ರಾಜಸ್ಥಾನ ರಾಯಲ್ಸ್ ತಂಡದ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಐಪಿಎಲ್ 16ನೇ ಆವೃತ್ತಿಯಲ್ಲಿ ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ತಮ್ಮ ಮೊದಲ ಓವರ್‌ನಲ್ಲೇ ಕೆಕೆಆರ್ ನಾಯಕ ನಿತೀಶ್ ರಾಣಾ ಅವರ ವಿಕೆಟ್ ಪಡೆಯುವ ಮೂಲಕ ಚಹಾಲ್ ಹೊಸ ಮೈಲಿಗಲ್ಲು ನಿರ್ಮಿಸಿದರು.
ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲೂ ಭಾರತದ ಪರ ಅತಿಹೆಚ್ಚು ವಿಕೆಟ್ (91) ಪಡೆದ ದಾಖಲೆ ಚಹಾಲ್ ಹೆಸರಿನಲ್ಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ಓವರ್ ಬೌಲಿಂಗ್ ಮಾಡಿದ ಲೆಗ್‌ಸ್ಪಿನ್ನರ್ ಚಹಾಲ್, 25 ರನ್ ನೀಡಿ 4 ವಿಕೆಟ್ ಪಡೆದರು. ಆ ಮೂಲಕ ಐಪಿಎಲ್‌ನಲ್ಲಿ ತಮ್ಮ ಒಟ್ಟು ವಿಕೆಟ್ ಗಳಿಕೆಯನ್ನು 187ಕ್ಕೆ ಏರಿಸಿಕೊಂಡರು.
ಈ ಹಾದಿಯಲ್ಲಿ ಚಹಾಲ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಲ್ ರೌಂಡರ್ ಡ್ವೇನ್ ಬ್ರಾವೋ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಬ್ರಾವೋ 161 ಪಂದ್ಯಗಳಲ್ಲಿ 183 ವಿಕೆಟ್ ಪಡೆದರೆ, ಚಹಾಲ್ 143 ಪಂದ್ಯಗಳಲ್ಲೇ ಇತಿಹಾಸ ಬರೆದಿದ್ದಾರೆ. ಮೂರನೇ ಸ್ಥಾನದಲ್ಲಿ ಪಿಯೂಷ್ ಚಾವ್ಲಾ (174 ವಿಕೆಟ್,176 ಪಂದ್ಯ) ಅಮಿತ್ ಮಿಶ್ರಾ (172 ವಿಕೆಟ್,160 ಪಂದ್ಯ) ಹಾಗೂ ರವಿಚಂದ್ರನ್ ಅಶ್ವಿನ್ (171 ವಿಕೆಟ್,196 ಪಂದ್ಯ) ನಂತರ ಸ್ಥಾನದಲ್ಲಿದ್ದಾರೆ.
ವಿಶೇಷವೆಂದರೆ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಕೂಡ ಚಹಾಲ್ ಹೆಸರಿನಲ್ಲಿದೆ. 2014 ರಿಂದ 2021 ರವರೆಗೆ ಆರ್ಸಿಬಿ ಪರ 113 ಪಂದ್ಯಗಳನ್ನಾಡಿದ್ದ ಯುಜ್ವೇಂದ್ರ ಚಹಾಲ್ ಒಟ್ಟು 139 ವಿಕೆಟ್ ಕಬಳಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಅಂತಿಮ ಎಸೆತದಲ್ಲಿ ʻನೋ ಬಾಲ್ ಡ್ರಾಮʼ; ಸೋತು ಗೆದ್ದ ಹೈದರಾಬಾದ್!
ರಾಜಸ್ಥಾನ ರಾಯಲ್ಸ್ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ
ಗುರುವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ್ದ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿತು.
ಸಾಮಾನ್ಯ ಗುರಿ ಬೆನ್ನತ್ತಿದ ಸಂಜು ಸ್ಯಾಮ್ಸನ್ ಪಡೆಗೆ ಆರಂಭದಲ್ಲಿ ಕೊಂಚ ಆಘಾತ ಎದುರಾಗಿತ್ತು. ಆರಂಭಿಕ ಜೋಸ್ ಬಟ್ಲರ್, ಖಾತೆ ತೆರೆಯುವ ಮುನ್ನವೇ ರನೌಟ್‌ಗೆ ಬಲಿಯಾಗಿದ್ದರು. ಆದರೆ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (98* ರನ್) ಮತ್ತು ನಾಯಕ ಸಂಜು ಸ್ಯಾಮ್ಸನ್ (48* ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ 13.1 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 151 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತ್ತು.
ಈ ಗೆಲುವಿನೊಂದಿಗೆ ಆರ್‌ಆರ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ, ಕೆಕೆಆರ್ 7ನೇ ಸ್ಥಾನಕ್ಕೆ ಕುಸಿಯಿತು. ಆ ಮೂಲಕ ಕೋಲ್ಕತ್ತಾ ತಂಡದ ಪ್ಲೇ- ಆಫ್ಸ್ ಹಾದಿ ಮತ್ತಷ್ಟು ಕಠಿಣವಾಗಿದೆ.