ತರವಲ್ಲ ತಗಿ: ಮೋದಿ ಮಾತು, ಮನಸ್ಸು

Date:

ಕವಿ, ರಂಗನಿರ್ದೇಶಕ ರಘುನಂದನ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತು ಮತ್ತು ಮನಸ್ಸುಗಳ ಅಸಭ್ಯ ವೈಖರಿಯನ್ನು ವಿಶ್ಲೇಷಿಸಿ ಪುರಾವೆಗಳೊಂದಿಗೆ ಪ್ರಸ್ತುತಪಡಿಸಿದ ತರವಲ್ಲ ತಗಿ: ಮೋದಿ ಮಾತು, ಮನಸ್ಸು ಎಂಬ ವಿಡಿಯೋ ಪ್ರಬಂಧವನ್ನು eedina.com ಸಂಕಲಿಸಿ, ಎರಡು ವಿಡಿಯೋಗಳಾಗಿ ವಿಂಗಡಿಸಿ ಈಹಿಂದೆ ಪ್ರಕಟಿಸಿದೆ. ಆ ವಿಡಿಯೋಗಳನ್ನು ಈಗಾಗಲೇ ಹತ್ತಾರು ಸಾವಿರ ಜನ ನೋಡಿದ್ದಾರೆ.

ರಘುನಂದನರು ಮೊದಲು ದೀರ್ಘವಾದ ಒಂದು ಪ್ರಬಂಧವನ್ನು ಬರೆದು ಅದನ್ನೇ ಆ ವಿಡಿಯೋದ ಮೂಲಕ ಪ್ರಸ್ತುತಪಡಿಸಿದ್ದರು. ಈಗ ನಾವು ಆ ಬರಹದ ಇಡಿಯ ಪಾಠವನ್ನು ಈ  ವಿಷಯಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋ, ಸ್ಥಿರಚಿತ್ರ ಮತ್ತು ವರದಿಗಳನ್ನು ಕಾಣಲು ಬೇಕಾದ ಅಂತರ್ಜಾಲ ಕೊಂಡಿಗಳ ಸಮೇತ ಇಲ್ಲಿ ಪ್ರಕಟಿಸುತ್ತಿದ್ದೇವೆ.

ನಾಡಿನ ಸಾಮಾಜಿಕ ಜೀವನದ  ಆರೋಗ್ಯ, ರಾಜಕಾರಣದ ಆಗುಹೋಗು ಹಾಗೂ ನುಡಿಗಾರಿಕೆಯ ಒಳಿತು-ಕೆಡುಕಿನ ಅಧ್ಯಯನದಲ್ಲಿ ಆಸಕ್ತಿಯಿರುವ ಎಲ್ಲರೂ – ಪತ್ರಕರ್ತರು, ವಿದ್ಯಾರ್ಥಿಗಳು, ಸಂಶೋಧಕರು, ಮತ್ತೆಲ್ಲರೂ – ಓದಬೇಕಾದ ಬರಹ ಇದು.  

ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಮೊನ್ನೆ, 2023ನೇ ಇಸವಿಯ ಮಾರ್ಚ್ 12ನೇ ದಿನ, ಕರ್ನಾಟಕಕ್ಕೆ ಬಂದಿದ್ದರು; 16,000 ಕೋಟಿ ರೂಪಾಯಿಗಳ ವೆಚ್ಚ ಬೇಡೋ ಯೋಜನೆ ಮತ್ತು ಸಂಸ್ಥೆಗಳ ಉದ್ಘಾಟನೆ ಮಾಡಿದರು. ಅವರು ಆಗ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್  ಹೆದ್ದಾರಿಯ ಉದ್ಘಾಟನೆ ಮಾಡ್ತಿರೋದನ್ನ, ಆಮೇಲೆ ಧಾರವಾಡದ ಐಐಟಿಯ ಹೊಸ ಕ್ಯಾಂಪಸ್‍ನ  ಉದ್ಘಾಟನೆ ಮಾಡ್ತಿರೋದನ್ನ ನಾನು ಟಿವಿಯಲ್ಲಿ ನೋಡಿದೆ; ಆ ಎರಡೂ ಸಮಾರಂಭಗಳಲ್ಲಿ ಅವರು ಆಡಿದ ಮಾತನ್ನ  ಕೇಳಿಸಿಕೊಂಡೆ. 

ಮೋದಿ ಮತ್ತು ಅವರ ಪಕ್ಷದವರು ಹಾಗೂ ಒಟ್ಟು ಸಂಘ ಪರಿವಾರದವರ ಮಾತು, ಅವರ ನಡವಳಿಕೆಯ ವೈಖರಿ ನನಗೆ ಹೊಸದೇನೂ ಅಲ್ಲ. ಆದರೆ ಪ್ರತಿ ಬಾರಿ ಅವರ ಮಾತು ಕೇಳಿಸಿಕೊಂಡಾಗ,  ಅವರ ನಡವಳಿಕೆ ಕಂಡಾಗ ತುಂಬ ಕಸಿವಿಸಿಯಾಗುತ್ತೆ. ಹಾಗೆಯೇ ಈಬಾರಿಯೂ ತೊಳಲಾಡಿ, ಕಡೆಗೆ ಈದಿನ ಡಾಟ್‍ ಕಾಮ್‍ನ ಸಂಪಾದಕರಿಗೆ ಕರೆಮಾಡಿದೆ. ‘‘ತಮ್ಮಲ್ಲಿಗೆ ಬಂದು ಈ ವಿಷಯವನ್ನ ಕುರಿತು ಒಂದು ಚಿಕ್ಕ ವಿಡಿಯೋ ಮಾತುಕತೆ ನಡೆಸಬೇಕು ಅಂತಿದ್ದೀನಿ. ಮನೆಯಲ್ಲಿದ್ದುಕೊಂಡು ಇಂಥದನ್ನು ಮಾಡೋದಕ್ಕೆ ಬೇಕಾದ ಸಲಕರಣೆಯಾಗಲಿ, ಪರಿಣತಿಯಾಗಲಿ ನನಗೆ ಇಲ್ಲ. ಆದ್ದರಿಂದ ನಿಮ್ಮನ್ನ ಕೇಳ್ತಿದ್ದೀನಿ. ದಯವಿಟ್ಟು ಅವಕಾಶ ಮಾಡಿಕೊಡಿ’ ಅಂತ ಕೇಳಿದೆ. ಅವರು ಕೃಪೆಮಾಡಿ ಒಪ್ಪಿದರು. ಹಾಗಾಗಿ, ನಿಮ್ಮ ಮುಂದೆ ಮಾತಾಡ್ತಾ ಇದ್ದೀನಿ. 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಂದು ನಿವೇದನೆ

ಒಂದು  ವಿಷಯ ಹೇಳಬೇಕು.  ನನ್ನ ಮಟ್ಟಿಗೆ, ಕ್ಯಾಮೆರಾ  ಎದುರಿಸೋದೇ ತಲ್ಲಣದ ಸಂಗತಿ.  ಹಾಗಿರೋವಾಗ, ಟೆಲಿಪ್ರಾಂಪ್ಟರ್ ಬಳಸೋದು ಇನ್ನೂ ಹೆಚ್ಚು ಗಾಬರಿಯ ಸಂಗತಿ. ಆದ್ದರಿಂದ ನನಗನ್ನಿಸಿದ್ದನ್ನು ಬರಕೊಂಡು ಓದ್ತಿದ್ದೀನಿ. ದಯವಿಟ್ಟು ಹೊಟ್ಟೆಗೆ ಹಾಕಿಕೊಳ್ಳಿ.

ನಾನು ನಿಮ್ಮ ಮುಂದೆ ಮಾತಾಡ್ತಾ ಇರೋದು,  ಕೇವಲ ನನ್ನ ವೈಯಕ್ತಿಕ ನೆಲೆಯಲ್ಲಿ: ಮೊತ್ತಮೊದಲಿಗೆ, ಈ ದೇಶದ ಒಬ್ಬ ಪ್ರಜೆ – ಘಾಸಿಗೊಂಡಿರುವ ಪ್ರಜೆ – ಆಗಿ. ಜೊತೆಗೆ,  ಕನ್ನಡದ ಒಬ್ಬ ಕವಿ, ಲೇಖಕ ಮತ್ತು ರಂಗನಿರ್ದೇಶಕನಾಗಿ. ಯಾಕೆ ಅಂತ ಇನ್ನು ಮುಂದೆ ವಿವರಿಸೋ ಪ್ರಯತ್ನ ಮಾಡ್ತೀನಿ.

ಮೊದಲು, ನರೇಂದ್ರ ಮೋದಿಯವರು ಮೊನ್ನೆ ಕರ್ನಾಟಕದಲ್ಲಿ ಮಾಡಿದ ಆ ಎರಡೂ ಭಾಷಣದ ಸಣ್ಣ ತುಣುಕುಗಳನ್ನ ನೋಡೋಣ. ಆಮೇಲೆ ಅವರು ಬೇರೆಬೇರೆ ಕಡೆ, ಬೇರೆಬೇರೆ ಸಮಯದಲ್ಲಿ ಮಾಡಿದ ಕೆಲವು ಭಾಷಣದ ತುಣುಕು ತೋರಿಸ್ತೀನಿ.

ಬೆಂಗಳೂರಿನ ಬಳಿ ಮೋದಿ

ಇವು, ಮೊನ್ನೆಯ ಭಾಷಣಗಳ ತುಣುಕುಗಳು:

ಮೊದಲನೇ ವಿಡಿಯೋದ ಮಾತಿನಿಂದ ಶುರುಮಾಡೋಣ. ಅದರಲ್ಲಿ ಮೋದಿಯವರು  ಹೇಳ್ತಾರೆ, ಕಾಂಗ್ರೆಸ್ ತನ್ನ, ಅಂದರೆ ಮೋದಿಯವರ, ಗೋರಿ ತೋಡ್ತಿದೆ, ತನ್ನ ಗೋರಿ ತೋಡೋ ಕನಸು ಕಾಣ್ತಿದೆ ಅಂತ. ಅವರ ಮಾತಿನ ಅರ್ಥ, ತಮ್ಮನ್ನು, ಮೋದಿಯವರನ್ನು, ವಿರೋಧಿಸುತ್ತಿರುವ ರಾಜಕೀಯ ಪಕ್ಷವೊಂದು ತನ್ನ ಕೊಲೆ ಮಾಡೋ ಕನಸು ಕಾಣ್ತಿದೆ, ಕೊಲೆಮಾಡೋ ಎಣಿಕೆಯಲ್ಲಿದೆ ಅಂತ ಆಗುತ್ತೆ.

ಜವಾಬ್ದಾರಿಯುತವಾದ ಸ್ಥಾನದಲ್ಲಿ ಇರೋ ಯಾವುದೇ ವ್ಯಕ್ತಿ  ಹೀಗೆ ಮಾತನಾಡಬಹುದಾ? ಅವರು ಇರುವ ಹುದ್ದೆ ಚಿಕ್ಕ ಹುದ್ದೆಯೇ ಆಗಿರಬಹುದು, ಹೀಗೆ ಮಾತನಾಡಬಹುದಾ ಅವರು? ಇನ್ನು ದೇಶದ ಪ್ರಧಾನಿ ಮಂತ್ರಿಯೇ ಹೀಗೆ ಮಾತನಾಡ್ತಾರೆ ಅಂದರೆ…!?

ಅದು ಲೋಕಾಭಿರಾಮವಾಗಿ, ಒಂದು ರೂಪಕ ಅನ್ನೋ ಹಾಗೆ ಹೇಳಿದ ಮಾತು ಅಂತ ನಾವು ಸುಮ್ಮನಾಗಬಾರದು.  ದೊಡ್ಡ ಹುದ್ದೆಯಲ್ಲಿರುವವರು ದೇಶದಾದ್ಯಂತ, ಪ್ರಪಂಚದಾದ್ಯಂತ ಪ್ರಸಾರ ಮತ್ತು ಪ್ರಚಾರಗೊಳ್ಳೋ ಸಾರ್ವಜನಿಕ ಭಾಷಣ ಮಾಡುವಾಗ ಆಡಬೇಕಾದ ಮಾತು ಅಲ್ಲ ಅದು. ಅಂಥವರು ಆ ಮಾತನ್ನು ಆಡ್ತಾರೆ ಅನ್ನೋದಾದರೆ, ಅದು ತುಂಬ ಗಂಭೀರವೂ, ಆಘಾತಕಾರಿಯೂ ಆಗಿರುವ ನೈಜ ಆಪಾದನೆ ಆಗಿರಬೇಕೇ ಹೊರತು ಜನರ ಭಾವನೆಗಳನ್ನು ಕೆರಳಿಸೋದಕ್ಕೆ ಆಡಿದ ಮಾತಾಗಿರಬಾರದು; ಅಸಹ್ಯಕರವಾದ, ಜವಾಬ್ದಾರಿಯಿಲ್ಲದ, ಹಸಿಸುಳ್ಳಿನ ಮಾತಾಗಿರಬಾರದು. ಆದರೆ, ಮೋದಿ ಅವರು ಇಲ್ಲಿ ಆಡಿದ್ದು ಆ ಎರಡನೆಯ ಬಗೆಯ ಮಾತನ್ನೇ ತಾನೆ? ದೇಶದ ಪ್ರಧಾನ ಮಂತ್ರಿ ಅವರು…!

ಬಡಿವಾರ, ಆತ್ಮಲೋಲುಪತೆ, ದುರಹಂಕಾರ

ಆ ಮಾತನ್ನ ಅವರು ಎಷ್ಟು  ಸಲ ಆಡ್ತಾರೆ, ನೋಡಿ. ಒಂದಲ್ಲ, ಎರಡಲ್ಲ, ಒಟ್ಟು ನಾಲ್ಕು ಸಲ ಆ ಮಾತನ್ನಾಡಿದ್ದಾರೆ ಅವರು ಆ ವಿಡಿಯೋದಲ್ಲಿ. ಅವರು ಆ ಮಾತನ್ನು ಆಡುವಾಗ , ಅವರ ಹಾವಭಾವ, ಅವರ ಕೈಗಳ ಸನ್ನೆ, ಅವುಗಳ ಆಟ, ಅವರ ಧ್ವನಿಯ ಏರಿಳಿತವನ್ನ ನೋಡಿ;  ಮಾತನ್ನ  ರಾಗರಾಗವಾಗಿ ಆಡುವ ಅವರ ಬಡಿವಾರವನ್ನ ಕಾಣಿ.

ಮುಖ್ಯವಾದ ಇನ್ನೊಂದು ಮಾತು. ಮೋದಿಯವರು ತಮ್ಮನ್ನ ಸೂಚಿಸಿಕೊಳ್ಳೋದಕ್ಕೆ ತಾವೇ ಪ್ರಥಮಪುರುಷ ಪ್ರಯೋಗ ಮಾಡೋದನ್ನ  ಕಾಣಿ. ಅಂದರೆ, ‘’ಮೋದಿ ಹಾಗೆ… ಮೋದಿ ಹೀಗೆ…ಮೋದಿ ಹೀಗೆಲ್ಲ ಮಾಡ್ತಿದ್ದಾರೆ… ‘ದೇಶದ ಕೋಟಿಗಟ್ಟಲೆ ತಾಯಂದಿರು, ಅಕ್ಕತಂಗಿಯರು, ಹೆಣ್ಣುಮಕ್ಕಳು ಮತ್ತು ಜನತೆಯ’ ಆಶೀರ್ವಾದ ಮೋದಿ ಮೇಲಿದೆ ಅಂತ ತಮ್ಮನ್ನ ಕುರಿತು ತಾವೇ ಹೇಳಿಕೊಳ್ಳೋದನ್ನು ನೋಡಿ.

ಹಾಗೆ ತಮ್ಮನ್ನು ಕುರಿತು ಪ್ರಥಮ ಪುರುಷದಲ್ಲಿ ಹೇಳಿಕೊಳ್ಳೋದು ಅವರ ಯಾವತ್ತಿನ ಅಭ್ಯಾಸವೇ ಆಗಿದೆ. ಹಾಗೆ, ತನ್ನನ್ನು ತಾನೇ ಪ್ರಥಮ ಪುರುಷದಲ್ಲಿ ಸೂಚಿಸಿಕೊಳ್ಳೋ ವ್ಯಕ್ತಿಯ ಆತ್ಮಲೋಲುಪತೆ, ಸ್ವರತಿ ಮತ್ತು ದುರಹಂಕಾರವನ್ನಲ್ಲದೆ ಅದೆಲ್ಲ ಬೇರೇ ಏನನ್ನ ತೋರಿಸುತ್ತೆ, ದಯವಿಟ್ಟು ಯೋಚಿಸಿ.

ಧಾರವಾಡದಲ್ಲಿ ಮೋದಿ

ಈಗ ಎರಡನೇದಾಗಿ, ಧಾರವಾಡದ ಸಮಾರಂಭದತ್ತ ನೋಟ ಹರಿಸೋಣ: 

ರಾಹುಲ್ ಗಾಂಧಿ ಅವರು ಈಚೆಗೆ ಗ್ರೇಟ್ ಬ್ರಿಟನ್‍ ದೇಶಕ್ಕೆ ಹೋಗಿದ್ದರು. ಅಲ್ಲಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಉಪನ್ಯಾಸದಲ್ಲಿ, ಆಮೇಲೆ ಲಂಡನ್‍ ನಗರದಲ್ಲಿ ನಡೆಸಿಕೊಟ್ಟ ಒಂದು ಸಂವಾದದಲ್ಲಿ, ಭಾರತದ  ಏಳ್ಗೆಯ ಬಗೆಗಿನ ತಮ್ಮ ಕಲ್ಪನೆಗಳನ್ನ ಬಿಚ್ಚಿಟ್ಟರು;  ಜೊತೆಗೆ,  ನರೇಂದ್ರ ಮೋದಿ ಮತ್ತು ಅವರ ಪಕ್ಷದವರು ಈವತ್ತು ನಮ್ಮಲ್ಲಿ ನಡೆಸ್ತಿರೋ ಸರಕಾರವನ್ನ ಟೀಕಿಸಿದರು; ಮೋದಿ ಮತ್ತು ಅವರ ಪಕ್ಷ ಹಾಗೂ ಸಂಘ ಪರಿವಾರದಿಂದಾಗಿ ಭಾರತದ ಪ್ರಜಾಸತ್ತೆ ನಾಶವಾಗ್ತಿದೆ ಅಂದರು. ರಾಹುಲ್ ಗಾಂಧಿ ಅವರು ಅಲ್ಲಿ ಆಡಿದ್ದೆಲ್ಲವೂ ನಮ್ಮಲ್ಲಿನ ಪ್ರಜಾಸತ್ತೆಯ ಪರವಾಗಿಯೇ ಇತ್ತು. ಮೋದಿ ಮತ್ತು ಅವರ ಪಕ್ಷದ ಆಳ್ವಿಕೆಯಲ್ಲಿ ನಮ್ಮ ಪ್ರಜಾಸತ್ತೆ ನಾಶವಾಗ್ತಿದೆಯಲ್ಲ ಅನ್ನೋ ವ್ಯಥೆಯಿತ್ತು ಅವರ ಮಾತಲ್ಲಿ:

