ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ₹34,293 ಕೋಟಿ ಕ್ರಿಯಾ ಯೋಜನೆ ಅನುಮೋದನೆ

Date:

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ 2023-24ನೇ ಸಾಲಿನ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ₹34,293 ಕೋಟಿ ಕ್ರಿಯಾ ಯೋಜನೆಯನ್ನು ಅನುಮೋದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಖರ್ಚು ಮಾಡದಿದ್ದರೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಕಾಯ್ದೆ ಗಂಭೀರವಾಗಿದೆ. ಅದರಂತೆ ಯಾರು ನಿರ್ಲಕ್ಷ್ಯ ಮಾಡುತ್ತಾರೆ, ಅವರ ವಿರುದ್ಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿ ಇಲಾಖೆಯು ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗಳ ಅನುಷ್ಠಾನದ ನಂತರ ಪರಿಣಾಮದ ಮೌಲ್ಯಮಾಪನ ವರದಿಯನ್ನೂ ಸಿದ್ಧಪಡಿಸಿ ಫಲಾನುಭವಿಗಳ ಸ್ಥಿತಿಗತಿಯಲ್ಲಿ ಆಗಿರುವ ಬದಲಾವಣೆ ಕುರಿತು ಮಾಹಿತಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಗ್ರ ಅಭಿವೃದ್ಧಿಗಾಗಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಧಿನಿಯಮ 2013 ಮತ್ತು ನಿಯಮ 2017 ನ್ನು ಜಾರಿಗೆ ತರಲಾಗಿದೆ. ಇದರ ಅನ್ವಯ ಅಭಿವೃದ್ಧಿ ಯೋಜನೆಗಳಿಗೆ ಹಂಚಿಕೆ ಮಾಡಿರುವ ಅನುದಾನದ ಶೇ. 24.10 ರಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಒದಗಿಸಲಾಗುತ್ತಿದೆ. ಈ ಯೋಜನೆಯ ಅನುದಾನ ನೇರವಾಗಿ ಈ ಸಮುದಾಯಗಳಿಗೇ ತಲುಪಬೇಕು ಎಂಬ ಉದ್ದೇಶದಿಂದ ಕಾಯ್ದೆ ರೂಪಿಸಲಾಗಿದೆ. ಆದ್ದರಿಂದ ಈ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯದ ಒಟ್ಟು ಆಯವ್ಯಯ ಗಾತ್ರ ₹3.28 ಲಕ್ಷ ಕೋಟಿ ಆಗಿದ್ದು, ಇದರಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿಗದಿ ಪಡಿಸಿದ ಆಯವ್ಯಯ ₹1.42 ಲಕ್ಷ ಕೋಟಿ. ಇದರಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿಗೆ ಶೇ. 24.10ರಷ್ಟು ಅನುದಾನ ಅಂದರೆ ಒಟ್ಟು ₹34,221 ಕೋಟಿ ಹಾಗೂ ಹಿಂದಿನ ವರ್ಷ ಬಳಕೆಯಾಗದ ಮೊತ್ತ ₹72 ಕೋಟಿ ಸೇರಿಸಿ, ₹34,293 ಕೋಟಿ ಅನುದಾನವನ್ನು ನೀಡಲಾಗಿದೆ. ಇದರಲ್ಲಿ ಶೇ. 84 ರಾಜಸ್ವ ಹಾಗೂ ಶೇ. 16 ಬಂಡವಾಳ ಮೇಲಣ ವೆಚ್ಚವಾಗಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಎಲ್ಲ ಇಲಾಖೆಗಳ ಕಾರ್ಯಕ್ರಮಗಳ ವಿವರವಾದ ಕರಡು ಕ್ರಿಯಾ ಯೋಜನೆಯ ಕುರಿತು ಚರ್ಚಿಸಿ, ಅನುಮೋದನೆ ನೀಡಲಾಯಿತು.

2023-24 ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ₹5,790 ಕೋಟಿ, ಇಂಧನ ಇಲಾಖೆಗೆ ₹5,400 ಕೋಟಿ, ಕಂದಾಯ ಇಲಾಖೆಗೆ ₹4,041 ಕೋಟಿ, ಪರಿಶಿಷ್ಟ ಜಾತಿ ಕಲ್ಯಾಣಕ್ಕೆ ₹3,787 ಕೋಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ₹2,779 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ₹2,349 ಕೋಟಿ, ವಸತಿ ಇಲಾಖೆಗೆ ₹1,431 ಕೋಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ₹1,387 ಕೋಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ₹1,296 ಕೋಟಿ, ಆರೋಗ್ಯ ಇಲಾಖೆಗೆ ₹1,122 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

“ಮುಂದುವರಿದ ಯೋಜನೆಗಳಿಗೆ ₹1,897 ಕೋಟಿ ಈವರೆಗೆ ವೆಚ್ಚ ಮಾಡಲಾಗಿದೆ. ಮುಂದಿನ ಎಂಟು ತಿಂಗಳಲ್ಲಿ ಇಂದು ಅನುಮೋದಿಸಲಾದ ಕ್ರಿಯಾ ಯೋಜನೆಯ ಅನ್ವಯ ಯೋಜನೆ ಅನುಷ್ಠಾನ ಮಾಡಿ, ₹34,293 ಕೋಟಿ ಅನುದಾನ ಸಂಪೂರ್ಣ ವೆಚ್ಚ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

“ಅನುದಾನದ ಸಂಪೂರ್ಣ ಸದ್ಬಳಕೆಗಾಗಿ ಅನುಮೋದಿಸಿದ ಕ್ರಿಯಾ ಯೋಜನೆಯಂತೆ ಅನುಷ್ಠಾನಗೊಳಿಸಲಾಗುವುದು. ಸಂಬಂಧಿಸಿದ ಇಲಾಖೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಅನುದಾನ ಉಳಿದರೆ, ಅದರ ಮರು ಹಂಚಿಕೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯೋಜನಾ ಉಸ್ತುವಾರಿ ಕೋಶ ರಚನೆ ಪ್ರಸ್ತಾವನೆ ಮಾಡಲಾಗಿತ್ತು ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಗಳ ಅತ್ಯುತ್ತಮ ನಿರ್ವಹಣೆಗೆ ರೇಣುಕಾ ಚಿದಂಬರಂ ಅಧ್ಯಕ್ಷತೆಯ ಸಮಿತಿಯು ಸಲ್ಲಿಸಿರುವ ವರದಿಯನ್ನು ಪರಿಗಣಿಸುವಂತೆ ಪರಿಷತ್‌ ನ ಸದಸ್ಯರು ಸಲಹೆ ನೀಡಿದರು.

ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ವಸತಿ ಶಾಲೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ. 60 ಹಾಗೂ ಹೊರಗಿನ ವಿದ್ಯಾರ್ಥಿಗಳಿಗೆ ಶೇ. 40 ರಷ್ಟು ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲು ಸೂಚಿಸಲಾಯಿತು.

ಪರಿಶಿಷ್ಟ ಜಾತಿ, ಪಂಗಡದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯ ಸೌಲಭ್ಯ ಕಲ್ಪಿಸಬೇಕು. ಯಾವುದೇ ಕಾರಣಕ್ಕೆ ದಲಿತರ ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ದಲಿತರಿಗೆ ಎಲ್ಲೆಲ್ಲಿ ರುದ್ರಭೂಮಿ ಬೇಡಿಕೆ ಇದೆಯೊ ಅಲ್ಲಿ ರುದ್ರಭೂಮಿ ಒದಗಿಸಬೇಕು. ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಿಗೆ ಆದ್ಯತೆ ಮೇರೆಗೆ ಜಾಗ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಕಸ್ತೂರಿ ರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ಹೇಳಿಲ್ಲ: ಈಶ್ವರ ಖಂಡ್ರೆ ಸ್ಪಷ್ಟನೆ

ಸಿದ್ದರಾಮಯ್ಯ ಸಂವಿಧಾನದ ಗಂಭೀರ ವಿದ್ಯಾರ್ಥಿ

ಪರಿಷತ್ ಸಭೆ ಆರಂಭವಾಗುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ಅವರು ತಮ್ಮ ಆರಂಭಿಕ ಮಾತುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು, “ಸಂವಿಧಾನದ ಗಂಭೀರ ವಿದ್ಯಾರ್ಥಿ” ಎಂದು ಉಲ್ಲೇಖಿಸಿದರು. ಈ ಕಾಯ್ದೆ ಜಾರಿಗೆ ತರುವ ಹಿಂದೆ ಮುಖ್ಯಮಂತ್ರಿಗಳ ಸಾಮಾಜಿಕ ಬದ್ಧತೆಯನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳ ಮತ್ತು ಕಾಯ್ದೆಯ ಆಶಯ ಮತ್ತು ಉದ್ದೇಶಕ್ಕೆ ಧಕ್ಕೆ ಆಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ರಾಜ್ಯ ಅಭಿವೃದ್ಧಿ ಪರಿಷತ್ತಿನ ಉಪಾಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ, ಸದಸ್ಯರಾದ ಸಚಿವರಾದ ನಾಗೇಂದ್ರ, ಎಚ್‌ ಕೆ ಪಾಟೀಲ್‌, ಪ್ರಿಯಾಂಕ್‌ ಖರ್ಗೆ, ಎಂ ಸಿ ಸುಧಾಕರ್‌, ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ, ಶಾಸಕ ಪಿ ಎಂ ನರೇಂದ್ರ ಸ್ವಾಮಿ, ಪ್ರಸಾದ ಅಬ್ಬಯ್ಯ, ಇ ತುಕಾರಾಂ, ಪ್ರಕಾಶ ರಾಥೋಡ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದು ನಡೆಯಲಿದೆ ಹೈ ಪ್ರೊಫೈಲ್‌ ಕೇಸುಗಳ ವಿಚಾರಣೆ; ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದು ನಾಲ್ಕು ಹೈಪ್ರೊಫೈಲ್‌ ಕೇಸುಗಳ ವಿಚಾರಣೆ ಹೈಕೋರ್ಟ್‌ ಸೇರಿದಂತೆ ವಿವಿಧ ಕೋರ್ಟ್‌ಗಳಲ್ಲಿ...

ಲೈಂಗಿಕ ದೌರ್ಜನ್ಯ | ಸಿ ಪಿ ಯೋಗೇಶ್ವರ್ ಆಪ್ತ ಟಿ ಎಸ್‌ ರಾಜು ವಿರುದ್ಧ ದೂರು ದಾಖಲು, ಆರೋಪಿ ಪರಾರಿ

ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಚನ್ನಪಟ್ಟಣ ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ...

ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ...

ಆರ್ ಅಶೋಕ್‌ಗೆ ನಮ್ಮ ಪಕ್ಷದ ಉಸಾಬರಿ ಯಾಕೆ: ಗೃಹ ಸಚಿವ ಪರಮೇಶ್ವರ್‌ ಪ್ರಶ್ನೆ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್‌ ಅವರಿಗೆ ನಮ್ಮ ಪಕ್ಷದ...