ಕೋಲ್ಕತ್ತಾ ಹೈಕೋರ್ಟ್‌ ಮತ್ತು ಟಿಎಂಸಿ ಸರ್ಕಾರದ ನಡುವಿನ ಹಗ್ಗಜಗ್ಗಾಟ

Date:

ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಸಂಬಂಧಿಸಿ ಕೋಲ್ಕತ್ತಾ ಹೈಕೋರ್ಟ್‌ ಮತ್ತು ಟಿಎಂಸಿ ನಡುವೆ ಕಳೆದೊಂದು ವರ್ಷದಿಂದ ನಿರಂತರ ಘರ್ಷಣೆ ನಡೆಯುತ್ತಿದೆ

ಕೋಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಅಭಿಜಿತ್ ಗಂಗೂಲಿ ಮತ್ತು ಆಡಳಿತ ಸರ್ಕಾರ ತೃಣಮೂಲ ಕಾಂಗ್ರೆಸ್ ನಡುವಿನ ವಾಗ್ಯುದ್ಧ ಮುಗಿಯುವ ಸೂಚನೆ ಕಾಣುತ್ತಿಲ್ಲ. ನ್ಯಾಯಾಂಗ ಮತ್ತು ಕಾರ್ಯಾಂಗಗಳ ನಡುವಿನ ಘರ್ಷಣೆ ಪಶ್ಚಿಮ ಬಂಗಾಳದಲ್ಲಿ ಸುದ್ದಿಯಾಗುತ್ತಲೇ ಇದೆ.

ಕಳೆದ ವಾರ ನ್ಯಾಯಮೂರ್ತಿ ಗಂಗೂಲಿ ಅವರು ಅಗತ್ಯ ಬಿದ್ದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಸಿಬಿಐ ಮತ್ತು ಇಡಿ (ಜಾರಿ ನಿರ್ದೇಶನಾಲು) ಪ್ರಶ್ನಿಸಬಹುದು ಎಂದು ಆದೇಶಿಸಿರುವುದು ಹೈಕೋರ್ಟ್ ಮತ್ತು ಟಿಎಂಸಿ ಸರ್ಕಾರದ ನಡುವೆ ಹೊಸ ಘರ್ಷಣೆಗೆ ನಾಂದಿ ಹಾಡಿದೆ.

ಇತ್ತೀಚೆಗೆ ಬಂಧನಕ್ಕೊಳಗಾಗಿರುವ ಟಿಎಂಸಿ ಯುವ ಸಂಘಟನೆಯ ಅಧ್ಯಕ್ಷ ಕುಂಟಲ್ ಘೋಷ್‌ ಅವರು “ಭ್ರಷ್ಟಾಚಾರ ಪ್ರಕರಣದಲ್ಲಿ ಅಭಿಷೇಕ್ ಹೆಸರು ತೆಗೆಯುವಂತೆ ಕೇಂದ್ರದ ತನಿಖಾ ಸಂಸ್ಥೆಗಳು ತಮ್ಮ ಮೇಲೆ ಒತ್ತಡ ಹೇರುತ್ತಿವೆ” ಎಂದು ಹೇಳಿರುವ ನಡುವೆಯೇ ನ್ಯಾಯಮೂರ್ತಿ ತನಿಖೆಗೆ ಅವಕಾಶ ನೀಡಿರುವುದು ಸಂಘರ್ಷಕ್ಕೆ ಇಂಬು ನೀಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಟಿಎಂಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಣಾಲ್ ಘೋಷ್ ಪ್ರತ್ಯುತ್ತರ ನೀಡಿ, “ನ್ಯಾಯಮೂರ್ತಿ ಗಂಗೂಲಿ ತಮ್ಮ ಸ್ಥಾನ ಬಿಟ್ಟು ನೇರವಾಗಿ ರಾಜಕೀಯ ಪ್ರವೇಶಿಸಬೇಕು” ಎಂದು ಹೇಳಿದ್ದಾರೆ.

“ನೀವು ತನಿಖೆಯ ಉಸ್ತುವಾರಿ ವಹಿಸಿದ್ದೀರಾ? ನೀವು ನಿಮ್ಮ ತಾರತಮ್ಯದ ಧೋರಣೆಯ ಮೂಲಕ ತನಿಖೆಯ ಮೇಲೆ ಪರಿಣಾಮ ಬೀರುತ್ತಿದ್ದೀರಿ. ವಿಪಕ್ಷಗಳಾದ ಕಾಂಗ್ರೆಸ್, ಸಿಪಿಐ(ಎಂ) ಮತ್ತು ಬಿಜೆಪಿ ಬೆಂಬಲದಲ್ಲಿ ಅಭಿಷೇಕ್ ವರ್ಚಸ್ಸು ಕುಗ್ಗಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಇದಕ್ಕೆ ಮೊದಲು ನ್ಯಾಯಮೂರ್ತಿ ಗಂಗೂಲಿ ಅವರು ಸರ್ಕಾರಿ ಶಾಲೆಗೆ ಅಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಆಗಿರುವ ಅಕ್ರಮದ ಸಿಬಿಐ ತನಿಖೆಗೆ ಆದೇಶಿಸಿದ್ದರು. ಈ ಆದೇಶದ ನಂತರ ಟಿಎಂಸಿಯ ಅನೇಕ ನಾಯಕರು ಜೈಲು ಪಾಲಾಗಿದ್ದರು.

ಅಭಿಷೇಕ್ ಅವರು ನ್ಯಾಯಾಂಗದ ಬಗ್ಗೆ ನೀಡಿದ ಹೇಳಿಕೆ ವಿರುದ್ಧ ನ್ಯಾಯಮೂರ್ತಿ ಗಂಗೂಲಿ ತರಾಟೆಗೆ ತೆಗೆದುಕೊಂಡಿದ್ದರು. ಸ್ಥಳೀಯ ವಾಹಿನಿಗೆ ಮಾತನಾಡುತ್ತಾ ಅವರು, “ನ್ಯಾಯಾಂಗದ ವಿರುದ್ಧ ಮಾತನಾಡುವವರು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ, ಇಲ್ಲದಿದ್ದರೆ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೊರಟು ಹೋಗಲಿದೆ” ಎಂದು ಹೇಳಿದ್ದರು.

ತಾನು ಅಭಿಷೇಕ್ ಹೇಳಿಕೆ ವಿರುದ್ಧ ಆದೇಶ ನೀಡಲು ಮುಂದಾಗಿದ್ದರೂ, ವಿಭಾಗೀಯ ಪೀಠದ ಅಭಿಪ್ರಾಯ ಭಿನ್ನವಾಗಿದ್ದರಿಂದ ಸುಮ್ಮನಿದ್ದೆ ಎಂದು ಗಂಗೂಲಿ ತಿಳಿಸಿದ್ದರು.

“ನ್ಯಾಯಾಂಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ನ್ಯಾಯಾಧೀಶರ ವಿರುದ್ಧ ಅಭಿಷೇಕ್ ಅವರು ಮಾಡಿರುವ ಆರೋಪಗಳನ್ನು ಸಾಬೀತು ಮಾಡದಿದ್ದರೆ, ಸುಳ್ಳು ಹೇಳಿದ್ದಕ್ಕಾಗಿ ಮೂರು ತಿಂಗಳ ಜೈಲು ಅನುಭವಿಸಬೇಕಾಗುತ್ತದೆ. ನಂತರ ಅವರು ಹತ್ಯೆಯಾದರೂ, ನನಗೆ ಚಿಂತೆಯಿಲ್ಲ” ಎಂದು ಗಂಗೂಲಿ ಕಟುವಾಗಿ ನುಡಿದಿದ್ದರು.

