ಆದಿತ್ಯನಾಥ ಆಡಳಿತದಲ್ಲಿ ಹತ್ತು ಸಾವಿರ ಎನ್‌ಕೌಂಟರ್ ದಾಖಲೆ ಎದೆಯುಬ್ಬಿಸುವ ವಿಚಾರವೇ?

Date:

ಯೋಗಿ ಆದಿತ್ಯನಾಥ್ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ 10,000 ಎನ್‌ಕೌಂಟರ್‌ ಮಾಡಿದ್ದಲ್ಲದೆ, ಅವುಗಳಲ್ಲಿ 63 ಮಂದಿ ಅಪರಾಧಿಗಳು ಸತ್ತಿರುವ ಅಧಿಕೃತ ವಿವರ ನೀಡಿತ್ತು.

ಯೋಗಿ ಆದಿತ್ಯನಾಥ್ ಆಡಳಿತದ ಎನ್‌ಕೌಂಟರ್ ಸ್ಪೆಷಲಿಸ್ಟ್ ಪೊಲೀಸರಿಂದ ಮತ್ತೊಂದು ಹತ್ಯೆಯಾಗಿದೆ. ಕುಖ್ಯಾತ ಗ್ಯಾಂಗ್‌ಸ್ಟರ್ ಮತ್ತು ಮಾಜಿ ಸಂಸದ ಅತೀಕ್ ಅಹ್ಮದ್ ಪುತ್ರ ಮತ್ತು ಇನ್ನೊಬ್ಬ ಸಹಚರ ಉಮೇಶ್ ಪಾಲ್ ಹತ್ಯೆಯಾಗಿದ್ದಾರೆ.

ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ 2023ರ ಮಾರ್ಚ್‌ವರೆಗೆ ಉತ್ತರ ಪ್ರದೇಶ ಪೊಲೀಸರು ಸುಮಾರು 10,000 ಎನ್‌ಕೌಂಟರ್ ನಡೆಸಿದ ಕುಖ್ಯಾತಿ ಪಡೆದಿದ್ದಾರೆ. ಸ್ವತಃ ರಾಜಾರೋಷವಾಗಿ ಸರ್ಕಾರದ ಸಾಧನೆ ಎಂಬಂತೆ ಯೋಗಿ ಆದಿತ್ಯನಾಥ್ ಈ ವಿವರ ಬಹಿರಂಗಪಡಿಸಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮಾಡಿರುವ ಹತ್ತು ಸಾವಿರ ಎನ್‌ಕೌಂಟರ್‌ನಲ್ಲಿ ಅಧಿಕೃತವಾಗಿ ಸತ್ತಿರುವುದು 63 ಮಂದಿ! 1,708 ಮಂದಿ ಅಪರಾಧಿಗಳು ಗಾಯಗೊಂಡಿದ್ದರು. ಈ ಎನ್‌ಕೌಂಟರ್‌ ಮೂಲಕ ಪೊಲೀಸರು 5,967 ಅಪರಾಧಿಗಳನ್ನು ಬಂಧಿಸಿದ್ದಾರೆ ಎನ್ನುವುದು ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರವೇ ನೀಡಿರುವ ಮಾಹಿತಿ.

2017ರಿಂದ ಉತ್ತರ ಪ್ರದೇಶದ ಪೊಲೀಸರು ನಡೆಸಿರುವ 10,713 ಎನ್‌ಕೌಂಟರ್‌ಗಳಲ್ಲಿ ಮೀರತ್‌ ಪೊಲೀಸರು ಅತ್ಯಧಿಕ 3,152 ಎನ್‌ಕೌಂಟರ್‌ ಮಾಡಿದ್ದಾರೆ. ನಂತರದ ಸ್ಥಾನದಲ್ಲಿರುವ ಆಗ್ರಾ ಪೊಲೀಸರು 1,844, ಬರೈಲಿ ಪೊಲೀಸರು 1,497 ಎನ್‌ಕೌಂಟರ್‌ ಮಾಡಿದ್ದಾರೆ.

ಹತ್ತು ಸಾವಿರಕ್ಕೂ ಮೇಲಿನ ಎನ್‌ಕೌಂಟರ್‌ನಲ್ಲಿ ಒಬ್ಬ ಪೊಲೀಸ್ ಮೃತಪಟ್ಟು, 401ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಒಟ್ಟು 5,967 ಅಪರಾಧಿಗಳನ್ನು ಹಿಡಿಯಲಾಗಿದೆ ಎಂದು ಸರ್ಕಾರದ ಅಧಿಕೃತ ವಿವರ ತಿಳಿಸಿದೆ. ಆದರೆ, ಇದು ಸಂಪೂರ್ಣ ವಾಸ್ತವ ಚಿತ್ರಣವಲ್ಲ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಬಹಳ ಚರ್ಚೆಯಲ್ಲಿತ್ತು. ರಾಜ್ಯದಲ್ಲಿ ಡಕಾಯಿತಿ ಮತ್ತು ಕಳ್ಳತನ ಸುಮಾರು ಶೇ.70ರಷ್ಟು ಮತ್ತು ಕೊಲೆಗಳ ಸಂಖ್ಯೆ ಶೇ.30ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದರು.

ವಾಸ್ತವದಲ್ಲಿ ಯೋಗಿ ಆದಿತ್ಯನಾಥ್ ಅವರ ಮೊದಲ ಅವಧಿಯಲ್ಲಿ ನಡೆದಿದ್ದ 8,472 ಎನ್‌ಕೌಂಟರ್‌ಗಳಲ್ಲಿ 3,302 ಅಪರಾಧಿಗಳು ಗಾಯಗೊಂಡಿದ್ದರೆ, 146 ಮಂದಿ ಹತ್ಯೆಯಾಗಿದ್ದರು ಎಂದು ಮಾಧ್ಯಮ ವರದಿಗಳು (ಇಂಡಿಯನ್ ಎಕ್ಸ್‌ಪ್ರೆಸ್) ಹೇಳಿವೆ.

2019ರಂದು ಉತ್ತರ ಪ್ರದೇಶದ ಎನ್‌ಕೌಂಟರ್‌ ಸಾಧನೆ ಬಗ್ಗೆ ಸುಪ್ರೀಂಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿತ್ತು. “ಇಂತಹ ಸರಣಿ ಹತ್ಯೆಗಳು ನಡೆಯುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ” ಎಂದು ಸುಪ್ರೀಂಕೋರ್ಟ್ ಹೇಳಿತ್ತು.

2021ರಲ್ಲಿ ಯೋಗಿ ಆದಿತ್ಯನಾಥ್ ಬಿಡುಗಡೆ ಮಾಡಿದ್ದ ವರದಿಯಲ್ಲಿ ಇಂತಹ ಎನ್‌ಕೌಂಟರ್‌ಗಳಲ್ಲಿ 13 ಪೊಲೀಸ್ ಸಿಬ್ಬಂದಿ ಹತ್ಯೆಯಾಗಿರುವ ವಿವರ ನೀಡಿದ್ದರು. ಆದರೆ ಈ ಬಾರಿಯ ವರದಿಯಲ್ಲಿ ಎಂಟು ವರ್ಷಗಳಲ್ಲಿ ಒಬ್ಬನೇ ಪೊಲೀಸ್ ಮೃತಪಟ್ಟಿದ್ದಾರೆ ಎನ್ನುವ ವಿವರವಿದೆ.

ಈ ಸುದ್ದಿ ಓದಿದ್ದೀರಾ?: ಉತ್ತರ ಪ್ರದೇಶ | ಗ್ಯಾಂಗ್‌ಸ್ಟರ್ ಅತೀಕ್‌ ಅಹ್ಮದ್ ಪುತ್ರನ ಎನ್‌ಕೌಂಟರ್‌

ಕಸ್ಟಡಿ ಹತ್ಯೆಗಳ ಪ್ರಮಾಣದಲ್ಲೂ ಏರಿಕೆ

ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಅಭಿಯಾನ ಸಂಸ್ಥೆ (ಎನ್‌ಸಿಎಟಿ) ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವರದಿಯಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಉತ್ತರ ಪ್ರದೇಶದ ಪೊಲೀಸ್ ಕಸ್ಟಡಿಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಉತ್ತರ ಪ್ರದೇಶ ಮತ್ತು ಗುಜರಾತ್‌ಗಳಲ್ಲಿ 2020 ಮಾರ್ಚ್ 21ರಿಂದ ಜುಲೈ 31ರ ನಡುವೆ 11 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರು.

2021ರ ಜುಲೈ 27ರಂದು ಮುಂಗಾರು ಅಧಿವೇಶನದಲ್ಲಿ ಗೃಹವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ನೀಡಿದ ವಿವರಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ 2018-19ರಲ್ಲಿ 12 ಪೊಲೀಸ್ ಕಸ್ಟಡಿ ಸಾವು, 452 ನ್ಯಾಯಾಂಗ ವಶದಲ್ಲಿ ಸಾವುಗಳು ವರದಿಯಾಗಿದ್ದವು. 2019-20ರಲ್ಲಿ 3 ಪೊಲೀಸ್ ಕಸ್ಟಡಿ ಸಾವು ಮತ್ತು 400 ನ್ಯಾಯಾಂಗ ವಶದಲ್ಲಿ ಸಾವು ವರದಿಯಾಗಿತ್ತು. 2020-21ರಲ್ಲಿ 8 ಪೊಲೀಸ್ ಕಸ್ಟಡಿ ಸಾವು ಮತ್ತು 443 ನ್ಯಾಯಾಂಗ ವಶದಲ್ಲಿ ಸಾವು ವರದಿಯಾಗಿದೆ.

ಆದರೆ ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ 2019ರಲ್ಲಿ ಶೂನ್ಯ ಕಸ್ಟಡಿ ಸಾವುಗಳು ದಾಖಲಾಗಿವೆ ಎಂದು ವಿರುದ್ಧವಾದ ವರದಿ ಪ್ರಕಟಿಸಿತ್ತು.

ಮುಸ್ಲಿಮ್ ಸಮುದಾಯದವರೇ ಹೆಚ್ಚು

ಇಕನಾಮಿಕ್ ಟೈಮ್ಸ್ ವರದಿಯೊಂದರ ಪ್ರಕಾರ, 2017ರಿಂದ 2021ರ ನಡುವೆ ಉತ್ತರ ಪ್ರದೇಶ ಪೊಲೀಸರ ಎನ್‌ಕೌಂಟರ್‌ ಗುರಿಯಾದ 146 ಅಪರಾಧಿಗಳಲ್ಲಿ ಶೇ 37ರಷ್ಟು ಮಂದಿ ಮುಸ್ಲಿಂ ಸಮುದಾಯದವರಾಗಿದ್ದರು. ಯೋಗಿ ಆದಿತ್ಯನಾಥ್ ಆಡಳಿತದ ಮೊದಲ ವರ್ಷದಲ್ಲಿ ಪೊಲೀಸ್ ಎನ್‌ಕೌಂಟರ್‌ ಬಲಿಯಾದ 45 ಮಂದಿಯಲ್ಲಿ 16 ಮಂದಿ ಮುಸ್ಲಿಮರು. 2017 ಮಾರ್ಚ್ 13ರಿಂದ 2020 ಆಗಸ್ಟ್ 9ರ ನಡುವೆ ಎನ್‌ಕೌಂಟರ್‌ನಲ್ಲಿ 124 ಮಂದಿ ಹತ್ಯೆಯಾದರೆ, 45 ಮಂದಿ ಅಲ್ಪಸಂಖ್ಯಾತ ಸಮುದಾಯದವರು. 58 ಮಂದಿ ಠಾಕೂರ್‌, ವೈಶ್ಯ, ಹಿಂದುಳಿದ ಮತ್ತು ಪರಿಶಿಷ್ಟ ಜಾತಿ/ವರ್ಗದವರು.

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಗಳೂ ಉತ್ತರ ಪ್ರದೇಶ ಎನ್‌ಕೌಂಟರ್ ಬಗ್ಗೆ ಸಾಕಷ್ಟು ಕಳವಳ ವ್ಯಕ್ತಪಡಿಸಿ ವಿವರ ಪ್ರಕಟಿಸಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟರ್ಕಿ ಸಂಸತ್‌ನ ಬಳಿ ಆತ್ಮಹತ್ಯಾ ಬಾಂಬ್ ದಾಳಿ: ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ

ಟರ್ಕಿ ದೇಶದ ಸಂಸತ್‌ 'ಅಂಕಾರ' ಬಳಿ ಇಂದು ಬೆಳಗ್ಗೆ ಆತ್ಮಹತ್ಯಾ ಬಾಂಬ್...

ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ಸಾಯಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಹಿರಿಯರ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ನಾವು ಹಿರಿಯರಿಗೆ ನೀಡುವ ಗೌರವ: ಸಿಎಂ 'ಎಷ್ಟು...

ಆರು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನ; ರಾಜಕೀಯ ಸಮರ ಸೃಷ್ಟಿಸಿದ ಎಚ್‌ಡಿಕೆ ಹೇಳಿಕೆ

ಇನ್ನು ಆರು ತಿಂಗಳಲ್ಲಿ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂಬ ಜೆಡಿಎಸ್ ನಾಯಕ...

ಇಂದಿನಿಂದ ಭಾರತದಲ್ಲಿನ ಅಫ್ಘಾನಿಸ್ತಾನ ರಾಯಭಾರ ಕಚೇರಿ ಕಾರ್ಯಾಚರಣೆ ಸ್ಥಗಿತ

ಭಾರತ ಸರ್ಕಾರವು ಸರಿಯಾದ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ ರಾಯಭಾರ ಕಚೇರಿ 'ಸಾಕಷ್ಟು...