ಎರಡು ಪ್ರಮುಖ ಕ್ಯಾನ್ಸರ್ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸದ ವೈದ್ಯಕೀಯ ಸರಬರಾಜು ಸಂಸ್ಥೆಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ರೋಗಿಗೆ ₹2 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವಂತೆ ಆದೇಶಿಸಿದೆ.
ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಎಂ.ಸಿ.ರಮೇಶ್ ಎಂಬವವರು ನೀಡಿದ ದೂರು ಅರ್ಜಿಯನ್ನು ಗ್ರಾಹಕ ನ್ಯಾಯಾಲಯ ವಿಚಾರಣೆ ನಡೆಸಿದೆ. “ಮಹಾರಾಷ್ಟ್ರದ ಪುಣೆ-ನಾಸಿಕ್ ಹೆದ್ದಾರಿಯಲ್ಲಿರುವ ಲೈಫ್ ಕೇರ್ ಮೆಡಿಕಲ್ಸ್, ಬ್ರೆಂಟುಕ್ಸಿಮಾಬ್ ಎಂಬ ಔಷಧಿಯ 50 ಮಿ.ಗ್ರಾಂನ ಎರಡು ಬಾಟಲಿಗಳನ್ನು ರೋಗಿಗೆ ಪೈರೈಕೆ ಮಾಡುವಲ್ಲಿ ವಿಫಲವಾಗಿದೆ ಮತ್ತು ನಿರ್ಲಕ್ಷ್ಯ ತೋರಿದೆ” ಎಂದು ರಮೇಶ್ ಆರೋಪಿಸಿದ್ದರು.
ವೈದ್ಯಕೀಯ ಸಂಸ್ಥೆಯೂ ಪ್ರತಿ ಔಷಧಿ ಬಾಟಲಿಗೆ ₹70,186 ಎಂದು ನಿಗದಿ ಮಾಡಿದೆ. ಎರಡು ಬಾಟಲಿಗೆ ಒಟ್ಟು ₹1,40,372 ಆಗಿದೆ. ಆಗಸ್ಟ್ 23ರಂದು ರಮೇಶ್ ಅವರು ಮುಂಗಡವಾಗಿ ₹70,372 ಹಣವನ್ನು ಪಾವತಿ ಮಾಡಿದ್ದರು. ಇನ್ನುಳಿದ ಹಣವನ್ನು ಔಷಧಿ ಡೆಲಿವರಿ ಆದ ನಂತರ ಪಾವತಿ ಮಾಡುವುದಾಗಿ ಒಪ್ಪಿಕೊಂಡಿದ್ದರು.
ಅವರು ತಾವು ಕೆಲಸ ಮಾಡುತ್ತಿರುವ ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BHEL) ಔಷಧದ ವೆಚ್ಚವನ್ನು ಸಂಪೂರ್ಣವಾಗಿ ಮರುಪಾವತಿಸುತ್ತದೆ ಎಂಬ ಭರವಸೆಯ ಮೇಲೆ ಔಷಧವನ್ನು ಆರ್ಡರ್ ಮಾಡಿದ್ದರು. ಅಲ್ಲದೆ, ರಮೇಶ್ ಅವರು ಮುಂದಿನ ದಿನಗಳಲ್ಲಿ ಬಾಕಿ ಮೊತ್ತ ಮತ್ತು ಹೆಚ್ಚುವರಿ ಶುಲ್ಕವನ್ನು ಪಾವತಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಟ್ಯಾನರಿ ರಸ್ತೆಯಲ್ಲಿ ಹೊಸ ಕೆಳಸೇತುವೆ ನಿರ್ಮಾಣ: ಟ್ರಾಫಿಕ್ ಸಮಸ್ಯೆಗೆ ಕಡಿವಾಣ
ಆದರೂ, ಕಂಪನಿಯು ಭರವಸೆಯಂತೆ ಔಷಧವನ್ನು ನೀಡಲು ವಿಫಲವಾಗಿದೆ. ಪರಿಣಾಮವಾಗಿ, ಸೆಪ್ಟೆಂಬರ್ 2023ರಲ್ಲಿ ರಮೇಶ್ ಸಂಸ್ಥೆಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಆದರೆ, ಸಂಸ್ಥೆಯು ನೋಟಿಸ್‌ಗೂ ಪ್ರತಿಕ್ರಿಯಿಸಿಲ್ಲ ಎಂದು ಆರೋಪಿಸಲಾಗಿದೆ.
ಹೀಗಾಗಿ, ಸಂಸ್ಥೆಯ ವಿರುದ್ಧ ರಮೇಶ್ ಅವರು 2023ರ ನವೆಂಬರ್ 16ರಂದು 3ನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿದ ಸಾಕ್ಷ್ಯವನ್ನು ಕೂಡ ಸಂಸ್ಥೆ ಪ್ರಶ್ನೆ ಮಾಡಲಿಲ್ಲ. ಬಳಿಕ, ಸಂಸ್ಥೆಯ ಕ್ರಮಗಳು ಅನ್ಯಾಯದ ವ್ಯಾಪಾರದ ಅಭ್ಯಾಸ ಮತ್ತು ಸೇವೆಯ ಕೊರತೆ ಎಂದು ನ್ಯಾಯಾಲಯ ನಿರ್ಧರಿಸಿದ್ದು, ಸಂಸ್ಥೆಗೆ ದಂಡ ವಿಧಿಸಿದೆ.
ದೂರುದಾರರು ಮಾಡಿದ ಎಲ್ಲ ಪಾವತಿಗಳ ಒಟ್ಟು ಮೊತ್ತ ₹1,77,267 ಗಳನ್ನು ಪ್ರತಿ ವರ್ಷಕ್ಕೆ 9% ಬಡ್ಡಿಯೊಂದಿಗೆ ಮರುಪಾವತಿಸಲು ಸಂಸ್ಥೆಗೆ ಆದೇಶಿಸಿದೆ.
ಅಲ್ಲದೆ, ಔಷಧಿಯ ಪರಿಹಾರದ ಜೊತೆಗೆ, ದೂರುದಾರರಿಗೆ ಮಾನಸಿಕ ತೊಂದರೆಗಾಗಿ ₹20,000 ಮತ್ತು ವ್ಯಾಜ್ಯ ವೆಚ್ಚಕ್ಕಾಗಿ ₹10,000 ನೀಡುವಂತೆ ನ್ಯಾಯಾಲಯವು ಸಂಸ್ಥೆಗೆ ಆದೇಶಿಸಿದೆ. ಈ ಆದೇಶವನ್ನು ಅನುಸರಿಸಲು ವಿಫಲವಾದರೆ, ದಂಡದ ಒಟ್ಟು ಮೊತ್ತ ₹30,000ಅನ್ನು ಸಂಫೂರ್ಣವಾಗಿ ಪಾವತಿಸುವವರೆಗೆ, ಆ ಹಣಕ್ಕೂ ವಾರ್ಷಿಕ 9% ಬಡ್ಡಿಯನ್ನೂ ಪಾವತಿ ಮಾಡಬೇಕು ಎಂದು ಸೂಚಿಸಿದೆ.