ಚರಿತ್ರೆಯಲ್ಲಿ ದಾಖಲೆ ಬರೆದ ಶೋಷಿತರ ಚಳವಳಿಗಳು

Date:

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಧನವಾಗಿ ಸುಮಾರು 17 ವರ್ಷಗಳ ನಂತರ ಅವರು ಬಿಟ್ಟು ಹೋದ ಹೋರಾಟದ ರಥವನ್ನು ದಲಿತ ಯುವ ಬರಹಗಾರರು ಎಳೆಯಲು ಆರಂಭಿಸಿದರು. ಮೂಲತಃ ದಲಿತ ಪ್ಯಾಂಥರ್ಸ್ ಸಂಘಟನೆಯ ಹೋರಾಟದ ಸ್ಪೂರ್ತಿಗೆ ಡಾ. ಅಂಬೇಡ್ಕರ್ ಅವರು ಮಾಡಿದ ಹೋರಾಟಗಳು ಆಧಾರವಾದವು

ಎಪ್ಪತ್ತರ ದಶಕದಲ್ಲಿ ಭಾರತ ಮಾತ್ರವಲ್ಲ ಅಮೆರಿಕ, ಫ್ರಾನ್ಸ್, ವಿಯೆಟ್ನಾಂ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಮಾನವ ಹಕ್ಕುಗಳು, ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆದಿವೆ. ಈ ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಭಾರತದಲ್ಲೂ, ಭೂಮಾಲೀಕರ ಶೋಷಣೆ ವಿರುದ್ಧ ನಕ್ಸಲೀಯರು, ದಲಿತರ, ರೈತರ, ಕೃಷಿ ಕಾರ್ಮಿಕರ ಹಿತಾಸಕ್ತಿಗಾಗಿ ಸಮಾಜವಾದಿ ಚಳವಳಿಗಳು ನಡೆದ ಕಾಲವದು.

ಅಮೆರಿಕದಲ್ಲಿ ವರ್ಣ ಬೇಧದ ವಿರುದ್ಧ ಅಲ್ಲಿನ ಬ್ಲ್ಯಾಕ್ ಪ್ಯಾಂಥರ್ಸ್ (ನೀಗ್ರೋಗಳು) ಹೋರಾಟ ನಡೆಸಿತ್ತು. ಅಲ್ಲಿ ಹುಟ್ಟು ಮತ್ತು ಬಣ್ಣದ ಆಧಾರದ ಮೇಲೆ ಮನುಷ್ಯ ಮನುಷ್ಯನ ನಡುವೆ ತಾರತಮ್ಯ ಎನ್ನುವುದು ಮನುಷ್ಯತ್ವವನ್ನೇ ನಾಚಿಸುವಂತೆ ಸಾಮಾಜಿಕ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಆ ದಿನಗಳಲ್ಲಿ ಕರಿಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದು ಮಾನವ ಹಕ್ಕುಗಳನ್ನೇ ದಮನ ಮಾಡಲಾಗಿತ್ತು.

ಅಮೆರಿಕದಲ್ಲಿ ಇಂತಹ ವ್ಯವಸ್ಥೆಯ ವಿರುದ್ಧ ಹುಟ್ಟಿದ್ದೇ ಬ್ಲ್ಯಾಕ್ ಪ್ಯಾಂಥರ್ಸ್ ಚಳವಳಿ. ಇದರ ಪ್ರಭಾವದಿಂದಲೇ ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ಚಳವಳಿ ಹುಟ್ಟಿಕೊಂಡಿತು. ದಲಿತ ಪ್ಯಾಂರ್ಸ್ ಚಳವಳಿಯ ಪ್ರಭಾವವು ಕರ್ನಾಟಕದ ದಲಿತ ಚಳವಳಿ ಮೇಲೆ ಆಯಿತೆನ್ನುವುದು ಅಷ್ಟೇ ಸತ್ಯ. ದಲಿತ ಪ್ಯಾಂಥರ್ಸ್ ಮತ್ತು ದಲಿತ ಸಂಘರ್ಷ ಸಮಿತಿ ಅರ್ಥಾತ್ ಕರ್ನಾಟಕದ ದಲಿತ ಚಳವಳಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಸ್ಫೂರ್ತಿಯ ಜೊತೆ ಜೊತೆಗೆ ಅವರ ಹೋರಾಟದ ಎಲ್ಲೆಯನ್ನೂ ಮೀರಿ ಇತರೆ ಚಳವಳಿಗಳತ್ತವೂ ಕಣ್ಣು ಹಾಯಿಸುವುದು ಆ ದಿನಗಳ ಅನಿವಾರ್ಯವಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಮೂರು ಶೋಷಿತ ಸಮುದಾಯದ ಚಳವಳಿಗಳ ಉದ್ದೇಶ ಒಂದೇ. ಅದು ಸಮಾನತೆ, ಮಾನವೀಯತೆ ಮತ್ತು ಸಹೋದರತೆಗಾಗಿ ನಡೆದ ತುಡಿತ. ಜಗತ್ತಿನಲ್ಲಿ ದಮನಿತರ ದನಿಯಾಗಿ ಹೋರಾಡಿದ ಒಂದಕ್ಕೊಂದು ಸಾಮ್ಯತೆ ಹೊಂದಿರುವ ಈ ಮೂರು ಐತಿಹಾಸಿಕ ಸಂಘಟಿತವಾಗಿ ನಡೆದ ಸಾಮಾಜಿಕ ಚಳುವಳಿಗಳ ಹೆಜ್ಜೆಗಳು ಮತ್ತು ಅವುಗಳ ಸೋಲು ಗೆಲುವುಗಳ ಒಂದು ಪುನರಾವಲೋಕನ ಹೊಸದನ್ನು ಹುಡುಕುವ ಈ ದಿನಗಳಲ್ಲಿ ಅವಶ್ಯ

