ಖರ್ಗೆಯವರಲ್ಲಿ ದಲಿತ ಮುಖ್ಯಮಂತ್ರಿಯನ್ನು ನೋಡಬಯಸುವವರು, ಅವರಲ್ಲಿ ದಲಿತ ಪ್ರಧಾನ ಮಂತ್ರಿಯನ್ನೇಕೆ ಕಾಣಬಯಸುವುದಿಲ್ಲ?

Date:

ಮಲ್ಲಿಕಾರ್ಜುನ ಖರ್ಗೆಯವರನ್ನು ಬಹುಬೇಗ ಸಿಎಂ ಆಗಿ ನೋಡಿಬಿಡುವ ಕಾತರ ಇರುವ ಅನೇಕ ರಾಜಕೀಯ ವಿಶ್ಲೇಷಕರ ಒಂದು ಅಂಶದ ಅಜೆಂಡಾ ಎಂದರೆ ಸಿದ್ದರಾಮಯ್ಯನವರನ್ನು ಶತಾಯಗತಾಯ ಸಿಎಂ ಆಗಿ ನೋಡಬಾರದು ಎನ್ನುವುದು.

ಮಲ್ಲಿಕಾರ್ಜುನ ಖರ್ಗೆಯವರಲ್ಲಿ ದಲಿತ ಮುಖ್ಯಮಂತ್ರಿಯನ್ನು ನೋಡಬಯಸುವವರು ಅವರಲ್ಲಿ ದಲಿತ ಪ್ರಧಾನ ಮಂತ್ರಿಯನ್ನೇಕೆ ಕಾಣಬಯಸುವುದಿಲ್ಲ? ಕೆಲ ರಾಜಕೀಯ ವಿಶ್ಲೇಷಕರಂತೂ ಖರ್ಗೆಯವರು ಇತ್ತ ಮುಖ್ಯಮಂತ್ರಿಯೂ ಆಗಿ, ಅತ್ತ ಎಐಸಿಸಿ ಅಧ್ಯಕ್ಷರೂ ಆಗಿ ಮುಂದುವರಿಯಬೇಕು ಎನ್ನುತ್ತಾರೆ. ಎಐಸಿಸಿ ಅಧ್ಯಕ್ಷ ಹುದ್ದೆಯೆಂದರೆ ಅದು ಪಾರ್ಟ್‌ ಟೈಮ್‌ ಜಾಬ್ ಎಂದು ಇವರೆಲ್ಲಾ ಭಾವಿಸಿದಂತಿದೆ. ಇತ್ತ ಕರ್ನಾಟಕದ ಮುಖ್ಯಮಂತ್ರಿಯೂ ಆಗಿ, ಅತ್ತ ಎಐಸಿಸಿ ಹುದ್ದೆಯನ್ನೂ ನಿಭಾಯಿಸಬಹುದು ಎನ್ನುವ ವಾದವೇ ಪ್ರಸಕ್ತ ಕಾಲಮಾನದಲ್ಲಿ ಬಾಲಿಶ… ಅದೂ ಇನ್ನೊಂದು ವರ್ಷದಲ್ಲಿ ಎದುರಾಗಲಿರುವ ಲೋಕಸಭೆಯ ಯುದ್ಧಕಾಲದಲ್ಲಿಯಂತೂ ಸಂಪೂರ್ಣ ಅಪ್ರಸ್ತುತ. ಹಿಂದೆಯೂ ಹೀಗಾಗಿದೆ ಎನ್ನುವ ಉದಾಹರಣೆಯು ಉದಾಹರಣೆಯಷ್ಟೇ ಆಗಬಲ್ಲದೇ ಹೊರತು, ಪ್ರಸಕ್ತ ಸನ್ನಿವೇಶದಲ್ಲಿ ಕಾಂಗ್ರೆಸ್‌ಗೆ ದಾರಿದೀಪವಾಗಲಾರದು.

ಒಂದೊಮ್ಮೆ, ನಮ್ಮ ರಾಜಕೀಯ ವಿಶ್ಲೇಷಕರು ಕಾಂಗ್ರೆಸ್‌ನ ಹಿತೈಷಿಗಳೇ ಆಗಿದ್ದರೆ, ದಲಿತ ಸಮುದಾಯಗಳ ಪ್ರಾಮಾಣಿಕ ಹಿತ ಕಾಯುವವರೇ ಆಗಿದ್ದರೆ, ಅವರು ಖರ್ಗೆಯವರ ಹೆಸರನ್ನು ಮುಂದಿನ ಲೋಕಸಭಾ ಚುನಾವಣೆಯ ವೇಳೆ ಪ್ರಧಾನ ಮಂತ್ರಿ ಹುದ್ದೆಗೆ ಘೋಷಿಸಲು ಕಾಂಗ್ರೆಸ್‌ನ ಎಲ್ಲ ಹಿರಿಯ ನಾಯಕರ ಮುಂದೆ ಬಲವಾಗಿ ಪ್ರತಿಪಾದಿಸಬೇಕು. ಈ ಬಗ್ಗೆ ತಾವು ಭಾಗವಹಿಸುವ ಎಲ್ಲ ಟಿವಿ ಕಾರ್ಯಕ್ರಮಗಳಲ್ಲಿ, ವೇದಿಕೆಗಳಲ್ಲಿ, ಬರೆಯುವ ಪತ್ರಿಕೆಗಳಲ್ಲಿ ಪ್ರಬಲವಾಗಿ ಮಂಡಿಸಬೇಕು. ಆದರೆ, ಬಹುತೇಕರಿಗೆ ಅದರಲ್ಲಿ ಪ್ರಾಮಾಣಿಕ ಆಸಕ್ತಿ ಇದ್ದಂತಿಲ್ಲ ಅಥವಾ ಖರ್ಗೆಯವರಲ್ಲಿ ಅವರಿಗೆ ಪ್ರಧಾನಿಯನ್ನು ಕಾಣುವುದೆಂದರೆ ಅದು ಹಾಸ್ಯಾಸ್ಪದವೋ, ದುಸ್ಸಾಧ್ಯವೋ ಆಗಿರಬಹುದೇನೋ!

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಭಿವೃದ್ಧಿಗಾಗಿ ಬಾಯಾರಿದ ರಾಜ್ಯ; ಹೊಸ ಪರ್ವಕ್ಕೆ ನಾಂದಿ ಹಾಡಲಿ ಕಾಂಗ್ರೆಸ್ 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಖರ್ಗೆಯವರನ್ನು ಬಹುಬೇಗ ಸಿಎಂ ಆಗಿ ನೋಡಿಬಿಡುವ ಕಾತರ ಇರುವ ಅನೇಕ ರಾಜಕೀಯ ವಿಶ್ಲೇಷಕರ ಒಂದು ಅಂಶದ ಅಜೆಂಡಾ ಎಂದರೆ ಸಿದ್ದರಾಮಯ್ಯನವರನ್ನು ಶತಾಯಗತಾಯ ಸಿಎಂ ಆಗಿ ನೋಡಬಾರದು ಎನ್ನುವುದು. ಒಂದು ವೇಳೆ ಖರ್ಗೆಯವರನ್ನೇ ಸಿಎಂ ಮಾಡಬೇಕೆಂದು ಹೈಕಮಾಂಡ್‌ ಅಂದುಕೊಂಡಿದ್ದರೆ ಶಾಸಕಾಂಗ ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸುವ ಔಚಿತ್ಯವೇ ಅದಕ್ಕೆ ಇರುತ್ತಿರಲಿಲ್ಲ. ಸುಮ್ಮನೆ ದೆಹಲಿಯಿಂದ ಒಂದು ಟಿಪ್ಪಣಿಯನ್ನು ಕರ್ನಾಟಕಕ್ಕೆ ಕಳುಹಿಸಿ ಖರ್ಗೆಯವರ ಹೆಸರನ್ನು ಸೂಚಿಸುತ್ತಿತ್ತು. ಹಾಗೆ ಮಾಡಿದ್ದರೆ ಈಗ ಸಿಎಂ ಗಾದಿಗೆ ಪಟ್ಟು ಹಾಕುತ್ತಿರುವ ಇಬ್ಬರೂ ತಮ್ಮ ಅಸಮಾಧಾನಗಳನ್ನು ನುಂಗಿಕೊಂಡು ಹೈಕಮಾಂಡ್‌ ತಮಗೆ ದ್ರೋಹ ಮಾಡಿತು ಎಂದು ಆಪ್ತವಲಯದಲ್ಲಿ ಬೇಸರಿಸಿಕೊಳ್ಳುವುದಷ್ಟೇ ಉಳಿಯುತ್ತಿತ್ತು.

