- ಮಂಗಳವಾರ ನೂತನ ಸಂಸತ್ ಭವನಕ್ಕೆ ಸಂಸತ್ ಕಾರ್ಯ ಕಲಾಪಗಳು ವರ್ಗಾವಣೆ
- ಮಾಜಿ ಪ್ರಧಾನಿಗಳಾದ ನೆಹರೂ, ವಾಜಪೇಯಿ ಸಹಿತ ಹಲವರನ್ನು ಭಾಷಣದಲ್ಲಿ ನೆನೆದ ಮೋದಿ
ಐದು ದಿನಗಳ ಕಾಲ ನಡೆಯಲಿರುವ ಸಂಸತ್‌ನ ವಿಶೇಷ ಅಧಿವೇಶನವು ಇಂದು ಸಂಸತ್‌ನ ಹಳೆಯ ಕಟ್ಟಡದಲ್ಲಿ ಆರಂಭವಾಗಿದ್ದು, ಈ ಕಟ್ಟಡದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊನೆಯ ಭಾಷಣಗೈದರು.
ಅಧಿವೇಶನದಲ್ಲಿ ಮಾತನಾಡಿದ ಅವರು, “ಮಂಗಳವಾರದಿಂದ ನೂತನ ಸಂಸತ್ ಭವನಕ್ಕೆ ಸಂಸತ್ತಿನ ಕಾರ್ಯ ಕಲಾಪಗಳು ವರ್ಗಾವಣೆ ಆಗಲಿವೆ. ಹಳೆಯ ಸಂಸತ್ ಭವನವು ಸ್ವಾತಂತ್ರ್ಯ ಸಂಗ್ರಾಮದ ಚಿಹ್ನೆ” ಎಂದು ಹೇಳಿದರು.
“ನಾವೀಗ ನೂತನ ಸಂಸತ್ ಭವನಕ್ಕೆ ಸ್ಥಳಾಂತರ ಆಗುವ ಹೊಸ್ತಿಲಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾವು ಹಳೆಯ ಸಂಸತ್ ಭವನದ ಸವಿ ನೆನಪುಗಳು ಹಾಗೂ ಈ ಭವನ ನಮಗೆ ನೀಡಿದ ಸ್ಪೂರ್ತಿಗಳನ್ನು ನೆನಪಿಸಿಕೊಳ್ಳುವ ಸಮಯ” ಎಂದರು.
ಸೆ.19ರ ಮಂಗಳವಾರ ನೂತನ ಸಂಸತ್ ಭವನಕ್ಕೆ ಸಂಸದೀಯ ಕಾರ್ಯ ಕಲಾಪಗಳು ಸ್ಥಳಾಂತರ ಆಗಲಿವೆ.
“ಹಳೆಯ ಸಂಸತ್ ಭವನವು ಸ್ವಾತಂತ್ರ್ಯ ಪೂರ್ವದಲ್ಲಿ ಸಾಮ್ರಾಜ್ಯಶಾಹಿ ಶಾಸಕಾಂಗ ಭವನವಾಗಿತ್ತು. ಸ್ವಾತಂತ್ರ್ಯಾ ನಂತರ ಈ ಭವನಕ್ಕೆ ಸಂಸತ್ ಭವನ ಎಂಬ ಹೊಸ ಅಸ್ತಿತ್ವ ಸಿಕ್ಕಿತು. ನಾವು ಈಗಿರುವ ಹಳೆಯ ಕಟ್ಟಡವನ್ನು ನಿರ್ಮಿಸಿದ್ದು ವಿದೇಶೀ ಆಳ್ವಿಕೆದಾರರು. ಆದರೆ ಈ ಕಟ್ಟಡವನ್ನು ಕಟ್ಟಲು ಬಳಕೆಯಾದ ಹಣ, ಸಂಪನ್ಮೂಲ ಹಾಗೂ ಶ್ರಮ ಎಲ್ಲವೂ ಭಾರತೀಯರದ್ದು” ಎಂದು ಪ್ರಧಾನಿ ಮೋದಿ ಹೇಳಿದರು.
#WATCH | Special Session of the Parliament | Prime Minister Narendra Modi says, "…The echoes of Pandit Nehru's "At the stroke of the midnight…" in this House will keep inspiring us. In this House itself, Atal ji had said, "Sarkarein aayegi-jaayegi, partiyan banegi-bigdegi,… pic.twitter.com/MdYI4p6MfC
— ANI (@ANI) September 18, 2023
“ಜಿ – 20 ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದರ ಯಶಸ್ಸು ಇಡೀ ದೇಶಕ್ಕೆ ಸಲ್ಲಬೇಕಾದದ್ದು. ಈ ಶೃಂಗಸಭೆಯಲ್ಲಿ ಭಾರತದ ವೈಭವದ ಅನಾವರಣವಾಯಿತು ಎಂದು ಹೇಳಿದ ಪ್ರಧಾನಿ ಮೋದಿ, ಸಭೆಯ ನಿರ್ಣಯದಲ್ಲಿ ಭಾರತದ ಶಕ್ತಿಯ ಅನಾವರಣವೂ ಆಗಿದೆ ಎಂದು ಹೇಳಿದರು
ಹಳೆಯ ಸಂಸತ್ ಭವನಕ್ಕೆ ವಿದಾಯ ಹೇಳುತ್ತಿರುವುದು ನಿಜಕ್ಕೂ ಭಾವನಾತ್ಮಕ ಸನ್ನಿವೇಶ. ಈ ಕಟ್ಟಡದ ಜೊತೆ ಸಿಹಿ – ಕಹಿ ಅನುಭವಗಳು ಎರಡೂ ಇವೆ. ನಾನು ಈ ಕಟ್ಟಡಕ್ಕೆ ಮೊದಲ ಬಾರಿಗೆ ಸದಸ್ಯನಾಗಿ ಪ್ರವೇಶಿಸಿದಾಗ ದೇಶದ ಜನರು ನನಗೆ ಇಷ್ಟೊಂದು ಪ್ರೀತಿ ಕೊಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಹಳೆಯ ಕಟ್ಟಡವು ಮುಂದಿನ ಹಲವು ತಲೆಮಾರುಗಳಿಗೆ ಸ್ಪೂರ್ತಿ ತುಂಬಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಿಸಿದರು.
ಇದೇ ವೇಳೆ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರನ್ನು ನೆನಪಿಸಿದ ಪ್ರಧಾನಿ ಮೋದಿ, ಅವರ ಉಪಕ್ರಮಗಳು ಸಂಸತ್ತಿನಲ್ಲಿ ಹೇಗೆ ಸಾಕ್ಷಿಯಾಯಿತು ಎಂಬುದನ್ನು ಉಲ್ಲೇಖಿಸಿದರು.
ಸಂಸತ್‌ನಲ್ಲಿ ಮೊದಲು ಮಹಿಳಾ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಆದರೆ, ನಿಧಾನವಾಗಿ ಈ ಸದನದಲ್ಲಿ ಮಹಿಳಾ ಸಂಖ್ಯಾ ಬಲ ಹೆಚ್ಚಾಗುತ್ತಿದೆ. ಭಾರತದ ಇತ್ತೀಚಿನ ಹಲವು ಸಾಧನೆಗಳು ವಿಶ್ವ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ದೇಶದ ಸಂಸತ್‌ನ 75 ವರ್ಷಗಳ ಶ್ರಮದ ಪ್ರತಿಫಲ ಇದು ಎಂದು ತಿಳಿಸಿದರು.
ಚಂದ್ರಯಾನ – 3 ಯೋಜನೆ ಯಶಸ್ಸು ಭಾರತ ಮಾತ್ರವಲ್ಲ, ಇಡೀ ವಿಶ್ವಕ್ಕೇ ಹೆಮ್ಮೆ ಮೂಡಿಸಿದೆ. ಭಾರತವು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಮಾಡುತ್ತಿರುವ ಸಾಧನೆಯ ಪ್ರತೀಕ ಇದು ಎಂದು ಹೇಳಿದ ಪ್ರಧಾನಿ ಮೋದಿ, ದೇಶದ ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಇದೇ ವೇಳೆ ಹೇಳಿದರು.