ಉಪುಲ್ ತರಂಗ ಮತ್ತು ತಿಲಕರತ್ನೆ ದಿಲ್ಶನ್ ಶತಕದ ಜೊತೆಯಾಟದ ನೆರವಿನಿಂದ ಏಷ್ಯಾ ಲಯನ್ಸ್ ತಂಡ, ಲೆಜೆಂಡ್ಸ್ ಕ್ರಿಕೆಟ್ ಲೀಗ್ ಟೂರ್ನಿಯ ಚಾಂಪಿಯನ್ ಪಟ್ಟವನ್ನಲಂಕರಿಸಿದೆ. ದೋಹಾದ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಶಾಹೀದ್ ಅಫ್ರಿದಿ ಸಾರಥ್ಯದ ಲಯನ್ಸ್ ತಂಡ, ವರ್ಲ್ಡ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಜಯಭೇರಿ ಭಾರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಶೇನ್ ವಾಟ್ಸನ್ ನಾಯಕತ್ವದ ವರ್ಲ್ಡ್ ಜೈಂಟ್ಸ್, ಜ್ಯಾಕ್ ಕಾಲಿಸ್ ಗಳಿಸಿದ ಅಬ್ಬರದ ಅರ್ಧಶತಕದ (78 ರನ್, 54 ಎಸೆತ, 4×5, 6×3) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 147 ರನ್‌ಗಳಿಸಿತ್ತು. ಚೇಸಿಂಗ್ ವೇಳೆ ಏಷ್ಯಾ ಲಯನ್ಸ್ ಆರಂಭಿಕರಾದ ಉಪುಲ್ ತರಂಗ (57 ರನ್, 28 ಎಸೆತ) ಮತ್ತು ತಿಲಕರತ್ನೆ ದಿಲ್ಶನ್ (58 ರನ್, 42 ಎಸೆತ) ಶತಕದ ಜೊತೆಯಾಟದ (115 ರನ್) ನೆರವಿನಿಂದ 16.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಇನ್ನೂ 23 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.
ವರ್ಲ್ಡ್ ಜೈಂಟ್ಸ್ ತಂಡದ ಬೌಲಿಂಗ್ ವಿಭಾಗವನ್ನು ನಿರ್ದಯವಾಗಿ ದಂಡಿಸಿದ ತರಂಗ ಮತ್ತು ದಿಲ್ಶನ್ ಜೋಡಿ, ಕೇವಲ 9.6 ಓವರ್‌ಗಳಲ್ಲಿ ತಂಡದ ಮೊತ್ತವನ್ನು 115 ರನ್‌ಗಳಿಗೆ ತಲುಪಿಸಿತ್ತು. ದಿಲ್ಶಾನ್ 42 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ 58 ರನ್ ಗಳಿಸಿದರೆ, ತರಂಗ 28 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎಲಿಮಿನೇಟರ್ ಪಂದ್ಯದಲ್ಲಿ ʻಇಂಡಿಯಾ ಮಹಾರಾಜಾಸ್ʼ ವಿರುದ್ಧದ ಗೆಲುವಿನಲ್ಲೂ ಉಪುಲ್ ತರಂಗ ನಿರ್ಣಾಯಕ ಪಾತ್ರ ವಹಿಸಿದ್ದರು.