ಅಮೆರಿಕದಲ್ಲಿನ ವರ್ಣ ಬೇಧ ನೀತಿ ಮತ್ತು ಕರಿಯರ ಮೇಲಿನ ಪೊಲೀಸ್ ದಮನಕಾರಿ ಚರಿತ್ರೆಯನ್ನು ನೋಡಿದಾಗ ಬ್ಲ್ಯಾಕ್ ಪ್ಯಾಂಥರ್ಸ್ ಪಾರ್ಟಿಯ ಹುಟ್ಟು ಕೂಡ ಅನಿವಾರ್ಯವಾಗಿತ್ತು. ಬ್ಲ್ಯಾಕ್‌ ಪ್ಯಾಂಥರ್ ಎಂದರೆ ಕಪ್ಪು ಚಿರತೆ. ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಅಮೆರಿಕದಲ್ಲಿ ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಯುತ್ತಿದ್ದ ಕಾಲವದು. ಈ ಹೋರಾಟದಲ್ಲಿ ಭಾಗವಹಿಸಿದ್ದ ಕರಿಯರನ್ನು (ನೀಗ್ರೋ) ಅವರು ವಾಸಿಸುತ್ತಿದ್ದ ಜಾಗಗಳಿಗೆ (ಗೆಟ್ಟೋ) ಪೊಲೀಸರು ದಾಳಿ ಮಾಡಿ ಅಮಾನವೀಯವಾಗಿ ಹಿಂಸಿಸುತ್ತಿದ್ದರು. ಈ ಅವಮಾನ ಮತ್ತು ದೌರ್ಜನ್ಯವನ್ನು ಕಣ್ಣಾರೆ ಕಂಡು ಓಕ್ಲಾ್ಯಂಡಿನ ಇಬ್ಬರು ಯುವಕರಾದ ಬಾಬ್ಬಿ ಸಿಯಲ್ ಮತ್ತು ಹ್ಯೂ ಪಿ. ನ್ಯೂಟನ್ 1966ರಲ್ಲಿ ಸ್ವಯಂ ರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಬ್ಲಾಕ್ ಪ್ಯಾಂಥರ್ಸ್ ಪಾರ್ಟಿ ಎನ್ನುವ ಹೆಸರಿನಲ್ಲಿ ಸಂಘಟನೆ ಕಟ್ಟಿ ತನ್ನ ಜನರ ವಿಮೋಚನೆಗಾಗಿ ನಿಂತರು. ಕರಿಯರು ವಾಸಿಸುವ ಕೊಳೆಗೇರಿಗಳಲ್ಲಿ ಬಿಳಿಯರು ಮತ್ತು ಪೊಲೀಸರು ನಡೆಸುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯ ವಿರುದ್ಧ ಈ ಯುವಕರು ತನ್ನ ಜನರನ್ನು ಹೋರಾಟಕ್ಕೆ ಅಣಿಗೊಳಿಸಿದರು. ಈ ಹೋರಾಟ ಎಪ್ಪತ್ತರ ದಶಕದಲ್ಲಿ ಅಮೆರಿಕದ ಹಲವು ನಗರಗಳಿಗೆ ಹಬ್ಬಿತು.. ದಿನ ಕಳೆದಂತೆ ಕಪ್ಪು ಜನರ ಹೋರಾಟ ಅಮೆರಿಕದ ಆಡಳಿತ ವ್ಯವಸ್ಥೆಗೆ ಸವಾಲಾಗಿ ನಿಂತಿತು. ಇದೇ ಬಗೆಯ ಹೋರಾಟ ದಕ್ಷಿಣ ಆಫ್ರಿಕಾದಲ್ಲೂ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಹೆಸರಿನಲ್ಲಿ ನೆಲ್ಸನ್ ಮಂಡೇಲಾ ಅವರ ನೇತೃತ್ವದಲ್ಲಿ ನಡೆಯಿತು. ಈ ಹೋರಾಟದಿಂದ ಮಂಡೇಲಾ ಅವರು ಮೂರು ದಶಕಗಳಕಾಲ ಜೈಲುವಾಸ ಅನುಭವಿಸಿದರು. ಮೂರು ದಶಕಗಳ ನಂತರ ಅವರ ಹೋರಾಟಕ್ಕೆ ಜಯ ಸಿಕ್ಕಿ ಬಿಳಿಯರ ಆಳ್ವಿಕೆ ಕೊನೆಗೊಂಡಿತು. ಕರಿಯ ಜನರ ಮೊದಲ ಅಧ್ಯಕ್ಷರಾಗಿ ಆಡಳಿತ ನಡೆಸಿದರು. ಅದೇ ಆಡಳಿತ ಪರಂಪರೆ ಅವರ ನಿಧನದ ನಂತರವೂ ಮುಂದುವರಿದಿರುವುದು ಹೋರಾಟಕ್ಕೆ ಸಿಕ್ಕ ಪ್ರತಿಫಲ.

ಅಮೆರಿಕದ ಬ್ಲ್ಯಾಕ್ ಪ್ಯಾಂಥರ್ಸ್‌

ಅಮೆರಿಕದ ಬ್ಲ್ಯಾಕ್ ಪ್ಯಾಂಥರ್ಸ್‌ ಹೋರಾಟ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಮೇಲೂ ಹೆಚ್ಚು ಪ್ರಭಾವ ಬೀರಿತು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿದ್ದು ಮಧ್ಯಪ್ರದೇಶವಾದರೂ ಅವರ ಓದು, ಹೋರಾಟ ಮತ್ತು ಬದುಕಿನ ಕರ್ಮಭೂಮಿ ಮಹಾರಾಷ್ಟ್ರ. ಆರಂಭದ ದಿನಗಳ ಅವರ ಹೋರಾಟದ ಕಿಚ್ಚು ಮಹಾರ್ ಜನರಲ್ಲಿ ಜಾಗೃತಿ ಮತ್ತು ಸ್ವಾಭಿಮಾನ ತಂದಿತು. ಅವರ ಹೋರಾಟದ ನಂತರ ಮಹಾರಾಷ್ಟ್ರದಲ್ಲಿ ಅಕ್ಷರ ಕಲಿತ ಯುವಶಕ್ತಿ ತಮ್ಮ ಕ್ರಾಂತಿಕಾರಿ ಬರವಣಿಗೆಯಿಂದ ದಲಿತರ ದುಃಖ ದುಮ್ಮಾನವನ್ನು ದಾಖಲು ಮಾಡುತ್ತಾ ಹಿಂದೂ ಧರ್ಮದ ಜಾತಿ ತಾರತಮ್ಯದಿಂದ ಅಸಮಾನತೆಯ ಸಾಮಾಜಿಕ ಬದುಕಿನಲ್ಲಿ ನಲುಗಿ ಹೋಗಿದ್ದ ತಮ್ಮ ಜನರ ವಿಮೋಚನೆಗಾಗಿ ದಲಿತ ಪ್ಯಾಂಥರ್ಸ್ ಒಂದು ಹೋರಾಟದ ವೇದಿಕೆಯನ್ನು ಸೃಷ್ಟಿಸಿದ್ದು ಈಗ ಇತಿಹಾಸ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಧನವಾಗಿ ಸುಮಾರು 17 ವರ್ಷಗಳ ನಂತರ ಅವರು ಬಿಟ್ಟು ಹೋದ ಹೋರಾಟದ ರಥವನ್ನು ದಲಿತ ಯುವ ಬರಹಗಾರರು ಎಳೆಯಲು ಆರಂಭಿಸಿದರು. ಮೂಲತಃ ದಲಿತ ಪ್ಯಾಂಥರ್ಸ್ ಸಂಘಟನೆಯ ಹೋರಾಟದ ಸ್ಪೂರ್ತಿಗೆ ಡಾ. ಅಂಬೇಡ್ಕರ್ ಅವರು ಮಾಡಿದ ಹೋರಾಟಗಳು ಆಧಾರವಾದವು.

ಅಂಬೇಡ್ಕರ್ ಅವರ ಹೋರಾಟ ಮತ್ತು ಚಿಂತನೆಯ ಜೊತೆಗೆ ದಲಿತ ಪ್ಯಾಂಥರ್ಸ್ ಚಳವಳಿಯಲ್ಲಿ ಪ್ರಮುಖರಾಗಿದ್ದ ನಾಮದೇವ ಡಸಾಳ್ ಮಾರ್ಕ್ಸವಾದವನ್ನೂ ಒಳಗೊಳ್ಳುವಂತೆ ಮಾಡಿದ್ದರು. ಆದರು ಅವರು ಬಾಬಾ ಸಾಹೇಬರ ಬಗೆಗೆ ಎಷ್ಟು ಪ್ರೀತಿ ಹೊಂದಿದ್ದರು ಎಂದರೆ ಅವರ ಬಗೆಗೆ ಬರೆದಿರುವ ಹತ್ತಾರು ಕವನಗಳು ಸಾಕ್ಷಿಯಾಗಿವೆ. ಪ್ಯಾಂಥರ್ಸ್, ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಬೀದಿ ಕಾಳಗವನ್ನೂ ಮಾಡಿದ್ದಾರೆ. ಪ್ಯಾಂಥರ್ಸ್ ಚಳವಳಿ ರಿಪಬ್ಲಿಕನ್ ಪಕ್ಷದ ಚಟುವಟಿಕೆಗಿಂತ ಭಿನ್ನವಾಗಿತ್ತು. ಇಲ್ಲಿ ಮುಖ್ಯವಾಗಿ ಏಳುವ ಪ್ರಶ್ನೆ ಎಂದರೆ ಅಂಬೇಡ್ಕರ್ ಹೋರಾಟ ಮತ್ತು ಚಿಂತನೆಯ ಜೊತೆಗೆ ದಲಿತ ಪ್ಯಾಂಥರ್ಸ್ ಅಮೆರಿಕದ ಬ್ಲ್ಯಾಕ್ ಪ್ಯಾಂಥರ್ಸ್ ಚಳವಳಿ ಮತ್ತು ಮಾರ್ಕ್‌ವಾದವೂ ಹೇಗೆ ಆಕರ್ಷಣೆ ಆಯಿತೆನ್ನುವುದು ?

