ಪ್ರಲ್ಹಾದ್ ಜೋಶಿ ಪ್ರತಿಷ್ಠೆ, ಶೆಟ್ಟರ್‌ ಬಂಡಾಯದ ನಡುವೆ ರಾಷ್ಟ್ರದ ಗಮನ ಸೆಳೆಯುತ್ತಿರುವ ಧಾರವಾಡ ಕ್ಷೇತ್ರ

Date:

ಧಾರವಾಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಐದರ ಮೇಲೆ ಕಣ್ಣಿಟ್ಟಿರುವ ಪ್ರಲ್ಹಾದ್ ಜೋಶಿ, ಎರಡು ಕ್ಷೇತ್ರಕ್ಕೆ ತೃಪ್ತಿಪಡಬೇಕಾಗುವುದೇ ಅಥವಾ 4-4 ಸಮಬಲದ ಪ್ರದರ್ಶನದಲ್ಲಿ ಸಮಾಧಾನ ಹೊಂದುವರೇ ಎನ್ನುವ ಕುತೂಹಲ ಬಿಜೆಪಿ ಪಾಳಯದಲ್ಲಿದೆ. ಇತ್ತ, ಕಾಂಗ್ರೆಸ್ ಆರು ಕ್ಷೇತ್ರದ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಧಾರವಾಡ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳು ಬರುತ್ತವೆ; ಧಾರವಾಡ, ಹುಬ್ಬಳ್ಳಿ – ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಹುಬ್ಬಳ್ಳಿ-ಧಾರವಾಡ ಕೇಂದ್ರ, ನವಲಗುಂದ, ಕಲಘಟಗಿ ಹಾಗೂ ಕುಂದಗೋಳ. ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಹಾವೇರಿ ಜಿಲ್ಲೆಯಲ್ಲಿ ಬರುವ ಶಿಗ್ಗಾವಿ ಕೂಡ ಸೇರುತ್ತದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಈ ಎಂಟು ಕ್ಷೇತ್ರಗಳಲ್ಲಿ ಎರಡರಲ್ಲಿ ತನಗೆ ಖಚಿತ ಗೆಲುವು ಸಿಗಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ. ಕಾಂಗ್ರೆಸ್‌ಗೆ ಮೂರರಲ್ಲಿ ಗೆಲ್ಲುವ ಸಾಧ್ಯತೆಯಿದೆ. ಆದರೆ, ಉಳಿದ ಮೂರರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇದೆ. ಅಂತಿಮವಾಗಿ 4-4 ಸಮವಾಗಿ ಹಂಚಿಹೋಗುವ ಸಾಧ್ಯತೆಯೂ ಇದೆ. ಆದರೆ ನಷ್ಟವಾದರೆ ಬಿಜೆಪಿಗೆ ಆಗುವ ಸಾಧ್ಯತೆಯೇ ಹೆಚ್ಚು, ಕಾಂಗ್ರೆಸ್‌ಗೆ ಲಾಭವಾಗುವ ಲಕ್ಷಣಗಳೇ ಹೆಚ್ಚು ಕಾಣಿಸುತ್ತಿವೆ.

ಪ್ರಲ್ಹಾದ್ ಜೋಶಿಗೆ ಎಂಟು ಕ್ಷೇತ್ರಗಳ ಟಾರ್ಗೆಟ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಕ್ಷೇತ್ರಗಳ ಪೈಕಿ ಐದನ್ನು ಗೆಲ್ಲಲೇಬೇಕು ಎಂದು ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಟಾಸ್ಕ್ ಕೊಟ್ಟಿದ್ದಾರೆ ಎಂದು ಹುಬ್ಬಳಿಯ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಐದು ಸ್ಥಾನ ಗೆಲ್ಲುವುದು ಬಿಜೆಪಿಗೆ ಸರಳವಲ್ಲ. ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೆಲ್ಲುತ್ತಾರೆ. ಹಾಗೆಯೇ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅರವಿಂದ್ ಬೆಲ್ಲದ್ ಗೆಲ್ಲುತ್ತಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಾರೆ.

ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಗೆಲುವಿಗಾಗಿ ನಟ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆತರುವುದರ ಜೊತೆಗೆ ಬಿಜೆಪಿಯ ಕಾರ್ಯಕರ್ತರನ್ನೆಲ್ಲ ಮನೆ- ಮನೆಗೆ ರೌಂಡ್ ಹೊಡಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬೆಲ್ಲದ್ ಕುಟುಂಬ ಮತ್ತು ಮೋರೆ ಕುಟುಂಬದ ರಾಜಕೀಯದ್ದೇ ಪಾರುಪತ್ಯ. ಲಿಂಗಾಯತರ ಪ್ರಬಲ ಕ್ಷೇತ್ರವಾದ ಇಲ್ಲಿ ಬೆಲ್ಲದ್ ಕುಟುಂಬದ ರಾಜಕೀಯ ಗೆಲುವಿನ 40 ವರ್ಷದ ಇತಿಹಾಸವಿದೆ. ಈ ಬಾರಿಯೂ ಆ ಇತಿಹಾಸ ಪುನರಾವರ್ತನೆಯಾಗುವ ಸಾಧ್ಯತೆಯೇ ಹೆಚ್ಚು.

ಗೆಲುವಿನ ದಡ ಮುಟ್ಟುವರೆ ಪ್ರಸಾದ್ ಅಬ್ಬಯ್ಯ?

ಕಾಂಗ್ರೆಸ್‌ಗೆ ನೂರು ಪ್ರತಿಶತ ತೆಕ್ಕೆಯಲ್ಲಿರುವ ಕ್ಷೇತ್ರಗಳೆಂದರೆ ಹುಬ್ಬಳ್ಳಿ-ಧಾರವಾಡ ಪೂರ್ವ, ಕುಂದಗೋಳ ಹಾಗೂ ಕಲಘಟಗಿ. ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬ್ಬಯ್ಯ ಪ್ರಸಾದ್ ಗೆಲುವು ಖಚಿತವಾಗಲು ಕೆಲವು ಕಾರಣಗಳಿವೆ. ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿದ್ದ ವೀರಭದ್ರಪ್ಪ ಹಾಲರವಿ ಜೆಡಿಎಸ್‌ಗೆ ಪಕ್ಷಾಂತರ ಮಾಡಿ ಸ್ಪರ್ಧಿಸಿದ್ದಾರೆ. ಹೀಗಾಗಿ ಬಿಜೆಪಿ ಮತಗಳು ವಿಭಜನೆಯಾಗುವ ಸಾಧ್ಯತೆಯೇ ಹೆಚ್ಚಿದೆ. ಅಲ್ಲದೆ, ಬಿಜೆಪಿ ಈ ಬಾರಿ ಕ್ಷೇತ್ರದಲ್ಲಿ ವೈದ್ಯ ಕ್ರಾಂತಿ ಕಿರಣ್ ಅವರಿಗೆ ಟಿಕೆಟ್ ನೀಡಿದೆ. ಕ್ರಾಂತಿ ಕಿರಣ್ ಅವರಿಗೆ ಅನುಭವಿ ರಾಜಕಾರಣಿಗಳ ವಿರುದ್ಧ ಸ್ಪರ್ಧಿಸಲು ಅಗತ್ಯವಿರುವಂತಹ ರಾಜಕೀಯ ಮುತ್ಸದ್ದಿತನವಿಲ್ಲ ಅವರಿಗೆ ಸಾಂಪ್ರದಾಯಿಕ ರಾಜಕಾರಣ ಹೊಸದು. ಅನುಭವಿಗಳ ನಡುವೆ ಅವರು ತಮ್ಮ ಗೆಲುವನ್ನು ಹುಡುಕುವುದು ಸುಲಭವಲ್ಲ. ಹಂಚಿ ಹೋಗಬಹುದಾದ ಮತಗಳ ನಡುವೆ ಕಾಂಗ್ರೆಸ್‌ ಅಭ್ಯರ್ಥಿ ಅಬ್ಬಯ್ಯ ಪ್ರಸಾದ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. 

ಕುಂದಗೋಳದಲ್ಲಿ ಕುಸಮಾ ಶಿವಳ್ಳಿಗೆ ಗೆಲುವಿನ ಸಾಧ್ಯತೆ

ಕುಂದಗೋಳದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರಿಗೆ ಖಚಿತ ಗೆಲುವಿನ ಸಾಧ್ಯತೆಯಿದೆ. ಈ ಕ್ಷೇತ್ರದಲ್ಲಿ ಕುರುಬ ಸಮುದಾಯ ಎರಡನೇ ಅತಿದೊಡ್ಡ ಸಮುದಾಯ. ಕುಸುಮಾ ಶಿವಳ್ಳಿ ಕುರುಬ ಸಮುದಾಯದವರು. ಜೊತೆಗೆ, ಈ ಬಾರಿ ಕುರುಬ ಸಮುದಾಯ ಬಹುತೇಕ ಕಾಂಗ್ರೆಸ್ ಪರವಾಗಿಯೇ ಇದೆ. ಬಿಜೆಪಿ ಟಿಕೆಟ್‌ನಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದ ಚಿಕ್ಕನಗೌಡ್ರಿಗೆ ಈ ಬಾರಿ ಟಿಕೆಟ್ ದೊರೆತಿಲ್ಲ. ಎಂ ಆರ್ ಪಾಟೀಲ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಬಂಡಾಯವೆದ್ದಿರುವ ಚಿಕ್ಕನ ಗೌಡ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಬ್ಬರೂ ಲಿಂಗಾಯತ ಸಮುದಾಯದವರು. ಅಲ್ಲದೆ, “ಬಿಜೆಪಿಯನ್ನು ಸೋಲಿಸುವುದೇ ನನ್ನ ಸ್ಪರ್ಧೆಯ ಮುಖ್ಯ ಉದ್ದೇಶ, ಗೆಲುವಲ್ಲ” ಎಂದು ಚಿಕ್ಕನಗೌಡ್ರ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಪ್ರಲ್ಹಾದ್ ಜೋಶಿ ಮೇಲಿನ ಆಕ್ರೋಶದಿಂದ ಸಡ್ಡು ಹೊಡೆದು ಚಿಕ್ಕನಗೌಡ್ರ ಕಣಕ್ಕಿಳಿದಿರುವುದರಿಂದ ಕ್ಷೇತ್ರದಲ್ಲಿ ಕುಸುಮಾ ಗೆಲುವು ಸಲೀಸಾಗಲಿದೆ ಎನ್ನಲಾಗುತ್ತಿದೆ.

ಸಂತೋಷ್ ಲಾಡ್‌ಗೆ ನೆರವಾಗಲಿದೆಯೇ ವೈಯಕ್ತಿಕ ವರ್ಚಸ್ಸು?

ಕಲಘಟಗಿ ಕ್ಷೇತ್ರದಲ್ಲಿ ಸಂತೋಷ್ ಲಾಡ್ ಜನಪ್ರಿಯತೆ ಹೆಚ್ಚಾಗಿರುವುದರಿಂದ ಅವರು ಗೆಲ್ಲುವ ಸಾಧ್ಯತೆಯಿದೆ. ಮರಾಠರು ಈ ಕ್ಷೇತ್ರದಲ್ಲಿ ಹೆಚ್ಚಾಗಿರುವುದು ಅವರಿಗೆ ವರವಾಗಿದ್ದರೆ, ಲಿಂಗಾಯತ ಸಮುದಾಯದ ಜೊತೆಗೂ ಸಂತೋಷ್ ಲಾಡ್ ಅವರ ಸಂಬಂಧ ಚೆನ್ನಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ಸುರಿದಿರುವುದೂ ಅವರಿಗೆ ಲಾಭವಾಗಲಿದೆ. ಜೊತೆಗೆ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ನಾಗರಾಜ್ ಛಬ್ಬಿ ಪರವಾಗಿ ಪ್ರಚಾರಕ್ಕೇ ಹೋಗದೆ ಇರುವ ಸಮಸ್ಯೆ ಪಕ್ಷಕ್ಕೆ ಕಾಡಿದೆ. ಕಾರ್ಯಕರ್ತರು ಮತ್ತು ಅಭ್ಯರ್ಥಿ ನಡುವೆ ಸಂಯೋಜನೆ- ಸಂವಹನದ ಕೊರತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುವ ನಿರೀಕ್ಷೆ ಇದೆ. ಆದರೆ ಇನ್ನೂ ಅವರು ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವ ಹಾಗಿಲ್ಲ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಉಳಿದ ಮೂರು ಕ್ಷೇತ್ರಗಳಾದ ಧಾರವಾಡ, ನವಲಗುಂದ ಹಾಗೂ ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ ಗೆಲುವು ಯಾರ ಕಡೆಗೆ ಸರಿಯಲಿದೆ ಎನ್ನುವ ಕುತೂಹಲ ಕೆರಳಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆಯಿದೆ. ಜೆಡಿಎಸ್ ಪ್ರಾಮುಖ್ಯತೆ ಹೆಚ್ಚೇನಿಲ್ಲ. ಆದರೆ ಅಂತಿಮ ಗೆಲುವು ಹೆಚ್ಚೂ-ಕಡಿಮೆ ಕಾಂಗ್ರೆಸ್ ಕಡೆಗೆ ಹೊರಳುವ ಸಾಧ್ಯತೆಯೇ ಹೆಚ್ಚಿದೆ.

ಅಮೃತ ದೇಸಾಯಿ ವಿರುದ್ಧ ಆಡಳಿತ ವಿರೋಧಿ ಅಲೆ

ಧಾರವಾಡ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ನಡುವೆ ಇಲ್ಲಿ ನೇರ ಸ್ಪರ್ಧೆ ಇದೆ. ಆದರೆ ಅಮೃತ ದೇಸಾಯಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಅಮೃತ ದೇಸಾಯಿ ಶಾಸಕರಾಗಿದ್ದಾಗ, ತಮ್ಮದೇ ಸರ್ಕಾರವಿದ್ದರೂ ಕ್ಷೇತ್ರದಲ್ಲಿ ಏನೂ ಕೆಲಸ ಮಾಡಿಲ್ಲ ಎನ್ನುವ ಭಾವನೆ ಹಬ್ಬಿದೆ. ಜೊತೆಗೆ, ಧಾರವಾಡ ಕ್ಷೇತ್ರ ಸಾಮಾನ್ಯವಾಗಿ ಯಾರನ್ನೂ ಸತತವಾಗಿ ಎರಡು ಬಾರಿ ಗೆಲ್ಲಿಸಿಲ್ಲ. ವಿನಯ ಕುಲಕರ್ಣಿ ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದರೂ, ಸತತವಾಗಿ ಗೆದ್ದಿಲ್ಲ. ಒಮ್ಮೆ ಸೋತು ಮತ್ತೊಮ್ಮೆ ಗೆದ್ದಿದ್ದಾರೆ. ಹೀಗಾಗಿ ಈ ಬಾರಿ ವಿನಯ ಕುಲಕರ್ಣಿ ಗೆಲ್ಲುವ ಸಾಧ್ಯತೆಯೂ ಹೆಚ್ಚಾಗಿದೆ ಎನ್ನುವ ಅಭಿಪ್ರಾಯವಿದೆ.

ಮುನೇನಕೊಪ್ಪ ವಿರುದ್ಧ ಕೋನರೆಡ್ಡಿ ಮೇಲುಗೈ

ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರಪಾಟೀಲ ಮುನೇನಕೊಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎನ್‌ ಎಚ್ ಕೋನರೆಡ್ಡಿ ಇಬ್ಬರೂ ಲಿಂಗಾಯತ ಸಮುದಾಯದ ಅಭ್ಯರ್ಥಿಗಳು. ಹಿಂದಿನಿಂದಲೂ ಈ ಕ್ಷೇತ್ರದಲ್ಲಿ ಮುನೇನಕೊಪ್ಪ ಮತ್ತು ಕೋನರೆಡ್ಡಿ ನಡುವೆ ತೀವ್ರ ಸ್ಪರ್ಧೆಯಿದ್ದು, ಅಂತಿಮ ಕ್ಷಣದಲ್ಲಿ ಯಾರಾದರೂ ಒಬ್ಬರ ಕಡೆಗೆ ಗೆಲುವು ವಾಲುವುದು ಕಂಡುಬಂದಿದೆ. ಈ ಬಾರಿ ಕೋನರೆಡ್ಡಿ ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗಿದೆ. ಕೋನರೆಡ್ಡಿ ಜೆಡಿಎಸ್‌ನಲ್ಲಿ ಇದ್ದಾಗಲೇ ಈ ಕ್ಷೇತ್ರದಲ್ಲಿ ಗೆದ್ದುಬಂದಿದ್ದರು. ಇದೀಗ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಪರ ಮತಗಳೂ ಬೀಳುವ ಕಾರಣ ಅವರಿಗೆ ಗೆಲುವು ಕಷ್ಟವಾಗದು ಎನ್ನಲಾಗುತ್ತಿದೆ.

ಶೆಟ್ಟರ್‌ ಸುತ್ತ ಹೈವೋಲ್ಟೇಜ್ ರಾಜಕಾರಣ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಗ್ಗೆಈ ಬಾರಿ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಿಂದೆ ಐದು ಬಾರಿ ಬಿಜೆಪಿಯ ಟಿಕೆಟ್ ಪಡೆದು ಗೆದ್ದಿರುವ ಜಗದೀಶ್ ಶೆಟ್ಟರ್ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಶೆಟ್ಟರ್ ವಿರುದ್ಧ ಬಿಜೆಪಿಯಿಂದ ಮಹೇಶ್ ಟಿಂಗಿನಕಾಯಿ ಸ್ಪರ್ಧಿಸಿದ್ದಾರೆ. ಇಲ್ಲಿ ಸ್ಪರ್ಧಿ ಮಹೇಶ್ ಅಪ್ರಸ್ತುತರಾಗಿದ್ದಾರೆ. ‘ಶೆಟ್ಟರ್ ಸೋಲಿಸಿ ಬಿಜೆಪಿಯನ್ನು ಗೆಲ್ಲಿಸಿ’ ಎನ್ನುವುದೇ ಪ್ರಚಾರ ವಾಕ್ಯವೆನಿಸಿದೆ. ಅವರನ್ನು ಸೋಲಿಸಲೇಬೇಕು ಎಂದು ಬಿಜೆಪಿಯ ಕೇಂದ್ರ- ರಾಜ್ಯದ ನಾಯಕರು- ಕಾರ್ಯಕರ್ತರ ಪಡೆ ಕ್ಷೇತ್ರದಲ್ಲಿ ಟೊಂಕ ಕಟ್ಟಿ ನಿಂತಿದೆ. ಈ ಪ್ರದೇಶಕ್ಕೆ ಪ್ರಚಾರಕ್ಕೆಂದು ಬರುವ ಬಿಜೆಪಿಯ ಕೇಂದ್ರದ ನಾಯಕರು ಹುಬ್ಬಳ್ಳಿಗೆ ಬಂದು ಇಳಿಯುತ್ತಲೇ ಶೆಟ್ಟರ್ ವಿರುದ್ಧ ವಾಗ್ಸಮರ ಆರಂಭಿಸುತ್ತಾರೆ. ಅತ್ತ, ಕಾಂಗ್ರೆಸ್ ಕೂಡ ಶೆಟ್ಟರ್ ಪರವಾಗಿ ಪ್ರಬಲ ಪ್ರಚಾರಾಭಿಯಾನ ಕೈಗೊಂಡಿದೆ. ಹೀಗಾಗಿ ಹೈ ವೋಲ್ಟೇಜ್ ಕದನದ ಪ್ರತಿಷ್ಠಿತ ಕಣವಾಗಿಬಿಟ್ಟಿದೆ. ಹೀಗಾಗಿ ಅಂತಿಮ ಕ್ಷಣದವರೆಗೂ ಗೆಲುವು ಯಾರ ಕಡೆಗೆ ಹೊರಳಲಿದೆ ಎನ್ನುವುದು ಹೇಳಲಾಗದು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿತೀಶ್ ಪ್ರಯಾಣಕ್ಕೆ ಸಂಚಾರ ತಡೆ; ಟ್ರಾಫಿಕ್‌ನಲ್ಲಿ ಸಿಲುಕಿದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಕ್ಕಾಗಿ ಪೊಲೀಸರು ರಸ್ತೆಯಲ್ಲಿ ಇತರ ವಾಹನ...

ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ: ಸಿದ್ದರಾಮಯ್ಯ

ಕಾವೇರಿ ನೀರು ಬಿಡುವ ಆದೇಶಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ...

‘ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ಧಿ ಬಂತಂತೆ’ ಇದು ರಾಜ್ಯ ಸರ್ಕಾರದ ಪರಿಸ್ಥಿತಿ: ಈಶ್ವರಪ್ಪ ಲೇವಡಿ

ಡಿಕೆ ಶಿವಕುಮಾರ್‌ ಅವರ ಕುತಂತ್ರದಿಂದ ರಾಜ್ಯದ ಜನರಿಗೆ ಸಮಸ್ಯೆ ನೀರು ಬಿಡುವುದಕ್ಕಿಂತ ಮೊದಲೇ...

ದಾವಣಗೆರೆ | ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ : ದೂರು ದಾಖಲು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು...