- ನೀತಿಸಂಹಿತೆ ಮೀರಿ ಗುಂಪುಗೂಡಿದ್ದ ಭಜರಂಗದಳದ ಕಾರ್ಯಕರ್ತರು
- ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಚಾಲೀಸಾ ಪಠಣಕ್ಕೆ ಅವಕಾಶ ನಿರಾಕರಣೆ
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಭಜರಂಗದಳದ ಕಾರ್ಯಕರ್ತರು ನಡೆಸುತ್ತಿದ್ದ ಹನುಮಾನ್ ಚಾಲೀಸಾ ಪಠಣಕ್ಕೆ ಚುನಾವಣಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಬೆಂಗಳೂರಿನ ವಿಜಯನಗರದ ಹರಿಹರೇಶ್ವರ ದೇಗಲುದ ಮುಂಭಾಗದಲ್ಲಿ ಸುಮಾರು 70 ಮಂದಿ ಭಜರಂಗದಳದ ಕಾರ್ಯಕರ್ತರು ಇಂದು ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರಕ್ಕೆ ಪ್ರತಿಭಟನೆಯಾಗಿ ಚಾಲೀಸಾ ಪಠಣ ಆಯೋಜನೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಪ್ಪತ್ತಕ್ಕೂ ಅಧಿಕ ಭಜರಂಗದಳದ ಕಾರ್ಯಕರ್ತರು ಭಾಗಿಯಾಗಿದ್ದರು. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಚುನಾವಣಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಅಲ್ಲಿ ನೀತಿ ಸಂಹಿತೆಯಂತೆ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ, ಹನುಮಾನ್ ಚಾಲೀಸಾ ಪಠಣ ನಿರ್ಬಂಧಿಸಿದರು.
ಈ ಸುದ್ದಿ ಓದಿದ್ದೀರಾ?:ಬಹಿರಂಗ ಪ್ರಚಾರಕ್ಕೆ ತೆರೆ | ದೇವಸ್ಥಾನ ಭೇಟಿ ಆರಂಭಿಸಿದ ರಾಜಕೀಯ ನಾಯಕರು
ಈ ವೇಳೆ ಭಜರಂಗದಳದ ಕಾರ್ಯಕರ್ತರು ಮತ್ತು ಚುನಾವಣಾಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಚರ್ಚ್, ಮಸೀದಿಗಳಲ್ಲಿ ಅವಕಾಶ ಕೊಡುತ್ತೀರಾ? ಹನುಮಾನ್ ಚಾಲೀಸಾ ಪಠಣಕ್ಕೆ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಭಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಚುನಾವಣಾಧಿಕಾರಿಗಳು ನೀತಿ ಸಂಹಿತೆ ಪಾಲನೆ ಮಾಡುತ್ತಿರುವುದಾಗಿ ತಿಳಿಸಿ ಅವರನ್ನು ಅಲ್ಲಿಂದ ತೆರವು ಮಾಡಿದ್ದಾರೆಂದು ತಿಳಿದು ಬಂದಿದೆ.