ವಿಪಕ್ಷಗಳ ಒಕ್ಕೂಟ ರಚನೆ ಪ್ರಯತ್ನ; ಖರ್ಗೆ- ರಾಹುಲ್ ಭೇಟಿಯಾಗಲಿರುವ ನಿತೀಶ್‌-ತೇಜಸ್ವಿ

Date:

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ ನಂತರ ವಿಪಕ್ಷಗಳ ಒಕ್ಕೂಟ ರಚನೆಯ ಪ್ರಯತ್ನಕ್ಕೆ ಇನ್ನಷ್ಟು ಪುಷ್ಠಿ ದೊರೆತಿದೆ. ಮಮತಾ ಬ್ಯಾನರ್ಜಿ ಅವರೂ ಹೊಂದಾಣಿಕೆಗೆ ಸಿದ್ಧ ಎಂಬ ಹೇಳಿಕೆ ನೀಡಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಸೋಮವಾರ ಭೇಟಿಯಾಗಲಿದ್ದಾರೆ. ವಿವಿಧ ಪಕ್ಷಗಳೊಂದಿಗೆ ಕಳೆದ ಕೆಲವು ತಿಂಗಳಲ್ಲಿ ನಿತೀಶ್‌-ತೇಜಸ್ವಿ ವಿಪಕ್ಷಗಳ ಒಕ್ಕೂಟ ರಚನೆ ಸಂಬಂಧ ನಡೆಸಿರುವ ಮಾತುಕತೆಯ ವಿವರವನ್ನು ಕಾಂಗ್ರೆಸ್ ಮುಖಂಡರ ಜೊತೆ ಹಂಚಿಕೊಳ್ಳಲಿದ್ದಾರೆ.

ಬಿಹಾರದ ಪಾಟ್ನಾದಲ್ಲಿ ವಿಪಕ್ಷಗಳ ಅತಿದೊಡ್ಡ ಸಂವಾದ ಕೂಟ ಆಯೋಜಿಸುವ ಬಗ್ಗೆಯೂ ನಿತೀಶ್-ತೇಜಸ್ವಿ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸಿದ ನಂತರ ಮುಂದಿನ ಲೋಕಸಭಾ ಚುನಾವಣೆಗೆ ಒಗ್ಗಟ್ಟಿನ ಹೋರಾಟಕ್ಕೆ ಜಯ ಸಿಗುವ ಬಗ್ಗೆ ವಿಪಕ್ಷಗಳಲ್ಲಿ ಭರವಸೆ ಮೂಡಿದೆ. ಕರ್ನಾಟಕ ವಿಧಾನಸಭಾ ಫಲಿತಾಂಶ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿ, “ಕಾಂಗ್ರೆಸ್ ಬಲಿಷ್ಠವಾಗಿರುವ ಕಡೆಗಳಲ್ಲಿ ಬೆಂಬಲ ನೀಡಲು ಸಿದ್ಧ” ಎಂದಿದ್ದರು.

ಕಳೆದೊಂದು ತಿಂಗಳಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅನೇಕ ಪ್ರಮುಖ ವಿಪಕ್ಷ ನಾಯಕರನ್ನು ಭೇಟಿಯಾಗಿ 2024ರ ಲೋಕಸಭಾ ಚುನಾವಣೆಗೆ ಬಿಜೆಪಿಯೇತರ ಒಕ್ಕೂಟ ರಚಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಏಪ್ರಿಲ್ 12ರಂದು ನಿತೀಶ್ ಕುಮಾರ್, ತೇಜಸ್ವಿ ಯಾದವ್, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಭೇಟಿಯಾಗಿ ವಿಪಕ್ಷಗಳ ಒಕ್ಕೂಟ ಬಗ್ಗೆ ಚರ್ಚಿಸಿದ್ದರು. ನಂತರ ಇತರ ಆರು ಪಕ್ಷಗಳ ನಾಯಕರನ್ನು ಭೇಟಿಯಾಗಿ ವಿಪಕ್ಷಗಳ ಒಕ್ಕೂಟ ರಚಿಸುವ ಜವಾಬ್ದಾರಿಯನ್ನು ನಿತೀಶ್ ಕುಮಾರ್‌ಗೆ ಹೊರಿಸಲಾಗಿತ್ತು. ಬಹುತೇಕ ಈ ಆರು ಪಕ್ಷಗಳಿಗೆ ಕಾಂಗ್ರೆಸ್ ಜೊತೆಗೆ ಉತ್ತಮ ಸಂಬಂಧವಿಲ್ಲ. ಹೀಗಾಗಿ, ಪ್ರತ್ಯೇಕ ತೃತೀಯ ರಂಗ ರಚಿಸುವ ಆಕಾಂಕ್ಷೆ ಅವರಲ್ಲಿತ್ತು.