ನ್ಯಾಯಮೂರ್ತಿಗಳ ಇಂತಹ ಹೇಳಿಕೆಗೆ ಟಿಎಂಸಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ಅಭಿಷೇಕ್‌ಗೆ ಆಪ್ತರಾಗಿರುವ ಟಿಎಂಸಿ ಯುವ ನಾಯಕ ದೇಬಾಂಗ್ಷು ಭಟ್ಟಾಚಾರ್ಯ ಫೇಸ್‌ಬುಕ್ ಲೈವ್‌ನಲ್ಲಿ ನ್ಯಾಯಮೂರ್ತಿ ಗಂಗೂಲಿ ಕಾಂಗ್ರೆಸ್ ಮತ್ತು ಟಿಎಂಸಿ ವಿರುದ್ಧ ಕ್ರಮ ಕೈಗೊಳ್ಳಲೆಂದೇ ರಾಜ್ಯದಲ್ಲಿ ನ್ಯಾಯದ ಉನ್ನತ ಸ್ಥಾನಕ್ಕೇರಿದ್ದಾರೆ ಎಂದು ಆರೋಪಿಸಿದ್ದರು. “ಮಮತಾ ಬ್ಯಾನರ್ಜಿ ಸೇಡಿನ ಪ್ರತಿರೂಪ ಎಂಬ ಆರೋಪ ಹೊರಿಸಿದ್ದೀರಿ. ಚುನಾಯಿತ ಮತ್ತು ಜನಪ್ರಿಯ ಮುಖ್ಯಮಂತ್ರಿಯ ವರ್ಚಸ್ಸನ್ನು ನೀವು ಹೇಗೆ ಹಾಳುಗೆಡವುತ್ತೀರಿ” ಎಂದು ಟೀಕಿಸಿದ್ದರು.

ಸ್ವತಃ ಮಮತಾ ಬ್ಯಾನರ್ಜಿ ಅವರೂ ನ್ಯಾಯಾಂಗ ವ್ಯವಸ್ಥೆಯನ್ನು ಗುರಿಯಾಗಿಸಿದ್ದರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಮಮತಾ, ತನಿಖೆ ಆರಂಭವಾದ ನಂತರ ಕೆಲಸ ಕಳೆದುಕೊಂಡವರು ಆತ್ಮಹತ್ಯೆ ಮಾಡಿರುವ ಉದಾಹರಣೆ ಮುಂದಿಟ್ಟಿದ್ದರು. “ಕುಟುಂಬಗಳನ್ನು ಹಣಕಾಸು ಸಂಕಷ್ಟಗಳಿಗೆ ದೂಡಬೇಡಿ” ಎಂದು ನ್ಯಾಯಾಂಗವನ್ನು ಒತ್ತಾಯಿಸಿದ್ದರು. ಅಲಿಪೋರ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅವರು ಈ ಮಾತನ್ನು ಹೇಳಿದ್ದರು.

ಕಳೆದ ಡಿಸೆಂಬರ್ 15ರಂದು ಕುಣಾಲ್ ಘೋಷ್ ಅವರೂ ಕೋಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ರಾಜಶೇಖರ್ ಮಂತ ಮೇಲೆ ದಾಳಿ ನಡೆಸಿದ್ದರು. ರಾಜಶೇಖರ್ ಅವರು ಬಿಜೆಪಿಯ ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಹೈಕೋರ್ಟ್ ಅನುಮತಿಯಿಲ್ಲದೆ ಯಾವುದೇ ಎಫ್‌ಐಆರ್ ಹಾಕುವಂತಿಲ್ಲ ಎಂದು ಆದೇಶಿಸಿದ್ದರು.

ಈ ಆದೇಶದ ನಂತರ ರಾಜಶೇಖರ್ ತೀರ್ಪನ್ನು ವಿರೋಧಿಸುವ ಪೋಸ್ಟರ್‌ಗಳನ್ನು ಕೋಲ್ಕತ್ತಾದ ಜೋಧಪುರ್ ಉದ್ಯಾನವನದ ಬಳಿ ಇರುವ ಅವರ ಮನೆ ಮುಂದೆ ಅಂಟಿಸಲಾಗಿತ್ತು. “ನ್ಯಾಯಾಂಗಕ್ಕೆ ಅವಹೇಳನ” ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿತ್ತು.