ಆದರೆ, ನರೇಂದ್ರ ಮೋದಿಯವರು, ತಾವು ಧಾರವಾಡದಲ್ಲಿ ಮಾತನಾಡೋವಾಗ, ರಾಹುಲ್ ಗಾಂಧಿಯವರ ಹೆಸರು ಹೇಳದೆ, ಆದರೆ ಅವರನ್ನೇ ಸೂಚಿಸೋ ಹಾಗೆ, ‘ಕೆಲವರು  ಲಂಡನ್‍ನಲ್ಲಿ ಭಾರತದ ಪ್ರಜಾಸತ್ತೆಯ ಘನವಾದ ಪರಂಪರೆಗೆ ಅವಮಾನ ಮಾಡಿದ್ದಾರೆ, ಬಸವಣ್ಣನವರಿಗೆ ಅವಮಾನ ಮಾಡಿದ್ದಾರೆ ಅಂದರು. ಕೆಲವರು (ಅಂದರೆ ರಾಹುಲ್ ಗಾಂಧಿಯವರು) ನಮ್ಮ ಆ ಪರಂಪರೆ ಮತ್ತು ಆ ಅಣ್ಣನನ್ನು ಕೀಳುಗೈದರು ಅಂದರು:

ಆದರೆ, ರಾಹುಲ್ ಗಾಂಧಿಯವರು ಇಂಗ್ಲೆಂಡಿಗೆ ಹೋದಾಗ ಬಸವಣ್ಣನವರ ಹೆಸರನ್ನೇ ಎತ್ತಲಿಲ್ಲ, ಪಾಪ; ಇನ್ನು ಅವರು ಬಸವಣ್ಣನವರನ್ನು ಅವಮಾನಿಸೋ ಮಾತೆಲ್ಲಿಯದು?

ಹಾಗಾದರೆ, ಮೋದಿ ಅವರು ಯಾಕೆ ಹಾಗೆ ಆಪಾದಿಸಿದರು?

ಕುತರ್ಕ, ತಿರುಚುಬುದ್ಧಿ

ವಿಚಾರ ಮಾಡಿ:

ಮೋದಿ ಅವರು ಹಾಗೆ ಹೇಳಿದ್ದು, ಬೇರೆಲ್ಲೂ ಅಲ್ಲ, ಧಾರವಾಡದಲ್ಲಿ! ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ಧಾರವಾಡ ಮತ್ತು ಉತ್ತರ ಕರ್ನಾಟಕದ ಸೀಮೆಯಲ್ಲಿ. ಸ್ಪಷ್ಟವಾಗಿ ಗೊತ್ತಾಗುತ್ತೆ:  ಲಿಂಗಾಯತರನ್ನು ಕೆರಳಿಸಲು ಆಡಿದ ಮಾತು ಅದು. ಅದರ ಹಿಂದಿನ ಕುತರ್ಕ, ತಿರುಚುಬುದ್ಧಿ ಓಡಿದ್ದು ಹೀಗೆ ಅನ್ನೋದು ಸ್ಪಷ್ಟ:

  • ಮೋದಿ ಮತ್ತು ಅವರ ಪಕ್ಷದಿಂದಾಗಿ ಭಾರತದ ಪ್ರಜಾಸತ್ತೆ ನಾಶವಾಗ್ತಿದೆ ಅಂತ ರಾಹುಲ್ ಗಾಂಧಿಯವರು ಹೇಳಿದಮೇಲೆ, ಅವರು, ಅಂದರೆ ರಾಹುಲ್ ಗಾಂಧಿ ಅವರು, ಭಾರತದ ವಿರುದ್ಧವಾಗಿದ್ದಾರೆ, ಭಾರತೀಯ ಪ್ರಜಾಸತ್ತೆಯ ಪರಂಪರೆಗೆ ವಿರುದ್ಧವಾಗಿದ್ದಾರೆ ಅಂತಾಯಿತು! ಅರ್ಥಾತ್, ಮೋದಿ +  ಬಿಜೆಪಿ = ಭಾರತ ಮತ್ತು ಭಾರತೀಯ ಪರಂಪರೆ!!
  • ಹಾಗಾಗಿ, ರಾಹುಲ್ ಗಾಂಧಿಯವರು ಬಸವಣ್ಣನವರನ್ನೂ, ಬಸವಣ್ಣನವರ (ಮತ್ತು ನಮ್ಮೆಲ್ಲರ) ಅನುಭವ ಮಂಟಪವನ್ನೂ ಟೀಕಿಸಿದ ಹಾಗೆ, ಅವಮಾನಿಸಿದ ಹಾಗೆ ಆಯಿತು!!
  • ಆದ್ದರಿಂದ, ರಾಹುಲ್ ಗಾಂಧಿಯವರು ಲಿಂಗಾಯತರ ವೈರಿ, ಶರಣ ಚಳವಳಿಯ ವೈರಿ, ಕರ್ನಾಟಕದ ವೈರಿ, ಭಾರತದ ವೈರಿ, ಭಾರತೀಯ ಪರಂಪರೆಯ ವೈರಿ!!

ಇಂಥ ಕುತರ್ಕದ ಹಿಂದೆಯಿರುವ ತಿರುಚುಬುದ್ಧಿಗೆ ಏನು ಹೇಳೋಣ? ಇನ್ನೆರಡೇ ತಿಂಗಳಲ್ಲಿ ನಮ್ಮ ರಾಜ್ಯದ ವಿಧಾನಸಭೆಯ ಚುನಾವಣೆ ನಡೆಯೋದಿದೆ ಅನ್ನೋದನ್ನ ನೆನೆಯೋಣ.

ಜನತೆಯ ಬಗ್ಗೆ ತಿರಸ್ಕಾರ; ನಮ್ಮ ಹಣದ ದುರುಪಯೋಗ

ಚುನಾವಣೆ ಅಂದಾಗ, ಮತ್ತೊಂದು ವಿಷಯ ಹೇಳಬೇಕು. ಮೋದಿಯವರು ಮೊನ್ನೆ ಇಲ್ಲಿಗೆ ಬಂದದ್ದು, ಅಧಿಕೃತವಾಗಿ ತಮ್ಮ ಪಕ್ಷದ ಕೆಲಸಕ್ಕಾಗಿ ಅಲ್ಲ; ತಮ್ಮ ಪಕ್ಷದ ಹಣ ಖರ್ಚು ಮಾಡಿ ಅಲ್ಲ.

ಅವರು ಇಲ್ಲಿಗೆ ಬಂದದ್ದು ದೇಶದ ಪ್ರಧಾನ ಮಂತ್ರಿಯಾಗಿ. ನಾವೆಲ್ಲರೂ ಕಟ್ಟೋ ಕಂದಾಯದ ಹಣ ಬಳಸಿ ಆಗ್ತಿರೋ ಯೋಜನೆ, ಸವಲತ್ತು-ಸಾಧನ ಮತ್ತು ಸಂಸ್ಥೆಗಳ ಕೆಲಸಕ್ಕಾಗಿ. ಅವರ ಪ್ರಯಾಣ ಮತ್ತು ಅವರಿಗಾಗಿ ನಡೆದ ಉಳಿದೆಲ್ಲ ವ್ಯವಸ್ಥೆಯ ಖರ್ಚು ಭರಿಸಿದ್ದು ನಾವು, ಈ ರಾಜ್ಯದ, ಈ ದೇಶದ ಜನತೆ.

ಹಾಗಿದ್ದಮೇಲೆ, ಅವರು ಇಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದಂತೆ ಮಾತನಾಡಬಾರದಿತ್ತು. ನಮ್ಮ ಹಣ ಮತ್ತು ನಮ್ಮ ಸಮಯವನ್ನ ತಮ್ಮ ಅಧಿಕಾರ ಮತ್ತು ಪಕ್ಷದ ಅಧಿಕಾರವನ್ನ ಕಾಯ್ದುಕೊಳ್ಳೋದಕ್ಕೆ ಖರ್ಚುಮಾಡಿ, ದುರುಪಯೋಗ ಮಾಡಿಕೊಳ್ಳಬಾರದಿತ್ತು. ಇದು ಅವರಿಗೆ ಜನತೆಯ ಬಗ್ಗೆ, ಜನತೆಯ ಹಣದ ಬಗ್ಗೆ, ಪ್ರಜಾಸತ್ತೆಯ ರೀತಿರಿವಾಜುಗಳ  ಬಗ್ಗೆ ಇರುವ ತಿರಸ್ಕಾರವನ್ನ  ತೋರಿಸುತ್ತೆ.

ನಾವುಜನತೆಬುದ್ಧಿಮಾಂದ್ಯರೇ?

ಜನತೆಯ ಬಗ್ಗೆ ತಿರಸ್ಕಾರ. ಆ ವಿಷಯ ತೊಗೊಳ್ಳೋಣ. ಆ ಎರಡು ವಿಡಿಯೋಗಳಲ್ಲಿ ಮೋದಿಯವರು ಮಾತನ್ನು ನಿಲ್ಲಿಸಿ, ನಿಲ್ಲಿಸಿ, ಒತ್ತಿಯೊತ್ತಿ, ರಾಗರಾಗವಾಗಿ ಹೇಳೋ ರೀತಿ ಗಮನಿಸಿ; ಅವರ ಹಾವಭಾವ ಗಮನಿಸಿ. ಆ ಎರಡು ವಿಡಿಯೋಗಳಲ್ಲದೆ, ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಸೆರೆಹಿಡಿದ ಉಳಿದ ಇನ್ನೆಷ್ಟೋ ವಿಡಿಯೋಗಳನ್ನ ಗಮನಿಸಿ. ತಮ್ಮ ಭಾಷಣ ಕೇಳ್ತಿರೋ ಜನ ಬುದ್ಧಿಹೀನರು, ಬುದ್ಧಿಮಾಂದ್ಯರು, ಸ್ವತಂತ್ರವಾಗಿ ಆಲೋಚನೆ ಮಾಡೋ ಶಕ್ತಿಯಿಲ್ಲದ ಬಾಲಕ, ಬಾಲಿಕೆಯರು, ಬಾಲಬುದ್ಧಿಯವರು ಅಂತ ತಿಳಿದವರ ಹಾಗೆ ಕಾಣ್ತಾರೆ ಮೋದಿಯವರು. ಅಲ್ಲಿ ಅವರ ಹಾವಭಾವ, ಮಾತಿನ ವೈಖರಿ ಆ ತರಹದ್ದಾಗಿದೆ.

