ಕರೆನ್ಸಿಯೊಂದಿಗೆ ಆಡುವ ಆಟ, ಕರೆಂಟ್ ಜೊತೆಗೆ ಆಡಿದ ಆಟದಂತೆ; ಒಂದು ತುಘಲಕ್ ಮೋಜಿನಾಟ

Date:

ನೋಟು ರದ್ದತಿಯ ತುಘಲಕ್ ರೀತಿಯ ತೀರ್ಮಾನಕ್ಕಾಗಿ ಸರಕಾರವು ದೇಶದ ಜನತೆಗೆ ಎಂದೂ ಕ್ಷಮೆ ಕೇಳಿಲ್ಲ. ಆದರೆ, ಕಾಳ ಧನ ಇಲ್ಲವಾಗಿಸುವ ವಾದದ ಆಧಾರದ ಮೇಲೆ ಚುನಾವಣೆ ಗೆದ್ದರು. ಒಂದೆರಡು ಬಾರಿ ನೋಟು ರದ್ದತಿಯ ಸಂಭ್ರಮ ಆಚರಿಸಿದರು ಹಾಗೂ ಅದರ ನಂತರ ಅದನ್ನು ಮರೆತುಬಿಟ್ಟರು

ದೆಹಲಿಯ ತೀನ್‍ಮೂರ್ತಿ ಭವನದಲ್ಲಿ ದೇಶದ ಪ್ರಧಾನಮಂತ್ರಿಯ ಸಂಗ್ರಹಾಲಯದಲ್ಲಿ ಸದ್ಯಕ್ಕೆ ನರೇಂದ್ರ ಮೋದಿಯವರ ಕೊಠಡಿ ಅಪೂರ್ಣವಾಗಿದೆ. ಯಾವಾಗ ಅವರನ್ನು ಬೀಳ್ಕೊಡಲಾಗುವುದೋ ಆಗ, ದೇಶವು ಅವರು ತೆಗೆದುಕೊಂಡು ಒಳ್ಳೆಯ, ಕೆಟ್ಟ ತೀರ್ಮಾನಗಳ ನೆನಪುಗಳನ್ನು ಹೆಣೆಯುತ್ತ ಹೋದಲ್ಲಿ, ಆ ಮ್ಯೂಸಿಯಂನಲ್ಲಿ ನೋಟು ರದ್ದತಿಗೆ ಒಂದು ಸ್ಥಾನ ಅಥವಾ ಕೊಠಡಿ ಖಂಡಿತವಾಗಿಯೂ ಇರಲಿದೆ. ಆ ಕೊಠಡಿಯಲ್ಲಿ ಗುಲಾಬಿ ಬಣ್ಣದ 2,000 ರೂಪಾಯಿಗೂ ಸ್ಥಾನ ಇರಲಿದೆ. ಆ ಕೊಠಡಿಯನ್ನು ಹುಚ್ಚ ತುಘಲಕ್ ಎಂದು ಕರೆಯಲಾಗುವುದು ಅಥವಾ ತಮಾಷೆಯ ಕೊಠಡಿಯೆಂದು ಕರೆಯಲಾಗುವುದೋ ಗೊತ್ತಿಲ್ಲ.