ಯಾವುದೇ ಒಂದು ಹೋರಾಟ ಅಥವಾ ಚಳವಳಿಯ ಬಗೆಗೆ ಮಾತನಾಡುವಾಗ ವಾಸ್ತವವಾಗಿ ಆ ದಿನಗಳ ಸಂದರ್ಭ ಮತ್ತು ಸಮಯವನ್ನು ಗಮನಿಸಬೇಕು. ಬಾಬಾ ಸಾಹೇಬರು ತಮ್ಮ ಜೀವಿತಾವಧಿಯಲ್ಲಿ ನಡೆಸಿದ ಹೋರಾಟ ಮತ್ತು ಅವರ ಭಾಷಣ ಮಹಾರಾಷ್ಟ್ರದ ದಲಿತ ವರ್ಗದ ಗಮನ ಸೆಳೆದು ಅವರಲ್ಲಿ ಹೋರಾಟದ ಅರಿವು ಮೂಡಿಸಿತ್ತೆನ್ನುವುದು ನಿಜ. ಅದರೆ ಅವರು ಹಲವು ವಿಷಯಗಳ ಬಗೆಗೆ ಆಳವಾಗಿ ಯೋಚಿಸಿ ಬರೆದ ಬರವಣಿಗೆಗಳು ಆ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಬರಲಿಲ್ಲ. ಅವರ ಬದುಕು ಮತ್ತು ಹೋರಾಟ ಕುರಿತಂತೆ ಡಾ. ಬಾಬಾ ಸಾಹೇಬರ ಆಪ್ತರಾಗಿದ್ದ ಭಗವಾನ್ ದಾಸ್ ಕೆಲವು ಪುಸ್ತಕಗಳನ್ನು ಬರೆದದ್ದು ಒಂದಷ್ಟು ಜನರು ಅವರ ಬದುಕು ಮತ್ತು ಹೋರಾಟವನ್ನು ತಿಳಿಯುವಂತಾಯಿತು. ಆದ್ದರಿಂದಲೇ ಅವರು ನಿಧನರಾದ ಸುಮಾರು ವರ್ಷಗಳ ನಂತರ ಜಾಗೃತಗೊಂಡ ಬರವಣಿಗೆ ಬಲ್ಲ ಯುವಕರಿಂದ ದಲಿತರ ಸಂಘಟಿತ ಹೋರಾಟ ಮರುಜೀವ ಪಡೆಯಿತು.

1972ರಲ್ಲಿ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಇಬ್ಬರು ದಲಿತ ಮಹಿಳೆಯರನ್ನು ನಗ್ನಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದ ಘಟನೆ ದಲಿತ ಯುವಕರ ಮನಸ್ಸನ್ನು ಕಳವಳಕ್ಕೀಡು ಮಾಡಿತು. ಆ ಘಟನೆ ಈ ಬಿಸಿರಕ್ತದ ಯುವಕರು ರೊಚ್ಚಿಗೇಳುವಂತೆ ಮಾಡಿತ್ತು. ಈ ಅಮಾನವೀಯ ಘಟನೆಯ ಬಗ್ಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತನಿಖಾ ಆಯೋಗವೊಂದನ್ನು ನೇಮಕ ಮಾಡಿದ್ದರು.

ಈ ಘಟನೆಯನ್ನು ಖಂಡಿಸಿ ಈ ದಲಿತ ಯುವಕರು ಬೀದಿಗಿಳಿದು ಪ್ರತಿಭಟನೆ ಮಾಡಿದರು. ಹೀಗೆ ಹೋರಾಟ ಮಾಡಿದವರು ಶೋಷಣೆಯ ವಿರುದ್ಧದ ಆಕ್ರೋಶದ ಭಾಷಣ ಮಾಡುತ್ತಾ ಕಥೆ ಕವನ ಮತ್ತು ಹೋರಾಟದ ಹಾಡುಗಳನ್ನು ಬರೆಯುತ್ತಿದ್ದವರೇ ದಲಿತ ಪ್ಯಾಂಥರ್ಸ್ ಚಳವಳಿಗೆ ಮುನ್ನುಡಿ ಬರೆದರು.

ಶೋಷಣೆಗೆ ಒಳಗಾದ ಜನರನ್ನು ತಮ್ಮ ಕಥೆ ಕವನ ಮತ್ತು ಹಾಡುಗಳ ಮೂಲಕ ರೊಚ್ಚಿಗೇಳುವಂತೆ ಮಾಡುತ್ತಿದ್ದ ನಾಮದೇವ ಡಸಾಳ್, ಜೆ.ವಿ. ಪವಾರ್, ಅರ್ಜುನ್ ಡಾಂಗ್ಲೆ, ರಾಜಾ ಡಾಳೆ, ದಯಾ ಪವಾರ್ ಮುಂತಾದ ಬಿಸಿರಕ್ತದ ಯುವಕರು. ಆಗ ಇವರೆಲ್ಲರೂ 20ರಿಂದ 30 ವರ್ಷದ ಒಳಗಿನವರು. ಅನ್ಯಾಯ ಕಂಡು ಸಿಡಿದೇಳುತ್ತಿದ್ದ ಈ ಯುವ ಬರಹಗಾರರು ಬ್ಲ್ಯಾಕ್ ಪ್ಯಾಂಥರ್ಸ್ ರೀತಿಯಲ್ಲಿಯೇ ಮೇ 29, 1972 ರಲ್ಲಿ ದಲಿತ ಪ್ಯಾಂಥರ್ಸ್ ಹೆಸರಿನ ಕ್ರಾಂತಿಕಾರಿ ಸಂಘಟನೆಯನ್ನು ಸ್ಥಾಪಿಸಿಯೇ ಬಿಟ್ಟರು.

ಬ್ಲ್ಯಾಕ್ ಪ್ಯಾಂಥರ್ಸ್ ಸಂಘಟನೆಯ ಕಪ್ಪು ಚಿರತೆಯ ಚಿನ್ಹೆಯನ್ನೇ ದಲಿತ ಪ್ಯಾಂಥರ್ಸ್ ಕೂಡ ತಮ್ಮ ಸಂಘಟನೆಯ ಚಿಹ್ನೆಯನ್ನಾಗಿ ಮಾಡಿಕೊಂಡರು. ಅಷ್ಟರಮಟ್ಟಿಗೆ ದಲಿತ ಬರಹಾಗಾರರ ಮೇಲೆ ಬ್ಲ್ಯಾಕ್ ಪ್ಯಾಂಥರ್ಸ್ ಚಳವಳಿ ಗಾಢವಾದ ಪ್ರಭಾವ ಬೀರಿತ್ತು. ಡಾ. ಬಾಬಾ ಸಾಹೇಬರ ಹೋರಾಟದಾಚೆಗೂ ತಮ್ಮ ವಿಮೋಚನೆಗೆ ದಾರಿ ಇದೆಯೇ ಎಂದು ನೋಡಿದರು. ಡಾ. ಬಾಬಾ ಸಾಹೇಬರ ಚಿಂತನೆಗಳ ಬರವಣಿಗೆ ಸಿಗದ ಆ ದಿನಗಳಲ್ಲಿ ಅದು ಅವರಿಗೆ ಅನಿವಾರ್ಯವೂ ಆಗಿದ್ದಿರಬೇಕು.

