- ಹಠ ಹಿಡಿದು ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಪಡೆದ ಶಾಮನೂರು ಶಿವಶಂಕರಪ್ಪ
- ದೇವನಹಳ್ಳಿಯಿಂದ ಕೆ.ಎಚ್ ಮುನಿಯಪ್ಪ, ಕೆಜಿಎಫ್ ನಿಂದ ಪುತ್ರಿ ರೂಪಕಲಾ ಅಭ್ಯರ್ಥಿ
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯಲ್ಲಿವೆ. ಇದರ ಭಾಗವಾಗಿಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆಯೇ ಹಳೆಯ ಅಭ್ಯರ್ಥಿಗಳಿಗೆ ಮೊದಲ ಪಟ್ಟಿಯಲ್ಲಿ ಮಣೆ ಹಾಕಲಾಗಿದೆ. ಆದರೆ, ಗಮನಾರ್ಹ ಸಂಗತಿ ಎಂದರೆ, ಎಂಟು ಕ್ಷೇತ್ರಗಳಲ್ಲಿ ತಂದೆ-ಮಕ್ಕಳಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಗೊಂದಲಗಳಿಗೆ ಎಡೆ ಮಾಡಿಕೊಡದೆ ಬಹುತೇಕ ಹಾಲಿ ಶಾಸಕರು ಮತ್ತು ನಿರೀಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಿದೆ. ಈ ನಡುವೆ ತಂದೆ ಮಕ್ಕಳ ನಾಲ್ಕು ಜೋಡಿಗಳಿಗೆ ಕಾಂಗ್ರೆಸ್ ಟಿಕೆಟ್ ಭಾಗ್ಯ ದೊರೆತಿದೆ.
ದಾವಣಗೆರೆ ರಾಜಕಾರಣದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ 90 ವರ್ಷ ದಾಟಿದೆ. ಆದರೆ, ಚುನಾವಣಾ ಕಣದಿಂದ ಹಿಂದೆ ಸರಿಯಲು ಒಪ್ಪದ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಮ್ಮ ಮಗ ಶಾಮನೂರು ಮಲ್ಲಿಕಾರ್ಜುನ ಅವರಿಗೂ ಸಹ ಶಿವಶಂಕರಪ್ಪ ಅವರು ದಾವಣಗೆರೆ ಉತ್ತರ ಕ್ಷೇತ್ರದಿಂದ ಟಿಕೆಟ್ ಕೊಡಿಸಿದ್ದಾರೆ.
ಸುಮಾರು ಆರು ತಿಂಗಳಿಂದ ಕ್ಷೇತ್ರದ ಮೇಲೆ ಕಣ್ಣಿಟ್ಟು ದೆಹಲಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದ ಕೆ ಎಚ್ ಮುನಿಯಪ್ಪ ಅವರು ಕೊನೆಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಡೆದುಕೊಂಡಿದ್ದಾರೆ. ಅವರ ಪುತ್ರಿ, ಹಾಲಿ ಶಾಸಕಿ ರೂಪಕಲಾ ಎಂ ಶಶಿಧರ್ ಅವರಿಗೆ ಕೆಜಿಎಫ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಇನ್ನು ಗೋವಿಂದರಾಜನಗರ ಕ್ಷೇತ್ರದಿಂದ ಮಾಜಿ ಶಾಸಕ ಪ್ರಿಯಕೃಷ್ಣ ಅವರು ಅಖಾಡಕ್ಕೆ ಧುಮುಕಿದರೆ, ಅವರ ತಂದೆ ಎಂ ಕೃಷ್ಙಪ್ಪ ಅವರಿಗೆ ವಿಜಯನಗರದ ಟಿಕೆಟ್ ದೊರೆತಿದೆ. ವಸತಿ ಇಲಾಖೆ ಸಚಿವ ವಿ ಸೋಮಣ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ವದಂತಿಗಳು ಹಬ್ಬಿದ್ದವು. ಇದೀಗ ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ವದಂತಿಗಳಿಗೆ ಕಾಂಗ್ರೆಸ್ ತೆರೆ ಎಳೆದಿದೆ.
ಅಂತೆಯೇ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರಿಗೆ ಬಿಟಿಎಂ ಲೇಜೌಟ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದರೆ, ಅವರ ಪುತ್ರಿ, ಹಾಲಿ ಶಾಸಕಿ ಸೌಮ್ಯಾ ರೆಡ್ಡಿ ನಿರೀಕ್ಷೆಯಂತೆ ಜಯನಗರದಿಂದ ಸ್ಪರ್ಧಿಸುತ್ತಿದ್ದಾರೆ.