ಆ ಹೊಸ ರೀತಿಯ ಸಂಗ್ರಹಾಲಯದಲ್ಲಿ ಈ ನೋಟಿನ ಬಗ್ಗೆ ರಚಿಸಲಾದ ಜೋಕುಗಳಿಗೂ ಜಾಗ ಇರುವ ಸಾಧ್ಯತೆ ಇದೆ. ಬೇರೆ ಏನಾದರೂ ಇರಲಿ ಬಿಡಲಿ, ‘ಆಜ್ ತಕ್’ನ ಆಂಕರ್‌ನ ಆ ವಿಡಿಯೋ ತುಣುಕು, ಅದರಲ್ಲಿ ನೋಟು ರದ್ಧತಿಯ ದಿನದಂದು 2000 ರೂಪಾಯಿಯಲ್ಲಿ ‘ನ್ಯಾನೊ ಚಿಪ್’ನ ಇದೆ ಎಂದು ಖಡಾಖಂಡಿತವಾಗಿ ವರದಿ ಮಾಡುತ್ತಿರುವ ವಿಡಿಯೋ ತುಣಕಂತೂ ಇರಲಿದೆ. ನನ್ನ ಮಾತು ನಡೆದರೆ, 2,000 ರೂಪಾಯಿ ನೋಟನ್ನು ಹಿಂಪಡೆದಾಗ, ರೊಫಲ್ ಗಾಂಧಿ ಹೆಸರಿನಲ್ಲಿ ಬಂದ ಈ ಟ್ವೀಟ್‍ಗೂ ಸಂಗ್ರಹಾಲಯದಲ್ಲಿ ಸ್ಥಾನ ನೀಡಬೇಕು; “ವಿಶ್ವಾಸಾರ್ಹ ಮೂಲಗಳ ಪ್ರಕಾರ 2,000ದ ನೋಟಿನ ಚಿಪ್‍ಗೆ 5ಜಿಯೊಂದಿಗೆ ಕನೆಕ್ಷನ್ ಆಗುತ್ತಿಲ್ಲ. ಈಗ 5ಜಿ ಹೊಂದಿರುವ ಹೊಸ 5000ದ ಸೂಪರ್ ನ್ಯಾನೋ ಚಿಪ್‍ನ ನೋಟು ಬರಲಿದೆ. ಒಂದು ವೇಳೆ ಕಾಳಧನದವರು ಇದನ್ನು ತಿಜೋರಿಯಲ್ಲಿ ಇಟ್ಟರೆ ಅದು ಖುದ್ದಾಗಿ ಉಬರ್ ಬುಕ್ ಮಾಡಿಕೊಂಡು ಆರ್‌ಬಿಐನ ಕಚೇರಿಗೆ ವಾಪಸ್ ಬರುವುದು!”

ಆ ಕೊಠಡಿಯಲ್ಲಿ 2016ರ ನವೆಂಬರ್ 8ರ ಸಂಜೆಯಿಂದ ಶುರುಮಾಡಿ 2023ರ ಮೇ 23ರ ತನಕದ ನೋಟುರದ್ಧತಿಯ ಕಥೆಯನ್ನು ಹೇಳಲಾಗುವುದು. ಪ್ರಧಾನಮಂತ್ರಿ ದೊಡ್ಡ ದೊಡ್ಡ ಭರವಸೆ ನೀಡಿದ ಭಾಷಣದ ವಿಡಿಯೋ ತುಣುಕಿನೊಂದಿಗೆ ಆ ಕಥೆ ಪ್ರಾರಂಭವಾಗುವುದು. ಅದರಲ್ಲಿ ಇತರ ಅನೇಕ ಉಪಕಥೆಗಳು ಇರಲಿವೆ: ದೇಶಾದ್ಯಂತ ಕಂಡುಬಂದ ಸರತಿ ಸಾಲುಗಳು, ಹಳೆಯ ನೋಟುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾತುರದಿಂದ ಕಾಯುತ್ತಿರುವ ಕಣ್ಣುಗಳು ಇತ್ಯಾದಿ. ನಿಸ್ಸಂದೇಹವಾಗಿಯೂ, ಅಲ್ಲಿ ಅನೇಕ ದಸ್ತಾವೇಜುಗಳೂ ಇರಲಿವೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೂರು ಹೊಸ ನಿರ್ದೇಶನಗಳು, ದಿನನಿತ್ಯ ಬದಲಾಗುತ್ತಿರುವ ಬ್ಯಾಂಕ್‍ಗಳ ನಿಯಮಗಳು.

ಒಂದು ವೇಳೆ ಆ ಸಂಗ್ರಹಾಲಯವನ್ನು ಪ್ರಾಮಾಣಿಕತೆಯಿಂದ ಮಾಡಿದರೆ, ಅದರಲ್ಲಿ ಯಾವುದೇ ವಿತ್ತೀಯ ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಪಡೆದುಕೊಳ್ಳದೇ, ರಿಸರ್ವ್ ಬ್ಯಾಂಕ್‍ನ ಮಾಜಿ ಗವರ್ನರ್ ರಘುರಾಮ್ ರಾಜನ್‍ರ ಎಚ್ಚರಿಕೆಯನ್ನು ಕಡೆಗಣಿಸಿ ಹೇಗೆ ದೇಶದ ಕರೆನ್ಸಿಯೊಂದಿಗೆ ಇಷ್ಟು ದೊಡ್ಡ ಆಟ ಆಡಲಾಯಿತು ಎಂಬುದನ್ನು ದಾಖಲಿಸಲಾಗುವುದು. ಒಂದು ವೇಳೆ ಆ ಸಂಗ್ರಹಾಲಯ ಭವಿಷ್ಯದ ಪ್ರಜ್ಞೆಯನ್ನು ಹೊಂದಿದ್ದರೆ ಅದರಲ್ಲಿ ನೋಟು ರದ್ದತಿಯ ದಾವೆಗಳು ಮತ್ತು ಅದರ ಅಸಲಿಯತ್ತನ್ನು ಎದುರುಬದರು ಇರಿಸುವ ಒಂದು ಪ್ಯಾನೆಲ್ ಕೂಡ ಇರಿಸಬೇಕಾಗುವುದು. ನೋಟು ರದ್ದತಿಯಿಂದ ದೊಡ್ಡ ಪ್ರಮಾಣದಲ್ಲಿ ಕಾಳ ಧನ ಇಲ್ಲವಾಗುವುದು, ಭ್ರಷ್ಟಾಚಾರಕ್ಕೆ ಪೆಟ್ಟು ಬೀಳುವುದು ಎಂಬ ವಾದ ಹೆಣೆಯಲಾಗಿತ್ತು. ಹೊರಬಂದ ಅಸಲಿಯತ್ತೇನೆಂದರೆ, ರಿಸರ್ವ್ ಬ್ಯಾಂಕಿನದ್ದೇ ವರದಿಯ ಪ್ರಕಾರ 99.3% ನೋಟುಗಳು ವಾಪಸ್ ಬಂದುಬಿಟ್ಟವು. ದುಡ್ಡಿನ ದೊಡ್ಡ ದೊಡ್ಡ ಚೀಲವುಳ್ಳ ಸೇಠ್‌ಗಳ ದುಡ್ಡು ಮುಳುಗಲಿಲ್ಲ. ಆದರೆ ಬಡವರ ಕರುಳಲ್ಲಿದ್ದ ಒಂದಿಷ್ಟು ನೋಟುಗಳು ಖಂಡಿತವಾಗಿಯೂ ಕೊಳೆತುಹೋದವು. ಕಾಳ ಧನ ಇರಿಸಿಕೊಳ್ಳುವ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಕರೆನ್ಸಿ ನೋಟುಗಳ ಕಂತೆಗಳನ್ನು ಬಚ್ಚಿಟ್ಟುಕೊಂಡಿರುತ್ತಾರೆ ಎಂಬುದು ಈ ತೀರ್ಮಾನದ ಹಿಂದಿದ್ದ ತಿಳಿವಳಿಕೆ. ಆದರೆ ಗೊತ್ತಾಗಿದ್ದೇನೆಂದರೆ, ಕಾಳಧನ ಇಟ್ಟುಕೊಳ್ಳುವವರು ನಮಗಿಂತ ಜಾಣರಾಗಿರುತ್ತಾರೆ. ಅವರು ತಮ್ಮ ಧನ, ಬೇನಾಮಿ ಸಂಪತ್ತನ್ನು ಭೂಮಿ ಅಥವಾ ವಜ್ರದಂತಹ ವಸ್ತುಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ನಕಲಿ ನೋಟುಗಳ ಸಂಖ್ಯೆಯೂ ಹೆಚ್ಚಿದೆ ಎಂಬ ವಾದ ಹೂಡಲಾಗಿತ್ತು. ನಂತರ ರಿಸರ್ವ್ ಬ್ಯಾಂಕ್ ಹೇಳಿದ್ದೇನೆಂದರೆ, ನಕಲಿ ನೋಟುಗಳು ಅನುಪಾತ ಇರುವುದು ಕೇವಲ 0.0007% ರಷ್ಟು ಎಂದು.

ಇಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯದ ಗುಲಾಬಿ ಬಣ್ಣದ ವ್ಯಂಗ್ಯದ ಕೊಠಡಿ ನಿಮಗೆ ಒಂದು ಪ್ರಶ್ನೆ ಕೇಳಲಿದೆ: ಒಂದು ವೇಳೆ 500 ಮತ್ತು 1000 ರೂಪಾಯಿಗಳ ದೊಡ್ಡ ನೋಟಿನದ್ದೇ ಸಮಸ್ಯೆಯಾಗಿದ್ದಲ್ಲಿ ಅದಕ್ಕಿಂತ ದೊಡ್ಡ ಮೌಲ್ಯದ 2000 ರೂಪಾಯಿ ನೋಟಿನಿಂದ ಆ ಸಮಸ್ಯೆಯ ಪರಿಹಾರ ಆಗುವುದು ಹೇಗೆ? ಒಂದು ವೇಳೆ ಭ್ರಷ್ಟರಿಗೆ 1000 ರೂಪಾಯಿಯ ನೋಟುಗಳಿಂದ ಹಣ ಶೇಖರಣೆ ಮಾಡಲು ಅನುಕೂಲ ಆಗುತ್ತಿದೆ ಎಂದಲ್ಲಿ 2000 ರೂಪಾಯಿಯ ನೋಟುಗಳಿಂದ ಅವರಿಗೆ ಇನ್ನಷ್ಟು ಅನುಕೂಲ ಆಗುವುದಿಲ್ಲವೇ? ಈ ಪ್ರಶ್ನೆಯ ಉತ್ತರ ಆಗಲೂ ಸಿಗಲಿಲ್ಲ, ಇಲ್ಲಿಯತನಕವೂ ಸಿಕ್ಕಿಲ್ಲ. ನೋಟು ರದ್ದತಿಯ ತುಘಲಕ್ ರೀತಿಯ ತೀರ್ಮಾನಕ್ಕಾಗಿ ಸರಕಾರವು ದೇಶದ ಜನತೆಗೆ ಎಂದೂ ಕ್ಷಮೆ ಕೇಳಿಲ್ಲ. ಆದರೆ, ಕಾಳ ಧನ ಇಲ್ಲವಾಗಿಸುವ ವಾದದ ಆಧಾರದ ಮೇಲೆ ಚುನಾವಣೆ ಗೆದ್ದರು. ಒಂದೆರಡು ಬಾರಿ ನೋಟು ರದ್ದತಿಯ ಸಂಭ್ರಮ ಆಚರಿಸಿದರು ಹಾಗೂ ಅದರ ನಂತರ ಅದನ್ನು ಮರೆತುಬಿಟ್ಟರು.

ಇದನ್ನು ಓದಿ ಕಾಂಗ್ರೆಸ್ ಸೇರಿ 19 ವಿಪಕ್ಷಗಳಿಂದ ನೂತನ ಸಂಸತ್ ಭವನದ ಉದ್ಘಾಟನೆ ಬಹಿಷ್ಕಾರ

ಯಾರಿಗೂ ಗೊತ್ತಾಗದ ಹಾಗೆ ಸರಕಾರವು 2018ರಲ್ಲಿಯೇ 2000 ರೂಪಾಯಿಯ ನೋಟುಗಳ ಮುದ್ರಣ ನಿಲ್ಲಿಸಿತು ಹಾಗೂ ಮತ್ತೆ 2023 ಮೇ 19ರಂದು ಮತ್ತೇ ಇದನ್ನು ವಾಪಸ್ ಪಡೆಯುವ ಘೋಷಣೆ ಮಾಡಿತು. ಭಟ್ಟಂಗಿಗಳು ಮತ್ತೇ ಇದನ್ನು ಮತ್ತೊಮ್ಮೆ ಭ್ರಷ್ಟಾಚಾರದ ವಿರುದ್ಧದ ಅಂತಿಮ ಯುದ್ಧ ಎಂದು ದಾವೆ ಹೂಡಿದರು. ಆದರೆ ಈ ಬಾರಿ ಕೇಳುವವರು ಯಾರೂ ಇಲ್ಲ. 2000 ರೂಪಾಯಿ ನೋಟುಗಳ ಚಲಾವಣೆ ಹೆಚ್ಚು ಇಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ ಇಷ್ಟು ಸರಳ ವಿಷಯವನ್ನು ತಿಳಿದುಕೊಳ್ಳಲು ಇಡೀ ದೇಶದೊಂದಿಗೆ ಇಂತಹ ಪ್ರಯೋಗ ಮಾಡುವ ಅವಶ್ಯಕತೆ ಏನಿತ್ತು ಎಂಬುದರ ಬಗ್ಗೆ ಹೇಳಿಲ್ಲ. 2000 ನೋಟುಗಳ ನಕಲಿ ನೋಟುಗಳನ್ನು ಮಾಡುವುದು ಮುಂಚಿನ ನೋಟುಗಳಿಗಿಂತ ಸುಲಭ ಎಂಬುದು ಕೇಳಿಬಂದಿದೆ. ಈಗ ಮತ್ತೊಮ್ಮೆ 2000 ಮೌಲ್ಯದ 181 ಕೋಟಿ ನೋಟುಗಳನ್ನು ಬ್ಯಾಂಕಿಗೆ ಮರಳಿಸುವ ಕಸರತ್ತು ಶುರುವಾಗಿದೆ. ಈಗ ಮತ್ತೊಮ್ಮೆ ಪ್ರತಿನಿತ್ಯ ಮಿತಿಗಳನ್ನು ನಿಗದಿಪಡಿಸಲಾಯಿತು. ಮತ್ತೊಮ್ಮೆ ಪ್ರತಿ ವಾರ ನಿಯಮಗಳನ್ನು ಬದಲಿಸಲಾಯಿತು. ಯಾವ ನೋಟುಗಳು ತನ್ನಿಂತಾನೆ ಚಲಾವಣೆಯಿಂದ ಹೊರಹೋಗುತ್ತಿದ್ದವೋ, ಅವುಗಳನ್ನು ಇಲ್ಲವಾಗಿಸಲು ಇಷ್ಟು ದೊಡ್ಡ ದುಬಾರಿಯಾದ ಕಸರತ್ತು ಏಕೆ ಮಾಡಲಾಯಿತು ಎಂಬುದಕ್ಕೆ ಕಾರಣವೂ ಎಂದೂ ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟು ಅಂದುಕೊಂಡುಬಿಡಿ, ಸರಕಾರವು ನೋಟುರದ್ದತಿಯ ಸಮಾಧಿಯ ಮೇಲೆ 2000ದ ನೋಟಿನ ರೂಪದ ಗುಲಾಬಿ ಹೂ ಅರ್ಪಿಸಿದೆ ಎಂದು.

