ರೈಲು ದುರಂತ | ಉದ್ಯಮಿ ಹರ್ಷ್‌ ಗೋಯೆಂಕಾಗೆ ರೈಲ್ವೆ ಸಚಿವರ ಮೇಲೆ ಯಾಕಿಷ್ಟು ಕಾಳಜಿ? ಏನಿದು ಕವಚದ ಕತೆ?

Date:

ಒಡಿಶಾದ ಬಾಲಾಸೋರ್‌ನಲ್ಲಿ ನಡೆದ ರೈಲು ದುರಂತ ಪ್ರಕರಣದ ತನಿಖೆ ಸಿಬಿಐ ಕೈಸೇರಿದೆ. ಸಿಬಿಐ ಅಧಿಕಾರಿಗಳು ತನಿಖೆ ಕೂಡ ಆರಂಭಿಸಿದ್ದಾರೆ. ಪರಿಹಾರ ಘೋಷಿಸಿ ಸುಮ್ಮನಾಗಿರುವ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವರು ಅಪಘಾತದ ಹೊಣೆಯನ್ನು ಹೊರುವ ಬಗ್ಗೆ ಮೌನ ವಹಿಸಿದ್ದಾರೆ. ಇದೇ ಹೊತ್ತಿನಲ್ಲಿ ಖ್ಯಾತ ಉದ್ಯಮಿ ಹರ್ಷ್‌ ಗೋಯೆಂಕಾ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಬೆಂಬಲಿಸಿ ಮಾಡಿರುವ ಟ್ವೀಟ್‌ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಾರ್ವಜನಿಕರು ಮತ್ತು ವಿಪಕ್ಷಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ರಾಜಿನಾಮೆಗೆ ಆಗ್ರಹಿಸುತ್ತಿದ್ದಾರೆ. ಇದೇ ವೇಳೆ ಸಚಿವರು ʼಕವಚʼ ತಂತ್ರಜ್ಞಾನದ ಬಗ್ಗೆ ವೇದಿಕೆಯೊಂದರಲ್ಲಿ ವಿವರಣೆ ನೀಡಿರುವ ಹಳೆಯ ವಿಡಿಯೋ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಹರ್ಷ್‌ ಗೋಯೆಂಕಾ, “ಒಡಿಶಾದಲ್ಲಿ ನಡೆದ ರೈಲು ದುರಂತ ದುರದೃಷ್ಟಕರ. ಇದು ರಾಜಕೀಯ ಮಾಡುತ್ತಾ ಕೂರುವ ಸಮಯವಲ್ಲ. ಆರೋಪ-ಪ್ರತ್ಯಾರೋಪಗಳನ್ನು ಮಾಡಿ ರಾಜಿನಾಮೆ ಆಗ್ರಹಿಸಲು ಇದು ಸೂಕ್ತ ಸಮಯವಲ್ಲ. ನಮ್ಮ ರೈಲ್ವೆ ಸಚಿವರು ತಂತ್ರಜ್ಞಾನದ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದಾರೆ. ಈಗ ʼಕವಚʼ ತಂತ್ರಜ್ಞಾನವನ್ನು ಸುಧಾರಿಸಲು ಹೆಚ್ಚಿನ ಹೂಡಿಕೆಯ ಅಗತ್ಯವಿದೆ” ಎಂದಿದ್ದಾರೆ.

ಕವಚ ಅಳವಡಿಕೆ ಯೋಜನೆ ಗುತ್ತಿಗೆ ಪಡೆದಿದ್ದ ಹರ್ಷ್‌ ಗೋಯೆಂಕಾ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ʼಕವಚʼ ತಂತ್ರಜ್ಞಾನ ಇಲ್ಲದ ಕಾರಣಕ್ಕೆ ರೈಲು ದುರಂತ ಸಂಭವಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗ ಹರ್ಷ್‌ ಗೋಯೆಂಕಾ ಅವರ ಈ ಒಂದು ಟ್ವೀಟ್‌ ಭಾರೀ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ, ಇದೇ ಉದ್ಯಮಿಯ ಮಾಲೀಕತ್ವದ ʼಆರ್‌ಜಿಪಿʼ (ರಿಸೋರ್ಸಸ್‌ ಗ್ಲೋಬಲ್‌ ಪ್ರೊಫೇಷನಲ್ಸ್‌) ಗ್ರೂಪ್‌ನ ಭಾಗವಾಗಿರುವ ‘ಕೆಇಸಿ ಇಂಟರ್‌ನ್ಯಾಷನಲ್‌ʼ ಹೆಸರಿನ ಕಂಪನಿಗೆ ರೈಲುಗಳಲ್ಲಿ ʼಕವಚʼ ಸುರಕ್ಷತಾ ತಂತ್ರಜ್ಞಾನವನ್ನು ಅಳವಡಿಸುವ 1,407 ಕೋಟಿ ರೂಪಾಯಿ ಮೊತ್ತದ ಬೃಹತ್‌ ಯೋಜನೆಯನ್ನು 2022ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಗುತ್ತಿಗೆ ನೀಡಿತ್ತು.

ಭಾರತದ ಎಲ್ಲ ರೈಲುಗಳಲ್ಲಿ ʼಕವಚʼ ಸುರಕ್ಷತಾ ತಂತ್ರಜ್ಞಾನ ಈವರೆಗೆ ಸಂಪೂರ್ಣವಾಗಿ ಅಳವಡಿಕೆಯಾಗಿಲ್ಲ. ಈ ತಂತ್ರಜ್ಞಾನ ಇಲ್ಲದಿದ್ದರಿಂದಲೇ ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದೆ ಎಂಬ ಗಂಭೀರ ಆರೋಪಗಳನ್ನು ವಿರೋಧ ಪಕ್ಷಗಳ ಪ್ರಮುಖ ನಾಯಕರು ಮಾಡುತ್ತಲೇ ಇದ್ದಾರೆ. ಆದರೆ, ತಂತ್ರಜ್ಞಾನ ಅಳವಡಿಕೆ ಯೋಜನೆಯನ್ನು ಸರ್ಕಾರದಿಂದ ಗುತ್ತಿಗೆ ಪಡೆದು, ಅದನ್ನು ಪೂರ್ಣಗೊಳಿಸದಿರುವ ಉದ್ಯಮಿ ಮಾತ್ರ ಘಟನೆಗೂ ತನಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ, “ರೈಲ್ವೆ ಸಚಿವರು ತಂತ್ರಜ್ಞಾನದಲ್ಲಿ ಅಪಾರ ಪಾಂಡಿತ್ಯ ಉಳ್ಳವರು. ಅವರ ಮೇಲೆ ಆರೋಪ ಹೊರಿಸಿ, ರಾಜಿನಾಮೆಗೆ ಆಗ್ರಹಿಸುವುದು ಸರಿಯಲ್ಲ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು” ಎನ್ನುವ ಮೂಲಕ ಅಶ್ವಿನಿ ವೈಷ್ಣವ್‌ ಬಗ್ಗೆ ತನಗಿರುವ ವ್ಯವಹಾರದ ಕಾಳಜಿ ಮತ್ತು ಹಿತಾಸಕ್ತಿಯನ್ನು ಸ್ಪಷ್ಟಪಡಿಸಿದ್ದಾನೆ.

ಹರ್ಷ್‌ ಗೋಯೆಂಕಾ ಅವರ ಟ್ವೀಟ್‌ ಮತ್ತು ಸಚಿವ ಅಶ್ವಿನಿ ವೈಷ್ಣವ್‌ ಹೇಳಿಕೆಯಲ್ಲಿ ಒಂದು ಸಾಮ್ಯತೆ ಇದೆ. ಡಿಕ್ಕಿ ಹೊಡೆದ ರೈಲಿನಲ್ಲಿ ʼಕವಚʼ ತಂತ್ರಜ್ಞಾನ ಅಳವಡಿಸದೆ ಇದ್ದದ್ದು ಅಪಘಾತಕ್ಕೆ ಕಾರಣವಲ್ಲ ಎಂದಿದ್ದರು ಅಶ್ವಿನಿ ವೈಷ್ಣವ್‌. ಘಟನೆಯ ಬೆನ್ನಲ್ಲೇ ಸಚಿವರನ್ನು ಬೆಂಬಲಿಸಿ ಪ್ರತಿಕ್ರಿಯಿಸಿದ್ದ ಹರ್ಷ್‌ ಗೋಯೆಂಕಾ ತಮ್ಮ ಟ್ವೀಟ್‌ನ ಕೊನೆಯಲ್ಲಿ, “ಈಗ ʼಕವಚʼ ತಂತ್ರಜ್ಞಾನವನ್ನು ಸುಧಾರಿಸಲು ಹೆಚ್ಚಿನ ಹೂಡಿಕೆಯ ಅಗತ್ಯವಿದೆ” ಎಂದಿದ್ದರು.

ಕುತೂಹಲಕಾರಿ ಸಂಗತಿ ಎಂದರೆ ಒಡಿಶಾ ರೈಲು ದುರಂತ ನಡೆದ ನಾಲ್ಕು ದಿನಗಳ ಅಂತರದಲ್ಲಿ ಅಂದರೆ ಜೂನ್‌ 6ರಂದು ಹರ್ಷ್‌ ಗೋಯೆಂಕಾ ಒಡೆತನದ ಅದೇ ʼಕೆಇಸಿ ಇಂಟರ್‌ನ್ಯಾಷನಲ್‌ʼ ಕಂಪನಿಗೆ ʼಕವಚʼ ತಂತ್ರಜ್ಞಾನ ಅಳವಡಿಕೆಯ 600 ಕೋಟಿ ರೂಪಾಯಿ ಮೊತ್ತದ ಮತ್ತೊಂದು ಯೋಜನೆಯನ್ನು ಕೇಂದ್ರ ಸರ್ಕಾರ ಗುತ್ತಿಗೆ ನೀಡಿದೆ. ಒಡಿಶಾ ರೈಲು ದುರಂತಕ್ಕೂ ರೈಲಿನಲ್ಲಿ ʼಕವಚʼ ಇಲ್ಲದಿದ್ದಕ್ಕೂ ಸಂಬಂಧವೇ ಇಲ್ಲ ಎಂದಿದ್ದ ರೈಲ್ವೇ ಸಚಿವರು, ಘಟನೆ ನಡೆದ ನಾಲ್ಕೇ ದಿನಕ್ಕೇ ರೈಲುಗಳಲ್ಲಿ ʼಕವಚʼ ಅಳವಡಿಕೆಗೆ ಬಹುಕೋಟಿ ಮೊತ್ತದ ಯೋಜನೆಯನ್ನು ಮತ್ತದೇ ಕಂಪನಿಗೆ ಕೊಟ್ಟಿದ್ದರ ಹಿಂದಿನ ಮರ್ಮವೇನು?

ಈ ಸುದ್ದಿ ಓದಿದ್ದೀರಾ? ಒಡಿಶಾ ರೈಲು ದುರಂತ | ಸಂತ್ರಸ್ತರ ನೆರವಿಗೆ ಸಹಾಯವಾಣಿ ತೆರೆದ ಸೋನು ಸೂದ್‌

ಅಂದಹಾಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ಉದ್ಯಮಿ ಹರ್ಷ್‌ ಗೋಯೆಂಕಾ ನಡುವಿನ ವ್ಯವಹಾರವನ್ನು ಬಯಲಿಗೆಳೆದಿರುವುದು ಸಚಿನ್‌ ಎಂಬ ಟ್ವಿಟರ್‌ ಬಳಕೆದಾರ. ಗಮನಿಸಬೇಕಾದ ಅಂಶ ಎಂದರೆ ದೇಶಾದ್ಯಂತ ಸಂಚರಿಸುತ್ತಿರುವ ಎಲ್ಲ ರೈಲುಗಳ ಪೈಕಿ ಶೇ.5-6ರಷ್ಟು ರೈಲುಗಳಲ್ಲಿ ಮಾತ್ರ ʼಕವಚʼ ಸುರಕ್ಷತಾ ತಂತ್ರಜ್ಞಾನ ಅಳವಡಿಕೆಯಾಗಿದೆ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೇಹಾ ಕೊಲೆ ಪ್ರಕರಣ | ಹುಬ್ಬಳ್ಳಿ, ಬೆಳಗಾವಿಯಲ್ಲಿ ಚುನಾವಣೆ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಯತ್ನ

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ...

ನೇಹಾ ಕೊಲೆಗೂ ರಾಜಕೀಯಕ್ಕೂ ಸಂಬಂಧವಿಲ್ಲ: ಸಚಿವ ಡಾ. ಜಿ ಪರಮೇಶ್ವರ್‌ ಸ್ಪಷ್ಟನೆ

ಹುಬ್ಬಳ್ಳಿಯ ಬಿವಿಬಿ ಇಂಜಿನಿಯರ್​​ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ...

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಶುರು: ಮಲ್ಲಿಕಾರ್ಜುನ ಖರ್ಗೆ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭವಾಗಲಿದ್ದು, ಕಾಂಗ್ರೆಸ್ ಅಧ್ಯಕ್ಷ...

ಮತದಾರರಿಗೆ ಬೆದರಿಕೆ ಆರೋಪ; ಡಿಕೆಶಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರ ಡಿಕೆ ಸುರೇಶ್​ಗೆ ಮತ ನೀಡುವಂತೆ ಬೆಂಗಳೂರು...