ಮಹಾರಾಷ್ಟ್ರದ ದಲಿತ್‌ ಪ್ಯಾಂಥರ್ಸ್‌ ವಿದ್ಯಾರ್ಥಿ ಚಳವಳಿಯ ದೃಶ್ಯ

ವಾಸ್ತವವಾಗಿ ಬಾಬಾ ಸಾಹೇಬರ ನಿಧನದ ಬಳಿಕ ಅವರ ಬಹುತೇಕ ಅಪ್ರಕಟಿತ ಬರಹಗಳ ರಾಶಿ ರಾಶಿ ಕಡತಗಳು ಮಹಾರಾಷ್ಟ್ರ ಸರ್ಕಾರ ಮತ್ತು ಅವರ ಕುಟುಂಬದ ವಶದಲ್ಲಿತ್ತು. ಡಾ. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ಜೊತೆ ಹತ್ತಾರು ಬಾರಿ ಚರ್ಚಿಸಿ ಕಾಪಿರೈಟ್ ಪಡೆದ ನಂತರ 1979ರಲ್ಲಿ ಮಹಾರಾಷ್ಟ್ರ ಸರ್ಕಾರ ಅನೇಕ ಪುಸ್ತಕಗಳನ್ನು ಪ್ರಕಟಿಸಿತು. ಆಗ ಡಾ. ಅಂಬೇಡ್ಕರ್ ಅವರ ಚಿಂತನೆ ಮತ್ತು ಸಿದ್ಧಾಂತದ ಮೂಲ ಆಶಯ ಏನು ಎಂಬುದು ಬೆಳಕು ಕಂಡಿತು.

ಈವೊಂದು ಕೊರತೆಯಿಂದ ಬಹುಶಃ ಮಹಾರಾಷ್ಟ್ರದ ದಲಿತ ಲೇಖಕರು ಅಂಬೇಡ್ಕರ್ ಅವರ ವಿಚಾರಗಳ ಜೊತೆಯೇ ವರ್ಣಬೇಧದ ವಿರುದ್ಧದ ಕರಿಯರ ಕ್ರಾಂತಿಕಾರಿ ಹೋರಾಟದಂತಹ ಮಾರ್ಗದಲ್ಲಿ ತಮ್ಮ ಜನರ ವಿಮೋಚನೆಗೆ ಕಂಡುಕೊಂಡ ದಾರಿ ಎನ್ನಬಹುದು.

ಅಂಬೇಡ್ಕರ್ ಅವರ ಪ್ರಮುಖ ಕೃತಿಗಳು ಪ್ರಕಟವಾಗುವ ವೇಳೆಗೆ ದಲಿತ ಪ್ಯಾಂಥರ್ಸ್ ನಾಯಕರಲ್ಲಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ರಾಜ್ಯದಲ್ಲಿ ಚಳವಳಿ ಇನ್ನೂ ವ್ಯಾಪಕವಾಗಿ ಬೆಳೆಯುವ ಮುನ್ನವೇ 1977ರ ಹೊತ್ತಿಗೆ ಸಂಘಟನೆ ವಿಸರ್ಜನೆಯೂ ಆದದ್ದು ದುರಂತ.

ದಲಿತ ಪ್ಯಾಂಥರ್ಸ್ ಸಂಘಟನೆಯ ದಿಟ್ಟತನದ ಹೋರಾಟ ಎಂದರೆ ಮರಾಠವಾಡಾ ವಿಶ್ವವಿದ್ಯಾಲಯಕ್ಕೆ ಡಾ. ಅಂಬೇಡ್ಕರ್ ಅವರ ಹೆಸರನ್ನಿಡಬೇಕೆನ್ನುವ ಚಳವಳಿ. ಶಿವಸೇನೆಯ ವಿರುದ್ಧ ಬೀದಿ ಕಾಳಗವನ್ನೇ ನಡೆಸಿತು. ಈ ಹೋರಾಟದಲ್ಲಿ ಸುಮಾರು ಆರು ಮಂದಿ ದಲಿತ ಪ್ಯಾಂಥರ್ಸ್ ಜೀವ ಕಳೆದುಕೊಂಡರು. ಎರಡೂ ಕಡೆಯೂ ಹಿಂಸಾಚಾರ ನಡೆಯಿತು. ಇದು ಹಲವಾರು ದಿನಗಳ ಕಾಲ ಇಡೀ ರಾಜ್ಯವೇ ಹೊತ್ತು ಉರಿಯುವಂತೆ ಮಾಡಿತು. ಕೊನೆಗೆ ಶರದ್ ಪವಾರ್ ಸರ್ಕಾರ ಚಳವಳಿಗಳ ಪರ ವಿರೋಧದ ನಡುವೆಯೂ,”ಡಾ. ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾನಿಲಯ”ಎಂದು ಪುನರ್ ನಾಮಕರಣ ಮಾಡಿತು. ದಲಿತ ನಡೆಸಿದ ಐತಿಹಾಸಿಕ ಹೋರಾಟವಿದು. ಹೀಗಾಗಿ ಈ ಹೋರಾಟದ ಆಗು ಹೋಗುಗಳು ಬೇರೆ ರಾಜ್ಯಗಳ ದಲಿತ ಚಳವಳಿಗೆ ಅಧ್ಯಯನ ವಸ್ತುವಾಗಿ ಉಳಿಯಿತು.

DSS:ಎಪ್ಪತ್ತರ ದಶಕದಲ್ಲಿ ಹುಟ್ಟಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅರ್ಥಾತ್ ದಲಿತ ಚಳವಳಿಗೆ ರಾಜ್ಯದಲ್ಲಿ ನಡೆದ ಬೂಸಾ ಚಳವಳಿಯಿಂದಾದ ದಲಿತ ಯುವಕರ ಮೇಲಿನ ದೌರ್ಜನ್ಯ ಮುಖ್ಯ ಕಾರಣ. ನಂತರ ಹೋರಾಟದ ಹಾದಿಯ ಹುಟುಕಾಟದಲ್ಲಿ ಡಾ. ಬಾಬಾ ಸಾಹೇಬರ ಸ್ಫೂರ್ತಿಯ ಜೊತೆಗೆ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳವಳಿಯೇ ಪ್ರೇರಣೆ. ಆದರೂ ದಲಿತ ಸಂಘರ್ಷ ಸಮಿತಿಯ ಹುಟ್ಟು ಬೆಳವಣಿಗೆ ಮತ್ತು ಹೋರಾಟದ ಹಾದಿ ದಲಿತ ಪ್ಯಾಂಥರ್ಸ್ ಭಿನ್ನವಾಗಿತ್ತು. ಏಕೆಂದರೆ ದಲಿತ ಪ್ಯಾಂಥರ್ಸ್
ಚಳವಳಿಯು ಇಟ್ಟ ಹೆಜ್ಜೆ ಮತ್ತು ಅದರ ವೈಫಲ್ಯಗಳ ಬಗೆಗೆ ಸಂಘರ್ಷ ಸಮಿತಿಯು ಎಚ್ಚರಿಕೆಯ ಹೆಜ್ಜೆ ಇಡುತ್ತಾ ಹೋಯಿತು.