ಇದನ್ನು ಓದಿ ಪಾಸ್‌ಪೋರ್ಟ್‌ ಪಡೆಯಲು ರಾಹುಲ್‌ ಮನವಿ; ವಿಚಾರಣೆ ಮುಂದೂಡಿದ ನ್ಯಾಯಾಲಯ

ಎಲ್ಲಿಯ ತನಕ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ ಮೋದಿಜಿಯ ಪ್ರಧಾನಮಂತ್ರಿ ಅವಧಿಯ ನೋಟು ರದ್ದತಿಯ ಕೊಠಡಿ ತಯ್ಯಾರಾಗುವುದೋ, ಅಲ್ಲಿಯ ತನಕ ವಿಶ್ವದೆಲ್ಲೆಡೆಯ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ ಭಾರತದ ನೋಟು ರದ್ದತಿಯ ಕೇಸ್ ಸ್ಟಡಿ ಪ್ರಕಟವಾಗುವುದು. ಚಲನೆಯಲ್ಲಿರುವ ಅರ್ಥವ್ಯವಸ್ಥೆಯೊಂದಿಗೆ ಆಟವಾಡಬಾರದು ಎಂಬುದು ಉದಾಹರಣೆಯ ರೂಪದಲ್ಲಿ. ಹೇಗೆ ಕಣ್ಣಿನ ಆಪರೇಷನ್‍ನ್ನು ಸ್ಕ್ರೂಡ್ರೈವರ್‌ನಿಂದ ಮಾಡಲಾಗುವುದಿಲ್ಲವೋ ಹಾಗೆಯೇ ಆಧುನಿಕ ಅರ್ಥವ್ಯವಸ್ಥೆಯ ಕರೆನ್ಸಿಯನ್ನು ಹವ್ಯಾಸಗಳ ಕೈಗೆ ನೀಡಲಾಗುವುದಿಲ್ಲ ಎಂಬ ಪಾಠ ಮಾಡಲಾಗುವುದು. ಆ ಕೊಠಡಿಯ ಕೊನೆಯಲ್ಲಿ ಈ ಬರಹವಿರುವ ಒಂದು ಪಟ್ಟಿಯನ್ನು ಇರಿಸುವ ಸಾಧ್ಯತೆ ಇದೆ; “ಎಚ್ಚರಿಕೆ: ಕರೆನ್ಸಿ ನೋಟುಗಳೊಂದಿಗೆ ಆಟವಾಡುವುದು ಕರೆಂಟ್‍ನೊಂದಿಗೆ ಆಟವಾಡಿದಂತೆ!”.

ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related