋರಾಟಗಳ ನಾಯಕರನ್ನು ಮುಖಾಮುಖಿಯಾಗುವುದು ಹೇಗೆ ಎಂದು ಹೆದರಿ ಅವರ ಮನೆಗೆ ಬಂದವರಿಗೆ ನಾಯಕರ ಮೃದುತ್ವ, ಬೆಚ್ಚನೆಯ ಪ್ರೀತಿ, ಸ್ನೇಹ ತಿಳಿಯುತ್ತಿದ್ದವು.

ʼಪದವಿಟ್ಟಳಿಪದೊಂದಗ್ಗಳಿಕೆʼ ಕುಮಾರವ್ಯಾಸನದು. ʼಪದವಿಟ್ಟಳಿಪುದುʼ ನಾಯಕರ ಹೆಗ್ಗಳಿಕೆ. ಬರೆದು, ಒಡೆದು ಹಾಕಿ, ಮತ್ತೆ ಬರೆದು, ಮತ್ತೆ ತೆಗೆದುಹಾಕಿ… ನಾಯಕರು ಬರೆದುದಕ್ಕಿಂತ ಒಡೆದು ಹಾಕಿದ ಪುಟಗಳೇ ಹೆಚ್ಚು. ಇದಕ್ಕೆ ಮುಖ್ಯ ಕಾರಣ, ತಾವು ಬರೆದದ್ದರಲ್ಲಿ ಒಂದಿಷ್ಟೂ ಲೋಪ ಇಣುಕಬಾರದು, ಮತ್ತು ಬರಹ ಪರಿಪೂರ್ಣವಾಗಿರಬೇಕು ಎಂಬ ನಾಯಕರ ನಿಲುವು. ಅವರಿನ್ನೂ ಬರೆಯುವುದು ಬಹಳವಿತ್ತು. ಗೋಪಾಲಕೃಷ್ಣ ಅಡಿಗರ ನಿಲುವನ್ನು ವಿರೋಧಿಸಿಯೂ ಅಡಿಗರಿಗೆ ಅತ್ಯಂತ ಆಪ್ತರಾಗಿದ್ದ ನಾಯಕರು, ಅವರ ಬಗ್ಗೆ ಬರೆಯುತ್ತೇನೆಂದು ಹೇಳಿ ಬರೆಯಲಾಗದೇ ಹೋದರು. ಕುಮಾರವ್ಯಾಸನ ಭಕ್ತಿಯನ್ನು, ʼತಲೆಕೆಳಗಾದ ಭಕ್ತಿʼ ಎಂದು ಹೇಳುತ್ತಿದ್ದರೂ, ಬರೆಯದೇ ಹೋದರು. ಬೇಂದ್ರೆ ಕಾವ್ಯವನ್ನು ಬಹಳ ಇಂಪಾಗಿ ಹಾಡುತ್ತಿದ್ದ ನಾಯಕರು, ಬೇಂದ್ರೆ ಕಾವ್ಯದ ಬಗ್ಗೆ ಬಹಳ ಬರೆಯುವುದಿದೆ ಎಂದು ಹೇಳಿದ್ದರೂ, ಬರೆಯದೇ ಹೋದರು. ಇದು ಕನ್ನಡ ಸಾಹಿತ್ಯಕ್ಕೆ ಆದ ʼನಿಜದನಿʼಯ ನಷ್ಟ.

ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು
ಹಿರಿಯ ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...