ಅಲ್ಲ, ಅಧಿಕಾರದ ಆಸೆಯನ್ನು, ಸ್ವಹಿತಾಸಕ್ತಿಯನ್ನು ಬಿಟ್ಟು, ನಿಸ್ವಾರ್ಥವಾಗಿ ಮತ್ತೊಬ್ಬರನ್ನು ಸಿಎಂ ಮಾಡಬೇಕು ಎಂದು ಬಯಸುವ ಉದಾತ್ತ ರಾಜಕಾರಣವನ್ನು ಇಂದಿನ ಕಟುವಾಸ್ತವದಲ್ಲಿ ಎಷ್ಟು ಮಂದಿ ಪ್ರಬಲ, ಪ್ರಭಾವಿ ರಾಜಕಾರಣಿಗಳಲ್ಲಿ ಕಾಣಲು ಸಾಧ್ಯ? ವಾಸ್ತವ ಇದಾಗಿರುವಾಗ ಮುಖ ಮಾಡಬೇಕಿರುವುದು ಸತ್ಯಕ್ಕೆ ತಾನೇ… ಹೈಕಮಾಂಡ್‌ ಮಾಡುತ್ತಿರುವುದೂ ಅದನ್ನೇ.

ಅಸಲಿಗೆ ಸಿಎಂ ಹುದ್ದೆ ಯಾರಿಗೆ ನೀಡಬೇಕು ಎನ್ನುವುದರಲ್ಲಿ ಹೈಕಮಾಂಡ್‌ಗೆ ಗೊಂದಲವಿಲ್ಲ. ಹೌದು, ಈ ವಿಚಾರದಲ್ಲಿ ಹೈಕಮಾಂಡ್‌ಗೆ ಗೊಂದಲವೇ ಇಲ್ಲ. ಹೈಕಮಾಂಡ್‌ ಸಮಸ್ಯೆ ಇರುವುದು ಹಟ ಹಿಡಿದು ಕೂತಿರುವ ಮತ್ತೊಬ್ಬ ಪ್ರಬಲ ನಾಯಕನನ್ನು ರಮಿಸುವುದು ಹೇಗೆ ಎನ್ನುವುದರಲ್ಲಿ. ಆದರೆ, ಇದು ಮಾಧ್ಯಮಗಳಿಗೆ ಬೇಕಿಲ್ಲ. ಸಿಎಂ ಹುದ್ದೆಯನ್ನು ಯಾರಿಗೆ ಕೊಡಬೇಕು ಎನ್ನುವುದರಲ್ಲಿಯೇ ಗೊಂದಲವಿದೆ ಎಂದು ಬಿಂಬಿಸುವುದರಲ್ಲಿಯೇ ಅವು ಆಸಕ್ತವಾಗಿವೆ.

ಯಾರೇ ಆಗಲಿ, ಅಧಿಕಾರ ರಾಜಕಾರಣದಲ್ಲಿ ಎಷ್ಟರಮಟ್ಟಿಗೆ ಚೌಕಾಸಿ ಮಾಡಲು ಸಾಧ್ಯ? ವಾಸ್ತವದಲ್ಲಿ ತಕ್ಷಣದಲ್ಲಿ ಸಿಗಬಹುದಾದ ಅತ್ಯುನ್ನತ ಅವಕಾಶ ಹಾಗೂ ಭವಿಷ್ಯದ ಕುರಿತು ಪಡೆಯಬಹುದಾದ ಖಚಿತ ಆಶ್ವಾಸನೆ, ಭರವಸೆಗಳನ್ನು ಅರಿತು ಅಷ್ಟಕ್ಕೇ ಸೀಮಿತವಾಗಿ ಚೌಕಾಸಿ ನಡೆಸಬಹುದು. ಅದಲ್ಲದೆ ಹೋದರೆ, ನನ್ನ ಒಂದು ಕಣ್ಣು ಹೋದರೆ ಅವರದ್ದು ಎರಡೂ ಹೋಗಲಿ ಎಂದು ಭಂಡಾಟ ಆಡಬಹುದು. ಈ ಎರಡನೆಯದನ್ನು ಚೌಕಾಸಿ, ರಣತಂತ್ರ ಎಂದೆಲ್ಲಾ ಕರೆಯುವುದಿಲ್ಲ, ಅದನ್ನು ಭಂಡಾಟ ಎಂದೇ ಕರೆಯುತ್ತಾರೆ.

ಇದನ್ನು ಓದಿದ್ದೀರಾ?: ಕಾಂಗ್ರೆಸ್ `ಕಡ್ಡಿಯನ್ನು ಗುಡ್ಡ’ ಮಾಡುತ್ತಿರುವ ಬಿಜೆಪಿ ಮತ್ತು ಮಾರಿಕೊಂಡ ಮೀಡಿಯಾ

ಇಲ್ಲಿ ಎಲ್ಲ ನಾಯಕ ಶಿಖಾಮಣಿಗಳೂ ನೆನಪಿನಲ್ಲಿಡಬೇಕಾದ ಒಂದು ಪ್ರಮುಖ ಅಂಶವೆಂದರೆ ನೀವು ಯಾರೂ ನಿಮ್ಮ ಭುಜಬಲದ ಪರಾಕ್ರಮದಿಂದ ಎದುರಾಳಿಯ ರುಂಡವನ್ನು ಚೆಂಡಾಡಿ ಹೈಕಮಾಂಡ್‌ ಮುಂದೆ ಗುಡ್ಡೆ ಹಾಕಿಲ್ಲ. ಬದಲಿಗೆ ಮತದಾರರು ಅಧಿಕಾರದಲ್ಲಿದ್ದ ಪಕ್ಷವನ್ನು ಗುಡಿಸಿ ಬದಿಗೆ ಸರಿಸಿದ್ದಾರೆ. “ನಾನೇ ಮಾಡಿದೆ, ನಾನೇ ಗೆದ್ದು ಕೊಂಡು ಬಂದೆ, ನಾನು ಹೇಳಿದ್ದನ್ನೇ ಮಾಡಿದ್ದೇನೆ, ಹೈಕಮಾಂಡ್‌ಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ, ಕರ್ನಾಟಕವನ್ನು ಶಿಕಾರಿ ಮಾಡಿಕೊಂಡು ಬಂದು ಅದರ ಪಾದಕ್ಕೆ ಹಾಕಿದ್ದೇನೆ” ಎಂದೆಲ್ಲಾ ಮಾತನಾಡಿದರೆ ಅದನ್ನು ಒಂದು ಹಂತದ ನಂತರ ಜನ ಕೇಳುವುದಿಲ್ಲ. ಹೀಗೆಲ್ಲಾ ಮಾತನಾಡುವುದು ಜನತಂತ್ರದ ವ್ಯವಸ್ಥೆಗೆ ಅಪಚಾರ. ನಿಮ್ಮನ್ನು ಇಷ್ಟಪಡುವವರು ನಾಲ್ಕು ದಿನ ಈ ಮಾತು ಕೇಳಬಹುದು ಅಷ್ಟೇ. ಆದರೆ, ಅದನ್ನೇ ಮುಂದುವರೆಸಿದರೆ ಮತ ಹಾಕಿದ ಮತದಾರರು ಗೆಲುವು ತಂದು ಕೊಟ್ಟಿದ್ದು, ಶಿಕಾರಿ ಮಾಡಿದ್ದು ಇದಾವುದೂ ನೀನಲ್ಲಪ್ಪಾ ನಾವು ಎಂದು ನೆನಪಿಸುತ್ತಾರೆ. ಆದರೆ ಅವರು ನೆನಪಿಸುವ ರೀತಿ ಮಾತ್ರ ಕಠೋರವಾಗಿರುತ್ತದೆ.

ತಮ್ಮನ್ನು ಯಾರು ಆಳಬೇಕು ಎಂದು ತೀರ್ಮಾನಿಸುವವರು ಮತದಾರರು. ಅವರ ನಿರ್ಧಾರವನ್ನು ಯಾರೇ ಆಗಲಿ ವಿಮರ್ಶಿಸಬಹುದೇ ಹೊರತು ತಳ್ಳಿಹಾಕಲಾಗದು. ಹಾಗಾಗಿ, ಮತದಾರರನ್ನು ಮತ ಕೇಳಬಹುದೇ ಹೊರತು, ಶಿಕಾರಿ ಮಾಡಲಾಗದು.

‘ಮತ ಶಿಕಾರಿ’ ಮಾಡಲೆಂದೇ ತಿರುತಿರುಗಿ ಬಂದವರಿಗೆ ಅತ್ತ ಕಾಡಿನಲ್ಲಿ ಹುಲಿಯ ಬಾಲವೂ ಕಾಣಲಿಲ್ಲ, ಇತ್ತ ನಾಡಿನಲ್ಲಿ ಅಲೆಯ ಉಂಗುರವೂ ಗೋಚರಿಸಲಿಲ್ಲ, ಅಲ್ಲವೇ? ಹಾಗಾಗಿ, ನೀವು ಸಹ ಕರ್ನಾಟಕವನ್ನು ಶಿಕಾರಿ ಮಾಡಿ ಹೈಕಮಾಂಡ್‌ಗೆ ಒಪ್ಪಿಸಿಲ್ಲ, ಬದಲಿಗೆ, ಕರ್ನಾಟಕದ ಜನತೆ ಶಿಕಾರಿ ಮಾಡಿ ಜಯವನ್ನು ನಿಮ್ಮ ತಾಟಿಗೆ ಹಾಕಿದ್ದಾರೆ. ಹೀಗಿರುವಾಗ, ಪಾಲಿಗೆ ಬಂದದ್ದು ಪಂಚಾಮೃತವೆಂದು ಭಾವಿಸುವುದು ಒಳಿತು. ಬರುವ ದಿನಗಳಲ್ಲಿ ಮತ್ತಷ್ಟು, ಮಗದಷ್ಟನ್ನು ಒದಗಿಸುವಂತೆ ನಿಮ್ಮನ್ನು ಕೈಹಿಡಿದ ಮತದಾರರನ್ನೂ, ನೀವು ನಂಬಿರುವ ಅಜ್ಜಯ್ಯನವರನ್ನೂ ಕೋರಿಕೊಳ್ಳುವ ಸ್ವಾತಂತ್ರ್ಯವಂತೂ ಇದ್ದೇ ಇದೆ.

“It is Voters of Karnataka who have ‘delivered,’ yes ‘delivered’ decisive victory to Congress”. Let’s keep it that way, not as though some leader has alone ‘delivered’ Karnataka to Congress High Command. Sorry, No.

ನಟರಾಜು ವಿ.
ನಟರಾಜು ವಿ.
ಹಿರಿಯ ಪತ್ರಕರ್ತ | + posts

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ನೇರವಾದ, ತೀಕ್ಷ್ಣವಾದ ಬರಹ. ಬೆಣ್ಣೆ ಹಚ್ಚಿ, ಭಜನಾ ನಿರತ ನೇರ ದಿಟ್ಟ ನಿರಂತರ ಖ್ಯಾತಿಯ ಪತ್ರಿಕೆಗಳು, ವಾಹಿನಿಗಳ ಅಸಮರ್ಥತೆಯೇ ಈದಿನ ಪತ್ರಿಕೆಯನ್ನು ಗಂಭೀರವಾಗಿ ಪರಿಗಣಿಸುವಂತಿದೆ.

  2. ಕರುನಾಡ ಮತದಾರನ ಸ್ಪಷ್ಟ ಅಭಿಪ್ರಾಯ… ಹಾಗೂ ಸ್ವಹಿತ ಬಿಟ್ಟು ಪರಹಿತವನ್ನು ಬಯಸುವ ನಾಯಕರಾಗಬೇಕು ಏಂದು ಖಚಿತವಾಗಿ ಹೇಳಿದ್ದಿರಿ…🙏🏻

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...