ಮಕ್ಕಳನ್ನ ಸಂತೈಸೋದಕ್ಕೆ, ಒಮ್ಮೊಮ್ಮೆ ಅವರನ್ನ ಯಾಮಾರಿಸೋದಕ್ಕೆ, ಅವರಿಗೆ ತಿಳಿಹೇಳೋದಕ್ಕೆ ದೊಡ್ಡವರು ಉಪಾಯವಾಗಿ ಮಾತಾಡಬೇಕಾಗುತ್ತೆ, ನಿಜ. ಆದರೆ ಹಾಗೆ ಮಾಡುವಾಗ, ದೊಡ್ಡವರಿಗೆ ಆ ಮಕ್ಕಳ ವಿಷಯದಲ್ಲಿ ಪ್ರೀತಿಯಿರುತ್ತೆ, ಕಾಳಜಿ ಇರುತ್ತೆ. ಮಕ್ಕಳು ಏನೂ ಅರಿಯದವರು ಅನ್ನೋ ತಿಳಿವಳಿಕೆ ಇಲ್ಲವೆ ಭಾವನೆ ಇರುತ್ತೆ.; ಅವರ ಬಗ್ಗೆ ತಿರಸ್ಕಾರ ಇರೋದಿಲ್ಲ; ಅವರ ಶೋಷಣೆ ಮಾಡಬೇಕು ಅನ್ನೋ ಹುನ್ನಾರ ಇರೋದಿಲ್ಲ.

ಆದರೆ ಮೋದಿಯವರು, ನಮ್ಮನಿಮ್ಮಂಥ ವಯಸ್ಕರನ್ನೇ, ಇಡೀ ಜನತೆಯನ್ನೇ ಏನೂ ಅರಿಯದ ಮಕ್ಕಳು ಅಂತನ್ನೋ ಹಾಗೆ ಮಾತ್ರವಲ್ಲ, ಜನತೆ ಅಂದರೆ ಬುದ್ಧಿಮಾಂದ್ಯರ ಸಂತೆ ಅನ್ನೋ ಹಾಗೆ ನಡೆದುಕೊಳ್ತಾರೆ!

ಇದು ಮೋದಿಯವರನ್ನು ಕುರಿತು, ನಮ್ಮನ್ನು ಕುರಿತು ಏನನ್ನು ಹೇಳುತ್ತೆ? ಇದಕ್ಕಾಗಿ ನಾವು ಮೋದಿಯರನ್ನು ಮಾತ್ರ ಹಳಿಯಬೇಕೇ? ಅಥವಾ, ನಾವು ನಮ್ಮನ್ನೇ, ನಮ್ಮನ್ನೇ ಒಮ್ಮೆ ನೋಡಿಕೊಳ್ಳಬೇಕೇ?!!

ಮಾತು ಕಠಿಣವಾಯಿತು, ಕ್ಷಮೆಯಿರಲಿ. ಆದರೆ, ಅಗತ್ಯವಾದ ಮಾತನ್ನೇ ಆಡಿದ್ದೇನೆ.

ಮೋದಿ, ಸಂಘ ಪರಿವಾರ, ಕೆಟ್ಟ ನಡೆ, ನುಡಿ

ಮೋದಿ ಅವರೊಬ್ಬರನ್ನ ಬಿಟ್ಟು, ಬೇರೆ ಯಾವ ರಾಜಕೀಯ ವ್ಯಕ್ತಿಯೂ ಹೀಗೆ ಮಾತನಾಡಿದ್ದನ್ನ ನಾನಂತೂ ನೋಡಿಲ್ಲ.

ರಾಹುಲ್ ಗಾಂಧಿ ಅವರಿಂದ ಮೊದಲುಗೊಂಡು, ವಿರೋಧ ಪಕ್ಷಗಳ ಯಾವುದೇ ನಾಯಕ ಇಲ್ಲವೆ ನಾಯಕಿಯ ಬಗ್ಗೆ ನನಗೆ ವಿಶೇಷವಾದ ಯಾವುದೇ ಒಲವಿಲ್ಲ. ಆದರೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿ. ರಾಜಾ, ಸೀತಾರಾಮ್ ಯಚೂರಿ, ಪಿಣರಾಯಿ ವಿಜಯನ್,  ಮಮತಾ ಬ್ಯಾನರ್ಜಿ, ಸ್ಟ್ಯಾಲಿನ್, ಉದ್ಧವ್ ಠಾಕ್ರೆ, ನವೀನ್ ಪಟ್ನಾಯಕ್, ನಿತಿಶ್ ಕುಮಾರ್, ಅರವಿಂದ್ ಕೇಜ್ರಿವಾಲ್… ಯಾರೂ, ಯಾರೂ, ಮೋದಿಯವರ ಹಾಗೆ ಬಡಿವಾರ ಮಾಡುತ್ತ ಸಾರ್ವಜನಿಕ ಭಾಷಣ ಮಾಡುವುದಿಲ್ಲ, ಅವರಷ್ಟು ಸುಳ್ಳು ಹೇಳೋದಿಲ್ಲ ಅನ್ನೋದನ್ನ ಗಮನಿಸಿ.

ಮತ್ತೊಮ್ಮೆ ಕೇಳಿಕೊಳ್ಳೋಣ. ಇದು ಮೋದಿ ಅವರನ್ನು ಕುರಿತು, ಅವರನ್ನು ಬೆಳೆಸಿ, ಅವರಿಗೆ ಬೆಂಬಲವಾಗಿರುವ ಬಿಜೆಪಿ, ಆರ್‍ಎಸ್‍ಎಸ್‍ ಮತ್ತು ಸಂಘ ಪರಿವಾರದ ಉಳಿದವರನ್ನ ಕುರಿತು ಏನು ಹೇಳುತ್ತೆ? ನಮ್ಮನ್ನ ಕುರಿತು ಏನು ಹೇಳುತ್ತೆ?

ಹೆಣ್ಣುಮಕ್ಕಳ ಬಗ್ಗೆ ಸಂಸ್ಕೃತಿಸಂಸ್ಕಾರಹೀನವಾದ ಮಾತು

ಈಗ, ಮೋದಿಯವರು ವಿರೋಧ ಪಕ್ಷಗಳ ನಾಯಕಿಯರಾದ ಮಹಿಳೆಯರ ಬಗ್ಗೆ, ಮತ್ತು ಒಟ್ಟಂದದಲ್ಲಿ ಹೆಣ್ಣುತನದ ಬಗ್ಗೆ,  ಯಾವ ಧೋರಣೆ ತಾಳ್ತಾರೆ ಅನ್ನೋದಕ್ಕೆ ನಿದರ್ಶನವಾಗಿ ಕೆಲವು ವಿಡಿಯೋಗಳನ್ನ ನೋಡೋಣ:

  • ಸೋನಿಯಾ ಗಾಂಧಿ ಅವರನ್ನು ಹೀಯಾಳಿಸಿದ್ದು:
  • ಕಾಂಗ್ರೆಸ್ ಪಕ್ಷವನ್ನು ಸವಾ ಸೌ ಸಾಲ್ ಕೀ ಬುಢಿಯಾ ಅಂತ ಕರೆದದ್ದು
  • ಮಮತಾ ಬ್ಯಾನರ್ಜಿ ಅವರನ್ನು ಹೀಗಳೆದದ್ದು:
  • ಸುನಂದಾ ಪುಷ್ಕರ್ ಅವರನ್ನು ಜರೆದದ್ದು: 

ಮೋದಿಯವರಿಗೆ ಹೆಣ್ಣೆಂದರೆ ಕೇವಲ 

ಎರಡನೇ ಕಂತಾಗಿ ತೋರಿಸಿದ ಈ ವಿಡಿಯೋಗಳಲ್ಲಿ, ಮೋದಿಯವರು ಯಾವುದೇ ವ್ಯಕ್ತಿ, ಯಾವುದೇ ಮಹಿಳೆಯ ಹೆಸರನ್ನ ಹೇಳೋದಿಲ್ಲ.

ಆದರೆ, ದೇಶದ ರಾಜಕೀಯ ಅಲ್ಪಸ್ವಲ್ಪ ಬಲ್ಲವರಿಗೂ ತಿಳಿಯುತ್ತೆ, ಮೋದಿಯವರು ಯಾರನ್ನು, ಯಾವುದನ್ನು ಮನಸ್ಸಿನಲ್ಲಿಟ್ಟುಕೊಂಡು ಹಾಗೆ ಆಡಿದರು ಅಂತ. ಮೋದಿಯವರಿಗೆ ಬೇಕಾಗಿರೋದೂ ಅದೇ!

