- ನಾವು ಜಗಳವಾಡಿ ಕೋರ್ಟ್ ಕಚೇರಿ ಅಲೆದಿದ್ದು ಸಾಕು
- ಸೌಹಾರ್ದತೆಯಿಂದ ಮೇಕೆದಾಟು ಯೋಜನೆಗೆ ಸಹಕರಿಸಿ
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ ನಂತರ ಹಿಂದಿನ ಸರ್ಕಾರ ರಾಜ್ಯ ಬಜೆಟ್ ನಲ್ಲಿ 1 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಆದರೆ ಅದನ್ನು ಖರ್ಚು ಮಾಡಿಲ್ಲ ಎಂದರು.
ನಮಗೆ ತಮಿಳುನಾಡಿನ ಮೇಲೆ ದ್ವೇಷ ಮಾಡುವ, ಯುದ್ಧ ಮಾಡುವ ಉದ್ದೇಶವಿಲ್ಲ. ಅಲ್ಲಿರುವವರು ನಮ್ಮ ಅಣ್ಣತಮ್ಮಂದಿರೆ. ನಮಗೆ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ ಎಂದು ಹೇಳಿದರು.
ಮೇಕೆದಾಟು ನಮ್ಮ ಯೋಜನೆ. ಇದರಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆ. ಸಮುದ್ರಕ್ಕೆ ಹೋಗುವ ನೀರು ತಡೆದು ಅದನ್ನು ಕಾವೇರಿ ಭಾಗದ ಜನರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಕಾವೇರಿ ನದಿಗೆ ಅಣೆಕಟ್ಟುಗಳ ಬೀಗ ಕೇಂದ್ರ ಸರ್ಕಾರದ ಕೈಯಲ್ಲಿದೆ. ಅವರಿಗೆ ಯಾವಾಗ ಎಷ್ಟು ನೀರು ಬಿಡಬೇಕು ಎಂದು ಅವರು ತೀರ್ಮಾನಿಸಿ ಬಿಡುತ್ತಾರೆ ಎಂದರು.
ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸುವುದರಿಂದ ಅವರಿಗೆ ಆಗುವ ತೊಂದರೆ ಏನು? ನಮ್ಮಲ್ಲಿ ನೀರು ಸಂರಕ್ಷಣೆ ಮಾಡಿಕೊಂಡು ಕುಡಿಯುವ ನೀರು ಪೂರೈಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹೀಗಾಗಿ ತಮಿಳುನಾಡಿನವರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಮೇಕೆದಾಟು ಯೋಜನೆಯಿಂದ ಯಾವುದೇ ತೊಂದರೆ ಇಲ್ಲ. ಹೀಗಾಗಿ ತಮಿಳುನಾಡಿನವರಿಗೆ ಹೃದಯ ಶ್ರೀಮಂತಿಕೆ ಇರಲಿ. ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ. ನಾವು ಜಗಳವಾಡಿ ಕೋರ್ಟ್ ಕಚೇರಿ ಅಲೆದದ್ದು ಸಾಕು. ಸೌಹಾರ್ದತೆಯಿಂದ ಕುಡಿಯುವ ನೀರು ಹಾಗೂ ತಮಿಳುನಾಡಿನ ರೈತರಿಗೆ ಅನುಕೂಲವಾಗುವ ಯೋಜನೆಗೆ ಸಹಕರಿಸಿ.
ಈ ಸುದ್ದಿ ಓದಿದ್ದೀರಾ? ಮಳೆಹಾನಿ | ಪರಿಹಾರ ಕ್ರಮ ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಸೂಚನೆ
ಆಕ್ರಮಣಕಾರಿಯಾಗಿ ವರ್ತಿಸುವುದು ಬೇಡ : ಡಿಎಂಕೆ
ಡಿಎಂಕೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. “ಅಧಿಕಾರಕ್ಕೆ ಬಂದು ಕೆಲ ದಿನಗಳು ಕಳೆದಿವೆ. ಅಷ್ಟರಲ್ಲೇ, ನೆರೆಯ ರಾಜ್ಯದ ಬಗ್ಗೆ ಶಿವಕುಮಾರ್ ಅವರು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದಕ್ಕೆ ಆಶ್ಚರ್ಯವಾಗಿದೆ. ಮೇಕೆದಾಟು ಯೋಜನೆ ಕುರಿತು ಅಧಿಕಾರಿಗಳು ಅವರಿಗೆ ವಿವರವಾದ ಮಾಹಿತಿ ನೀಡಿಲ್ಲ ಅನಿಸುತ್ತದೆ. ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಿ, ಈ ವಿಷಯ ಕುರಿತು ವಿವರಿಸುತ್ತೇನೆ. ಅಲ್ಲಿಯವರೆಗೆ ಅವರು ತಾಳ್ಮೆಯಿಂದ ಇರುತ್ತಾರೆ ಎಂದು ಆಶಿಸುವೆ” ಎಂದಿದ್ದರು.
“ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲು ಅವರನ್ನು ಭೇಟಿಯಾಗಲು ಯೋಜಿಸಿದ್ದೆ. ಆದರೆ, ಈಗ ಈ ಹೇಳಿಕೆ ಮೂಲಕವೇ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ” ಎಂದು ಪ್ರಕಟಣೆಯಲ್ಲಿ ಹೇಳಿದ್ದರು.