ಜನವರಿಯಲ್ಲಿ ವಕೀಲರ ಗುಂಪೊಂದು ಕೋಲ್ಕತ್ತಾ ಹೈಕೋರ್ಟ್‌ ಅಲ್ಲಿರುವ ರಾಜಶೇಖರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಕೆಲವರು ಅವರು ನ್ಯಾಯಪೀಠಕ್ಕೆ ಸಾಗದಂತೆ ಅಡ್ಡನಿಂತು ತಡೆದಿದ್ದರು. ಹೀಗಾಗಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅಡ್ಡಿಯಾಗಿ ದೈಹಿಕ ಹೊಡೆದಾಟಕ್ಕೆ ಕಾರಣವಾಗಿತ್ತು.

ಈ ಸುದ್ದಿ ಓದಿದ್ದೀರಾ?: ಅಬಕಾರಿ ನೀತಿ ಹಗರಣ | ಸಿಬಿಐ ಬಳಿ ಸಾಕ್ಷಿಯೇ ಇಲ್ಲವೆಂದ ಕೇಜ್ರಿವಾಲ್; ದೆಹಲಿಯಲ್ಲಿ ಹೈಡ್ರಾಮ

ಈ ಪ್ರಕರಣದ ನಂತರ ಕೇಂದ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯ ಟ್ವೀಟ್ ಮಾಡಿ, “ಜವಾಬ್ದಾರಿಯುತ ನ್ಯಾಯಾಂಗ ಬಯಸುವ ಟಿಎಂಸಿ ಬೆಂಬಲಿತ ವಕೀಲರು ರಾಜಶೇಖರ್‌ ಅವರಿಗೆ ಅಡ್ಡಿಯಾಗಿದ್ದಾರೆ” ಎಂದು ಬರೆದಿದ್ದರು.

ಅದಕ್ಕೆ ಉತ್ತರಿಸಿದ್ದ ಟಿಎಂಸಿ ವಕ್ತಾರ ಕುಣಾಲ್ ಘೋಷ್, “ನಾವು ಟಿಎಂಸಿ ನ್ಯಾಯಾಂಗದ ಮತ್ತು ನ್ಯಾಯಾಧೀಶರ ಮೇಲೆ ಅತ್ಯುನ್ನತ ನಂಬಿಕೆ ಇರಿಸಿದ್ದೇವೆ. ಈ ಪ್ರಕರಣದ ಉದ್ದೇಶ ಅರಿಯದೆ ಅಭಿಪ್ರಾಯ ಹೇಳುವುದು ತಪ್ಪು. ‘ನ್ಯಾಯಮೂರ್ತಿ ಲಾಲಾ, ಬಂಗಾಳ ಬಿಟ್ಟು ತೊಲಗು’ ಎಂದು ಘೋಷಣೆ ಕೂಗಿದ್ದ ಸಿಪಿಐ(ಎಂ) ಮತ್ತು ನಮಗೆ ವ್ಯತ್ಯಾಸವಿದೆ” ಎಂದು ಹೇಳಿದ್ದರು.

2003ರಲ್ಲಿ ಎಡಪಕ್ಷದ ಅಧ್ಯಕ್ಷ ಬಿಮನ್ ಬೋಸ್ ಈ ಘೋಷಣೆ ಕೂಗಿದ್ದರು. ಆಗ ಕೋಲ್ಕತ್ತಾ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದ ದಿವಂಗತ ಅಮಿತವ ಲಾಲಾ ವಿರುದ್ಧ ಈ ಘೋಷಣೆ ಕೂಗಲಾಗಿತ್ತು. “ಕೋಲ್ಕತ್ತಾದ ಬೀದಿಗಳಲ್ಲಿ ಕಾರ್ಯಕಾರಿ ದಿನಗಳಲ್ಲಿ ರಾಜಕೀಯ ರ‍್ಯಾಲಿಗಳನ್ನು ನಿಷೇಧಿಸಬೇಕು” ಎಂದು ಅವರು ನೀಡಿದ ಆದೇಶದ ವಿರುದ್ಧ ಬಿಮನ್ ಬೋಸ್ ಈ ರೀತಿ ಟೀಕಿಸಿದ್ದರು.

ಟಿಎಂಸಿಯ ಎಲ್ಲಾ ನಾಯಕರಿಗೂ ನ್ಯಾಯಾಂಗದ ಜೊತೆಗಿನ ಶತ್ರುತ್ವ ಬೇಕಿಲ್ಲ. ಅನೇಕ ಹಿರಿಯ ನಾಯಕರು ಮಾಧ್ಯಮಗಳಿಗೆ ಹೇಳಿಕೆ ನೀಡಿ ನ್ಯಾಯ ವ್ಯವಸ್ಥೆಯ ಬಗ್ಗೆ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ವಿರೋಧಿಸಿದ್ದಾರೆ.

“ಕಳೆದ ವರ್ಷ ಪ್ರತೀ ನ್ಯಾಯಾಂಗ ಆದೇಶವೂ ಟಿಎಂಸಿಗೆ ವಿರುದ್ಧವಾಗಿ ಬಂದಿರುವುದು ನಿಜ. ಹಾಗೆಂದು, ನಾವು ನ್ಯಾಯ ವ್ಯವಸ್ಥೆ ವಿರುದ್ಧ ದಾಳಿ ಮಾಡಬಾರದು. ಅದರಿಂದ ನಮ್ಮದೇ ವರ್ಚಸ್ಸು ಹಾಳಾಗಲಿದೆ” ಎಂದು ಹಿರಿಯ ನಾಯಕರು ಅಭಿಪ್ರಾಯಪಟ್ಟಿರುವುದಾಗಿ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಧರ್ಮ ರಾಜಕಾರಣ ಮಾಡುವ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದ ರಾಜನಾಥ್ ಸಿಂಗ್!

ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು...

ಲೋಕಸಭೆ ಚುನಾವಣೆ| ಮಣಿಪುರದಲ್ಲಿ 3 ಬಾರಿ ಸ್ಫೋಟ; ಸೇತುವೆಗೆ ಹಾನಿ

ಮಣಿಪುರದ ಕೆಲವು ತಿಂಗಳುಗಳ ಕಾಲ ಕೊಂಚ ಕಡಿಮೆಯಾಗಿದ್ದ ಹಿಂಸಾಚಾರವು ಲೋಕಸಭೆ ಚುನಾವಣೆ...

ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಮತ್ತೆ ಪತ್ರಿಕೆಗಳಲ್ಲಿ ಕ್ಷಮೆಯಾಚನೆ ಪ್ರಕಟಿಸಿದ ರಾಮ್‌ದೇವ್

ಪತಂಜಲಿ ಆಯುರ್ವೇದ್ ಲಿಮಿಟೆಡ್ ವಿರುದ್ಧ ದಾರಿತಪ್ಪಿಸುವ ಜಾಹೀರಾತು ಪ್ರಕರಣ ದಾಖಲಾಗಿದ್ದು, ಸುಪ್ರೀಂ...

ʼಈ ದಿನʼ ಸಮೀಕ್ಷೆ | ರೈತರಿಗೆ ಮೋದಿ ಮಹಾ ಮೋಸ; ‘ಬೆಂಬಲ ಬೆಲೆ’ ಕೊಡೋರಿಗೆ ನಮ್ಮ ಬೆಂಬಲ ಎಂದ ಮತದಾರರು!

ಭಾರತವು ಜಾಗತಿಕ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ...