ವಿಶ್ವಕಪ್ | ದ್ರಾವಿಡ್, ಕೊಹ್ಲಿ,ಶಮಿ ಯಾರಿಗಾಗಿ ಈ ಬಾರಿಯ ಕಪ್; ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿ ಕ್ರಿಕೆಟ್ ಜಗತ್ತು

Date:

ವಿಶ್ವದಲ್ಲಿರುವ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ  ಏಕದಿನ ವಿಶ್ವಕಪ್‌ 2023ರ ಫೈನಲ್‌ನ ರೋಚಕ ಪಂದ್ಯ ಇಂದು ಅಹಮದಾಬಾದ್‌ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.

ಕಪಿಲ್‌ ದೇವ್‌ ಸಾರಥ್ಯದ ಬಳಗ 1983 ರ ವಿಶ್ವಕಪ್‌ ಟ್ರೋಫಿಯನ್ನು ಚೊಚ್ಚಲ ಬಾರಿಗೆ ಮುಡಿಗೇರಿಸಿಕೊಂಡು ನಂತರದ ದಿನಗಳಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿತು. ನಂತರ ಭಾರತಕ್ಕೆ ಒಲಿದು ಬಂದಿದ್ದು 28 ವರ್ಷಗಳ ನಂತರ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ತಂಡಕ್ಕೆ 2011ರಲ್ಲಿ. ಭಾರತ ಎರಡನೇ ಬಾರಿ ಗೆದ್ದ ಕಪ್‌ಅನ್ನು ಟೀಂ ಇಂಡಿಯಾ ಕ್ರಿಕೆಟ್ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರಿಗೆ ಅರ್ಪಿಸಲಾಗಿತ್ತು.

ಸತತ 9 ಗೆಲುವಿನೊಂದಿಗೆ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಫೈನಲ್‌ ತಲುಪಿದೆ. ಈಗಾಗಲೇ ವಿಶ್ವ ಕ್ರಿಕೆಟ್ ಅಭಿಮಾನಿಗಳಲ್ಲಿ ಯಾರಿಗಾಗಿ ಈ ಬಾರಿಯ ಕಪ್ ಎಂಬ ಬಗ್ಗೆ ಚರ್ಚೆ, ಸವಾಲು, ವಿಮರ್ಷೆಗಳು ಶುರುವಾಗಿವೆ. ಅತ್ಯುತ್ತಮವಾಗಿ ಆಟವಾಡಿದರೂ ಇಂಗ್ಲೆಂಡ್‌ನಲ್ಲಿ ನಡೆದ 2019ರ ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ತಂಡ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿ ನಿರಾಸೆ ಅನುಭವಿಸಿತ್ತು.

ಈ ಬಾರಿ ಟೀಂ ಇಂಡಿಯಾವನ್ನು ಗೆಲ್ಲಿಸಿ ಅದರ ಶ್ರೇಯಸ್ಸನ್ನು ವಿರಾಟ್‌ ಕೊಹ್ಲಿಗೆ ನೀಡಬೇಕೆಂದು ಕ್ರಿಕೆಟ್ ಅಭಿಮಾನಿಗಳ ಜೊತೆ ಜಗತ್ತಿನ ಹಲವು ಹಿರಿಯ ಆಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಸುತ್ತಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ 3 ಶತಕ ಹಾಗೂ 5 ಅರ್ಧ ಶತಕದೊಂದಿಗೆ 711 ರನ್‌ ಗಳಿಸಿರುವ ಕೊಹ್ಲಿ ದಿನದಿನಕ್ಕೂ ತಮ್ಮ ಆಟವನ್ನು ಮತ್ತಷ್ಟು ಸುಧಾರಿಸಿಕೊಳ್ಳುತ್ತಿದ್ದಾರೆ. ವಿಶ್ವದ ಯಾವುದೇ ತಂಡದ ಬೌಲರ್‌ಗಳು ವಿರಾಟ್‌ಗೆ ಸರಿಸಾಟಿಯಾಗುತ್ತಿಲ್ಲ.

ಈ ಸುದ್ದಿ ಓದಿದ್ದೀರಾ? ವಿಶ್ವಕಪ್‌ ಕ್ರಿಕೆಟ್‌ | ದಾಖಲೆಗಳ ಸರದಾರ ಮೊಹಮ್ಮದ್ ಶಮಿಗೊಂದು ಸಲಾಮ್

ಅದೇ ರೀತಿ ಕ್ರಿಕೆಟ್ ಅಭಿಮಾನಿಗಳ ಇನ್ನೊಂದು ಅಭಿಮಾನಿ ವರ್ಗ ಈ ಬಾರಿಯ ವಿಶ್ವಕಪ್‌ ಭಾರತ ಗೆದ್ದರೆ ಅದು ಟೀಂ ಇಂಡಿಯಾ ಮುಖ್ಯ ಕೋಚ್‌ ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ಗೆ ಸಲ್ಲಬೇಕು ಎಂದು ಹೇಳುತ್ತಿದ್ದಾರೆ. ಭಾರತ ತಂಡ ಈ ಪರಿಯ ಸರಿಸಾಟಿಯಿಲ್ಲದ ಪ್ರದರ್ಶನ ನೀಡುತ್ತಿರುವುದಕ್ಕೆ ದ್ರಾವಿಡ್‌ ಶ್ರಮವೇ ಮುಖ್ಯ ಕಾರಣವಾಗಿದೆ.

ತಂಡದ ಪ್ರತಿಯೊಬ್ಬ ಸದಸ್ಯರನ್ನು ಎಲ್ಲ ವಿಭಾಗಗಳಲ್ಲಿ ಉತ್ತಮವಾಗಿ ತರಬೇತಿಗೊಳಿಸುವುದರ ಜೊತೆ ಆಟಗಾರರನ್ನು ಹುರಿದುಂಬಿಸುವ ಕೆಲಸವನ್ನು ದ್ರಾವಿಡ್‌ ತಾವು ಕೋಚ್‌ ಆಗಿ ಸಾರಥ್ಯ ವಹಿಸಿಕೊಂಡ ದಿನದಿಂದಲೂ ಮಾಡುತ್ತ ಬಂದಿದ್ದಾರೆ. ಪ್ರತಿಯೊಂದು ಪಂದ್ಯಗಳಲ್ಲೂ ಪಂದ್ಯ ನಡೆಯುವ ಪಿಚ್‌ಗಳ ಗುಣಮಟ್ಟವನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಟೀಂ ಇಂಡಿಯಾ ಆಟಗಾರರನ್ನು ಸಜ್ಜುಗೊಳಿಸುತ್ತಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಸೋಲೆ ಕಾಣದಿರುವ ಭಾರತ ತಂಡದಲ್ಲಿ ಆಟಗಾರರ ಶ್ರಮದೊಂದಿಗೆ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್ ಶ್ರಮ ಎದ್ದು ಕಾಣುತ್ತಿದೆ.

2007ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ವಿಶ್ವಕಪ್‌ ಟೂರ್ನಿಯ ನಾಯಕತ್ವವನ್ನು ರಾಹುಲ್‌ ದ್ರಾವಿಡ್‌ ವಹಿಸಿಕೊಂಡಿದ್ದರು. ಆದರೆ ಆಗ ಭಾರತ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಈ ನೋವು ದ್ರಾವಿಡ್‌ ಅವರನ್ನು ಕಾಡುತ್ತಿದೆ. ಅದನ್ನು ನಿವಾರಿಸುವ ಕಾರಣಕ್ಕಾಗಿ ಈ ಬಾರಿಯ ವಿಶ್ವಕಪ್‌ಅನ್ನು ಟೀಂ ಇಂಡಿಯಾಕ್ಕೆ ದೊರಕಿಸಲು ಕೋಚ್‌ ಆಗಿ ಅವಿರತ ಕಾಣಿಕೆ ನೀಡುತ್ತಿದ್ದಾರೆ.

ತಂಡದ ನಾಯಕ ರೋಹಿತ್ ಶರ್ಮಾ ಕೂಡ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಭಾವನಾತ್ಮಕವಾಗಿ ದೊಡ್ಡ ಪಂದ್ಯವಾಗಿದ್ದು, ನಮ್ಮ ಕೋಚ್ ರಾಹುಲ್ ದ್ರಾವಿಡ್ ಗಾಗಿ ನಾವು ಇದನ್ನು ಗೆಲ್ಲಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.

“ಪ್ರತಿಯೊಬ್ಬ ಆಟಗಾರನಿಗೂ ನಿರ್ದಿಷ್ಟ ಜವಾಬ್ದಾರಿ ನೀಡುವ ಕುರಿತಂತೆ ತಂಡದಲ್ಲಿ ಕೋಚ್ ರಾಹುಲ್ ಪಾತ್ರ ಅತ್ಯಂತ ಮಹತ್ವದೆನಿಸಿದೆ. ನಾನು ಆಲೋಚಿಸುವ ಎಲ್ಲ ವಿಚಾರಗಳಿಗೆ ಕೋಚ್ ಒಪ್ಪಬೇಕೆಂದಿಲ್ಲ. ಆದರೆ ನನ್ನ ನಿರ್ಧಾರವನ್ನು ಒಪ್ಪಿಕೊಂಡು ನನಗೆ ಸ್ವಾತಂತ್ರ್ಯವನ್ನು ನೀಡಿರುವುದು ಅವರ ದೊಡ್ಡಗುಣಕ್ಕೆ ಸಾಕ್ಷಿಯಾಗಿದೆ ಎಂದು ಹೊಗಳಿದ್ದಾರೆ. ಕಷ್ಟದ ಸಮಯದಲ್ಲಿ ದ್ರಾವಿಡ್ ಸದಾ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ವರ್ಷ ಟ್ವೆಂಟಿ-20 ವಿಶ್ವಕಪ್‌ ಸೆಮಿಫೈನಲ್ ಸೋಲಿನ ಬಳಿಕವಂತೂ ಆಟಗಾರರಿಗೆ ನೆರವಾಗಿದ್ದರು. ಭಾರತ ಕ್ರಿಕೆಟ್ ತಂಡಕ್ಕೆ ದ್ರಾವಿಡ್ ನೀಡಿರುವ ಕೊಡುಗೆ ಅಪಾರ. ಈಗ ದ್ರಾವಿಡ್ ಅವರಿಗಾಗಿ ನಾವು ಈ ವಿಶ್ವಕಪ್ ಗೆಲ್ಲಬೇಕಿದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಚಿನ್‌ ರವೀಂದ್ರ ರೀತಿ ಶ್ರೇಯಸ್‌ ಅಯ್ಯರ್‌ಗೂ ಕೂಡ ಇದೆ ಕರ್ನಾಟಕದ ನಂಟು

ಶಮಿ ಸಾಧನೆ ಕಡಿಮೆಯೇನಿಲ್ಲ

ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್ ಗಳಿಸಿರುವ ಟೀಂ ಇಂಡಿಯಾ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಭಾರತ ಫೈನಲ್‌ ತಲುಪಲು ಪ್ರಮುಖ ಕಾರಣಕರ್ತರಾಗಿದ್ದಾರೆ. ರೌಂಡ್‌ ರಾಬಿನ್‌ ಲೀಗ್‌ ಹಂತದ ಪ್ರಮುಖ ಪಂದ್ಯಗಳಲ್ಲಿ ಭಾರತ ತಂಡ ಸತತವಾಗಿ ಗೆಲ್ಲುತ್ತಾ ಬಂದಿರುವುದಕ್ಕೆ ಶಮಿ ಸಾಧನೆ ಕೂಡ ಮುಖ್ಯವಾಗಿದೆ. ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳಿಸಲು ಇವರ ತಂತ್ರ ಪ್ರತಿ ಪಂದ್ಯದಲ್ಲಿ ಫಲಪ್ರದವಾಗುತ್ತಿದೆ.

ಇವರ ಜೊತೆ ತಂಡದ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್, ರವಿಂದ್ರ ಜಡೇಜಾ, ಕೆ ಎಲ್‌ ರಾಹುಲ್‌, ಜಸ್‌ಪ್ರೀತ್‌ ಬೂಮ್ರಾ ಒಳಗೊಂಡ ಇತರ ಆಟಗಾರರು ಭಾರತದ ಗೆಲುವಿಗೆ ಕೂಡ ತಮ್ಮದೆ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇವರೆಲ್ಲರ ಶ್ರಮಕ್ಕೆ ಪ್ರತಿಫಲ ಇಂದು ರಾತ್ರಿ 10 ಗಂಟೆಯ ಸುಮಾರಿಗೆ ನಿರ್ಧಾರವಾಗಲಿದೆ.

ವಿಶ್ವಕಪ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಸಾಧನೆ

ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಡೆಗಣಿಸುವಂತಿಲ್ಲ. ಭಾರತ ತಂಡಕ್ಕೆ ಸೆಡ್ಡು ಹೊಡೆಯಲು ಆಸೀಸ್‌ ತಂಡದ ಆಟಗಾರರು ಕಾಯುತ್ತಿದ್ದಾರೆ. ಡೇವಿಡ್ ವಾರ್ನರ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಿಷಲ್‌ ಮಾರ್ಷ್, ಟ್ರಾವಿಸ್ ಹೆಡ್ ಅವರಂಥ ದೈತ್ಯ ಬ್ಯಾಟಿಂಗ್ ಶಕ್ತಿ ತಂಡಕ್ಕೆ ಇದೆ. ಜೋ ಷ್ ಹ್ಯಾಜಲ್ವುಡ್, ಪ್ಯಾಟ್ ಕಮಿನ್ಸ್ ಮತ್ತುಆ್ಯಡಂ ಜಂಪಾ ಅವರು ಭಾರತದ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತ – ಆಸ್ಟ್ರೇಲಿಯಾ ಒಟ್ಟು 13 ಬಾರಿ ಸೆಣಸಿದ್ದು ಆಸೀಸ್‌ 8 ಬಾರಿ ಗೆದ್ದಿದ್ದರೆ, ಭಾರತ 5 ಬಾರಿ ಜಯ ಕಂಡಿದೆ. ಹಾಗೆಯೇ ಏಕದಿನ ಮಾದರಿಯಲ್ಲಿ  ಎರಡೂ ತಂಡಗಳು 150 ಬಾರಿ ಆಡಿದ್ದು, ಭಾರತ 83, ಆಸ್ಟ್ರೇಲಿಯಾ 83 ಬಾರಿ ಮೇಲುಗೈ ಸಾಧಿಸಿದೆ.

ವಿಶ್ವಕಪ್ ಫೈನಲ್‌ನಲ್ಲಿ ಆಡುವ ಉಭಯ ತಂಡಗಳ ಆಟಗಾರರು

ಭಾರತ:

 ರೋಹಿತ್ ಶರ್ಮಾ(ನಾಯಕ), ಶುಭಮನ್‌ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್‌ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ‌, ಕುಲ್ದೀಪ್ ಯಾದವ್.

ಆಸ್ಟ್ರೇಲಿಯಾ:

ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್

ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೋವಾ ಚಲನಚಿತ್ರೋತ್ಸವ | ಚಿತ್ರಗಳ ಆಯ್ಕೆಯಲ್ಲಿ ಸರ್ಕಾರದ ಮಧ್ಯಪ್ರವೇಶ; ಸಿನಿಮಾಸಕ್ತರಿಗೆ ನಿರಾಸೆ

ಸಿನಿಮಾಗಳನ್ನು ಆಯ್ಕೆ ಮಾಡುವಾಗ ಸರ್ಕಾರ, ತನ್ನ ನೀತಿಗಳ ವಿರುದ್ಧ, ಧರ್ಮಗಳನ್ನು ಬಗ್ಗೆ...

ಆಸೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಟೀಮ್ ಇಂಡಿಯಾ ಪರ ಮೂವರ ಅರ್ಧ ಶತಕ

ಭಾರತ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 44 ರನ್ನುಗಳ ಅಂತರದಲ್ಲಿ...

‘ದೇವರು ಆತನಿಗೆ ಮರುಜನ್ಮ ನೀಡಿದ್ದಾನೆ’: ಪ್ರಾಣ ಉಳಿಸಿದ ನಂತರ ವಿಡಿಯೋ ಪೋಸ್ಟ್ ಮಾಡಿದ ಶಮಿ

ಇತ್ತೀಚಿಗೆ ನಡೆದ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಾರತ...

ಸಾಹಿತ್ಯ ಜಗತ್ತಿನ ಅಂತರ್ಜಲ ಎಸ್‌ ದಿವಾಕರ್

ಎಸ್‌ ದಿವಾಕರ್ ಅವರು ಎಂಬತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ‘ಎಸ್‌ ದಿವಾಕರ್...