ಸಂಸತ್ ಕಲಾಪ | ಪ್ರತಿಪಕ್ಷಗಳ ಪ್ರತಿಭಟನೆ; ನಾಳೆ ಬಜೆಟ್‌ ಅಧಿವೇಶನ ಅಂತ್ಯ ಸಾಧ್ಯತೆ

Date:

  • ಅದಾನಿ, ರಾಹುಲ್‌ ವಿಷಯ ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್‌ ನಿಲುವಳಿ ಸೂಚನೆ
  • ಪ್ರತಿಪಕ್ಷಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ತೃಣಮೂಲ ಕಾಂಗ್ರೆಸ್

ಸಂಸತ್ತಿನಲ್ಲಿ ಪ್ರತಿಭಟನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಬಜೆಟ್‌ ಅಧಿವೇಶನ ಮಂಗಳವಾರ (ಮಾರ್ಚ್‌ 28) ಅಥವಾ ಬುಧವಾರ (ಮಾರ್ಚ್ 29) ಕೊನೆಗೊಳ್ಳುವ ಸಾಧ್ಯತೆ ಇದೆ.

ವಾಸ್ತವದಲ್ಲಿ ಎರಡನೇ ಅವಧಿಯ ಬಜೆಟ್‌ ಅಧಿವೇಶನ ಏಪ್ರಿಲ್‌ 6ರಂದು ಕೊನೆಗೊಳ್ಳಬೇಕಿತ್ತು. “ಸದನವು ಮಂಗಳವಾರ ಅಥವಾ ಬುಧವಾರ ಕೊನೆಗೊಳ್ಳಬಹುದು. ರಾಮ ನವಮಿ ನಂತರ ಸದನ ನಡೆಯದಿರುವ ಸ್ಪಷ್ಟ ಸೂಚನೆಗಳು ದೊರೆತಿವೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಬಜೆಟ್‌ ಅಧಿವೇ‍ಶನದ ಎರಡನೇ ಅವಧಿ ಮಾರ್ಚ್‌ 13ರಿಂದ ಪ್ರಾರಂಭವಾದಾಗಿನಿಂದ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಅದಾನಿ ಹಿಂಡನ್‌ಬರ್ಗ್‌ ಸಂಶೋಧನಾ ವರದಿ ಕುರಿತು ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ 2-3 ವಾರಗಳಿಂದ ಕೇಂದ್ರ ಸರ್ಕಾರವೂ ರಾಹುಲ್ ಗಾಂಧಿ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಅಂತಿಮವಾಗಿ ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಆಡಳಿತ ಪಕ್ಷಗಳು ಸಂಸತ್ತಿನಲ್ಲಿ ಪ್ರತಿಭಟನೆ ತೊರೆದಿವೆ. ಆದರೆ ಸಂಸತ್ತು ನಡೆಸುವ ಉದ್ದೇಶ ಆಡಳಿತ ಪಕ್ಷಕ್ಕೂ ಇದ್ದ ಹಾಗಿಲ್ಲ. ಸಂಸತ್ತಿನಲ್ಲಿ ಪದೇಪದೆ ಅದಾನಿ ವಿಚಾರ ಪ್ರಸ್ತಾಪವಾಗುತ್ತಿರುವುದು ಕೇಂದ್ರ ಸರ್ಕಾರಕ್ಕೂ ಸಹಿಸಲಾಗುತ್ತಿಲ್ಲ. ಇದೀಗ ಅದಾನಿ ವಿಚಾರದ ಜೊತೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹತೆ ವಿಷಯವೂ ಮುನ್ನೆಲೆಗೆ ಬಂದಿದೆ. ಎರಡೂ ವಿಷಯಗಳು ಉಭಯ ಸದನಗಳಲ್ಲಿ ಕೋಲಾಹಲ ಉಂಟು ಮಾಡಿವೆ. ಹೀಗಾಗಿ, ಪ್ರತಿಪಕ್ಷಗಳ ವಿರೋಧದ ಹೆಸರಿನಲ್ಲಿ ವಾರಕ್ಕೆ ಮೊದಲೇ ಸಂಸತ್ ಅಧಿವೇಶನ ಕೊನೆಗೊಳಿಸಲು ತೀರ್ಮಾನಿಸಿದೆ.

ಬಜೆಟ್ ಅಧಿವೇಶನದ ಎರಡನೇ ಅವಧಿ ಆರಂಭದಿಂದಲೂ ಇದುವರೆಗೆ ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಹಣಕಾಸಿನ ಮಸೂದೆ, ಅನುದಾನಗಳ ಬೇಡಿಕೆ ಮತ್ತು ಆಂತರಿಕ ಸೇವಾ ಸಂಸ್ಥೆಗಳ ಮಸೂದೆಯನ್ನು ಮಂಡಿಸಲು ಮಾತ್ರ ಆಡಳಿತಾರೂಢ ಬಿಜೆಪಿ ಸರ್ಕಾರ ಶಕ್ಯವಾಗಿದೆ.

“ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾರ್ಚ್‌ 27ರಂದು ಮಂಡಿಸಿದ ಹಣಕಾಸು ತಿದ್ದುಪಡಿ ಮಸೂದೆಯನ್ನು ಮಂಗಳವಾರ (ಮಾರ್ಚ್‌ 28) ಲೋಕಸಭೆಯಲ್ಲಿ ಅಂಗೀಕರಿಸಲು ಮತಕ್ಕೆ ಹಾಕಬೇಕಿದೆ. ಬಳಿಕ ಅದನ್ನು ರಾಜ್ಯಸಭೆಗೆ ಕಳುಹಿಸಲಾಗುವುದು” ಎಂದು ಹಿರಿಯ ಸಂಸದೀಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮತ್ತೊಮ್ಮೆ ನಿಲುವಳಿ ಸೂಚನೆ

ಮಂಗಳವಾರ ಲೋಕಸಭೆ ಅಧಿವೇಶನದಲ್ಲಿ ಅದಾನಿ ವಿಚಾರ ಹಾಗೂ ರಾಹುಲ್‌ ಗಾಂಧಿ ಅನರ್ಹತೆ ಕುರಿತು ಚರ್ಚೆ ನಡೆಸುವಂತೆ ಕಾಂಗ್ರೆಸ್‌ ಸಂಸದರಾದ ಮಾಣಿಕಮ್‌ ಟ್ಯಾಗೋರ್‌ ಮತ್ತು ಮನೀಶ್‌ ತಿವಾರಿ ಮತ್ತೆ ಲೋಕಸಭೆಗೆ ನಿಲುವಳಿ ಸೂಚನೆ ನೀಡಿದ್ದಾರೆ.

ಸೋಮವಾರದ ಅಧಿವೇಶನದಲ್ಲಿ 16 ಪ್ರತಿಪಕ್ಷಗಳ ನಾಯಕರು ಕಪ್ಪು ವಸ್ತ್ರ ಧರಿಸಿ ಅದಾನಿ ಹಗರಣದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯ ಮತ್ತು ರಾಹುಲ್‌ ಗಾಂಧಿ ಅವರ ಸಂಸತ್ತು ಸದಸ್ಯತ್ವ ರದ್ದುಗೊಳಿಸಿರುವುದರ ವಿರುದ್ಧದ ಪ್ರತಿಭಟನೆಗೆ ಒಗ್ಗಟ್ಟು ಪ್ರದರ್ಶಿಸಿದವು.

ಮಂಗಳವಾರ ಸಂಜೆ 7 ಗಂಟೆಯಿಂದ ಪ್ರತಿಪಕ್ಷಗಳು ದೆಹಲಿಯಲ್ಲಿ ಪಂಜಿನ ಮೆರವಣಿಗೆಯನ್ನೂ ಆಯೋಜಿಸಿವೆ. ಸಂಸತ್ತಿನಲ್ಲಿ ಎರಡನೇ ದೊಡ್ಡ ಪ್ರತಿಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪ್ರತಿಪಕ್ಷಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿರುವುದು ಆಡಳಿತ ಪಕ್ಷದ ಚಿಂತೆಗೆ ಕಾರಣವಾಗಿದೆ. ಆರಂಭದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ವಿರೋಧದಿಂದ ದೂರವಿದ್ದ ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್, ಇದೀಗ ಅದಾನಿ/ ರಾಹುಲ್ ಗಾಂಧಿ ವಿಚಾರದಲ್ಲಿ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಸಾವರ್ಕರ್ ವಿಚಾರದಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ಶಿವಸೇನೆ ವಿರೋಧ ವ್ಯಕ್ತಪಡಿಸಿದರೂ, ಪ್ರತಿಪಕ್ಷಗಳ ಒಗ್ಗಟ್ಟಿನ ಮೆರವಣಿಗೆಗಳಲ್ಲಿ ಭಾಗವಹಿಸುತ್ತಿದೆ ಮತ್ತು ಈ ಬಗ್ಗೆ ಕಾಂಗ್ರೆಸ್ ಜೊತೆಗೆ ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಲೋಕಸಭಾ | ಮುಗಿದ ನಾಮಪತ್ರ ಭರಾಟೆ, ಶುರುವಾಗಿ ಮತಬೇಟೆ

ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಮುಕ್ತಾಯವಾಗಿದೆ. ಬೀದರ್‌ ಲೋಕಸಭಾ ಕ್ಷೇತ್ರದ...

ಬಿಜೆಪಿಯಿಂದ ಪಿಕ್ ಪಾಕೆಟ್ ಕಾಂಗ್ರೆಸ್, ಕನ್ನಡಿಗರ ಕೈಗೆ ಚಿಪ್ಪು ಪೋಸ್ಟರ್ ಬಿಡುಗಡೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿದ್ದು,...

ಮಹಾಪ್ರಭು ಬಟ್ಟೆಯೊಳಗಡೆಯೇ ಬೆವರುತ್ತಿದ್ದಾರೆ: ಪ್ರಕಾಶ್‌ ರಾಜ್

“ನಿಮ್ಮ ಪಕ್ಷದ ಮ್ಯಾನಿಫೆಸ್ಟೋ ಬಗ್ಗೆ ಮಾತನಾಡಪ್ಪ ಅಂದರೆ ಊಟದ ಮೆನು ತೋರಿಸುತ್ತಾರೆ....

ನೇಹಾ ಕೊಲೆ | ನಿರಂಜನ್ ಮನೆಗೆ ಸಚಿವ ಎಚ್‌ ಕೆ ಪಾಟೀಲ್ ಭೇಟಿ, ನಿರಂಜನ್‌ ಜೊತೆ ಸಿಎಂ ಮಾತು

ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ...