ತುಮಕೂರು | ನಾಫೆಡ್ ನಿಯಮಗಳು ಗಾಳಿಗೆ: ಸಂಯುಕ್ತ ಹೋರಾಟ-ಕರ್ನಾಟಕ ಕಿಡಿ

Date:

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ,‌ ಕೊಬ್ಬರಿ ಬೆಳೆಗಾರರಿಗೆ ಸಾಕಷ್ಟು ನಷ್ಟು ಉಂಟುಮಾಡುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ತುಮಕೂರು ಜಿಲ್ಲಾಡಳಿತ ಕೂಡಲೇ ಖರೀದಿ ಕೇಂದ್ರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಸಂಯುಕ್ತ ಹೋರಾಟ-ಕರ್ನಾಟಕದ ಸಂಚಾಲಕ ಸಿ ಯತಿರಾಜು ಒತ್ತಾಯಿಸಿದರು.

ತುಮಕೂರು ನಗರದ ಜನಚಳವಳಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, “ಗುಣಮಟ್ಟದ ಕೊಬ್ಬರಿ ಖರೀದಿ ಹೆಸರಿನಲ್ಲಿ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. 75 ಎಂಎಂಗಿಂತ ಕಡಿಮೆ ಇರುವ ಒಳ್ಳೆಯ ಗುಣಮಟ್ಟದ ಕೊಬ್ಬರಿ ಖರೀದಿಸುತ್ತಿಲ್ಲ. ಅಲ್ಲದೆ ಮಿಶ್ರ ಬೆಳೆ ಬೆಳೆದ ರೈತರು ತಂದ ಕೊಬ್ಬರಿ, ಪಹಣಿಯಲ್ಲಿ ಬೆಳೆ ನಮೂದಾಗದ ರೈತರ ಕೊಬ್ಬರಿಯನ್ನು ತಿರಸ್ಕರಿಸುವ ಮೂಲಕ ಬರದಿಂದ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತಿದ್ದಾರೆ” ಎಂದು ಆರೋಪಿಸಿದರು.

“ಸತತ ಬರದಿಂದ ರೈತರು ಈಗಾಗಲೇ ಹೈರಾಣಾಗಿದ್ದಾರೆ. ಹೀಗಿರುವಾಗಲೇ ತೇವಾಂಶದ ಕೊರತೆಯಿಂದ ತೆಂಗಿನ ಹಳ್ಳುಗಳು ಉದುರಲಾರಂಭಿಸಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡುಮಾಡಿದೆ. ಹಾಗಾಗಿ ಕೂಡಲೇ ಸರ್ಕಾರ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು.‌ ರಾಜಕೀಯ ರಹಿತವಾಗಿ ರೈತರ ಬೆಳೆಗಳಿಗೆ ಅದರಲ್ಲಿಯೂ ತೆಂಗು ಮತ್ತು ಅಡಿಕೆ ಬೆಳೆಗೆ ನೀರೊದಗಿಸಲು ಎಲ್ಲ ರೀತಿಯ ಪರಿಹಾರ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು” ಎಂದು ಸಂಯುಕ್ತ ಹೋರಾಟ-ಕರ್ನಾಟಕ ಒತ್ತಾಯಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚಿಂತಕ ಕೆ ದೊರೆರಾಜು ಮಾತನಾಡಿ, “ಚುನಾವಣೆ ನಂತರ ಜಿಲ್ಲಾಡಳಿತ ಜನರ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸಬೇಕಾಗಿದೆ. ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಕೆಲವರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿದ್ದರೂ ಅದು ಅಂಚಿನ ಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು. ಶಾಲೆ, ಕಾಲೇಜುಗಳು ಪುನರಾರಂಭವಾಗುವ ಕಾಲದಲ್ಲಿ ಶುಲ್ಕುಗಳು ತೀವ್ರವಾಗಿ ಹೆಚ್ಚಿದ್ದು, ಖಾಸಗಿ ಶಾಲೆಗಳ ಈ ದಂಧೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ನಾಗೇಶ್ ಮಾತನಾಡಿ, “ನಾಫೆಡ್ ಖರೀದಿ ಕೇಂದ್ರದ ಮೂಲಕ ಕೊಂಡ ಕೊಬ್ಬರಿಗೆ ಮೂರು ದಿನದಲ್ಲಿ ರೈತನ ಖಾತೆಗೆ ಹಣ ವರ್ಗಾವಣೆ ಮಾಡಬೇಕು. ಜಿಲ್ಲೆಯಲ್ಲಿ ಏಪ್ರಿಲ್‌ 1 ರಿಂದ ಕೊಬ್ಬರಿ ಖರೀದಿ ಆರಂಭವಾಗಿದ್ದು, ಏಪ್ರಿಲ್‌ 13ರವರಗೆ ಮಾತ್ರ ಕೇಂದ್ರ ಸರ್ಕಾರದ ಎಂಎಸ್‌ಪಿ  ಹಣ ಬಂದಿದೆ. ಆ ನಂತರದಿಂದ ಈವರೆಗೂ ಖರೀದಿಯಾದ ಕೊಬ್ಬರಿಗೆ ಹಣ ಬಂದಿಲ್ಲ. ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ₹1‌,500 ಪ್ರೋತ್ಸಾಹ ಧನ ಈವರೆಗೂ ಒಬ್ಬ ರೈತರಿಗೂ ಬಂದಿಲ್ಲ. ರಾಜ್ಯ ಸರ್ಕಾರ ಕೊಬ್ಬರಿ ಖರೀದಿಯನ್ನು 2024ರ ಜೂನ್ 14ರವರೆಗೂ ವಿಸ್ತರಿಸಿದೆ.‌ ಇದನ್ನು ಮುಂದಿನ 2 ತಿಂಗಳು ಮುಂದುವರೆಸಬೇಕು” ಎಂದು ಮನವಿ ಮಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಬಿ ಉಮೇಶ್ ಮಾತನಾಡಿ, “ನಾಫೆಡ್ ಖರೀದಿ ಕೇಂದ್ರದ ಅಧಿಕಾರಿಗಳು, ವರ್ತಕರು ಮತ್ತು ಜನಪ್ರತಿನಿಧಿಗಳು ಸೇರಿ, ಸರ್ಕಾರದ ಸವಲತ್ತುಗಳು ಕೊಬ್ಬರಿ ಬೆಳೆಗಾರರಿಗೆ ತಲುಪದಂತೆ ತಡೆಯುವ ಪ್ರಯತ್ನ ನಡೆಸಿದ್ದಾರೆ.‌ ಹಮಾಲಿ ಚಾರ್ಜು, ಒಂದು ಕೆಜಿಗೆ 300 ಗ್ರಾಂ ಹೆಚ್ಚಿಗೆ ತೂಕ ಹೀಗೆ ಹಲವು ರೀತಿಯಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಕೊಬ್ಬರಿ ಎಂದರೆ ಕೇವಲ ತಲೆಗೆ ಬಳಸುವ ಎಣ್ಣೆ ಎಂಬ ಅಧಿಕಾರಗಳ ಮನೋಭಾವ ಬದಲಾಗಬೇಕು. ಕೊಬ್ಬರಿ ಎಂಬುದು ಆಹಾರ ಪದಾರ್ಥ ಎಂಬುದನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡಬೇಕಾಗಿದೆ” ಎಂದರು.

ರಾಜ್ಯರೈತ ಸಂಘದ ತಿಪಟೂರು ತಾಲೂಕು ಅಧ್ಯಕ್ಷ ಜಯಚಂದ್ರ ಶರ್ಮ ಮಾತನಾಡಿ, “ನಾಫೆಡ್ ಅಧಿಕಾರಿಗಳು ಮತ್ತು ಗೋಡನ್ ಅಧಿಕಾರಿಗಳಿಂದ ಹಗಲು ದರೋಡೆ ನಡೆಯುತ್ತಿದೆ. ಒಂದು ಕ್ವಿಂಟಾಲ್ ಕೊಬ್ಬರಿಗೆ ಒಂದೂವರೆಯಿಂದ ಮೂರು ಕೆ ಜಿ ವರೆಗೆ ಹೆಚ್ಚು ತೂಕ ಪಡೆಯುತ್ತಿದ್ದಾರೆ. ಆದರೆ ರೈತರಿಗೆ ಮಾತ್ರ ನೂರು ಕೆ ಜಿ ಬಿಲ್ ನೀಡುತ್ತಿದ್ದು, ಹೆಚ್ಚುವರಿ ಕೊಬ್ಬರಿ ಹಣವನ್ನು ರೈತರ ಹೆಸರಿನಲ್ಲಿ ಅಧಿಕಾರಿಗಳು ಲಪಟಾಯಿಸುತ್ತಿದ್ದಾರೆ. ಐದಾರು ಕೋಟಿ ರೂಗಳಿಗೂ ಹೆಚ್ಚಿನ ಹಗಲು ದರೋಡೆ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರೆ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಗದಗ | ಪ್ರಜ್ವಲ್ ಪ್ರಕರಣ ಕ್ರಮಕ್ಕೆ ಕೇಂದ್ರ ಸರ್ಕಾರ ಮಂದಾಗಲಿ: ಸಂಜಯ್‌ ದೊಡ್ಡಮನಿ

ಸುದ್ದಿಗೋಷ್ಟಿಯಲ್ಲಿ ಎಐಟಿಯುಸಿ ಕಂಬೇಗೌಡ, ಸೈಯದ್ ಮುಜೀವ್, ರೈತ ಸಂಘದ ದೇವರಾಜು, ಚನ್ನಬಸಣ್ಣ, ಅಜ್ಜಪ್ಪ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಆದಿಚುಂಚನಗಿರಿ ಮಠಕ್ಕೆ ಗೀತಾ ಶಿವರಾಜ್‌ಕುