- ಶಾಸಕ ಸಿ ಟಿ ರವಿ ವಿರುದ್ಧ ಆಕ್ರೋಶ ಹೊರ ಹಾಕಿದ ಭೋಜೇಗೌಡ
- ಬಹಿರಂಗವಾಗಿ ಕಾಂಗ್ರೆಸ್ ಬೆಂಬಲಿಸಿದ ಜೆಡಿಎಸ್ ಎಂಎಲ್‌ಸಿ
ಬಿಜೆಪಿ ಶಾಸಕ ಸಿ ಟಿ ರವಿಯವರ ಉದ್ಧಟತನದ ನಡೆ-ನುಡಿಯಿಂದ ಜಿಲ್ಲೆಯ ಮಾನ ರಾಜಕೀಯ ಹರಾಜಾಗುತ್ತಿದೆ. ಇಂತಹವರು ನಮ್ಮ ಜನಪ್ರತಿನಿಧಿಗಳಾಗುವುದು ಬೇಡ. ಹೀಗಾಗಿ ನೀವೆಲ್ಲ ಕಾಂಗ್ರೆಸ್ ಬೆಂಬಲಿಸಿ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಚುನಾವಣಾ ಪ್ರಚಾರ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವ ಎಸ್ ಎಲ್ ಭೋಜೇಗೌಡ ಹೀಗೆ ಬಹಿರಂಗವಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡಿರುವ ವಿಚಾರವೀಗ ಕುತೂಹಲ ಹುಟ್ಟಿಸಿದೆ.
ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಚಿಕ್ಕಗೌಜ ಗ್ರಾಮದ ದೇವರಕಟ್ಟೆಯ ಬಳಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಡಿ ತಮ್ಮಯ್ಯ ಅವರ ಪ್ರಚಾರ ಕಾರ್ಯದ ವೇಳೆ, ಕೈ ಪಕ್ಷದ ಪರವಾಗಿ ಭೋಜೇಗೌಡ ಬಹಿರಂಗ ಪ್ರಚಾರದಲ್ಲಿ ಭಾಗಿಯಾಗಿ ಸಿ ಟಿ ರವಿ ವಿರುದ್ದ ಹರಿಹಾಯ್ದರು.
“ಶಾಸಕ ಸಿ ಟಿ ರವಿ ಸೋಲಿಸಲು ನೀವೆಲ್ಲ ಕಾಂಗ್ರೆಸ್‌ಗೆ ಮತ ಹಾಕಿ. ಅವರು ಜನಪರ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಸಾಬರಾಗಿ ಹುಟ್ಟಿ ಅಂತಾರೆ, ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ಬಗ್ಗೆ ಮಾತನಾಡುತ್ತಾನೆ. ಲಂಗು ಲಗಾಮಿಲ್ಲದೆ ಇಷ್ಟುದ್ದ ಬೆಳೆದವನನ್ನ ನೀವು ಕಟ್ ಮಾಡಬೇಕು” ಎಂದು ನೆರೆದಿದ್ದ ಕೈ ಕಾರ್ಯಕರ್ತರ ಬಳಿ ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? :ಅರಕಲಗೂಡು | ಜನಸಾಮಾನ್ಯರ ಖಾತೆಗೆ ₹15 ಲಕ್ಷ ಹಾಕುತ್ತೇವೆಂದ ಬಿಜೆಪಿ ನಾಮ ಹಾಕಿದೆ: ಮಲ್ಲಿಕಾರ್ಜುನ ಖರ್ಗೆ
“ನೀವು ಹಾಲುಮತ ಕುಟುಂಬದಲ್ಲಿ ಹುಟ್ಟಿದ್ದರೆ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿದವನಿಗೆ ಬುದ್ಧಿ ಕಲಿಸಿ ಅವರ ಗೌರವ ಉಳಿಸಿ. ಇಲ್ಲದಿದ್ರೆ ನೀವು ಆ ಕುಟುಂಬದಲ್ಲಿ ಹುಟ್ಟೇ ಇಲ್ಲ ಎಂದುಕೊಳ್ಳುತ್ತೇನೆ” ಎಂದು ಅವರು ಹೇಳಿದರು.
ಜೆಡಿಎಸ್ ಅಭ್ಯರ್ಥಿ ತಿಮ್ಮ ಶೆಟ್ಟಿ ಕಣದಲ್ಲಿದ್ದರೂ ಕೂಡ ಭೊಜೇಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಬೆಂಬಲ ಸೂಚಿಸಿ ಬಹಿರಂಗ ಪ್ರಚಾರ ಮಾಡುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಸಿ ಟಿ ರವಿ ಸೋಲಿಸಲು ಜೆಡಿಎಸ್- ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಯಿದೆ. ಜೊತೆಗೆ ಇಲ್ಲಿ ಹಾಲಿ ಶಾಸಕ ಸಿ ಟಿ ರವಿಗೆ ಆಡಳಿತ ವಿರೋಧಿ ಅಲೆಯೂ ಬೆಟ್ಟದಷ್ಟಿದೆ. ಜೊತೆಗೆ ಕ್ಷೇತ್ರದ ಒಂದು ಭಾಗದ ಜನರ ಅವಕೃಪೆಯನ್ನು ಅವರು ಎದುರಿಸಬೇಕಾಗಿ ಬರಬಹುದು ಎನ್ನುವ ಮಾತೂ ಕೇಳಿಬರುತ್ತಿದೆ.