ಎಪ್ಪತ್ತರ ದಶಕ ಕರ್ನಾಟಕದಲ್ಲಿ ಜನಪರ ಚಳವಳಿಗಳ ಕಾಲ. ಯುವ ಜನರು ಮತ್ತು ವಿದ್ಯಾರ್ಥಿಗಳಲ್ಲಿ ಹೋರಾಟದ ಮನೋಭಾವ ಇದ್ದ ದಿನಗಳು. ಎಕ್ಸೊ್ಪೀ ಚಳವಳಿ, ಬೆಲೆ ಏರಿಕೆ, ಜಾತಿ ವ್ಯವಸ್ಥೆ ವಿರುದ್ಧದ ಹೋರಾಟ. ಇದಕ್ಕೆ ಸ್ಪೂರ್ತಿಯಾಗಿ ನಿಂತದ್ದು ಸಮಾಜವಾದಿ ಯುವಜನ ಸಭಾ ಚಟುವಟಿಕೆ, ಹಿಂದೂ ಧರ್ಮದ ಮೂಢನಂಬಿಕೆಯ ವಿರುದ್ಧದ ಇ.ವಿ ಪೆರಿಯಾರ್ ವೈಚಾರಿಕ ಚಳವಳಿ, ಸಮಗ್ರ ಬದಲಾವಣೆಗಾಗಿ ಭ್ರಷ್ಟಾಚಾರದ ವಿರುದ್ಧದ ಜಯಪ್ರಕಾಶ್ ನಾರಾಯಣರ ಸಂಪೂರ್ಣ ಕ್ರಾಂತಿ, ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿ ಹೇರಿಕೆ, ತುರ್ತು ಪರಿಸ್ಥಿತಿಯಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ನಡೆದ ಅತಿರೇಕ, ಅದರ ವಿರುದ್ಧದ ನಡೆದ ಹೋರಾಟಗಳು ಚರಿತ್ರಾರ್ಹ. ಆದರೆ ಬಹುತೇಕವಾಗಿ ಜನರ ಸ್ವಾತಂತ್ರ್ಯದ ಹರಣ ಮಾಡಿದ್ದ ತುರ್ತು ಪರಿಸ್ಥಿತಿ ಕರ್ನಾಟಕದ ಬಡವರ ಪಾಲಿಗೆ ವರವೇ ಆಗಿತ್ತು. ಆಗಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಇಂದಿರಾ ಗಾಂಧಿ ಅವರು ಘೋಷಿಸಿದ್ದ “20 ಅಂಶಗಳ ಕಾರ್ಯಕ್ರಮ ಮತ್ತು ಗರೀಬಿ ಹಠಾವೋ’ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಅನುವಾಯಿತು. ಅರಸು ಅವರು ತಂದ ಭೂಸುಧಾರಣೆ ಕಾಯ್ದೆ “ಉಳುವವನೇ ಭೂ ಒಡೆಯ” ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿಯಾಯಿತು.

ಇದನ್ನೂ ಓದಿ ದೇಶ ಮತ್ತು ಸಂವಿಧಾನ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ : ರಾಹುಲ್ ಗಾಂಧಿ

ಈ ಮಧ್ಯೆ ದಲಿತರ ವಿರುದ್ಧದ ಬೂಸಾ ಚಳವಳಿ, ಜಾತಿ ವಿನಾಸ ಮತ್ತು ಶೂದ್ರ ಬರಹಗಾರರ ಸಮಾವೇಶಗಳು, ಜೆಪಿ ಚಳವಳಿಗಳು ಹೀಗೆ ಹತ್ತಾರು ಹೋರಾಟಗಳು ನಡೆದ ದಿನಗಳವು.

ಮುಖ್ಯಮಂತ್ರಿ ಅರಸು ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರು ಹಿಂದೂ ಧರ್ಮದಲ್ಲಿನ ಜಾತಿ ತಾರತಮ್ಯ ವಿರುದ್ಧ ನಿರಂತರವಾಗಿ ಬಹಿರಂಗವಾಗಿ ಮಾತನಾಡುತ್ತಾ ಬಂದದ್ದು ಹಿಂದೂ ಧರ್ಮಾಂಧರಿಗೆ ನುಂಗಲಾರದ ತುತ್ತಾಗಿತ್ತು. ಅಂದಿನ ದಿನಗಳಲ್ಲಿ ಪತ್ರಿಕೆಗಳು ಸನಾತನವಾದಿಗಳ ಬಿಗಿ ನಿಯಂತ್ರಣದಲ್ಲಿದ್ದರೆ, ಬಹುತೇಕ ಪತ್ರಕರ್ತರ ಮನಃಸ್ಥಿತಿಯೂ ಹಾಗೆಯೇ ಇತ್ತು.

ಹಿಂದೂ ಧರ್ಮ ಮತ್ತು ಅದರ ಅಂತರಂಗದಲ್ಲಿರುವ ಜಾತಿ ಪದ್ಧತಿ, ಅಮಾನವೀಯ ಆಚರಣೆಗಳನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದ ಬಸವಲಿಂಗಪ್ಪನವರನ್ನು ಯಾವುದಾದರೂ ಒಂದು ವಿವಾದಕ್ಕೆ ಸಿಲುಕಿಸಿ ಅವರ ವಿರುದ್ಧ ಸೇಡಿಗಾಗಿ ಕಾಯುತ್ತಿದ್ದವರಿಗೆ 1973ರ ನವೆಂಬರ್ 19ರಂದು ಸಿಕ್ಕಿಯೇ ಬಿಟ್ಟಿತು. ಅಂದು ಮೈಸೂರು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆದ “ಹೊಸ ಅಲೆ” ಕುರಿತ ಸಭೆಯಲ್ಲಿ ಮಾತನಾಡಿದ ಅವರು ಕನ್ನಡದಲ್ಲೇನಿದೆ ಬೂಸಾ. ಕನ್ನಡದ ಪುಸ್ತಕಗಳಲ್ಲಿ ದಲಿತರ ದುಃಖ ದುಮ್ಮಾನವಿಲ್ಲ, ಇದನ್ನು ಓದಿದರೆ ನಿಮಗೆ ವೈಚಾರಿಕತೆ ಬರುವುದಿಲ್ಲ. ಇಂಗ್ಲಿಷ್‌ನಲ್ಲಿರುವ ಕ್ರಾಂತಿಕಾರಿ ಸಾಹಿತ್ಯ ಓದಿ ಎಂದು ದಲಿತ ಯುವಕರಿಗೆ ನೀಡಿದ ಕರೆ ಆ ದಿನಗಳಲ್ಲಿ ಸಮಾಜದಲ್ಲಿ ಕಿಡಿ ಹೊತ್ತಿಸಿತು.

ಇಂತಹ ಸುದ್ದಿಗಳಿಗಾಗಿ ಕಾಯುತ್ತಿದ್ದವರಿಗೆ ವಿಶೇಷವಾಗಿ ಪತ್ರಿಕೆಗಳಿಗೆ ಇದಕ್ಕಿಂತ ಮತ್ತೊಂದು ಅವಕಾಶ ಸಿಗುತ್ತಿರಲಿಲ್ಲವೇನೋ? ಇಡೀ ರಾಜ್ಯ ಹೊತ್ತಿ ಉರಿಯುವಂತೆ ಸುದ್ದಿ ಪ್ರಕಟವಾಯಿತು. ಇದು ಕನ್ನಡ ಸಾಹಿತ್ಯವನ್ನು ಅವಹೇಳನ ಮಾಡಿದಂತೆ ಎನ್ನುವ ಆಕ್ರೋಶ ಭುಗಿಲೆದ್ದಿತು. ದಲಿತ ಯುವಕರು ಮತ್ತು ವಿದ್ಯಾರ್ಥಿಗಳ ಮೇಲೆ ಸುಮಾರು ಎರಡು ವಾರ ದೌರ್ಜನ್ಯ ನಡೆಯಿತು.

ಕರ್ನಾಟಕದಲ್ಲಿ ದಲಿತರ ಮೇಲೆ ಈ ರೀತಿಯ ಸಾಮೂಹಿಕ ದೌರ್ಜನ್ಯ ನಡೆದದ್ದು ಇದೇ ಮೊದಲು. ಮೈಸೂರು, ಬೆಂಗಳೂರು, ಶಿವಮೊಗ್ಗ, ಧಾರವಾಡ ಮತ್ತು ಕಲ್ಬುರ್ಗಿ ಮುಂತಾದ ಕಡೆಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ನಡೆದ ಈ ದೌರ್ಜನ್ಯ ದಲಿತರ ಸಂಘಟನೆಗೆ ನಾಂದಿ ಹಾಡಿತು.

