ದಕ್ಷಿಣ ಕನ್ನಡ | ಬಿಜೆಪಿ ಭದ್ರಕೋಟೆ ಮತ್ತಷ್ಟು ಸುಭದ್ರ; ಪುತ್ತೂರಲ್ಲಿ ಸೋತ ಪುತ್ತಿಲ

Date:

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಆಡಳಿತ ವಿರೋಧಿ ಅಲೆಯಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೊಚ್ಚಿಹೋಗಿದೆ.

224 ಕ್ಷೇತ್ರಗಳ ಪೈಕಿ 130ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಭರ್ಜರಿ ಜಯಭೇರಿ ಬಾರಿಸಿದ ನಡುವೆಯೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಕಳಪೆ ಸಾಧನೆ ಮುಂದುವರಿದಿದೆ. ಒಟ್ಟು 8 ಸ್ಥಾನಗಳ ಪೈಕಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲು ಕೈ ಪಾಳಯಕ್ಕೆ ಸಾದ್ಯವಾಗಿದೆ.

ಕಳೆದ ಬಾರಿ (2018) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ ಕೇವಲ 1 ಸ್ಥಾನ ಪಡೆದಿದ್ದ ಕಾಂಗ್ರೆಸ್‌, ಈ ಬಾರಿ ಕೊಂಚ ಚೇತರಿಸಿಕೊಂಡಿದ್ದು, ಮತ್ತೊಂದು ಹೆಚ್ಚುವರಿ ಕ್ಷೇತ್ರದಲ್ಲಿ ಗೆಲ್ಲಿದೆ. ಮಂಗಳೂರು ಕ್ಷೇತ್ರದಲ್ಲಿ ಯು.ಟಿ‌ ಖಾದರ್ ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಶೋಕ್‌ ಕುಮಾರ್ ರೈ ಕಾಂಗ್ರೆಸ್‌ ಗೆಲುವಿನ ಬಾವುಟ ಹಾರಿಸಿದ್ದಾರೆ.

ಉಳಿದಂತೆ ಬಿಜೆಪಿಯ ಹುರಿಯಾಳುಗಳಾದ ಸುಳ್ಯದ ಭಾಗೀರಥಿ ಮುರುಳ್ಯ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಭರತ್ ಶೆಟ್ಟಿ, ಬೆಳ್ತಂಗಡಿಯ ಹರೀಶ್ ಪೂಂಜ, ಮೂಡುಬಿದಿರೆಯ ಉಮನಾಥ್ ಕೋಟ್ಯಾನ್, ಬಂಟ್ವಾಳದ ರಾಜೇಶ್ ನಾಯ್ಕ್ ಅವರು ಗೆಲುವು ಸಾಧಿಸಿದ್ದಾರೆ.

ಖಾದರ್‌ಗೆ ಭರ್ಜರಿ ಜಯ

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಯು.ಟಿ ಖಾದರ್‌ 22,790 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್‌ ಕುಂಪಲ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಸತತ 5ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಖಾದರ್‌ 83,219 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಸತೀಶ್‌ ಕುಂಪಲ 60,429 ಮತಗಳನ್ನು ಪಡೆದಿದ್ದಾರೆ.

ಖಾದರ್‌ ಗೆಲುವಿಗೆ ಅಡ್ಡಗಾಲು ಹಾಕಲಿದ್ದಾರೆ ಎಂದೇ ಬಿಂಬಿಸಲಾಗಿದ್ದ ಎಸ್‌ಡಿಪಿಐ ಪಕ್ಷದ ರಿಯಾಝ್‌ ಪರಂಗಿಪೇಟೆ 15,029 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  

ಪುತ್ತೂರಲ್ಲಿ ಪುತ್ತಿಲರನ್ನು ಮಣಿಸಿದ ರೈ

ತ್ರಿಕೋನ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಶೋಕ್‌ ರೈ 4 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಇಬ್ಬರ ಜಗಳ ಮೂರನೆಯವನರಿಗೆ ಲಾಭ ಎಂಬಂತೆ, ಪುತ್ತೂರಿನಲ್ಲಿ ಹಿಂದೂ ಮುಖಂಡ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆದಿದ್ದು, ಇವರಿಬ್ಬರ ಜಗಳದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ರೈ 66,607 ಮತಗಳನ್ನು ಪಡೆದರೆ, ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ 62,458 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ 37,558 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ‌

ಸುಳ್ಯ; ಮೊದಲ ಮಹಿಳಾ ಶಾಸಕಿ

ಮೀಸಲು ಕ್ಷೇತ್ರ ಸುಳ್ಯದಲ್ಲಿ ಬಿಜೆಪಿಯ ಭಾಗೀರಥಿ ಮುರುಳ್ಯ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಭಾಗೀರಥಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿ ಜಿ ಕೃಷ್ಣಪ್ಪ ಅವರ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. 6 ಬಾರಿಯ ಶಾಸಕ ಎಸ್‌ ಅಂಗಾರ ಅವರ ಬದಲು ಈ ಬಾರಿ ಬಿಜೆಪಿ ಭಾಗೀರಥಿ ಅವರನ್ನು ಕಣಕ್ಕಿಳಿಸಿತ್ತು. ಹೀಗಾಗಿ ಮೂವತ್ತು ವರ್ಷಗಳ‌ ಬಳಿಕ ಹೊಸ ಶಾಸಕರು ವಿಧಾನ ಸಭೆಯಲ್ಲಿ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ. ಸುಳ್ಯದ ಮೊದಲ ಮಹಿಳಾ ಶಾಸಕಿ ಎಂಬ  ಕೀರ್ತಿಯೂ ಭಾಗೀರಥಿ ಮುರುಳ್ಯ ಅವರ ಪಾಲಾಗಿದೆ.

ಈ ಸುದ್ದಿ ಓದಿದ್ದೀರಾ?: ಬಿಜೆಪಿಯವರ ಭ್ರಷ್ಟಾಚಾರಕ್ಕೆ ಜನರಿಂದ ಸರಿಯಾದ ಪಾಠ: ಸಿದ್ದರಾಮಯ್ಯ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ 23,962 ಮತಗಳ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜೆ.ಆರ್‌ ಲೋಬೋ ವಿರುದ್ಧ ಗೆಲುವು ಸಾಧಿಸಿದ್ದಾರೆ. ವೇದವ್ಯಾಸ್ ಕಾಮತ್ 91,437 ಮತಗಳನ್ನು ಪಡೆದಿದ್ದು, ಜೆ.ಆರ್‌ ಲೋಬೋ 67,475 ಮತಗಳನ್ನು ಪಡೆದಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ವೈ ಭರತ್‌ ಶೆಟ್ಟಿ 32,922 ಮತಗಳ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇನಾಯತ್‌ ಅಲಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಡಾ.ವೈ ಭರತ್‌ ಶೆಟ್ಟಿ 1,03,531 ಮತಗಳನ್ನು ಪಡೆದಿದ್ದು, ಇನಾಯತ್‌ ಅಲಿ 70,609 ಮತಗಳನ್ನು ಪಡೆದಿದ್ದಾರೆ.

ಮೂಡುಬಿದರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್‌ ಕೋಟ್ಯನ್‌ 22,468 ಮತಗಳ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ವಿರುದ್ಧ ಗೆಲುವು ಸಾಧಿಸಿದ್ದಾರೆ. ಉಮಾನಾಥ್‌ ಕೋಟ್ಯನ್‌ 86,925 ಮತಗಳನ್ನು ಪಡೆದಿದ್ದು, ಮಿಥುನ್‌ ರೈ 64,457 ಮತಗಳನ್ನು ಪಡೆದಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‌ ನಾಯ್ಕ್‌ 8,295 ಮತಗಳ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಮಾನಾಥ್‌ ರೈ ವಿರುದ್ಧ ಗೆಲುವು ಸಾಧಿಸಿದ್ದಾರೆ. ರಾಜೇಶ್‌ ನಾಯ್ಕ್‌ 93,342 ಮತಗಳನ್ನು ಪಡೆದಿದ್ದು, ರಮಾನಾಥ್‌ ರೈ 85,047 ಮತಗಳನ್ನು ಪಡೆದಿದ್ದಾರೆ.

ಬೆಳ್ತಂಡಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ 18,226 ಮತಗಳ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಿತ್‌ ಶಿವರಾಮ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ. ಹರೀಶ್‌ ಪೂಂಜಾ 1,01,004 ಮತಗಳನ್ನು ಪಡೆದಿದ್ದು, ರಕ್ಷಿತ್‌ ಶಿವರಾಮ್‌ 82,778 ಮತಗಳನ್ನು ಪಡೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಗಾಂಧಿ ಗ್ರಾಮ ಪುರಸ್ಕಾರʼಕ್ಕೆ 233 ಗ್ರಾಮ ಪಂಚಾಯಿತಿ ಆಯ್ಕೆ: ಪ್ರಿಯಾಂಕ್‌ ಖರ್ಗೆ

ಅ.2ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ 4 ಗ್ರಾಮ...

ಬೆಳಗಾವಿ | ಮೋಡ ಬಿತ್ತನೆ ಕಾರ್ಯಾಚರಣೆ ಆರಂಭ; ಯಶಸ್ವಿಯಾದರೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಯತ್ನ

ಬರಪೀಡಿತ ರೈತರಿಗೆ ನೆರವಾಗಲು ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್...

ತುಮಕೂರು | ವಸತಿ ನಿಲಯಕ್ಕೆ ಎಸಿ, ತಹಶೀಲ್ದಾರ್​​ ದಿಢೀರ್​ ಭೇಟಿ; ವಾರ್ಡನ್​ಗೆ ಎಚ್ಚರಿಕೆ

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ‌ ಬಾಲಕರ ವಸತಿನಿಲಯಕ್ಕೆ ಉಪ...

ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ: ಸಿದ್ದರಾಮಯ್ಯ

ಕಾವೇರಿ ನೀರು ಬಿಡುವ ಆದೇಶಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ...