ಮೋದಿ ಬರ್ತಡೇ ಸಂಭ್ರಮಕ್ಕೆ ಗುಜರಾತ್ ಬಲಿ; ಶಾಸಕ ಜಿಗ್ನೇಶ್ ಮೆವಾನಿ ಆರೋಪ

Date:

ಪ್ರಧಾನಿ ಮೋದಿ ಹುಟ್ಟು ಹಬ್ಬ ಆಚರಣೆಗಾಗಿ ಸರ್ದಾರ್ ಸರೋವರದಿಂದ (ಅಣೆಕಟ್ಟು) ನರ್ಮದಾ ನದಿಗೆ ಮುಂದಾಲೋಚನೆ ಇಲ್ಲದೆ ಗುಜರಾತ್ ಮುಖ್ಯಮಂತ್ರಿ ನೀರು ಹರಿಸಲು ಆದೇಶಿಸಿದ್ದರಿಂದ ರಾಜ್ಯದ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ ಎಂದು ಗುಜರಾತ್‌ನ ಶಾಸಕ ಜಿಗ್ನೇಶ್ ಮೆವಾನಿ ಆರೋಪಿಸಿದ್ದಾರೆ.

ಸೆಪ್ಟೆಂಬರ್‌ 17ರಂದು ಮೋದಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅಂದೇ ಸರ್ದಾರ್‌ ಸರೋವರದ ಎಲ್ಲ ಪ್ರವಾಹ ಗೇಟ್‌ಗಳನ್ನು ತೆರೆದು, ಒಂದೇ ಬಾರಿಗೆ 18 ಲಕ್ಷ ಕ್ಯೂಸೆಕ್ಸ್‌ ನೀರನ್ನು ನರ್ಮದಾ ನದಿಗೆ ಹರಿಸಲಾಗಿದೆ. ಇದರಿಂದ ಪ್ರವಾಹ ಉಂಟಾಗಿದೆ. ಮಾತ್ರವಲ್ಲ, ಅಂದಿನವರೆಗೂ ನದಿಗೆ ನೀರು ಹರಿಸದ ಪರಿಣಾಮ ಜಲಾಶಯದ ಹಿನ್ನೀರಿನ ಬಳಿಯಿದ್ದ 10,000 ಮನೆಗಳು ಜಲಾವೃತವಾಗಿವೆ. ಮೋದಿ ಅವರ ಹುಟ್ಟು ಹಬ್ಬ ಆಚರಿಸಲು ಗುಜರಾತ್ ಮುಖ್ಯಮಂತ್ರಿ ಜನರ ಬದುಕನ್ನು ಹಾಳುಗೆಡವಿದ್ದಾರೆ ಎಂದು ಜಿಗ್ನೇಶ್ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಜಿಗ್ನೇಶ್, “ಮಧ್ಯಪ್ರದೇಶದ ಇಂದಿರಾಸಾಗರ ಅಣೆಕಟ್ಟೆಯಲ್ಲಿ ನರ್ಮದಾ ನದಿಗೆ 9.45 ಲಕ್ಷ ಕ್ಯೂಸೆಕ್ಸ್‌ ನೀರು ಬಿಡುಗಡೆ ಮಾಡಲಾಗಿತ್ತು. ಇದರಿಂದಾಗಿ ಕಳೆವು ದಿನಗಳ ಹಿಂದೆಯೇ ಸರ್ದಾರ್ ಸರೋವರ ಗರಿಷ್ಠ ಮಟ್ಟಕ್ಕೆ ತುಂಬಿತ್ತು. ಆಗಲೇ, ನದಿಗೆ ನೀರು ಹರಿಸುವಂತೆ ಸೌರಾಷ್ಟ್ರ, ಉತ್ತರ ಗುಜರಾತ್ ಮತ್ತು ಕಚ್‌ನ ಜನರು ಒತ್ತಾಯಿಸಿದ್ದರು. ಆದರೂ, ಆಗ ನದಿಗೆ ನೀರು ಹರಿಸದೆ, ಸೆ.17ರವರೆಗೂ ಕಾದಿದ್ದು, ಮೋದಿ ಹುಟ್ಟು ಹಬ್ಬದಂದು ಏಕಾಏಕಿ ಎಲ್ಲ ಗೇಟ್‌ಗಳನ್ನು ತೆಗೆದಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ತಮಿಳುನಾಡು | ‘ಬಿಜೆಪಿ ಜೊತೆಗಿನ ಮೈತ್ರಿ ಮುರಿದಿದ್ದೇವೆ’ ಎಂದು ಘೋಷಿಸಿದ ಎಐಎಡಿಎಂಕೆ

“ಬುದ್ದಿಯಿಲ್ಲದೆ ಒಂದೇ ಬಾರಿಗೆ 18 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಗುಜರಾತ್‌ನ ಭರೂಚ್, ವಡೋದರಾ ಮತ್ತು ನರ್ಮದಾ ಜಿಲ್ಲೆಗಳು ಜಲಾವೃತವಾಗಿವೆ. ಮನೆಗಳು, ವಸತಿ ಗೃಹಗಳಿಗೆ ನೀರು ನುಗ್ಗಿದೆ. ಸಾವಿರಾರು ಜನರು ಅಸಹಾಯಕರಾಗಿದ್ದಾರೆ. ನೂರಾರು ಮನೆಗಳು ನಾಶವಾಗಿವೆ. ಕೆಲವರು ತಮ್ಮ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಗಳ ಛಾವಣಿ ಮೇಲೆ ನಿಂತು ಬದುಕುಳಿದಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಈಗಾಗಲೇ ರೆಡ್ ಅಲರ್ಟ್ ಘೋಷಿಸಿದ್ದರಿಂದ ಮತ್ತು ಅಣೆಕಟ್ಟಿನಲ್ಲಿ ಹೆಚ್ಚಿನ ನೀರು ಇದ್ದುದ್ದರಿಂದ ಕೆಲವು ದಿನಗಳ ಹಿಂದೆಯೇ ಹಂತಹಂತವಾಗಿ ನೀರನ್ನು ಸುಲಭವಾಗಿ ಹರಿಸಬಹುದಿತ್ತು. ಆದರೆ, ಮೋದಿ ಹುಟ್ಟುಹಬ್ಬದ ಆಚರಣೆಗಾಗಿ ನೀರು ಹರಿಸುವುದನ್ನು ತಡೆಯಲಾಗಿತ್ತು. ಇದು ಸರಿಯೇ” ಎಂದು ಜಿಗ್ನೇಶ್ ಪ್ರಶ್ನಿಸಿದ್ದಾರೆ.

“ನೀರು ಬಿಡಲು ಪ್ರಧಾನಿಯವರ ಹುಟ್ಟುಹಬ್ಬಕ್ಕೆ ಕಾಯುತ್ತಿದ್ದರು. ಆದ್ದರಿಂದ, ಇದು ನೈಸರ್ಗಿಕ ಪ್ರವಾಹವಲ್ಲ. ಮೋದಿ ಹುಟ್ಟು ಹಬ್ಬ ಆಚರಣೆಯ ಮಾನವ ನಿರ್ಮಿತ ವಿಪತ್ತು. ಇದು ಅವಮಾನಕರ ಮತ್ತು ಅಸಹ್ಯಕರ ಸ್ಥಿತಿ!” ಎಂದು ಜಿಗ್ನೇಶ್ ಕಿಡಿಕಾರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಪಕ್ಷಗಳಿಂದ ನೀರಿನ ರಾಜಕಾರಣ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಕಾವೇರಿ ನೀರಿನ ವಿಚಾರದಲ್ಲಿ ವಿಪಕ್ಷಗಳ ಮುಖಂಡರಾದ ಬಿಎಸ್​ವೈ, ಬೊಮ್ಮಾಯಿ, ಹೆಚ್​ಡಿ ಕುಮಾರಸ್ವಾಮಿಯವರು...

ತಮಿಳುನಾಡಿಗೆ ನೀರು ಬಿಟ್ಟಿದ್ದೇ ಆದರೆ ನಮ್ಮ ನಡೆ ಬೇರೆ ಇರಲಿದೆ: ಕುಮಾರಸ್ವಾಮಿ ಎಚ್ಚರಿಕೆ

ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟ ಸರ್ಕಾರ ತಮಿಳುನಾಡಿನವರು ಎರಡು ಬೆಳೆ ಬೆಳೆಯುತ್ತಾರೆ:...

ಹೊಸ ಸಂಸತ್ ಕಟ್ಟಡವನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎನ್ನಬೇಕು: ಜೈರಾಮ್ ರಮೇಶ್

ಹೊಸ ಸಂಸತ್ ಭವನದ ರಚನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್...