ರೈಲುಗಳ ಸುರಕ್ಷಿತ ಯಾತ್ರೆಗೆ ʼಕವಚʼವಿಲ್ಲ! 300 ಪ್ರಯಾಣಿಕರ ಸಾವಿಗೆ ಯಾರು ಹೊಣೆ?

Date:

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ  ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 300 ದಾಟಿದೆ.  2 ರೈಲುಗಳಲ್ಲಿದ್ದ 900ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಶುಕ್ರವಾರ ಸಂಜೆ ಸುಮಾರು 6.50 ಮತ್ತು 7.10 ರ ನಡುವೆ, ಶಾಲಿಮಾರ್-ಚೆನ್ನೈ ನಡುವಿನ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರಿನ ಯಶವಂತಪುರ-ಹೌರ ಸೂಪರ್‌ಫಾಸ್ಟ್‌ ರೈಲು ಹಾಗೂ ಗೂಡ್ಸ್ ರೈಲಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಬಹನಾಗಾ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ವೇಗವಾಗಿ ಬಂದ ಕೊರಮಂಡಲ್ ಎಕ್ಸ್‌ಪ್ರೆಸ್  ರೈಲು ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ರೈಲಿನ ಬೋಗಿಗಳು ಪಕ್ಕದ ಹಳಿಯ ಮೇಲೆ ಬಿದ್ದಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಯಶವಂತಪುರ-ಹೌರ ಸೂಪರ್‌ಫಾಸ್ಟ್‌ ರೈಲು ಹಳಿತಪ್ಪಿ ಬಿದ್ದಿದ್ದ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಘಟನೆ ನಡೆದ ಸ್ಥಳದಿಂದ 5 ಕಿಲೋ ಮೀಟರ್‌ ದೂರದವರೆಗೂ ಅಪಘಾತದ ಶಬ್ಧ ಕೇಳಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ಧಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈ ಭಾಗದಲ್ಲಿ ಸಾಗಬೇಕಿದ್ದ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ದುರಂತ ನಡೆದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

ಭಾರತೀಯ ರೈಲ್ವೇ ಚರಿತ್ರೆಯಲ್ಲಿಯೇ ಇದೇ ಮೊದಲ ಬಾರಿಗೆ ಮೂರು ರೈಲುಗಳ ನಡುವೆ ಅಪಘಾತ ನಡೆದಿದೆ. ಬಾಲಸೋರ್‌ನಲ್ಲಿ ಶುಕ್ರವಾರ ನಡೆದ ಅಪಘಾತಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಪಘಾತದ ಹಿಂದಿನ ಸಂಭವನೀಯ ಕಾರಣಗಳ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಅವಘಡ ನಡೆದ ರೈಲ್ವೆ ಮಾರ್ಗದಲ್ಲಿ ʻಕವಚ ಸುರಕ್ಷಾ ವ್ಯವಸ್ಥೆʼ ಇರಲಿಲ್ಲ ಎಂಬುದುನ್ನು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ ಅಧಿಕಾರಿಗಳ ಕರ್ತವ್ಯ ವೈಫಲದಿಂದಾಗಿ ಒಂದೇ ಹಳಿಯಲ್ಲಿ ಎರಡು ರೈಲುಗಳು ಸಾಗಿದ್ದು, ಇದರಿಂದಾಗಿ 300 ಪ್ರಯಾಣಿಕರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಏನಿದು ಕವಚ ಸುರಕ್ಷಾ ವ್ಯವಸ್ಥೆ?

ರೈಲುಗಳ ಸಂಚಾರ ಸುರಕ್ಷತೆಯನ್ನು ಹೆಚ್ಚಿಸಲು ಅಭಿವೃದ್ಧಿ ಪಡಿಸಿದ ಸ್ವಯಂಚಾಲಿತ ರೈಲು ಸುರಕ್ಷತಾ ತಂತ್ರಜ್ಞಾನವೇ ʻಕವಚʼ. 2011-12ರಲ್ಲಿ, ಆಗಿನ ಯುಪಿಎ-2 ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ವಿಭಾಗವು, ಇತರೆ ಮೂರು ಭಾರತೀಯ ಸಂಸ್ಥೆಗಳೊಂದಿಗೆ ಸೇರಿಕೊಂಡು ರಾಷ್ಟ್ರೀಯ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆ (ಎಟಿಪಿ)ಯನ್ನು ಅಭಿವೃದ್ಧಿಪಡಿಸಿತ್ತು. ಆದರೆ ಆ ಬಳಿಕ ನರೇಂದ್ರ ಮೋದಿ ನೇತೃತ್ವದಲ್ಲಿ ಬಂದ ಸರ್ಕಾರವು ಎಟಿಪಿಯನ್ನು ʼಕವಚʼ ಎಂದು ಮರುನಾಮಕರಣ ಮಾಡಿತ್ತು.

ಕವಚ ತಂತ್ರಜ್ಞಾನವು ಅಪಘಾತ ತಡೆಗೆ ಲೋಕೋ ಪೈಲಟ್​ಗಳಿಗೆ ನೆರವು ನೀಡುತ್ತದೆ. ಸಿಗ್ನಲ್​ ದಾಟಿ ಹೋದಾಗ ಮತ್ತು ಅತೀ ವೇಗದ ವೇಳೆ ಮಾತ್ರವಲ್ಲದೇ ದಟ್ಟ ಮಂಜು ಇತ್ಯಾದಿ ವಾತಾವರಣ ವೈಪರಿತ್ಯದ ವೇಳೆಯೂ ಲೋಕೋ ಪೈಲಟ್​ಗಳಿಗೆ ʻಕವಚʼ ಸಹಕಾರಿ ಆಗುತ್ತದೆ. ದಟ್ಟ ಮಂಜಿನ ವಾತಾವರಣ ಇದ್ದಾಗ ಹಳಿಗಳ ಬದಿ ಬಗ್ಗೆ ಸಿಗ್ನಲ್​ ನೀಡುವ ಮೂಲಕ ಎಕ್ಸ್‌ಪ್ರೆಸ್‌ ರೈಲುಗಳ ವೇಗ ನಿಯಂತ್ರಣಕ್ಕೆ ಸಹಕಾರಿ ಆಗುತ್ತದೆ.

ವೇಗವಾಗಿ ರೈಲು ಸಾಗುತ್ತಿರುವ ವೇಳೆ ಅದೇ ಹಳಿಯಲ್ಲಿ ಮತ್ತೊಂದು ರೈಲನ್ನು ಗಮನಿಸಿದಾಗ ಲೋಕೋ ಪೈಲಟ್​ ಬ್ರೇಕ್​ ಹಾಕಲು ವಿಫಲವಾದರೆ ಆಗ ʻಕವಚʼ ಸ್ವಯಂಚಾಲಿತವಾಗಿ ಬ್ರೇಕ್​ ಹಾಕಿ ರೈಲಿನ ವೇಗವನ್ನು ನಿಯಂತ್ರಿಸುತ್ತದೆ. ಅಪಘಾತಗಳ ಕುರಿತಾದ ಮಾಹಿತಿಯನ್ನೂ ತಕ್ಷಣವೇ ನೀಡುತ್ತದೆ.

ಶೇ.98ರಷ್ಟು ರೈಲ್ವೇ ಮಾರ್ಗಗಳಲ್ಲಿ ʻಕವಚ್‌ʼ ವ್ಯವಸ್ಥೆ ಇಲ್ಲ; ಗೋಖಲೆ

ಬಾಲಸೋರ್ ಅವಘಡಕ್ಕೆ ಕೇಂದ್ರ ಸರ್ಕಾರದ ನಿರ್ಲ್ಯಕ್ಷವೇ ಕಾರಣ ಎಂದು ವಾಗ್ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್‌ ವಕ್ತಾರ ಸಾಕೇತ್ ಗೋಖಲೆ, 2019ರ ಬಳಿಕ ನಿರ್ಣಾಯಕ ರೈಲು ಸುರಕ್ಷತಾ ತಂತ್ರಜ್ಞಾನವನ್ನು ನಿಯೋಜಿಸುವಲ್ಲಿ ಶೂನ್ಯ ಪ್ರಗತಿಯಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ರೈಲ್ವೆಯು ಒಟ್ಟು 68,043 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿದೆ. ಆದರೆ ಕೇವಲ 1,445 ಕಿ.ಮೀ.ಗಳಲ್ಲಿ ಕವಚ್‌ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ಒಟ್ಟು ರೈಲ್ವೆ ಮಾರ್ಗಗಳ ಪೈಕಿ ಕೇವಲ ಶೇ.2ರಷ್ಟು ಮಾತ್ರ. ಉಳಿದ ಸುಮಾರು ಶೇ.98ರಷ್ಟು ಭಾರತೀಯ ರೈಲ್ವೆ ಮಾರ್ಗಗಳು ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿಲ್ಲ ಎಂದು ಗೋಖಲೆ ಹೇಳಿದ್ದಾರೆ.

1,098 ಕಿಲೋ ಮೀಟರ್​ ರೈಲ್ವೆಗೆ ʻಕವಚʼದ ಸಂರಕ್ಷಣೆ; ಅಶ್ವಿನಿ ವೈಷ್ಣವ್

ಕವಚ್‌ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕಳೆದ ಮಾರ್ಚ್‌ನಲ್ಲಿ ಮಾಡಿದ್ದ ಟ್ವೀಟ್‌ ಇದೀಗ ವೈರಲ್‌ ಆಗಿದೆ.

ʻಹಿಂಬದಿಯ ಘರ್ಷಣೆ ಪರೀಕ್ಷೆ ಯಶಸ್ವಿಯಾಗಿದೆ. 380 ಮೀಟರ್‌ಗಳ ಅಂತರದಲ್ಲಿ ರೈಲನ್ನು ʻಕವಚ್ʼ ಸ್ವಯಂಚಾಲಿತವಾಗಿ ನಿಲ್ಲಿಸಿತು ಎಂದು ವೈಷ್ಣವ್‌ ಟ್ವೀಟ್‌ ಮಾಡಿದ್ದರು.

1,098 ಕಿಲೋ ಮೀಟರ್​ ದೂರದ ರೈಲ್ವೆ ಸಂಪರ್ಕವನ್ನು ʻಕವಚʼದೊಂದಿಗೆ ಜೋಡಿಸಲಾಗಿದೆ ಎಂದು ಮಾರ್ಚ್​ 28ರಂದು ಲೋಕಸಭೆಗೆ ಲಿಖಿತ ಹೇಳಿಕೆ ಮೂಲಕ ಸಚಿವ ಅಶ್ವಿನಿ ವೈಷ್ಣವ್​ ಮಾಹಿತಿ ನೀಡಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ | ಬಿಆರ್‌ಎಸ್ ಟಿಕೆಟ್ ಸಿಕ್ಕರೂ ಸ್ಪರ್ಧಿಸದ ಹಾಲಿ ಸಂಸದೆ, ಕಾಂಗ್ರೆಸ್‌ನತ್ತ ಕಡಿಯಂ ಕಾವ್ಯ

ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಬೆನ್ನಲ್ಲೆ ತೆಲಂಗಾಣದ ವಿಪಕ್ಷ ಭಾರತೀಯ...

ಮುಖ್ತಾರ್ ಅನ್ಸಾರಿಗೆ ಜೈಲಿನಲ್ಲಿ ‘ಸ್ಲೋ ಪಾಯ್ಸನ್’ ನೀಡಲಾಗಿದೆ; ಪುತ್ರ ಉಮರ್ ಅನ್ಸಾರಿ ಆರೋಪ

ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಗುರುವಾರ ಸಂಜೆ ಜೈಲಿನಲ್ಲಿ...

ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ವಿಶ್ವಸಂಸ್ಥೆ ಪ್ರತಿಕ್ರಿಯೆ

ವಿಶ್ವಸಂಸ್ಥೆ ಯ ಪ್ರಧಾನ ಕಾರ್ಯದರ್ಶಿ ಆನ್‌ಟೊನಿಯೋ ಗುಟೆರ್ರಸ್ ಅವರ ವಕ್ತಾರರು ಅರವಿಂದ್‌...

ಜಮ್ಮು – ಶ್ರೀನಗರದ ಹೆದ್ದಾರಿಯಲ್ಲಿ ಅಪಘಾತ: 10 ಸಾವು

ಪ್ರಾಯಣಿಕರನ್ನು ಕರೆದೊಯ್ಯುವ ಟ್ಯಾಕ್ಸಿಯೊಂದು ಕಂದಕಕ್ಕೆ ಬಿದ್ದು ಕನಿಷ್ಠ 10 ಮಂದಿ ಮೃತಪಟ್ಟ...