ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ ಕೈ ಮೇಲಾಗಿದೆ. ಟೀಮ್ ಇಂಡಿಯಾದ ಐವರು ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಆಸೀಸ್ ಪಡೆ, ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟದಲ್ಲಿ 327 ರನ್ ಗಳಿಸಿದೆ.
ಲಂಡನ್ನ ದಿ ಓವಲ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ʻಫೈನಲ್ ಪೈಟ್ʼನಲ್ಲಿ ಟ್ರಾವಿಸ್ ಹೆಡ್ ಭರ್ಜರಿ ಶತಕ ಮತ್ತು ಸ್ಮೀವ್ ಸ್ಮಿತ್ ಗಳಿಸಿದ ಅಜೇಯ 95 ರನ್ ಗಳ ನೆರವಿನಿಂದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 85 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ.
ಸತತ ಎರಡನೇ ಬಾರಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿರುವ ಭಾರತಕ್ಕೆ ಈ ಬಾರಿ ಚಾಂಪಿಯನ್ ಪಟ್ಟ ಒಲಿಯಬೇಕಾದರೆ ಭಾರಿ ಸಹಾಸವನ್ನೇ ಮಾಡಬೇಕಿದೆ. ಇನ್ನು ನಾಲ್ಕು ದಿನಗಳ ಪಂದ್ಯ ಬಾಕಿ ಉಳಿದಿದ್ದು, ಎರಡನೇ ದಿನವೂ ಆಸೀಸ್ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆಯೂರಿ ನಿಂತರೆ ರೋಹಿತ್ ಪಡೆಯ ಗೆಲುವಿನ ಕನಸಿಗೆ ಅಡ್ಡಿಯಾಗಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಹ್ವಾನ ಪಡೆದಿದ್ದ ಆಸ್ಟ್ರೇಲಿಯಾ ತಂಡ, ಎರಡು ರನ್ ಗಳಿಸುವಷ್ಟರಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮುಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಎಡಗೈ ಬ್ಯಾಟರ್ ಉಸ್ಮಾನ್ ಖ್ವಾಜಾ ಶೂನ್ಯಕ್ಕೆ ಕ್ಯಾಚಿತ್ತು ನಿರ್ಗಮಿಸಿದ್ದರು. ಡೇವಿಡ್ ವಾರ್ನರ್ 43 ರನ್ ಗಳಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಭೋಜನ ವಿರಾಮದ ಬಳಿ ಕ್ರೀಸ್ಗೆ ಬಂದ ಮಾರ್ನಸ್ ಲ್ಯಾಬುಸ್ಚಾಗ್ನೆ 26 ರನ್ ಗಳಿಸಿದ್ದ ವೇಳೆ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು.
24.1 ಓವರ್‌ಗಳಲ್ಲಿ 76 ರನ್‌ಗಳಿಗೆ ಆಸ್ಟ್ರೇಲಿಯಾದ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಭಾರತ, ಪಂದ್ಯದಲ್ಲಿ ಮೇಲುಗೈ ಸಾಧಿಸುವ ಸೂಚನೆ ನೀಡಿತ್ತು. ಆದರೆ ಆ ಬಳಿಕ ಒಂದಾದ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ತಂಡದ ನೆರವಿಗೆ ನಿಂತರು.
ನಾಲ್ಕನೇ ವಿಕೆಟ್ 251 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ಟ್ರಾವಿಸ್-ಸ್ಮಿತ್ ಜೋಡಿ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. 156 ಎಸೆತದಲ್ಲಿ 1 ಸಿಕ್ಸ್ ಮತ್ತು 22 ಬೌಂಡರಿಗಳ ಮೂಲಕ ಹೆಡ್ 146 ರನ್ ಮತ್ತು ಸ್ಟೀವ್ ಸ್ಮಿತ್ 227 ಎಸೆತದಲ್ಲಿ 14 ಬೌಂಡರಿಗಳ ಮೂಲಕ 95 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.
ಬೌಲಿಂಗ್‌ನಲ್ಲಿ ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು.