ಬೆಂಗಳೂರು | ವೈಟ್‌ಬೋರ್ಡ್ ಟ್ಯಾಕ್ಸಿ ಹಾಗೂ ರ್‍ಯಾಪಿಡೋ ವಿರುದ್ಧ ಆಟೋ ಚಾಲಕರ ಮುಷ್ಕರ

Date:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವೈಟ್‌ಬೋರ್ಡ್ ಟ್ಯಾಕ್ಸಿ ಹಾಗೂ ರ್‍ಯಾಪಿಡೋ ಸೇರಿದಂತೆ ನಾನಾ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಸೋಮವಾರ ಆಟೋ ಮಾಲೀಕರ ಮತ್ತು ಚಾಲಕರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಹೋರಾಟಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಯಶವಂತಪುರ ಹಾಗೂ ಮೆಜೆಸ್ಟಿಕ್ ಬಳಿ ಎಂದಿನಂತೆ ಆಟೋಗಳು ಸಂಚರಿಸುತ್ತಿವೆ. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಪ್ರಿಪೇಯ್ಡ್ ಆಟೋಗಳು ಜನರಿಗೆ ಸೇವೆ ನೀಡುತ್ತಿವೆ. ಪ್ರತಿಭಟನಾ ಸಮಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ಹೀಗಾಗಿ, ಪ್ರಯಾಣಿಕರು ಬಿಎಂಟಿಸಿ ಮತ್ತು ಮೆಟ್ರೋಗಳತ್ತ ಮುಖ ಮಾಡುತ್ತಿದ್ದಾರೆ.

ಪ್ರತಿಭಟನೆ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಆಟೋ ಡ್ರೈವರ್ ಯೂನಿಯನ್ (ಸಿಐಟಿಯು) ಅಧ್ಯಕ್ಷ ಶ್ರೀನಿವಾಸ್, “ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುತ್ತಿದ್ದೇವೆ. ಸಾವಿರಾರು ಜನ ಸೇರಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು. ಬೈಕ್ ಟ್ಯಾಕ್ಸಿ ಸೇವೆಯನ್ನು ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.

“ರೈಲ್ವೆ ನಿಲ್ದಾಣದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ತೆರಳಿ ಮನವಿ ಸಲ್ಲಿಸಲಿದ್ದೇವೆ. ಒಂದು ವೇಳೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೇ, ಈ ಮುಷ್ಕರವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುತ್ತೇವೆ. ಬೆಂಗಳೂರಿನಲ್ಲಿ 21 ಆಟೋ ಚಾಲಕರ ಸಂಘಟನೆಗಳಿದ್ದು, ಎಲ್ಲ ಸಂಘಟನೆಗಳು ಈ ಬಂದ್ನಲ್ಲಿ ಪಾಲ್ಗೊಳ್ಳಲಿವೆ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ. ನಗರದಲ್ಲಿ ಕೆಲವು ತಿಳುವಳಿಕೆ ಕೊರತೆ ಇರುವ ಜನ ಆಟೋ ಓಡಿಸುತ್ತಿದ್ದಾರೆ. ಅವರಿಗೆ ಮನವರಿಕೆ ಮಾಡುತ್ತಿದ್ದೇವೆ” ಎಂದರು.

ಚಾಲುಕ್ಯ ಆಟೋ ಸಂಘದ ಚಾಲಕ ಮಂಜುನಾಥ್ ಈ ದಿನ.ಕಾಮ್ ಜತೆಗೆ ಮಾತನಾಡಿ, “24 ಗಂಟೆ ಪ್ರತಿಭಟನೆ ಮಾಡಲು ತಿಳಿಸಿದ್ದಾರೆ. ಹಾಗಾಗಿ, ಆಟೋವನ್ನು ಸ್ಟಾಂಡ್‌ನಲ್ಲಿ ನಿಲ್ಲಿಸಿದ್ದೇವೆ. ರ್‍ಯಾಪಿಡೋವನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು” ಎಂದು ಹೇಳಿದರು.

ಆಟೋ ಚಾಲಕ ವಿಜಯಕುಮಾರ ಈ ದಿನ.ಕಾಮ್ ಜತೆಗೆ ಮಾತನಾಡಿ, ”ನಗರದಲ್ಲಿ ಪ್ರತಿ ಏರಿಯಾಗಳಲ್ಲಿ ಆಟೋ ಸಂಚಾರವನ್ನು ನಿಷೇಧಿಸಲಾಗಿದೆ. ಆಟೋ ಓಡಿಸುತ್ತಿರುವವರಿಗೆ ಈ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ. ವೈಟ್‌ ಬೋರ್ಡ್‌ನವರು ಹೆಚ್ಚಿನ ಬಂಡವಾಳ ಹಾಕದೇ ದಿನಕ್ಕೆ 1,000ದಿಂದ 1,500 ವರೆಗೆ ದುಡಿಯುತ್ತಿದ್ದಾರೆ. ನಾವು ಆಟೋ ಚಾಲಕರು ಇನ್ಶುರೆನ್ಸ್, ಎಮಿಷನ್ ಸರ್ಟಿಫಿಕೇಟ್, ಮೀಟರ್ ಪಾಸಿಂಗ್, ಗಾಡಿ ಪಾಸಿಂಗ್ – ಇಷ್ಟೆಲ್ಲ ಮಾಡಿಯೂ ಕೂಡಾ ನಮಗೆ ಸಂಪಾದನೆ ಇಲ್ಲ. ಜೀವನ ನಡೆಸುವುದು ಕಷ್ಟಕರವಾಗಿದೆ” ಎಂದರು.

ಆಟೋ ಚಾಲಕ ರಮೇಶ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಮುಷ್ಕರದ ಹೆಸರಿನಲ್ಲಿ ಆಟೋ ನಿಲ್ಲಿಸಿದ್ದರೆ, ಜೀವನ ನಡೆಸುವುದು ಕಷ್ಟವಾಗುತ್ತದೆ. ಬೆಳಗಾದರೆ ತೊಂದರೆಗಳು ಬಂದು ನಿಲ್ಲುತ್ತವೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಮಕ್ಕಳಿಗೆ ಪರೀಕ್ಷೆ ನಡೆಯುತ್ತಿವೆ” ಎಂದು ತಿಳಿಸಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾರಂಟಿ ಜಾರಿಗೆ ಅಭಿವೃದ್ಧಿ ಅನುದಾನಗಳಿಗೆ ಕತ್ತರಿ ಹಾಕಬೇಡಿ : ಮಾಜಿ ಸಿಎಂ ಬೊಮ್ಮಾಯಿ

ಹಿಂದಿನ ಸರ್ಕಾರದ ಜನಪರ ಯೋಜನೆ ಮುಂದುವರೆಸಲು ಸಿಎಂಗೆ ಮನವಿ ಸಿದ್ದರಾಮಯ್ಯಗೆ ಪತ್ರ ಮೂಲಕ...

ಮಳೆಹಾನಿ | ಪರಿಹಾರ ಕ್ರಮ ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಸೂಚನೆ

67 ಮಂದಿ ಪ್ರಾಣಹಾನಿ ಆಗಿದ್ದು, 60 ಮಂದಿಯ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ 487...

ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೆ ನಾವೇ ಖರೀದಿಸುತ್ತೇವೆ: ಸಚಿವ ಮುನಿಯಪ್ಪ

ಘೋಷಿತ ಐದೂ ಗ್ಯಾರಂಟಿಗಳನ್ನು ಹಂತಹಂತವಾಗಿ ನೀಡುತ್ತೇವೆ ನಮ್ಮ ಮಾತಿಗೆ ನಾವು ಎಂದಿಗೂ ಬದ್ಧರಾಗಿರುತ್ತೇವೆ...

ಸರ್ಕಾರಿ ಭೂಮಿ ಕಬಳಿಕೆ | ನಿ. ನ್ಯಾಯಾಧೀಶರಿಂದ ಮರುಪರಿಶೀಲನೆಗೆ ಸೂಚನೆ: ಕೃಷ್ಣ ಭೈರೇಗೌಡ

ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆ ಗೊಂದಲವಿಲ್ಲ ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಹೊಸ...