- ನೂತನ ಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿದ್ದವಾದ ಬಿಜೆಪಿ
- ಕಾಂಗ್ರೆಸ್ ಸರ್ಕಾರದ ಗೊಂದಲದ ನೀತಿಗಳ ವಿರುದ್ದ ಪ್ರತಿಭಟನೆ
ರಾಜ್ಯ ಸರಕಾರದ ಮೂರು ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ನಾಳೆ ಮತ್ತು ನಾಡಿದ್ದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು (ಜೂನ್ 4) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಮೂರು ಗೊಂದಲದ ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
“ಗ್ಯಾರಂಟಿ ಯೋಜನೆ ಜಾರಿ ವಿಚಾರದಲ್ಲಿ ಮೊನ್ನೆ 200 ಯೂನಿಟ್‌ವರೆಗೆ ವಿದ್ಯುತ್ ಉಚಿತ ಎಂದಿದ್ದ ಸರಕಾರ, ಈಗ 80 ಯೂನಿಟ್‌ವರೆಗೆ ಎಂದು ಆದೇಶ ಹೊರಡಿಸಿ ಗೊಂದಲದ ನೀತಿ ಪ್ರದರ್ಶಿಸಿದೆ” ಎಂದು ರವಿಕುಮಾರ್ ಆಕ್ಷೇಪಿಸಿದರು.
“ಒಂದು ಕಡೆ ರಾಜ್ಯ ಸರ್ಕಾರ ವಿದ್ಯುತ್ ಶುಲ್ಕವನ್ನೂ ಏರಿಸಿದೆ. ಒಂದು ಯೂನಿಟ್‌ಗೆ 70 ಪೈಸೆ ಹೆಚ್ಚಾಗಿದೆ. ಸರಕಾರ ಒಂದೆಡೆ ಉಚಿತ ಎನ್ನುತ್ತದೆ; ಮತ್ತೊಂದು ಕಡೆ ಶುಲ್ಕ ಹೆಚ್ಚಿಸಿ ಜನರಿಂದಲೇ ಮತ್ತೆ ವಸೂಲಾತಿ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ವಾಪಸ್ ಪಡೆಯಲು ಆಗ್ರಹಿಸುತ್ತದೆ” ಎಂದು ತಿಳಿಸಿದರು.
ಹಾಲಿನ ಪ್ರೋತ್ಸಾಹ ಧನ ಇಳಿಕೆ ಮಾಡಿರುವ ವಿಚಾರವಾಗಿ ಮಾತನಾಡಿದ ರವಿಕುಮಾರ್, “ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಲು ಖರೀದಿಯ ಪ್ರೋತ್ಸಾಹ ಧನ ಪ್ರತಿ ಲೀಟರ್‌ಗೆ 5 ರೂಪಾಯಿ ಇತ್ತು. ಈಗ ಅದನ್ನು 1.5 ರೂ. ಕಡಿಮೆ ಮಾಡಿದ್ದೀರಿ. ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ ಇದು. ಇದನ್ನು ಬದಲಿಸಿ ಹಿಂದಿನಂತೆ ಪ್ರೋತ್ಸಾಹಧನ ಕೊಡಿ” ಎಂದು ರವಿಕುಮಾರ್ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ಸಚಿವ ವೆಂಕಟೇಶ್ ಕಸಾಯಿ ಖಾನೆಗೆ ಭೇಟಿ ನೀಡಿ ಬಳಿಕ ಹೇಳಿಕೆ ನೀಡಲಿ; ಪ್ರಭು ಚೌಹಾಣ್
ಇನ್ನು ಪಶು ಸಂಗೋಪನಾ ಸಚಿವ ವೆಂಕಟೇಶ್ ಹೇಳಿಕೆ ಖಂಡಿಸಿದ ರವಿಕುಮಾರ್, “ಹಸುಗಳನ್ನು ನಮ್ಮ ದೇಶದಲ್ಲಿ ಪವಿತ್ರ ಭಾವನೆಯಿಂದ ಪೂಜೆ ಮಾಡುತ್ತಾರೆ. ಮಹಾತ್ಮ ಗಾಂಧಿಯವರು ಕೂಡ ಗೋಹತ್ಯೆ ಮಾಡಬಾರದು ಎಂದಿದ್ದರು. ಈ ಬಗ್ಗೆ ಅರಿವಿದ್ದೂ ರಾಜ್ಯ ಸರ್ಕಾರ ಇದರ ವಿರುದ್ಧ ಹೋಗುತ್ತಿರುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“1948 ಮತ್ತು 1964ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದಿತ್ತು. ಇದರಲ್ಲಿ ಎಮ್ಮೆ ಮತ್ತು ಕೋಣಗಳನ್ನು ವಧಿಸಬಹುದೆಂದು ಇದೆ. 1978ರ ಕಾನೂನಿನಲ್ಲಿ ಎತ್ತು ಮತ್ತು ಹೋರಿಗಳನ್ನು, 2020ರ ನಮ್ಮ ಸರ್ಕಾರ ತಂದ ಕಾನೂನಿನಲ್ಲಿ ಗೋಹತ್ಯೆ ಮತ್ತು ಎತ್ತು/ಹೋರಿಗಳನ್ನು ಹತ್ಯೆ ಮಾಡಬಾರದು ಎಂದು ಹೇಳಿದೆ. ಆದರೆ, ಈ ಸರಕಾರವು ಗೋಹತ್ಯೆ ಅವಕಾಶ ಮಾಡಿಕೊಡಲು ಹೊರಟಿದೆ, ಇದು ಸರಿಯಲ್ಲ” ಎಂದರು.
ಜೊತೆಗೆ ಕಾನೂನು ರದ್ದತಿ ಪ್ರಸಾಪ್ತವನ್ನು ಬಿಜೆಪಿ ಖಂಡಿಸುವುದಾಗಿ ತಿಳಿಸಿದ ಅವರು ಗೋಹತ್ಯಾ ನಿಷೇಧ ಕಾನೂನು ಹಿಂಪಡೆದರೆ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.