ಟಿವಿ ಸುದ್ದಿ ವಾಹಿನಿಗಳ ಸ್ವಯಂ-ನಿಯಂತ್ರಣ ಮತ್ತು ಮೇಲ್ವಿಚಾರಣೆಯ ಕಾರ್ಯವಿಧಾನವನ್ನು ಮತ್ತಷ್ಟು ‘ಬಿಗಿಗೊಳಿಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದಕ್ಕಾಗಿ, ಹೊಸ ಮಾರ್ಗಸೂಚಿಗಳನ್ನು ಸಿದ್ದಪಡಿಸಲು ನ್ಯೂಸ್ ಬ್ರಾಡ್‌ಕಾಸ್ಟರ್ ಅಂಡ್ ಡಿಜಿಟಲ್ ಅಸೋಸಿಯೇಷನ್‌ಗೆ (ಎನ್‌ಬಿಡಿಎ) ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಟಿವಿ ಚಾನೆಲ್‌ಗಳ ಸ್ವಯಂ ನಿಯಂತ್ರಣದ ಕುರಿತು ಅವಲೋಕನ ಮಾಡಬೇಕೆಂದು ಮಹಾರಾಷ್ಟ್ರ ಬಾಂಬೆ ಹೈಕೋರ್ಟ್ ಹೇಳಿತ್ತು. ಆ ಆದೇಶದ ವಿರುದ್ಧ ಎನ್‌ಬಿಡಿಎ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದೆ.
ವಿಚಾರಣೆ ವೇಳೆ, ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಎನ್‌ಬಿಡಿಎ ತನ್ನ ಮಾಜಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿಗಳಾದ ಎ.ಕೆ ಸಿಕ್ರಿ ಮತ್ತು ಆರ್.ವಿ ರವೀಂದ್ರನ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂಬ ಎನ್‌ಬಿಡಿಎ ಹೇಳಿಕೆಯನ್ನು ಗಮನಿಸಿದೆ.
ಎಕೆ ಸಿಕ್ರಿ ಮತ್ತು ಆರ್‌ವಿ ರವೀಂದ್ರನ್ ಅವರೊಂದಿಗೆ ಎನ್‌ಬಿಡಿಎ ನಡೆಸಿದ ಸಭೆಗಳ ಬಗ್ಗೆ ಎನ್‌ಬಿಡಿಎ ಪರ ವಾದ ಮಂಡಿಸಿದ ವಕೀಲ ಅರವಿಂದ್ ದಾತರ್, “ಸಂಪೂರ್ಣ ಮಾರ್ಗಸೂಚಿಗಳನ್ನು ಮರುಪರಿಶೀಲಿಸಲಾಗುತ್ತಿದೆ” ಎಂದು ಹೇಳಿದರು.
ನಿಯಮಗಳ ಅಡಿಯಲ್ಲಿ ನೋಂದಾಯಿಸಲು ಎನ್‌ಬಿಡಿಎ ವಿಫಲವಾದ ಬಗ್ಗೆ ಕೇಂದ್ರವು ನ್ಯಾಯಾಲಯದಲ್ಲಿ ಗಮನಸೆಳೆದಿತ್ತು. ಹೀಗಾಗಿ, ನ್ಯೂಸ್ ಬ್ರಾಡ್‌ಕಾಸ್ಟರ್ ಫೆಡರೇಶನ್ ಆಫ್ ಇಂಡಿಯಾ (ಎನ್‌ಬಿಎಫ್‌ಐ) ಪರವಾಗಿ ಹಾಜರಾದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, “2022ರ ನಿಯಮಗಳ ಪ್ರಕಾರ ಕೇಂದ್ರದಲ್ಲಿ ನೋಂದಾಯಿಸಲಾದ ಏಕೈಕ ನಿಯಂತ್ರಣ ಸಂಸ್ಥೆ ಎನ್‌ಬಿಡಿಎ” ಎಂದು ಹೇಳಿದರು.
ವಾದವನ್ನು ಆಲಿಸಿದ ನ್ಯಾಯಾಲಯ, ಪೂರ್ಣ ಪ್ರಮಾಣದ ಹೊಸ ಮಾರ್ಗಸೂಚಿಗಳನ್ನು ರಚಿಸಲು ನಾಲ್ಕು ವಾರಗಳ ಅವಕಾಶ ನೀಡಿದ್ದು, ವಿಚಾರಣೆಯಲ್ಲಿ ಮುಂದೂಡಿದೆ.