ದರ ನಿಗದಿ ಸೂತ್ರ ಪರಿಷ್ಕರಣೆ; ಪಿಎನ್‌ಜಿ ಮತ್ತು ಸಿಎನ್‌ಜಿ ದರ ಶೇ 10ರಷ್ಟು ಇಳಿಕೆ

Date:

  • ಹೊಸ ಸೂತ್ರದಂತೆ ಪಿಎನ್‌ಜಿ ಮತ್ತು ಸಿಎನ್‌ಜಿ ದರ ಪ್ರತಿ ತಿಂಗಳು ಪರಿಷ್ಕರಣೆ
  • ನೂತನ ದರಗಳಂತೆ ಇಂಧನಗಳ ಬೆಲೆ ಗರಿಷ್ಠ ಶೇ 11ರಷ್ಟು ಇಳಿಕೆ ನಿರೀಕ್ಷೆ

ಯಾವುದೇ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಿಎನ್‌ಜಿ- ಪಿಎನ್‌ಜಿ ದರಗಳನ್ನು ಇಳಿಸುವುದು ಮತ್ತು ಚುನಾವಣೆ ಮುಗಿದ ನಂತರ ಏರಿಸುವುದು ಇತ್ತೀಚೆಗಿನ ವರ್ಷದಲ್ಲಿ ಸಾಮಾನ್ಯವಾಗುತ್ತಿದ್ದು, ಇದೀಗ ಕರ್ನಾಟಕದ ಚುನಾವಣೆಯ ಹೊಸ್ತಿಲಲ್ಲಿರುವಾಗ ನೈಸರ್ಗಿಕ ಅನಿಲದ ದರ ನಿಗದಿಗೆ ಹೊಸ ಮಾನದಂಡ ಅನುಸರಿಸಲು ಕೆಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಪಿಎನ್‌ಜಿ ಮತ್ತು ಸಿಎನ್‌ಜಿ ದರ ಶೇ. 10ರಷ್ಟು ಇಳಿಯಲಿದೆ.

ನೈಸರ್ಗಿಕ ಅನಿಲದ ದರ ನಿಗದಿ ಸೂತ್ರ ಬದಲಾವಣೆಗೆ ಹಾಗೂ ದರ ನಿಗದಿಗೆ ಮಿತಿ ನಿಗದಿಪಡಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ (ಏಪ್ರಿಲ್ 6) ಅನುಮೋದನೆ ನೀಡಿದೆ.

ಇದರಿಂದ ಗೃಹ ಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೊಸ ಸೂತ್ರದಂತೆ ಈ ಇಂಧನಗಳ ದರವನ್ನು ಈಗಿನಂತೆ ದ್ವೈವಾರ್ಷಿಕದ ಬದಲಿಗೆ ಪ್ರತಿ ತಿಂಗಳು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.

ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಪುರಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. “ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಬೆಲೆ ಏರಿಳಿತಗಳಿಂದ ಭಾರತದ ಗ್ರಾಹಕರನ್ನು ರಕ್ಷಿಸಲು ಇದು ನೆರವಾಗಲಿದೆ. ಹೊಸ ಮಾರ್ಗದರ್ಶಿ ಸೂತ್ರಗಳಿಗೆ ಕೇಂದ್ರ ಸಚಿವ ಸಂಪುಟದ ಸಹಮತ ದೊರೆತಿದೆ” ಎಂದು ಹೇಳಿದ್ದಾರೆ.

ಭಾರತ ಸರ್ಕಾರದ ವಕ್ತಾರ ಮತ್ತು ಪಿಐಬಿ ಪ್ರಧಾನ ನಿರ್ದೇಶಕ ರಾಜೇಶ್ ಮಲ್ಹೋತ್ರ ಅವರು ಟ್ವೀಟ್ ಮೂಲಕ ಪೆಟ್ರೋಲಿಯಂ ಸಚಿವಾಲಯದ ಹೊಸ ಆಲೋಚನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.

“ಪಿಎನ್‌ಜಿ ಮತ್ತು ಸಿಎನ್‌ಜಿ ಇಂಧನಗಳಿಗೆ ಇಂಡಿಯನ್ ಕ್ರೂಡ್ ಬ್ಯಾಸ್ಕೆಟ್‌ನ (ಭಾರತದ ಕಚ್ಚಾತೈಲ ಆಮದು ದರದ ಸರಾಸರಿ) ಶೇ 10ರಷ್ಟು ಕಡಿಮೆ ದರ ನಿಗದಿಪಡಿಸಲಾಗುವುದು. ಈ ದರವನ್ನು ತಿಂಗಳಿಗೆ ಒಮ್ಮೆ ಪರಿಷ್ಕರಿಸಲಾಗುವುದು. ಈ ಮೂಲಕ ದರನಿಗದಿ ಪ್ರಕ್ರಿಯೆಯಲ್ಲಿ ಸ್ಥಿರತೆ ಬರಲಿದೆ. ಅದರ ಜತೆಗೆ ಅನಿಲ ಉತ್ಪಾದಕರಿಗೆ ಬೆಲೆ ಏರಿಳಿತದಿಂದ ರಕ್ಷಣೆ ದೊರೆಯಲಿದೆ” ಎಂದು ಹೇಳಿದ್ದಾರೆ.

ಪ್ರಸ್ತುತ ಭಾರತದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಅನಿಲ ದರ ನಿಗದಿಪಡಿಸಲು ಹೆನ್ರಿ ಹಬ್, ಅಲ್ಬೆನಾ, ನ್ಯಾಷನಲ್ ಬ್ಯಾಲೆನ್ಸಿಂಗ್ ಪಾಯಿಂಟ್ (ಬ್ರಿಟನ್) ಮತ್ತು ರಷ್ಯಾದ ಸರಾಸರಿ ದರಗಳನ್ನು ಪರಿಗಣಿಸಲಾಗುತ್ತಿದೆ. ಆರು ತಿಂಗಳಿಗೆ ಒಮ್ಮೆ ದರ ಪರಿಷ್ಕರಿಸಲಾಗುತ್ತಿದೆ. ಈ ನಾಲ್ಕು ಅನಿಲ ದರಗಳನ್ನು ಲೆಕ್ಕಹಾಕಿ ದೇಶೀಯ ದರ ನಿಗದಿಪಡಿಸುವ ಪ್ರಕ್ರಿಯೆಯೇ ದೊಡ್ಡ ಸಮಸ್ಯೆ ಎನಿಸುತ್ತಿತ್ತು. ಈ ವ್ಯವಸ್ಥೆ ಬದಲಿಸಬೇಕು ಎಂಬ ಒತ್ತಾಯ ಬಹುದಿನಗಳಿಂದ ಕೇಳಿಬರುತ್ತಿತ್ತು.

ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಂದಾಜಿನಂತೆ ದೇಶಾದ್ಯಂತ ಪಿಎನ್‌ಜಿ ಮತ್ತು ಸಿಎನ್‌ಜಿ ದರಗಳಲ್ಲಿ ಸರಾಸರಿ 6 ರೂಪಾಯಿ ಕಡಿಮೆಯಾಗಲಿದೆ. ಶನಿವಾರದಿಂದಲೇ (ಏಪ್ರಿಲ್ 8) ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದ್ದು, ಗರಿಷ್ಠ ಶೇ 11ರಷ್ಟು ಬೆಲೆ ಇಳಿಕೆ ನಿರೀಕ್ಷಿಸಲಾಗಿದೆ.

“ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ ನೈಸರ್ಗಿಕ ಅನಿಲ ದರಗಳನ್ನು ಕಚ್ಚಾತೈಲದ ದರಕ್ಕೆ ಸಂಯೋಜಿಸಲಾಗಿದೆ. ಹಲವು ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದೆ. ನಮ್ಮ ಬಳಕೆದಾರರಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ ಜಾಗತಿಕ ವಹಿವಾಟಿಗೂ ಇದು ಅನುಕೂಲವಾಗಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಮತ್ತು ಒಐಎಲ್ ಕಂಪನಿಗಳು ಉತ್ಪಾದಿಸುವ ನೈಸರ್ಗಿಕ ಅನಿಲಕ್ಕೆ ಇಷ್ಟುದಿನ ಎಪಿಎಂ ಮೂಲಕ ಕೇಂದ್ರ ಸರ್ಕಾರವೇ ದರ ನಿಗದಿಪಡಿಸುತ್ತಿತ್ತು.

ಈ ಸುದ್ದಿ ಓದಿದ್ದೀರಾ? ದೇಶದ ಮೂಲ ಸೌಕರ್ಯ ಅದಾನಿ ಸಮೂಹದ ಕೈಲಿದೆಯೇ ಅಥವಾ ಚೀನಾ ಕೈಲಿದೆಯೇ: ಕಾಂಗ್ರೆಸ್ ಪ್ರಶ್ನೆ

ಈ ಕಂಪನಿಗಳಿಗೆ ಅನಿಲ ನಿಕ್ಷೇಪಗಳನ್ನು ಬಿಟ್ಟುಕೊಡುವಾಗ ಸ್ಪರ್ಧಾತ್ಮಕ ದರ ಪಡೆದಿಲ್ಲ ಎನ್ನುವ ಕಾರಣಕ್ಕೆ ಉತ್ಪಾದನೆಯಾದ ಅನಿಲಕ್ಕೆ ದರ ನಿಗದಿಪಡಿಸುವ ಹಕ್ಕನ್ನು ಕೇಂದ್ರ ಸರ್ಕಾರ ತಾನೇ ಇರಿಸಿಕೊಂಡಿತ್ತು.

ಇದೀಗ ಕಚ್ಚಾತೈಲ ದರ ಸೂಚ್ಯಂಕದೊಂದಿಗೆ ಪಿಎನ್‌ಜಿ ಮತ್ತು ಸಿಎನ್‌ಜಿ ದರವನ್ನು ತಳುಕು ಹಾಕುವ ಮೂಲಕ ಈ ಹಕ್ಕು ಬಿಟ್ಟುಕೊಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಮಹತ್ವ ಪಡೆದಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್ ನಂತರ, ಸಿಪಿಐಗೆ ಐಟಿ ಇಲಾಖೆ ನೋಟಿಸ್

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ (ಸಿಪಿಐ) ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್...

ಲೋಕಸಭಾ ಚುನಾವಣೆ | ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಧೀರಜ್ ಕಾಂಗ್ರೆಸ್‌ ಸೇರುವ ಸಾಧ್ಯತೆ!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಸಿದ್ದರಾಮಯ್ಯ...

ಬಿಜೆಪಿ ಜೊತೆ ಮೈತ್ರಿಗೆ ವಿರೋಧ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನಜ್ಮಾ ನಝೀರ್

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ...

ಸರ್ಕಾರಿ ನೌಕರಿಗಳಲ್ಲಿ ಶೇ.50 ಮಹಿಳಾ ಮೀಸಲಾತಿಗೆ ರಾಹುಲ್ ಗಾಂಧಿ ಬೆಂಬಲ

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ನೌಕರಿಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು...