- ‘ನೊರೆಯನ್ನು ಚೈತ್ರಾ ಕುಂದಾಪುರಳೇ ಸೃಷ್ಟಿಸಿದ್ದು’ ಎಂದು ತಿಳಿಸಿದ ಡಾ.ದಿವ್ಯಪ್ರಕಾಶ್
- ಸೆ.15ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದಿದ್ದ ವಂಚನೆ ಆರೋಪಿ ಚೈತ್ರಾ ಕುಂದಾಪುರ
ಬಿಜೆಪಿ ಟಿಕೆಟ್ ಕೊಡಿಸುವ ವಿಚಾರದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ 5 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಬಳಿಕ ಇಂದು(ಸೆ.18) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಬಿಡುಗಡೆಯಾದ ಕೂಡಲೇ ವಿಚಾರಣೆಗಾಗಿ ಆಕೆಯನ್ನು ಸಿಸಿಬಿ ಪೊಲೀಸರು ಕಚೇರಿಗೆ ಕರೆದೊಯ್ದಿದ್ದಾರೆ.
ಎಲ್ಲ ಪರೀಕ್ಷೆಗಳನ್ನು ನಡೆಸಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ತಂಡ, ಚೈತ್ರಾಳ ಆರೋಗ್ಯ ಚೆನ್ನಾಗಿದೆ ಎಂಬುದನ್ನು ದೃಢಪಡಿಸಿದ ಬಳಿಕ ಆಸ್ಪತ್ರೆಯಿಂದ ‘ಡಿಸ್ಚಾರ್ಜ್’ ಮಾಡಲಾಗಿದ್ದು, ಈ ವೇಳೆ ಸ್ಥಳದಲ್ಲಿದ್ದ ಸಿಸಿಬಿ ಪೊಲೀಸರು ನೇರವಾಗಿ ವಿಚಾರಣೆಗಾಗಿ ಆಕೆಯನ್ನು ಕಚೇರಿಗೆ ಕರೆದೊಯ್ದಿದ್ದಾರೆ.
ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರಳನ್ನು ಸಿಸಿಬಿ ಪೊಲೀಸರು ಸೆಪ್ಟೆಂಬರ್ 15 ರಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದರು. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಳು. ಕೂಡಲೇ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಿಂದ ಬಿಡುಗಡೆಯ ಬಳಿಕ ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ವಿಕ್ಟೋರಿಯಾ ಆಸ್ಪತ್ರೆಯ ಡಾ.ದಿವ್ಯಪ್ರಕಾಶ್, “ಚೈತ್ರಾಳ ಆರೋಗ್ಯದ ಬಗ್ಗೆ ಎಲ್ಲ ತಪಾಸಣೆ ನಡೆಸಿದಾಗ, ನಾರ್ಮಲ್ ಇದೆ. ಇಸಿಜಿ ಕೂಡ ನಾರ್ಮಲ್ ಇದೆ. ಮನೋ ವೈದ್ಯರು ಕೂಡ ತಪಾಸಣೆ ಮಾಡಿದ್ದಾರೆ. ಎಲ್ಲೂ ಸಮಸ್ಯೆ ಕಂಡುಬಂದಿಲ್ಲ” ಎಂದು ಹೇಳಿದ್ದಾರೆ.
ಚೈತ್ರಾಳ ಬಾಯಲ್ಲಿ ನೊರೆ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, “ಅದು ಫಂಕ್ಷನಲ್ ಆಗಿ ಆಗಿರೋದು. ಅವರೇ ಅದನ್ನು ಮಾಡಿಕೊಂಡಿದ್ದಾರೆ.ಫಿಟ್ಸ್ ರೋಗವಿರುವ ಬಗ್ಗೆ ಯಾವುದೇ ಲಕ್ಷಣ ಕಂಡು ಬಂದಿಲ್ಲ” ಎಂದು ತಿಳಿಸಿದ್ದಾರೆ.
“ಫಿಟ್ಸ್ ಪತ್ತೆ ಮಾಡುವುದಕ್ಕೂ ಎಂಆರ್‌ಐ ಸ್ಕ್ಯಾನಿಂಗ್, ಇಸಿಜಿ ಸ್ಕ್ಯಾನಿಂಗ್ ಕೂಡ ಮಾಡಿದ್ದೇವೆ. ಎಲ್ಲವೂ ನಾರ್ಮಲ್ ಇದೆ. ಸದ್ಯಕ್ಕೆ ಫಿಟ್ಸ್ ಕಂಡು ಬಂದಿಲ್ಲ. ನರರೋಗ ತಜ್ಞರು ಕೆಲವು ಮಾತ್ರೆಗಳನ್ನಷ್ಟೇ ಕೊಟ್ಟಿದ್ದಾರೆ” ಎಂದು ಡಾ.ದಿವ್ಯಪ್ರಕಾಶ್ ವಿವರಿಸಿದ್ದಾರೆ.