ಕಳೆದ ತಿಂಗಳು ನಿತೀಶ್ ಕುಮಾರ್ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಒಡಿಶಾ ಮುಖ್ಯಮಂತ್ರಿ ನವೀನ್ ಪಾಠಕ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು.

ನಿತೀಶ್‌ ಕುಮಾರ್‌ ಮತ್ತು ತೇಜಸ್ವಿ ಯಾದವ್‌ ಭಾನುವಾರ (ಮೇ 21) ಅರವಿಂದ್‌ ಕೇಜ್ರಿವಾಲ್‌ ಅವರನ್ನು ಭೇಟಿಯಾಗಿದ್ದಾರೆ. ಕೇಜ್ರಿವಾಲ್‌ ಅವರ ನಿವಾಸದಲ್ಲೇ ಸಭೆ ನಡೆದಿದ್ದು, 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನದ ಕುರಿತು ಸಭೆ ಕೇಂದ್ರಿತವಾಗಿತ್ತು. ಜೊತೆಗೆ ದೆಹಲಿ ಆಡಳಿತದ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ಕುರಿತೂ ಚರ್ಚೆಯಾಗಿದೆ. ಅರವಿಂದ್‌ ಕೇಜ್ರಿವಾಲ್‌ ಅವರು ಸಭೆಯಲ್ಲಿ ದೆಹಲಿ ಆಡಳಿತ ಸೇವೆಗಳ ಮೇಲೆ ನಿಯಂತ್ರಣ ಸಾಧಿಸುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಎಲ್ಲ ಪ್ರತಿಪಕ್ಷಗಳು ವಿರೋಧಿಸಬೇಕಿದೆ ಎಂದು ಮನವಿ ಮಾಡಿದ್ದರು.

ಅದಾದ ನಂತರ ಬಹುತೇಕ ವಿಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ನಿರ್ಣಾಯಕ ಅಧಿಕಾರವನ್ನು ನಿಯಂತ್ರಿಸಲು ಹೊರಡಿಸಿದ ಸುಗ್ರೀವಾಜ್ಞೆ ವಿರುದ್ಧ ಹೇಳಿಕೆ ನೀಡಿದ್ದವು. “ಬಿಜೆಪಿ ಸರ್ಕಾರ ಸಂವಿಧಾನದ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ” ಎಂದು ಬಹುತೇಕ ವಿಪಕ್ಷಗಳು ಟೀಕಿಸಿವೆ.

ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ, ಎನ್‌ಸಿಪಿ ಅಧ್ಯಕ್ಷ ಶರದ್ ಯಾದವ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಎಡಪಕ್ಷಗಳ ನಾಯಕರಾದ ಸೀತಾರಾಂ ಯೆಚೂರಿ ಮತ್ತು ಡಿ ರಾಜಾ ಜೊತೆಗೂ ವಿಪಕ್ಷಗಳ ಒಕ್ಕೂಟ ರಚನೆ ಬಗ್ಗೆ ನಿತೀಶ್‌ಕುಮಾರ್‌ ಚರ್ಚಿಸಿದ್ದಾರೆ. ಆದರೆ, ಬಿಜೆಪಿ ವಿರುದ್ಧ ವಿಪಕ್ಷಗಳ ಒಕ್ಕೂಟದ ಕಲ್ಪನೆ ಸರಿಯಾಗಿದ್ದರೂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ತೆಲಂಗಾಣದಂತಹ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ವಿರುದ್ಧವೇ ಕಾಂಗ್ರೆಸ್ ಹೋರಾಡುತ್ತಿರುವ ಕಾರಣ ಒಗ್ಗಟ್ಟು ಕಷ್ಟವಿದೆ.

ಈ ಸುದ್ದಿ ಓದಿದ್ದೀರಾ?: ‘ಈ ದಿನ’ ಸಂಪಾದಕೀಯ | ₹2000 ನೋಟು ರದ್ದತಿಯು ಮತ್ತೊಂದು ದುರಂತ ಪ್ರಹಸನಕ್ಕೆ ನಾಂದಿ ಆಗದಿರಲಿ

ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಮತ್ತು ವೈಎಸ್‌ಆರ್‌ಸಿಪಿ ಅಧ್ಯಕ್ಷ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿಲ್ಲ. ವಿಪಕ್ಷಗಳು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎನ್ನುವುದು ನಿತೀಶ್ ಕುಮಾರ್ ಪ್ರಯತ್ನವಾಗಿದೆ. ಆ ಮೂಲಕ ಮತಗಳ ವಿಭಜನೆ ಕಡಿಮೆಯಾಗಿ ಬಿಜೆಪಿಯ ಅನೇಕ ಸ್ಥಾನಗಳು ಕೈಬಿಟ್ಟು ಹೋಗಲಿದೆ ಎನ್ನುವ ನಿರೀಕ್ಷೆ ಇಡಲಾಗಿದೆ.

ಒಕ್ಕೂಟದ ನಾಯಕರಾಗಿ ಯಾರು ನೇತೃತ್ವ ವಹಿಸಲಿದ್ದಾರೆ ಎನ್ನುವ ಪ್ರಶ್ನೆಯೂ ಎದ್ದಿದೆ. ಆದರೆ, ಪ್ರಸ್ತುತ ನಾಯಕರ ಆಯ್ಕೆಗಿಂತ ಹೆಚ್ಚಾಗಿ 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಅನೇಕ ಪ್ರಾದೇಶಿಕ ಪಕ್ಷಗಳ ಆದ್ಯತೆಯಾಗಿದೆ. ಬಿಜೆಪಿ ವಿರೋಧಿ ಪಕ್ಷಗಳ ವಿರುದ್ಧ ಕೇಂದ್ರ ಸರ್ಕಾರದ ಸಂಸ್ಥೆಗಳು ನಡೆಸುತ್ತಿರುವ ಆದಾಯ ತೆರಿಗೆ- ಇಡಿ ದಾಳಿಗಳ ನಂತರ ಪಕ್ಷಗಳಿಗೆ ಏಕತೆಯಿಂದ ಸ್ಪರ್ಧಿಸುವ ಒತ್ತಡ ಬಂದಿದೆ. ಇಂತಹ ಒತ್ತಡದ ಪರಿಣಾಮವಾಗಿಯೇ ಮಮತಾ ಬ್ಯಾನರ್ಜಿ ತಮ್ಮ ನಿಲುವು ಬದಲಿಸಿದ್ದಾರೆ. “ಕಾಂಗ್ರೆಸ್ ಪ್ರಬಲವಾಗಿರುವ ಸ್ಥಾನಗಳಲ್ಲಿ ಹೊಂದಾಣಿಕೆಗೆ ಸಿದ್ಧ” ಎಂದು ಅವರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಟ್ನಾ| ಜೆಡಿಯು ಯುವ ಮುಖಂಡನಿಗೆ ಗುಂಡಿಕ್ಕಿ ಹತ್ಯೆ

ನಿನ್ನೆ (ಏಪ್ರಿಲ್ 24) ತಡರಾತ್ರಿ ನಿತೀಶ್ ಕುಮಾರ್ ಅವರ ಜನತಾ ದಳ-ಯುನೈಟೆಡ್‌ನ...

ಮಾದಿಗರ ಸ್ವಾಭಿಮಾನಕ್ಕೆ ಮಂದಕೃಷ್ಣರಿಂದ ಧಕ್ಕೆ; ಬಿಜೆಪಿ ಸೋಲಿಸಲು ಸಮುದಾಯ ಕರೆ

ಮಾದಿಗ ಸಮುದಾಯಕ್ಕೆ ನಾಯಕರಾದವರು ನ್ಯಾಯಬದ್ಧವಾಗಿ, ಸಂವಿಧಾನ ಬದ್ಧವಾಗಿ, ಸೈದ್ಧಾಂತಿಕ ಸ್ಪಷ್ಟತೆಯಿಂದ ಇರಬೇಕು:...

ಲೋಕಸಭಾ ಚುನಾವಣೆ | ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ

ಕರ್ನಾಟಕ ರಾಜ್ಯ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟವು ಕಾಂಗ್ರೆಸ್ ಪಕ್ಷದ...