ಇಂತಹ ಸಾಮೂಹಿಕ ದಬ್ಬಾಳಿಕೆ ಮತ್ತು ದೌರ್ಜನ್ಯ ದಲಿತ ಯುವಕರಲ್ಲಿ ಜಾಗೃತಿಗೆ ಕಾರಣವಾಯಿತು. ನಾವು ಒಂದಾಗದಿದ್ದರೆ ನಮಗಿಲ್ಲಿ ಉಳಿಗಾಲವಿಲ್ಲ ಎನ್ನುವ ಬಿಗಿ ವಾತಾವರಣ ಸೃಷ್ಟಿಯಾಗಿತ್ತು. ಮೈಸೂರಿನಲ್ಲಿ ವಿ ಶ್ರೀನಿವಾಸ್ ಪ್ರಸಾದ್ ಮತ್ತಿತರರ ನೇತೃತ್ವದಲ್ಲಿ ಬೀದಿ ಹೋರಾಟ ನಡೆದಿತ್ತು. ಇನ್ನೂ ಆಗಷ್ಟೇ ಬಿಎ ವ್ಯಾಸಂಗ ಮಾಡುತ್ತಿದ್ದ ಬಿಸಿ ರಕ್ತದ ಯುವಕ ಸಿದ್ದಲಿಂಗಯ್ಯ ಬೆಂಗಳೂರಿನಲ್ಲಿ ಬೂಸಾ ಘಟನೆಗೆ ವಿರುದ್ಧವಾಗಿ ತನ್ನ ಮಿತ್ರರನೇಕರನ್ನು ಕಟ್ಟಿಕೊಂಡು ಹೋರಾಡುತ್ತಿದ್ದರು. ಅವರ ಹೋರಾಟ ಹೇಗಿತ್ತೆಂದರೆ ದಲಿತರಿಗೆ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟು ಸಮಾಜ ಮತ್ತು ಸರ್ಕಾರವನ್ನು ಬೆಚ್ಚಿ ಬೀಳಿಸಿದ್ದರು. ಬೆಂಗಳೂರಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ದಲಿತ ನೌಕರರು ಕಟ್ಟಿದ್ದ ದಲಿತ ಕ್ರಿಯಾ ಸಮಿತಿ ಸಹಾ ಕ್ರಿಯಾಶೀಲವಾಗಿತ್ತು. ಕಲ್ಬುರ್ಗಿ, ಧಾರವಾಡ ಮುಂತಾದ ಕಡೆ ಸ್ವಯಂ ಪ್ರೇರಿತ ಹೋರಟಗಳು ನಡೆದವು.

ಕೋಲಾರದಲ್ಲಿ 1983 ರ ಫೆಬ್ರವರಿ 12 ಮತ್ತು 13ರಂದು ನಡೆದ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಸಂಘದ ಮೊದಲ ಸಮ್ಮೇಳನದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಪತ್ನಿ ಸವಿತಾ ಅಂಬೇಡ್ಕರ್‌ ಭಾಗವಹಿಸಿದ್ದರು. ಪ್ರೊ ಬಿ ಕೃಷ್ಣಪ್ಪ, ರಾಮದಾಸ್‌ ಅಠಾವಳೆ (ಆಗಿನ ಕೇಂದ್ರ ಸಚಿವ), ದೇವನೂರ ಮಹಾದೇವ ಚಿತ್ರದಲ್ಲಿದ್ದಾರೆ

ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿನ ಅಸ್ಪೃಶ್ಯತೆ ಆಚರಣೆ ವಿರುದ್ಧ ಅಲ್ಲಿನ ದಲಿತ ವರ್ಗದ ಕಾರ್ಮಿಕರು ಮುಖ್ಯವಾಗಿ ಎನ್. ಗಿರಿಯಪ್ಪ ಮತ್ತು ಚಂದ್ರಪ್ರಸಾದ್ ತ್ಯಾಗಿ ಮುಂತಾದವರು ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಬಿ. ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದರು.

ಇತ್ತ ಮೈಸೂರಿನಲ್ಲಿ ದೇವನೂರ ಮಹಾದೇವ ಅವರ ಮಾರ್ಗದರ್ಶನದಲ್ಲಿ ಐವರು ವಿದ್ಯಾರ್ಥಿಗಳಾದ ಇಂದೂಧರ ಹೊನ್ನಾಪುರ, ಎಚ್. ಗೋವಿಂದಯ್ಯ, ರಾಮದೇವ ರಾಕೆ, ಶಿವಾಜಿಗಣೇಶನ್ ಮತ್ತು ಶಿವಮಲ್ಲು ದೇವನೂರು ಸೇರಿ “ಪಂಚಮ” ಪತ್ರಿಕೆ ಆರಂಭಿಸಿ ದಲಿತರ ಮೇಲಿನ ದೌರ್ಜನ್ಯದ ಘಟನೆಗಳನ್ನು ಪ್ರಕಟಿಸುತ್ತಿದ್ದರು. ಆಗಷ್ಟೇ ಬರೆಯಲು ಶುರು ಮಾಡಿದ್ದ ದಲಿತಯುವ ಬರಹಗಾರರಿಗೆ “ಪಂಚಮ” ಪತ್ರಿಕೆ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟು ಜಾಗೃತಿ ಉಂಟು ಮಾಡುವ ಕೆಲಸದಲ್ಲಿ ತೊಡಗಿತ್ತು.

ಬೂಸಾ ಘಟನೆಯಲ್ಲಿ ನಡೆದ ಹಿಂಸಾಚಾರದಿಂದ ದಲಿತ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿದ್ದರು. ಆ ದಿನಗಳಲ್ಲಿ ಭದ್ರಾವತಿಯಿಂದ ಬಿ. ಕೃಷ್ಣಪ್ಪ ಮೈಸೂರಿಗೆ ಬಂದು ಹಾಸ್ಟೆಲುಗಳಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ “ಇನ್ನು ನಾವು ಸಂಘಟಿತರಾಗದಿದ್ದರೆ ನಮಗಿನ್ನು ಉಳಿಗಾಲವಿಲ್ಲ’ ಎಂದು ನೊಂದ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿ ಸಂಘಟನೆಯ ಅವಶ್ಯಕತೆಯನ್ನು ಅರಿವು ಮಾಡಿದರು.

ಈ ಹಿನ್ನೆಲೆಯಲ್ಲಿ ಆರಂಭವಾದ ದಲಿತ ಸಂಘರ್ಷ ಸಮಿತಿಯ ಮೊದಲ ರಾಜ್ಯ ಮಟ್ಟದ ಸಂಚಾಲಕರಾಗಿ ಬಿ.ಕೃಷ್ಣಪ್ಪ ಮತ್ತು ದೇವನೂರ ಮಹಾದೇವ ಅವಿರೋಧವಾಗಿ ಆಯ್ಕೆಯಾದರು. ಈ ದಲಿತ ಚಳುವಳಿಗೆ ಪಂಚಮ ದನಿಯಾಯಿತು.

ದಲಿತ ಸಂಘರ್ಷ ಸಮಿತಿಯ ಮೊದಲ ಆದ್ಯತೆ ಭೂ ಹೋರಾಟವಾಯಿತು. 1972ರಲ್ಲಿ ಮುಖ್ಯಮಂತ್ರಿ ಆಗಿದ್ದ ಡಿ. ದೇವರಾಜ ಅರಸು ಅವರು “ಉಳುವವನೇ ಭೂ ಒಡೆಯ” ಎಂದು ಭೂಸುಧಾರಣಾ ಕಾಯ್ದೆ ಜಾರಿಗೆ ತಂದರು. ಭೂಮಾಲೀಕರ ಜಮೀನುಗಳನ್ನು ತಲೆತಲಾಂತರಗಳಿಂದ ಉಳುಮೆ ಮಾಡಿ ಬೆಳೆದದ್ದನ್ನೆಲ್ಲ ಮಾಲೀಕರ ಮನೆಗೆ ಹಾಕುತ್ತಿದ್ದ ಸಾವಿರಾರು ಕೃಷಿಕ ದಲಿತರು ತಮ್ಮ ಜೀವಿತಾವಧಿಯಲ್ಲಿ ರಕ್ತ ಮತ್ತು ಬೆವರು ಸುರಿಸಿದ ಭೂಮಿಯ ಒಡೆಯರಾದರು. ಆದರೆ ಭೂಮಾಲೀಕರು ಇದಕ್ಕೆ ಸುಮ್ಮನೆ ಕೂರಲಿಲ್ಲ. ಎಲ್ಲರೂ ನ್ಯಾಯಾಲಯದ ಮೆಟ್ಟಿಲೇರಿದರು. ಹಳ್ಳಿಗಳಲ್ಲಿ ದಲಿತ ಹಿಡುವಳಿದಾರರ ಮೇಲೆ ಭೂ ಮಾಲೀಕರ ದೌರ್ಜನ್ಯ ನಿರಂತರವಾಗಿ ನಡೆಯಲಾರಂಭಿಸಿತು. ಆಗ ಈ ವ್ಯಾಜ್ಯಗಳ ಇತ್ಯರ್ಥಕ್ಕೆ ಮುಖ್ಯಮಂತ್ರಿ ಅರಸು ಅವರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಭೂ ನ್ಯಾಯಮಂಡಳಿಗಳನ್ನು ಅಸ್ತಿತ್ವಕ್ಕೆ ತಂದರು. ಈ ವ್ಯಾಜ್ಯಗಳ ಇತ್ಯರ್ಥ ವ್ಯಾಪ್ತಿಯು ನ್ಯಾಯಮಂಡಳಿಗಳ ತೀರ್ಪಿಗೆ ಬಂದಿತು. ಆ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಸಂಘಟನೆ ಹುಟ್ಟಿಕೊಂಡು ಅಸಹಾಯಕ ದಲಿತರ ಬೆನ್ನಿಗೆ ನಿಂತದ್ದು ದಲಿತ ಸಂಘರ್ಷ ಸಮಿತಿ.

ದಲಿತ ಯುವ ಬರಹಗಾರರಿಗೆ ಮೀಸಲಿದ್ದ “ಪಂಚಮ” ಪತ್ರಿಕೆ

ಇಂತಹ ಚಳವಳಿಯನ್ನು ಹುಟ್ಟು ಹಾಕಿದ್ದು ಮಹಾರಾಷ್ಟ್ರದ ದಲಿತ ಬರಹಗಾರರಂತೆಯೇ ಇಲ್ಲಿಯೂ ದಲಿತರ ಕರಾಳ ಬದುಕಿನ ಬಗೆಗೆ ಜಾಗೃತಗೊಂಡ ಬರಹಗಾರರು. ದೇವನೂರ ಮಹಾದೇವ, ಬಿ. ಕೃಷ್ಣಪ್ಪ, ಕೆ. ನಾರಾಯಣ ಸ್ವಾಮಿ, ಸಿದ್ದಲಿಂಗಯ್ಯ, ಚೆನ್ನಣ್ಣ ವಾಲೀಕಾರ, ಜಂಬಣ್ಣ ಅಮರಚಿಂತ, ಇಂದೂಧರ ಹೊನ್ನಾಪುರ, ಎಚ್. ಗೋವಿಂದಯ್ಯ, ರಾಮದೇವ ರಾಕೆ, ಕೆ. ರಾಮಯ್ಯ, ಕೆ.ಬಿ ಸಿದ್ದಯ್ಯ ಮುಂತಾದವರು ಕಥೆ ಕವನ, ಹೋರಾಟದ ಹಾಡುಗಳು, ಬೀದಿ ನಾಟಕಗಳನ್ನು ಬರೆದು ದಲಿತರಲ್ಲಿ ಜಾಗೃತಿ ಉಂಟು ಮಾಡಿದರು.

ದಲಿತ ಸಂಘರ್ಷ ಸಮಿತಿಯ ಹುಟ್ಟಿನ ದಿನಗಳಲ್ಲಿ ಡಾ. ಬಾಬಾ ಸಾಹೇಬರು ಬರೆದ ಕೃತಿಗಳು ಸಿಗುತ್ತಿರಲಿಲ್ಲ. ಆಗ ಲಭ್ಯವಿದ್ದದು ಧನಂಜಯ ಕೀರ್, ಬಸವರಾಜ ಕೆಸ್ತೂರು ಮತ್ತು ಮ.ನ. ಜವರಯ್ಯ ಅವರು ಬರೆದಿದ್ದ ಅಂಬೇಡ್ಕರ್ ಅವರ ಜೀವನ ಕುರಿತ ಪುಸ್ತಕಗಳು ಮಾತ್ರ. ಆ ಕೊರತೆಯನ್ನು ಸ್ವಲ್ಪ ನಿವಾರಿಸಿದವರು ಆ ದಿನಗಳಲ್ಲಿ ಮೈಸೂರಿನಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿದ್ದ ಎಲ್. ಶಿವಲಿಂಗಯ್ಯ ಅವರು. ಮುಂಬೈ ಮತ್ತು ದೆಹಲಿಯಿಂದ ಭಗವಾನ್ ದಾಸ್ ಅವರಿಂದ ಅಂಬೇಡ್ಕರ್ ಅವರ ಬಗ್ಗೆ ಬರೆದ ಮತ್ತು ಅವರ ಕೆಲವು ಇಂಗ್ಲಿಷ್ ಪುಸ್ತಕಗಳನ್ನು ತರಿಸಿ ಉಚಿತವಾಗಿ ನೀಡುತ್ತಿದ್ದರು. ಇದರ ಜೊತೆಗೆ ತೆಲುಗುವಿನಿಂದ ದೊರೆತ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ ಅಂಬೇಡ್ಕರ್ ವಾಣಿ ಮುಂತಾದ ಕೃತಿಗಳು ಕೆ. ನಾರಾಯಣಸ್ವಾಮಿ ಅವರಿಂದ ಸಿಗುತ್ತಿತ್ತು. ಅಷ್ಟು ಬಿಟ್ಟರೆ ಡಾ. ಬಾಬಾ ಸಾಹೇಬರ ಹಲವು ಚಿಂತನೆಗಳ ಕೃತಿಗಳು ಸಿಗುತ್ತಿರಲಿಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ದಲಿತ ಸಂಘರ್ಷ ಸಮಿತಿಯ ಒತ್ತಡದ ಮೇಲೆ ಕರ್ನಾಟಕ ಸರ್ಕಾರವು ಮಹಾರಾಷ್ಟ್ರ ಸರ್ಕಾರದಿಂದ ಅಂಬೇಡ್ಕರ್ ಅವರ ಮೂಲ ಕೃತಿಗಳನ್ನು ತರಿಸಿಕೊಂಡು ಕನ್ನಡಕ್ಕೆ ಅನುವಾದ ಮಾಡಿಸಿತು. ಇದರಿಂದ ಡಾ. ಅಂಬೇಡ್ಕರ್ ಅವರ ಚಿಂತನೆ ಮತ್ತು ವಿಚಾರಗಳು ದಲಿತ ಯುವಕರಿಗೆ ತಲುಪುವಂತಾಯಿತು.

ಸಂಘಟನೆಯಲ್ಲಿದ್ದ ಬಹುತೇಕ ಕಾರ್ಯಕರ್ತರು ಸಮಾಜವಾದ, ಮಾರ್ಕ್ಸ್‌ವಾದ, ನಕ್ಸಲೀಯವಾದ ಹೀಗೆ ಎಲ್ಲ ಸಿದ್ಧಾಂತಗಳನ್ನು ಓದುವುದು, ಚರ್ಚಿಸುವುದು ಈ ಚಳವಳಿಯ ಶಿಬಿರಗಳಲ್ಲಿ ನಡೆಯುತ್ತಾ ಬಂದಿತು. ದಲಿತ ಸಾಹಿತ್ಯದ ಹಲವು ಸಂಘರ್ಷದ ನೆಲೆಯಲ್ಲಿ ನಿಂತು ಜನರೊಡನೆ ಹೋರಾಡಿದವರು ಈ ಬರಹಗಾರರಲ್ಲದೆ ಎನ್. ಗಿರಿಯಪ್ಪ, ಚಂದ್ರಪ್ರಸಾದ್ ತ್ಯಾಗಿ, ಎಂ.ಡಿ. ಗಂಗಯ್ಯ, ಎನ್. ವೆಂಕಟೇಶ್, ಎನ್. ಮುನಿಸ್ವಾಮಿ, ವಿ. ನಾಗರಾಜ್, ವಿಜಯಕುಮಾರ್ ಎಸ್. ಜಯಣ್ಣ, ಬಸಣ್ಣ ಸಿಂಘೆ, ಡಿ.ಜಿ.ಸಾಗರ್, ವಿಜಯ ಪಾಟೀಲ, ಮಂಗ್ಲೂರ ವಿಜಯ ಮುಂತಾದವರು.

ದಲಿತ ಸಂಘರ್ಷ ಸಮಿತಿಯು ದಲಿತ ಪ್ಯಾಂಥರ್ಸ್‌ ರೀತಿಯಲ್ಲಿಯೇ ಡಾ. ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟದ ಪರಿಚಯದ ಜೊತೆಗೆ ಜಾತಿ ವ್ಯವಸ್ಥೆ ವಿರುದ್ಧದ ಸಮಾಜವಾದಿ ಚಿಂತನೆ, ಮಾರ್ಕ್ಸ್‌ವಾದ ಹೀಗೆ ಹಲವು ವಿಮೋಚನಾ ವಿಚಾರಗಳಿಗೆ ಮುಕ್ತ್ತವಾಗಿ ತನ್ನ ಪಂಚೇಂದ್ರಿಯಗಳನ್ನು ತೆರೆದುಕೊಂಡಿತು. ಶೋಷಣೆಗೆ ಒಳಗಾದವರೆಲ್ಲರೂ ದಲಿತ ಎನ್ನುವ ವಿಶಾಲಾರ್ಥದಲ್ಲಿ ಒಳಗೊಂಡು ಚಳವಳಿ ಬೆಳೆಯಿತು. ಹಾಗಾಗಿ ಈ ಚಳವಳಿಯು ಜಾತಿಯಿಂದ ದಲಿತರಲ್ಲದ ಶೋಷಿತರನ್ನೂ ಒಳಗೊಂಡಿತು.

ಇದನ್ನೂ ಓದಿ ಅಂಬೇಡ್ಕರ್‌ ಜಯಂತಿ ವಿಶೇಷ | ಕರ್ನಾಟಕದಲ್ಲಿ ಬಾಬಾ ಸಾಹೇಬರ ಹೆಜ್ಜೆ ಗುರುತುಗಳು

ದಲಿತ ಸಂಘರ್ಷ ಸಮಿತಿ ಭೂ ಹೋರಾಟದಿಂದ ದಲಿತರಿಗೆ ಸಾವಿರಾರು ಎಕರೆ ಭೂಮಿ ದೊರೆಯಿತು. ನಕಲಿ ಜಾತಿ ಪತ್ರದ ವಿರುದ್ಧದ ಹೋರಾಟದಿಂದ ಪರಿಶಿಷ್ಟ ಜಾತಿ ಹೆಸರು ಹೇಳಿ ಬೇರೆಯವರು ಉದ್ಯೋಗ ಪಡೆಯುವುದು ನಿಯಂತ್ರಣಕ್ಕೆ ಬಂದಿತು. ಹೆಂಡ ಬೇಡ ವಸತಿ ಶಾಲೆಗಳನ್ನು ಕಟ್ಟಿಸಿ ಎನ್ನುವ ಆಗ್ರಹದಿಂದ ರಾಜ್ಯದಾದ್ಯಂತ ವಸತಿ ಶಾಲೆಗಳು ಬಂದವು. ಹಾಗೆಯೇ ಅಂಬೇಡ್ಕರ್ ಭವನಗಳು ತಲೆ ಎತ್ತಿದವು. ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಮಾಡಬೇಕೆಂಬ ಒತ್ತಡದಿಂದ ಖಾಲಿ ಹುದ್ದೆಗಳ ಭರ್ತಿ ಕಾರ್ಯವೂ ನಡೆಯಿತು. ಹಳ್ಳಿಗಳ ನರಕಯಾತನೆಯ ಜೀವನಕ್ಕೆ ದೂಡುವ ದಲಿತರ ಮೇಲಿನ ದೌರ್ಜನ್ಯ ಮತ್ತು ಬಹಿಷ್ಕಾರಗಳು ನಿಯಂತ್ರಣಕ್ಕೆ ಬಂದವು. ಚಂದ್ರಗುತ್ತಿ ಬೆತ್ತಲೆ ಮೆರವಣಿಗೆ ವಿರುದ್ಧದ ಹೋರಾಟದಿಂದ ಬೆತ್ತಲೆ ಸೇವೆ ಕಾನೂನಿನ ಮೂಲಕ ನಿಷೇಧ ಜಾರಿಗೆ ಬಂದಿತು. ಇಷ್ಟೆಲ್ಲ ಸಾಧನೆಗೆ ಸಂಘಟಿತ ಹೋರಾಟವೇ ಅಸ್ತ್ರವಾಗಿತ್ತು. ದಲಿತ ಸಂಘರ್ಷ ಸಮಿತಿಯ ಜಾಥಾ ಬೆಂಗಳೂರಿಗೆ ಬರುತ್ತದೆ ಎಂದರೆ ಅಂದಿನ ಸರ್ಕಾರಗಳು ಹೆದರುತ್ತಿದ್ದವು. ಅಷ್ಟರಮಟ್ಟಿಗೆ ದಲಿತ ಸಂಘರ್ಷ ಸಮಿತಿಯ ಹೋರಾಟ ಸ್ಮರಣೀಯ.

ಮೂರು ದಶಕಗಳ ಕಾಲ ಸಂಘಟಿತವಾಗಿ ಚಳವಳಿ ಮಾಡಿದ ದಲಿತ ಸಂಘರ್ಷ ಸಮಿತಿ ಈಗ ಹತ್ತು ಹಲವು ಘಟಕಗಳಾಗಿ ವಿಘಟನೆಯಾಗಿರುವುದು ದುರಂತ. ಇವುಗಳ ನೇತೃತ್ವವೆಲ್ಲ ಸಂಘಟನೆಯ ಎರಡನೇ ತಲೆಮಾರಿನ ಕಾರ್ಯಕರ್ತರು. ಹೀಗೆ ಸಂಘಟನೆ ಒಡೆದು ಹೋಳಾಗಲು ಒಂದಲ್ಲ ಹತ್ತಾರು ಕಾರಣಗಳಿವೆ.

ದಲಿತ ಚಳವಳಿಯಲ್ಲಿ ಮೊದಲಿನಂತೆ ಕಾವಿಲ್ಲ. ಒಗ್ಗಟ್ಟಿಲ್ಲ ಎನ್ನುವುದು ನಿಜ. ಆದರೆ ದಲಿತರಿಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆ ಎದುರಾದಾಗ ಎಲ್ಲ ಸಂಘಟನೆಗಳು ಒಟ್ಟಾಗಿ ನಿಲ್ಲುವುದೇ ಒಂದು ಆಶಾದಾಯಕ ಬೆಳವಣಿಗೆ. ಆದರೆ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಚಳವಳಿ ಮರುಜೀವ ಪಡೆಯಬೇಕಿದೆ.

ಶಿವಾಜಿ ಗಣೇಶನ್‌
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಶಿವಾಜಿ ಗಣೇಶನ್‌
ಶಿವಾಜಿ ಗಣೇಶನ್‌
ಹಿರಿಯ ಪತ್ರಕರ್ತರು

2 COMMENTS

  1. ಇನ್ನೂ ಕೆಲವು ಸಂಗತಿಗಳಿವೆ

    ಅವುಗಳನ್ನು ದಾಖಲಿಸಬೇಕು

    ವಿಸ್ತೀರ್ಣ ಲೇಖನ ಅಗತ್ಯ ಇದೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...