ಬೀದರ್ ಉಸ್ತುವಾರಿ ಖಂಡ್ರೆ ಹೆಗಲಿಗೆ; ಮುಂದಿವೆ ಸವಾಲುಗಳು

Date:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ನಿರೀಕ್ಷೆಯಂತೆ ಬಹುತೇಕ ಜಿಲ್ಲೆಗಳಿಗೆ ಆಯಾ ಜಿಲ್ಲೆಯ ಸಚಿವರ ಹೆಗಲಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆಯಾಗಿದೆ.

ಬೀದರ್‌ ಜಿಲ್ಲೆಯ ಭಾಲ್ಕಿ ಶಾಸಕ, ಅರಣ್ಯ, ಜೈವಿಕ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಬೀದರ್ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಜಿಲ್ಲೆಯ ಇನ್ನೋರ್ವ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಅವರಿಗೆ ಉಸ್ತುವಾರಿ ಕೈತಪ್ಪಿದೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ ಗೆಲುವು ಸಾಧಿಸಿದರೆ, ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಗೆದ್ದ ಇಬ್ಬರಿಗೂ ನಿರೀಕ್ಷೆಯಂತೆ ಮಂತ್ರಿಭಾಗ್ಯ ಒಲಿದಿದೆ. ಆದರೆ, ಬೀದರ್ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ ರಹೀಂ ಖಾನ್ ಅವರಿಗೆ ಉಸ್ತುವಾರಿ ಕೈತಪ್ಪಿದೆ. ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಬೀದರ್ ಉಸ್ತುವಾರಿ ಹೆಗಲೇರಿದೆ.

ಈಶ್ವರ ಖಂಡ್ರೆಗೆ ಉಸ್ತುವಾರಿ ನೀಡಿದ್ದು ಯಾಕೆ?

ಭಾಲ್ಕಿ ಶಾಸಕ ಈಶ್ವರ ಖಂಡ್ರೆ 2008 ರಿಂದ ಸತತವಾಗಿ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಅದೇ ಸಂದರ್ಭದಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಆಡಳಿತ ನಿಭಾಯಿಸಿದ್ದರು. ಇನ್ನು ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಬೀದರ್ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ವರ್ಚಸ್ಸು ಕಾಪಾಡಿಕೊಂಡ ಖಂಡ್ರೆ ಉಸ್ತುವಾರಿ ಜವಾಬ್ದಾರಿ ನಿಭಾಯಿಸುವ ಅನುಭವ ಹಾಗೂ ಸಾಮರ್ಥ್ಯ ಹೊಂದಿದ್ದಾರೆ ಎಂಬ ಹಲವು ಕಾರಣಗಳಿಂದ ಉಸ್ತುವಾರಿಯಾಗಿ ನೇಮಿಸಿದ್ದಾರೆ.

ರಹೀಂ ಖಾನ್‌ಗೆ ತಪ್ಪಿದ ಉಸ್ತುವಾರಿ ಪಟ್ಟ:

ಜಿಲ್ಲೆಯಿಂದ ಆಯ್ಕೆಯಾದ ಕಾಂಗ್ರೆಸ್ಸಿನ ಇಬ್ಬರೂ ಮಂತ್ರಿಯಾಗಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಯಾರಿಗೆ ಒಲಿಯಲಿದೆ ಎಂಬುದು ಬಾರಿ ಕುತೂಹಲ ಮೂಡಿಸಿತ್ತು. ಆದರೆ ನಿರೀಕ್ಷೆಯಂತೆ ಖಂಡ್ರೆ ಅವರಿಗೆ ಉಸ್ತುವಾರಿ ಪಟ್ಟ ದಕ್ಕಿದೆ. ರಹೀಂ ಖಾನ್ ಎರಡು ಉಪಚುನಾವಣೆ ಸೇರಿದಂತೆ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರದ ನೇತೃತ್ವದಲ್ಲಿ ಕ್ರೀಡಾ ಸಚಿವರಾಗಿದ್ದರು. ಇದೀಗ ಎರಡನೇ ಬಾರಿಗೆ ಮಂತ್ರಿಯಾದ ಸರಳ ಸಜ್ಜನಿಕೆಯ ರಹೀಂ ಖಾನ್ ತಮ್ಮ ಕ್ಷೇತ್ರ ಬಿಟ್ಟರೆ ಜಿಲ್ಲಾದ್ಯಂತ ಹೆಚ್ಚಿನ ವರ್ಚಸ್ಸು ಹೊಂದಿಲ್ಲ. ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳನ್ನು ಎದುರಿಸಬಲ್ಲ, ಅಧಿಕಾರಿಗಳನ್ನು ಚುರುಕು ಮುಟ್ಟಿಸಿ ಆಡಳಿತ ಯಂತ್ರ ನಿಯಂತ್ರಿಸುವ ಖಂಡ್ರೆ ಅವರ ಜಾಣ್ಮೆಗೆ ಸರಿಸಾಟಿ ಇಲ್ಲ ಎಂಬುವುದನ್ನು ಮನಗಂಡು ಸರ್ಕಾರ ರಹೀಂ ಖಾನ್ ಬದಲಿಗೆ ಖಂಡ್ರೆ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡಿದೆ ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆ ಗೆಲ್ಲುವ ಹೊಣೆ:

ಬೀದರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿ ಹಾಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಬೀದರ್ ಜಿಲ್ಲೆಯವರೇ ಆಗಿದ್ದಾರೆ. ಲಿಂಗಾಯತ ಸಮುದಾಯದ ಭಗವಂತ ಖೂಬಾ ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ಹಿಡಿತ ಸಾಧಿಸಿದ್ದಾರೆ. ಮುಂಬರುವ ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಖೂಬಾ ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿ ಖಂಡ್ರೆ ಅವರ ಮುಂದಿಟ್ಟ ಇನ್ನೊಂದು ಸವಾಲು.

ಈ ಸುದ್ದಿ ಓದಿದ್ದೀರಾ?: ನಮ್ಮ ಸಚಿವರು | ಅಪ್ಪ ಹಾಕಿದ ಆಲದಮರದಡಿ ‘ಸುಭದ್ರ ರಾಜಕಾರಣ’ ಮಾಡುತ್ತಿರುವ ಈಶ್ವರ್ ಖಂಡ್ರೆ

ಇಂಜಿನಿಯರಿಂಗ್ ಪದವೀಧರರಾದ ಖಂಡ್ರೆ ಎಲ್ಲಾ ಕ್ಷೇತ್ರಗಳಲ್ಲೂ ಅನುಭವ ಹೊಂದಿದ್ದಾರೆ. ಬೀದರ್ ಜಿಲ್ಲೆ ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸಂಚರಿಸಿ ಪಕ್ಷ ಸಂಘಟಿಸಿದ ಖಂಡ್ರೆ ಎರಡನೇ ಬಾರಿಗೆ ಬೀದರ್ ಜಿಲ್ಲಾ ಉಸ್ತುವಾರಿಯಾಗಿ ನೇಮಕ ಆಗಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಾಂಗೀಣ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಎಲ್ಲಾ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಜನತೆಯ ಅಭಿಪ್ರಾಯ.

ಖಂಡ್ರೆ ಮುಂದಿವೆ ಸವಾಲು

ಬೀದರ್ ಜಿಲ್ಲಾ ಕಛೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅನುದಾನ ಮಂಜೂರಾಗಿತ್ತು. ಆದರೆ ನಿವೇಶನ ಗೊಂದಲ ಬಗೆಹರಿಯದ ಕಾರಣ ಕಳೆದ ಬಿಜೆಪಿ ಸರ್ಕಾರದಲ್ಲಿಯೂ ಕಾಮಗಾರಿ ಆರಂಭವಾಗದೆ ನೆನೆಗುದಿಗೆ ಬಿದ್ದಿತ್ತು. ಇದೀಗ ಜಿಲ್ಲಾಡಳಿತ ಕಛೇರಿಗಳ ಸಂಕೀರ್ಣ ನಿರ್ಮಾಣದ ಬಹುದೊಡ್ಡ ಜವಾಬ್ದಾರಿ ಇದೆ.

ಜಿಲ್ಲೆಯ ರೈತರ ಜೀವನಾಡಿ ಬಿ.ಎಸ್.ಎಸ್.ಕೆ ಕಾರ್ಖಾನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಈಶ್ವರ ಖಂಡ್ರೆ ಸಹಕಾರ ಕ್ಷೇತ್ರದ ಅನುಭವ ಹೊಂದಿದ್ದಾರೆ. ಆದರೆ ಅದೇ ಬಿಎಸ್ ಎಸ್ ಕೆ ಕಾರ್ಖಾನೆಯ ಬಾಗಿಲು ತೆರೆದು ಮರುಜೀವ ನೀಡುವ ಹೊಣೆಗಾರಿಕೆ ಖಂಡ್ರೆ ಮುಂದಿದೆ.

ಕಳೆದ 11 ತಿಂಗಳಿಂದ ಬೀದರ್ ನಗರದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕಾರಂಜಾ ಮುಳುಗಡೆ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಉನ್ನತ ಸಮಿತಿ ರಚಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕಾಗಿದೆ.

ಸಂಪುಟ ಸಹೋದ್ಯೋಗಿ ರಹೀಂ ಖಾನ್ ಸೇರಿದಂತೆ ಹಿಂದಿನ ಜಿಲ್ಲಾ ಉಸ್ತುವಾರಿ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹಾಗೂ ಇನ್ನುಳಿದ ಮೂವರು ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಮೂಲಭೂತ ಸೌಕರ್ಯ ಕೊರತೆ ನೀಗಿಸುವ ಕಾರ್ಯ ಮಾಡಬೇಕಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ | ಜಾತಿ ನಿಂದನೆ; ನಟ ಉಪೇಂದ್ರ ಬಂಧನಕ್ಕೆ ಆಗ್ರಹ

ನಟ ಉಪೇಂದ್ರ ಅವರು, ʼಊರು ಇದ್ದಲ್ಲಿ ಹೊಲಗೇರಿʼ ಎನ್ನುವ ಮಾತನ್ನು ಹೇಳುವುದರ...

ಕಾವೇರಿ ವಿವಾದ | ಬೆಂಗಳೂರು ಬಂದ್‌ಗೆ ಎಫ್‌ಐಟಿಯು ಬೆಂಬಲ: ಅಬ್ದುಲ್ ರಹಿಮಾನ್

ಕಾವೇರಿ ಜಲ ವಿವಾದದ ಹಿನ್ನಲೆಯಲ್ಲಿ ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್‌ಗೆ ಫೆಡರೇಶನ್...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲು ಮಸೂದೆಗೆ ತಿದ್ದುಪಡಿ: ಮಲ್ಲಿಕಾರ್ಜುನ ಖರ್ಗೆ

2024ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ತರುವುದಾಗಿ...

ಬೀದರ್‌ | ಪಡಿತರದಲ್ಲಿ ಅಕ್ರಮ; 22 ನ್ಯಾಯಬೆಲೆ ಅಂಗಡಿಗಳ ಅಮಾನತು

ಪಡಿತರ ಮಾರಾಟದಲ್ಲಿ ನಿಗದಿತ ಬೆಲೆಗಿಂತ ಹೆಚ್ಚು ದರ ವಿಧಿಸುವುದು, ಇಲ್ಲವೇ ಬಯೋಮೆಟ್ರಿಕ್‌...