ಅದೇನೇ ಇದ್ದರೂ, ಆ ವಿಡಿಯೋಗಳನ್ನ ನೋಡಿದವರಿಗೆ, ಹಿಂದೂಸ್ತಾನೀ ಭಾಷೆ ತಕ್ಕಮಟ್ಟಿಗೆ ಬಲ್ಲವರಿಗೂ,   ಮೋದಿಯವರು ಯಾರನ್ನು ಕುರಿತು ಮಾತನಾಡಿದರು ಅನ್ನೋದು ಗೊತ್ತಿಲ್ಲ ಅಂತಲೇ ಇಟ್ಟುಕೊಳ್ಳೋಣ. ಆದರೆ, ಅಂಥವರಿಗೂ ರಾಜಕೀಯ ಧುರೀಣರೊಬ್ಬರು ಹೀಗೆ ಹೆಣ್ಣುಮಕ್ಕಳನ್ನು ಕುರಿತು ಮಾತನಾಡಿದ್ದನ್ನ ಕಂಡು ತೀರ ಕಸಿವಿಸಿ ಆಗಲಿಕ್ಕೇ ಬೇಕು.  ಕಸಿವಿಸಿ ಆಗದಿದ್ದರೆ, ಸಾರ್ವಜನಿಕವಾಗಿ ಹೆಣ್ಣುಮಕ್ಕಳನ್ನು ಕುರಿತು ಈ ರೀತಿ ಮಾತನಾಡುವುದು ಅಸಹ್ಯಕರ, ಅಸಭ್ಯ, ಅನಾಗರಿಕ, ಸಂಸ್ಕಾರ-ಸಂಸ್ಕೃತಿಹೀನ ಅನ್ನಿಸಿದಿದ್ದರೆ, ಹಾಗೆ ಆಗದಿದ್ದವರ ಮತ್ತು ಅನ್ನಿಸದೇ ಇರೋವರ ಸಭ್ಯತೆಯನ್ನೇ ಪ್ರಶ್ನಿಸಬೇಕಾಗುತ್ತೆ.

ಸೋನಿಯಾ ಗಾಂಧಿ ಅವರನ್ನು ಹೀಯಾಳಿಸಿದ್ದು

ಮೊದಲನೇ ವಿಡಿಯೋ 2018ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದ ಜಯಪುರದಲ್ಲಿ ನಡೆದ ಒಂದು ಚುನಾವಣಾ ಸಭೆಯದ್ದು. ಅದರಲ್ಲಿ ಮೋದಿಯವರು ಸೋನಿಯಾ ಗಾಂಧಿಯವರನ್ನು ವಿಧವೆ, ಕಾಂಗ್ರೆಸ್‍ ಕೀ ವಿಧ್ವಾ ಅಂತ ಕರೆದು ಹೇಳತೀರದಷ್ಟು ಅಸಹ್ಯ-ಅನೈತಿಕವಾಗಿ ಹೀಯಾಳಿಸಿದ್ದಾರೆ:

ಅದಕ್ಕೂ ಮೊದಲು, 2004ನೇ ಇಸವಿಯಲ್ಲಿ,  ಬಿಜೆಪಿ ನಾಯಕ ಎಲ್‍. ಕೆ.  ಅಡ್ವಾಣಿಯವರು ತಾವು ದೇಶದ ಉಪ-ಪ್ರಧಾನ ಮಂತ್ರಿಯಾಗಿದ್ದಾಗ ಕೈಗೊಂಡ ಭಾರತ್ ಉದಯ್ ಯಾತ್ರಾದಲ್ಲಿ ಪಾಲ್ಗೊಳ್ತಾ ಮೋದಿಯವರು ಸೋನಿಯಾ ಗಾಂಧಿಯವರನ್ನು ಜರ್ಸಿ ಹಸು ಅಂತ ಕರೆದು ಕೀಳುಗಳೆದಿದ್ದರು.

ಹಿರಿಯ ವಯಸ್ಸಿನ ಹಿರಿಮೆಯನ್ನು ಕೀಳಾಗಿಸಿದ್ದು

ಆಮೇಲೆ ತೋರಿಸಿದ ವಿಡಿಯೋದಲ್ಲಿ, ಕಾಂಗ್ರೆಸ್ ಪಕ್ಷವನ್ನ, ಕೈಲಾಗದ ನೂರಿಪ್ಪತೈದು ವರ್ಷದ ಮುದುಕಿ, ಸವಾ ಸೌ ಸಾಲ್‍ ಕೀ ಬುಢಿಯಾ ಅಂತ ಜರೆದಿದ್ದಾರೆ ಅವರು. 

2009ನೇ ಇಸವಿಯ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯೊಂದರ ವಿಡಿಯೋ ಅದು. ಮೋದಿ ಅವರು, ಕಾಂಗ್ರೆಸ್ ಪಕ್ಷವು ವಯಸ್ಸಾದ ಹೆಂಗಸು ಅಂತ ಹೇಳೋದಕ್ಕೆ ಬುಜು಼ರ್ಗ್ ಮಹಿಳಾ, ಅಥವಾ ಬುಜು಼ರ್ಗ್ ಔರತ್ ಅಂತನ್ನದೇ ಬುಢಿಯಾ ಅಂತಂದಿರೋದನ್ನ ಗಮನಿಸಿ. ಹಿಂದೂಸ್ತಾನಿ-ಉರ್ದು ಭಾಷೆಗಳಲ್ಲಿ ವಯಸ್ಸಾದ ಹೆಂಗಸೊಬ್ಬರನ್ನು ಬುಢಿಯಾ ಅಂತ ಕರೆದರೆ, ಅದು ಕನ್ನಡದಲ್ಲಿ  ಆಕೆಯನ್ನುಏಯ್ ಮುದುಕೀ, ಮುದುಕಮ್ಮಾ, ದರಿದ್ರ ಮುದುಕೀ ಅಂತ ಕರೆದಹಾಗೆ…

ಬೀದಿ ಪುಂಡರ ವರಸೆ

ಅದಾದರನಂತರದ ವಿಡಿಯೋಗಳಲ್ಲಿ, ಮೋದಿಯವರು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನ ದೀದೀ ಓ ದೀದೀ ಅಂತ ಬೀದಿ ಪುಂಡರ ರೀತಿಯಲ್ಲಿ ಮತ್ತೆಮತ್ತೆ ಎತ್ತಿಯೆತ್ತಿ ಆಡ್ತಾ ಅಸಹ್ಯಕರವಾಗಿ ಲೇವಡಿ ಮಾಡಿದ್ದಾರೆ.

ಆ ವಿಡಿಯೋಗಳು 2021ನೇ ಇಸವಿಯವು. ಆಗ ಪಶ್ಚಿಮ ಬಂಗಾಳದ ವಿಧಾನಸಭೆಯ ಚುನಾವಣೆಗಾಗಿ ಪ್ರಚಾರ ನಡೆಯುತ್ತಿತ್ತು. ಆಗ ನಡೆದ ಬೇರೆಬೇರೆ ಸಭೆಗಳ ವೇಳೆ ತೆಗೆದ ವಿಡಿಯೋಗಳು ಅವು.

ಪ್ರೇಮವಲ್ಲ, ಮೋದಿಗೆ ದುಡ್ಡೇ ದೊಡ್ಡಪ್ಪ

ಮತ್ತು, ಅದಾದಮೇಲಿನವು, 2012ನೇ ಇಸವಿಯ ವಿಡಿಯೋಗಳು.

ವಿಡಿಯೋಗಳಲ್ಲಿ ಮೋದಿಯವರು  ಶಶಿ ತರೂರ್ ಅವರ ಗೆಳತಿಯಾಗಿದ್ದು, ಬಳಿಕ ಅವರನ್ನು ಮದುವೆಯಾದ ಸುನಂದಾ ಪುಷ್ಕರ್ ಅವರನ್ನ ತರೂರ್ ಅವರ ಐವತ್ತು ಕೋಟಿ ಗರ್ಲ್ಫ್ರೆಂಡ್, ಪಚಾಸ್ ಕರೋಡ್ ಕೀ ಗರ್ಲ್ಫ್ರೆಂಡ್ ಕರೆದು ಅಂತ ಗೇಲಿ ಮಾಡಿದ್ದಾರೆ:

 ‘ಇದೇನ ಸಭ್ಯತೆ, ಇದೇನ ಸಂಸ್ಕೃತಿ?’

ಮೋದಿಯವರು, ಒಂದೊಂದು ವಿಡಿಯೋದಲ್ಲಿಯೂಕೆಲಕೆಲವು ಸೆಕೆಂಡುಗಳ ಅಂತರದಲ್ಲೇ ಮೂರು ಜನ ಹೆಣ್ಣುಮಕ್ಕಳನ್ನ ತಿರುತಿರುಗಿ ಹಾಗೆಲ್ಲ ಕರೆಯುವುದನ್ನು ಗಮನಿಸಿ. ಯಾವುದೇ ಬೈಗುಳದ ಮಾತನ್ನು ತಿರುತಿರುಗಿ ಹೇಳುವಾಗ ಅವರು ತಮ್ಮ ದನಿಯನ್ನ ರಾಗರಾಗವಾಗಿ  ಬದಲಾಯಿಸುವುದನ್ನ ಗಮನಿಸಿ.   

ಇದೆಲ್ಲ ಯಾವ ಬಗೆಯ ಸಂಸ್ಕೃತಿ, ಯಾವ ಬಗೆಯ ಸಂಸ್ಕಾರವನ್ನ ತೋರಿಸುತ್ತೆ? ಮೋದಿಯವರು, ಅವರ ಪಕ್ಷದವರು ತಮ್ಮ ಬಗ್ಗೆ ಹೇಳಿಕೊಳ್ಳೋದೇನು? ಅವರ ಪಕ್ಷದ ಜೀವಾಳ ಮತ್ತು ನಿಯಂತ್ರಕ ಶಕ್ತಿ ಆಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಅದರ ಅಂಗಸಂಸ್ಥೆಗಳು, ಹಾಗೂ ಅವುಗಳ ಬೆಂಬಲಿಗರು ಹೇಳಿಕೊಳ್ಳೋದೇನು? ತಾವು ಭವ್ಯ ಭಾರತೀಯ ಸಂಸ್ಕೃತಿಯನ್ನ, ಸನಾತನ ಸಂಸ್ಕೃತಿಯನ್ನ ಎತ್ತಿಹಿಡಿಯೋವರು, ರಾಷ್ಟ್ರೀಯ ಸ್ವಯಂಸೇವೆಯ ಶಿಸ್ತು, ಸಂಯಮ, ಸಭ್ಯತೆಯ ಮೌಲ್ಯಗಳನ್ನ ಎತ್ತಿಹಿಡಿಯುವವರು ಅಂತ ತಾನೆ?

ಆದರೆ ರಾಷ್ಟ್ರೀಯ ಸ್ವಯಂಸೇವೆಯ ಸಂಸ್ಕೃತಿ, ವಿಶ್ವಗುರುವಿನ ಸಂಸ್ಕೃತಿ ಅಂದರೆ ಹೆಣ್ಣುಮಕ್ಕಳನ್ನು ಹೀಗೆ ಮೋದಿಯವರು ಕರೆದ ಹಾಗೆ ಕರೆಯೋದೇ ಹೌದೇ, ದಯವಿಟ್ಟು ಯೋಚನೆಮಾಡಿ.

ಅಂದಿನಿಂದಲೂ ಮೋದಿ ಹೀಗೇ

ಇನ್ನು, ಇದೆಲ್ಲವುದಕ್ಕೂ ಮೊದಲು ಕೂಡ, ಮೋದಿ ಅವರ ಮಾತಿನ ವೈಖರಿ ಹೇಗಿತ್ತು, ಕೇಳಿಸಿಕೊಳ್ಳೋಣ.

ಅದು 2002ನೇ ಇಸವಿ. ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದರು. 2002, ಫೆಬ್ರವರಿ 27ನೇ ತಾರೀಖಿನಂದು ಗುಜರಾತಿನ ಗೋಧ್ರಾ ರೈಲ್ವೇ ನಿಲ್ದಾಣದ ಬಳಿ, ರೈಲು ಬೋಗಿಗಳಿಗೆ ಬಿದ್ದ ಬೆಂಕಿಯಲ್ಲಿ 59 ಜನ ರಾಮಜನ್ಮಭೂಮಿ ಕರಸೇವಕರು ಸುಟ್ಟುಹೋದರು.  

ಅದಕ್ಕೆ ಪ್ರತಿಕಾರ ಅನ್ನೋ ಹಾಗೆ ಗುಜರಾತಿನಲ್ಲಿ ಒಂದು ತಿಂಗಳ ಕಾಲ ದೊಡ್ಡ ಹಿಂಸಾಚಾರ ನಡೆದು, ಸಾವಿರಾರು ಮುಸಲ್ಮಾನರ ನರಮೇಧವಾಯಿತು. ಆ ನರಮೇಧದ ಕಳಂಕ ಮೋದಿ ಅವರ ಹೆಸರಿಗೆ ಎಂದೆಂದಿಗೂ ಅಂಟಿಕೊಂಡಿರುತ್ತೆ.

ಆಮೇಲೆ, ಅದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಗುಜರಾತಿನ ರಾಜಧಾನಿ ಗಾಂಧಿನಗರದ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನದ ಮೇಲೆ ಇಸ್ಲಾಮೀಯ ಆತಂಕವಾದಿಗಳ ದಾಳಿಯಾಗಿ 33 ಜನ ಸತ್ತರು, 80 ಜನರು ಗಾಯಗೊಂಡರು.

ಅದಾದ ಎರಡೇ ತಿಂಗಳಿಗೆ ಮೋದಿಯವರು ವಿಧಾನಸಭೆಯನ್ನ ವಿಸರ್ಜಿಸಿ, ಮಧ್ಯಂತರ ಚುನಾವಣೆಗೆ ಕರೆನೀಡಿದರು. ಅಂದಿನ ಪ್ರಚಾರದ ವೇಳೆ ಅವರು ಆಡುತ್ತಿದ್ದ ಮಾತಿನ ಧ್ವನಿಮುದ್ರಣ ಇರುವ ವಿಡಿಯೋ ಇದು:

ನಮ್ಮ ದೇಶದ  ಮುಸಲ್ಮಾನರನ್ನು ಮಿಂಯಾ ಮುಷರ್ರಫ್ ಎಂದು ಲೇವಡಿ ಮಾಡಿದ್ದು: 

ಓಟಿನ ಬೇಟೆ, ಮತಭ್ರಾಂತಿಯ ಹೆಂಡ, ಮುಸಲ್ಮಾನರ ಬಲಿ

ಆ ವಿಡಿಯೋದಲ್ಲಿ, ಮೋದಿಯವರು ‘ಭಾರತಕ್ಕೆ ಆತಂಕವಾದಿಗಳನ್ನು ಕಳಿಸಿ ದಾಳಿ ಮಾಡಬೇಡಿ’ ಅಂತ ಆಗ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಪರ್ವೇಜ಼್ ಮುಷರ್ರಫ್ ಅವರಿಗೆ ಕಟುವಾದ ಎಚ್ಚರಿಕೆ ನೀಡ್ತಿದ್ದಾರೆ ಅಂತ ಭಾಸವಾಗುತ್ತೆ. ಆದರೆ ಅವರು ಹಾಗೆ ಮಾಡ್ತಿದ್ದಾರೆ ಅಂತ ಅನ್ನಿಸೋದು ಮೇಲುನೋಟಕ್ಕೆ ಮಾತ್ರ.

ಅವರ ಆ ಮಾತು ನಿಜವಾಗಲೂ ಬೊಟ್ಟು ಮಾಡ್ತಿರೋದು ನಮ್ಮ ದೇಶದ ಮುಸಲ್ಮಾನರ ಕಡೆಗೆ.

ನಿಜವಾಗಿ ನೋಡಿದರೆ, ಮಿಂಯಾ ಒಳ್ಳೆಯ ಅರ್ಥವಿರುವ ಪದ.   ಇಂಗ್ಲಿಶಿನ ಸರ್, ಕನ್ನಡದ ಸ್ವಾಮೀ ಅನ್ನುವುದಕ್ಕೆ ಸಮನಾದ ಮರ್ಯಾದೆಯ ಸಂಬೋಧನ  ಪದ ಅದು.

ಆದರೆ, ಕಳೆದ ಹಲವು ದಶಕಗಳಿಂದ ಅದು ಉತ್ತರ ಭಾರತದಲ್ಲಿ ಬೇರೊಂದು ರೀತಿಯಲ್ಲಿ ಬಳಕೆಯಲ್ಲಿದೆ: ಮುಸಲ್ಮಾನರನ್ನು ಬೇರೆ ಎಲ್ಲ ಮತಧರ್ಮಗಳವರಿಂದ ತುಸು ತಿರಸ್ಕಾರದೊಂದಿಗೆ ಬೇರೆ ಮಾಡಿ ಸೂಚಿಸೋದಕ್ಕೆ ಕೂಡ ಬಳಕೆಯಾಗ್ತಿದೆ ಆ ಮಾತು: ಮಿಂಯಾ ಲೋಗ್ ಅಂತಾರೆ ಅಲ್ಲಿ.  ದಕ್ಷಿಣ ಕರ್ನಾಟಕದಲ್ಲಿ ಕನ್ನಡದಲ್ಲಿ ಬಳಕೆಯಾಗುತ್ತ ಬಂದಿರುವ ಸಾಬಿ, ಸಾಬಿಗಳು ಅನ್ನೋ ಸಂಬೋಧನದ ಹಾಗೆ ಅದು. 

ಹಾಗಾಗಿಯೇ, ಈ ವಿಡಿಯೋದಲ್ಲಿ ಮೋದಿಯವರು ಮಿಂಯಾ ಅಂತ ಕರೀತಾ ಬೊಟ್ಟು ಮಾಡ್ತಿರೋದು ಬರೀ ಪರ್ವೇಜ಼್ ಮುಷರ್ರಫ್ ಅವರ ಕಡೆಗಲ್ಲ. ಅವರು ಬೊಟ್ಟುಮಾಡ್ತೀರೋದು ನಮ್ಮ ದೇಶದ ಒಟ್ಟು ಮುಸಲ್ಮಾನ ಜನರ ಕಡೆಗೆ, ಅದರಲ್ಲೂ, ಅಂದಿನ ಸಂದರ್ಭದಲ್ಲಿ ಗುಜರಾತಿನ ಮುಸಲ್ಮಾನ ಕಡೆಗೆ.

ಅವರು ಆ ಪದವನ್ನು ಮತ್ತೆಮತ್ತೆ ಹೇಳ್ತಾ, ತಿರಸ್ಕಾರ-ವ್ಯಂಗ್ಯಗಳಿಂದ ಒತ್ತಿ ಹೇಳುವುದನ್ನು ಗಮನಿಸಿ.

ಹಾಗೆ ಮಾಡ್ತಾ, ಅವರು ನಮ್ಮ ದೇಶದ ಹಿಂದೂ ಮತಧರ್ಮೀಯರನ್ನ ಮುಸಲ್ಮಾನರ ವಿರುದ್ಧ ಎತ್ತಿಕಟ್ತಿದ್ದಾರೆ: ವೋಟಿಗಾಗಿ; ಅಧಿಕಾರಕ್ಕಾಗಿ; ಸಂಘ ಪರಿವಾರದ ಒಟ್ಟು ಗುರಿಯಾದ ಫ್ಯಾಶಿಸ್ಟ್ ಹಿಂದೂ ರಾಷ್ಟ್ರನಿರ್ಮಾಣದ ಕಡೆಗಿನ ಒಂದು ಹುನ್ನಾರವಾಗಿ.

ಅವರ ಆ ಮಾತುಗಳೆಲ್ಲ ಮುಸಲ್ಮಾನರನ್ನು ಕುರಿತವೇ ಹೊರತು, ಅವರನ್ನು ಉದ್ದೇಶಿಸಿರುವಂಥವಲ್ಲ.

ಅವರ ಮಾತುಗಳು ಉದ್ದೇಶಿಸಿರೋದು, ಹಿಂದೂಮತಭ್ರಾಂತಿ ಹತ್ತಿದವರನ್ನು; 

ಮತ್ತು, ಆ ಹಿಂದೂಮತಭ್ರಾಂತಿ  ಇನ್ನೂ ಹತ್ತದೇ ಇರುವವರಿಗೆ ಆ ದ್ವೇಷ-ವಿಷದ ಹೆಂಡ ಕುಡಿಸಿ ಆ ಭ್ರಾಂತಿ ಹತ್ತಿಸೋದಕ್ಕೆ ಅಂತ.

ಮೋದಿಯವರು, ಅವರ ಪಕ್ಷದವರು, ಹಾಗೂ ಸಂಘ ಪರಿವಾರದವರು ಹೀಗೆ ಮಾಡಿರೋದು ಒಂದೆರಡು ಸಲ ಅಲ್ಲ; ಎಣಿಕೆ ಸಿಕ್ಕದಷ್ಟು ಸಲ ಹೀಗೆ ಮಾಡಿದ್ದಾರೆ ಅವರು; ಪಟ್ಟಿ ಮಾಡಿ ಓದಿ, ವಿವರಿಸಿ ಮುಗಿಸೋಕೆ ಸಾಧ್ಯವೇ ಆಗದಷ್ಟು ಸಲ ಮಾಡಿದ್ದಾರೆ, ಮಾಡ್ತಾನೇ ಇದ್ದಾರೆ.

ಮೋದಿ ಬೆಂಬಲಿಗರ ಸಬೂಬು

ಮೋದಿಯವರನ್ನ ಸಮರ್ಥಿಸಿಕೊಳ್ಳೋದಕ್ಕೆ ಅವರ ಬೆಂಬಲಿಗರು, ಅವರಿಗೆ ಮರುಳಾದವರು, ಅವರ ಈ ಥರದ ಮಾತು ಮತ್ತು ನಡವಳಿಕೆಗೆ ಕೆಲವು ಕಾರಣಗಳನ್ನು ಮುಂದಿಡಬಹುದು.

ಒಂದು: ಇದೆಲ್ಲ ಅಧಿಕಾರ ಹಿಡಿಯೋದಕ್ಕಾಗಿ ಆಡೋ ಮಾತು, ಹೂಡೋ ಹೂಟ ಅಷ್ಟೆ.  ಬೇರೆ ಪಕ್ಷದವರೂ ಇಂಥದನ್ನ ಮಾಡ್ತಾರೆ, ಮಾಡ್ತಾ ಬಂದಿದ್ದಾರೆ ಅನ್ನೋದು.

ಹೌದಾ?  ಬೇರೆ ಪ್ರಮುಖ ಪಕ್ಷಗಳಾಗಲಿ, ಅವುಗಳ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರಾಗಲಿ ಹೀಗೆ ನಿರಂತರವಾಗಿ ಜನರ ಮನಸ್ಸಿನಲ್ಲಿ ದ್ವೇಷ ತುಂಬಿ ಜನರ ನಡುವೆಯೇ ಒಡಕು ಉಂಟು ಮಾಡಿದ್ದು ಇದೆಯೇ?

ನಮ್ಮ ದೇಶದ ಬೇರೆ ಯಾವ ಪ್ರಧಾನಿಯೂ ಮೋದಿಯವರ ಹಾಗೆ, ಇಷ್ಟು ತಣ್ಣಗೆ ಲೆಕ್ಕಹಾಕಿ, ತಯಾರಿಮಾಡಿಕೊಂಡು ಈತರಹದ ವಿಷಯಗಳಲ್ಲಿ ಸುಳ್ಳನ್ನು ಹೇಳಿದ್ದಿದೆಯೇ, ದೇಶದ ಪ್ರಜೆಗಳ, ಸಾರ್ವಜನಿಕ ಮನಸ್ಸಿನಲ್ಲಿ ದ್ವೇಷ ತುಂಬುವ ಪ್ರಯತ್ನ ಮಾಡಿದ್ದಿದೆಯೇ, ಇಷ್ಟು ಕೆಟ್ಟ ನುಡಿ ಆಡಿದ್ದಿದೆಯೇ, ದಯವಿಟ್ಟು ಯೋಚಿಸಿ. ಅವರು ಯಾರೂ ಹಾಗೆ ಮಾಡಲಿಲ್ಲ.

ನೆಹರೂ, ಅಂಬೇಡ್ಕರ್ ದಾರಿಯೇ ಬೇರೆ

ಯಾಕೆ ಅಂದರೆ, ಇಂತಹ ಸಾರ್ವಜನಿಕ ವಿಷಯಗಳಲ್ಲಿ ಅವರಿಗೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಮಾದರಿ ಆಗಿದ್ದದ್ದು ಭಾರತದ ಮೊತ್ತಮೊದಲ ಪ್ರಧಾನಿ ನೆಹರೂ ಅವರು ತೋರಿದ ಸದ್ವರ್ತನೆ; ಅವರ ಒಳ್ಳೆಯ ನಡೆ ಮತ್ತು ನುಡಿ. 

ಅಲ್ಲದೆ, ಅವರಿಗೆ ಮಾದರಿಯಾಗಿದ್ದದ್ದು ಭಾರತದ ಸಂವಿಧಾನದ ಅತಿಮುಖ್ಯಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ: ಎಂತಹ ಬೇಗುದಿಯ ಪರಿಸ್ಥಿತಿಯಲ್ಲೂ ಬಾಬಾ ಸಾಹೇಬರು ತೋರಿದ ಸದ್ವರ್ತನೆ; ಅವರ ನಡೆ ಮತ್ತು ನುಡಿ.

ನೆಹರೂ-ಅಂಬೇಡ್ಕರ್ ಅವರ ನಡೆನುಡಿಗೂ ಮೋದಿ ಅವರ ನಡೆನುಡಿಗೂ ನಡುವೆ ಇರುವ ವ್ಯತ್ಯಾಸವನ್ನ ನೋಡಿ!

ಲೆಕ್ಕಿಸಿ ಆಡೋ ಮಾತು, ಟೆಲಿಪ್ರಾಂಪ್ಟರ್

ಇನ್ನು ಮೋದಿಯವರ ಸಮರ್ಥನೆಗೋಸ್ಕರ ಅವರ ಬೆಂಬಲಿಗರು ಮುಂದಿಡಬಹುದಾದ ಎರಡನೇ ಕಾರಣ: ಇದೆಲ್ಲಾ ಪ್ರಚಾರದ ರಭಸದಲ್ಲಿ ಬಾಯಿತಪ್ಪಿ ಬರೋ ಮಾತುಗಳು, ಅಷ್ಟೆ;  ಇಂಥ ಮಾತನ್ನ ಗಂಭೀರವಾಗಿ ತೊಗೋಬಾರದು. ಅವರ ಮನಸ್ಸಿನಲ್ಲಿ ಕೆಟ್ಟ ಉದ್ದೇಶ ಇರೋದಿಲ್ಲ; ಯಾವುದೇ ಲೆಕ್ಕಾಚಾರ ಇರೋದಿಲ್ಲ ಅನ್ನೋದು. ಅದು ಹೌದಾ, ವಿಚಾರ ಮಾಡೋಣ.

ಮೋದಿಯವರು ಲೆಕ್ಕಾಚಾರದಿಂದ ಅಲ್ಲದೇ, ವಿಚಾರಮಾಡದೆ ಯಾವ ಸಾರ್ವಜನಿಕ ಭಾಷಣವನ್ನೂ ಮಾಡುವುದಿಲ್ಲ.   ತಾವು ಪ್ರಧಾನ ಮಂತ್ರಿ ಹುದ್ದೆಗೆ ಬಂದಮೇಲಂತೂ ಅವರು Teleprompter ಅನ್ನೋ ಕಂಪ್ಯೂಟರ್ ಸಾಧನವನ್ನು ಬಳಸ್ತಾ ಬಂದಿದ್ದಾರೆ.

ಟೆಲಿಪ್ರಾಂಪ್ಟರೊಂದಿಗೆ ಮೋದಿ ಅವರು:

ಮೋದಿ ಅವರು ಮಾಡ್ತಿರೋ ಯಾವುದೇ ಭಾಷಣದ ಒಕ್ಕಣೆ ಅವರ ಕಣ್ಣೆದುರಿಗಿರುವ ಆ ಪರದೆಗಳ ಮೇಲೆ ಅವರ ಅನುಕೂಲಕ್ಕೆ ತಕ್ಕಂತೆ ಮೂಡಿ. ಹಾದು ಹೋಗ್ತಿರುತ್ತೆ. ಕೆಲವು ವರದಿಗಳ ಪ್ರಕಾರ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗಲೂ ಟೆಲಿಪ್ರಾಂಪ್ಟರ್ ಬಳಸ್ತಿದ್ದರು.

ತಾತ್ಪರ್ಯ ಇಷ್ಟೆ: ಮೋದಿ ಅವರು ಮೊದಲೇ ತಯಾರಿ ಮಾಡಿಕೊಳ್ಳದೇ, ತಾಲೀಮು, ರಿಹರ್ಸಲ್ ನಡೆಸದೆ ಮುಖ್ಯವಾದ ಯಾವ ಭಾಷಣವನ್ನೂ ಮಾಡುವುದಿಲ್ಲ. ಮೋದಿಯವರು ಆಡುವ ದ್ವೇಷದ ಮಾತು, ಸತ್ಯದ ತಲೆಯಮೇಲೆ ಹೊಡೆದು ಅದನ್ನು ತಿರುಚಿ ಜನರಿಗೆ ಉಣಬಡಿಸೋ ಅವರ ಸುಳ್ಳು ಮತ್ತು ಅರ್ಧಸತ್ಯದ ಮಾತೆಲ್ಲ ತಣ್ಣಗಿನ ಲೆಕ್ಕಾಚಾರದಿಂದ ಬಂದದ್ದು; ಕೇಡನ್ನು ಸಾಕಿ, ಕೇಡನ್ನು ಬೆಳಸೋ ಉದ್ದೇಶ ಇರುವಂಥದು. 

ಇದೇ, ಇದೇ ಫ್ಯಾಶಿಸಮ್ನ ಕುಣಿತ

ತಮ್ಮ ಅತ್ಯುನ್ನತ ನಾಯಕ ಹೀಗೆ ಮಾಡ್ತಿರೋದರಿಂದಲೇ, ಅವರ ಪಕ್ಷದ ಉಳಿದವರೂ, ಸಂಘ ಪರಿವಾರದ ವಕ್ತಾರರೂ, ಅವರ ಬೆಂಬಲಿಗರೂ ಹೀಗೆ ಆಡ್ತಾರೆ, ಹತ್ತು ಹೆಜ್ಜೆ ಮುಂದೆ ಹೋಗಿ ಇನ್ನೂ ಕೆಟ್ಟ ನಡೆವಳಿಕೆ ತೋರ್ತಾರೆ. 

 ಹಾಗೇನೇ, ಸಂಘ ಪರಿವಾರದ ಭಾಗವಾಗಿರೋ ನಕಲಿ ಸ್ವಾಮೀಜಿಗಳು ಮತ್ತು ಸಾಧ್ವಿಗಳು ಧರ್ಮಸಂಸತ್‍ ಗಳನ್ನು ನಡೆಸುವ ನೆಪದಲ್ಲಿ ಅಸತ್ಯ, ಅಧರ್ಮ, ಮತ್ತು ಅನೃತಗಳನ್ನೇ ಎತ್ತಿಹಿಡೀತಾರೆ; ಮೋದಿ ಅವರಿಗಿಂತ ನೂರು ಹೆಜ್ಜೆ ಮುಂದೆ  ಹೋಗಿ ಭಯಾನಕವಾಗಿ ಮಾತಾಡ್ತಾರೆ, ಭಯಾನಕ ನಡವಳಿಕೆ ತೋರ್ತಾರೆ.

ಫ್ಯಾಶಿಸ್ಟ್ ನುಡಿಗಟ್ಟು, ಫ್ಯಾಶಿಸ್ಟ್ ಮನೋಧರ್ಮ, ಫ್ಯಾಶಿಸಮ್‍ನ ಪೈಶಾಚಿಕ ಕುಣಿತ ಅನ್ನೋದು ಇದನ್ನೇ.

ಸತ್ಯ, ಋತ, ಧರ್ಮದ ವೈರಿಗಳು

ಹೀಗೆ ಜನರಲ್ಲಿ ಮತ್ತೊಬ್ಬರ ಬಗ್ಗೆ ದ್ವೇಷ, ವಿಷವನ್ನ ತುಂಬೋ ವ್ಯಕ್ತಿಯನ್ನ ನಾವು ಒಬ್ಬ ಮುತ್ಸದ್ದಿ ಅಂತ ತಿಳಿಯಬಹುದೇ? ಅವರ ಪಕ್ಷ, ಸಂಘಟನೆ ಮತ್ತು ತತ್ತ್ವಗಳ ನಡವಳಿಕೆಯಲ್ಲಿ ಸತ್ಯ, ಧರ್ಮ, ನ್ಯಾಯವಂತಿಕೆಗಳಿವೆ ಅಂತ ತಿಳಿಯಬಹುದೇ? ಅಥವಾ, ತಿಳಿಯಬಾರದೇ?

ಆದ್ದರಿಂದಲೇ ಹೇಳಬೇಕಿದೆ:  ನಮ್ಮ ಈ ದೇಶದ ಮಟ್ಟಿಗೆ, ನಿಜವಾದ ಲೋಕಕಲ್ಯಾಣದ ಸಂಸ್ಕೃತಿ, ಸಂಸ್ಕಾರ, ಸತ್ಯ, ಋತ, ಧರ್ಮಗಳ ಅತಿ ಅತಿದೊಡ್ಡ ಶತ್ರು ಅಂದರೆ ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷದ ತತ್ತ್ವ, ಅದರ ಮತ ಮತ್ತು ನಡವಳಿಕೇನೇ.

ಇನ್ನು ಅವರ ಕಣ್ಮಣಿ, ಅವರ ನಾಯಕ ಯಾರು? ಸತ್ಯ, ಋತ, ಧರ್ಮಗಳ ವೈರಿ ಯಾರು?  ನರೇಂದ್ರ ಮೋದಿ ಅವರು.

ಜ್ಯೋತಿರ್ಲಿಂಗ, ಶಿವ, ದಮ್ಮಚಕ್ರದ ಶತ್ರುಗಳು
ಮಾತೆಂಬುದು ಜ್ಯೋತಿರ್ಲಿಂಗ ಅನ್ನೋದಾದರೆ,
ಸತ್ಯ ಎಂಬುದು ಶಿವ, ದೇವರು, ಬುದ್ಧ ಅನ್ನೋದಾದರೆ,
ನಮ್ಮ ದೇಶದ ಬಾವುಟದಲ್ಲಿ, ನಮ್ಮ ಲಾಂಛನದಲ್ಲಿ ಇರೋದು ಬುದ್ಧನ ದಮ್ಮಚಕ್ರ ಅನ್ನುವುದಾದರೆ,
ಆ ಜ್ಯೋತಿರ್ಲಿಂಗ, ಆ ಶಿವ, ಬುದ್ಧ, ದಮ್ಮಚಕ್ರದ ಮೊತ್ತಮೊದಲ ಮತ್ತು ಅತಿದೊಡ್ಡ ಶತ್ರುಗಳು
ಮೋದಿಯವರು, ಅವರ ಪಕ್ಷ, ಮತ್ತು ಅವರ ಹಿಂದೆಯಿರುವ ಸಂಘ ಪರಿವಾರ.
ಸತ್ಯಂ ಶಿವಂ ಸುಂದರಂ ಅನ್ನುವುದರ ಮೊತ್ತಮೊದಲ ಮತ್ತು ಅತಿದೊಡ್ಡ ಶತ್ರುಗಳು ಯಾರು ಅಂದರೆ
ಮೋದಿಯವರು, ಅವರ ಪಕ್ಷ, ಮತ್ತು ಅವರ ಹಿಂದೆಯಿರುವ ಸಂಘ ಪರಿವಾರ.

ಮಾತಾಡು, ಮಾತಾಡು ಲಿಂಗವೇ

ಕೊನೆಯದಾಗಿ, ಒಬ್ಬ ಲೇಖಕ, ರಂಗನಿರ್ದೇಶ ಮತ್ತು ಅಧ್ಯಾಪಕನಾಗಿ ನನಗೆ ತುಂಬ ಅಚ್ಚರಿ ಮತ್ತು ದುಃಖ ಉಂಟುಮಾಡೋ ವಿಷಯ ಹೇಳ್ತೀನಿ.

ಮಾತು ಅನ್ನೋ ಆ ಜ್ಯೋತಿರ್ಲಿಂಗದ ಮಹತ್ತ್ವದ ಅರಿವು ಇರುವ, ಇರಬೇಕಾದ ನಮ್ಮ ಲೇಖಕರು, ಅಧ್ಯಾಪಕ-ಅಧ್ಯಾಪಿಕೆಯರು,  ಪತ್ರಕರ್ತರು, ಪತ್ರಕರ್ತೆಯರಲ್ಲಿ ಹಲವು ಕೆಲವರು ಈ ಇಷ್ಟು ಹೊತ್ತೂ ವಿವರಿಸಿದ ಸುಳ್ಳಾಟದ ಸಮರ್ಥಕರಾಗಿರೋದು;

ಅಥವಾ ಅದರ ವಿಷಯದಲ್ಲಿ ಜಾಣಕುರುಡು, ಕಿವುಡು, ಮತ್ತು ಮೂಕತನ  ತಾಳಿರೋದು;

ತಮ್ಮ ಅಸ್ತಿತ್ವದ ನಿಜ ಅಸ್ತಿವಾರ ಆಗಿರುವ, ಆಗಬೇಕಾಗಿರುವ ಆ ಜ್ಯೋತಿರ್ಲಿಂಗಕ್ಕೆ ದ್ರೋಹ ಮಾಡ್ತಿರೋದು.

ಅಚ್ಚರಿ, ದುಃಖ — ಅದರಿಂದ.
ತರವಲ್ಲ ತಗೀ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು, ತಂಬೂರಿ

ಪೋಸ್ಟ್ ಹಂಚಿಕೊಳ್ಳಿ:

ರಘುನಂದನ
ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...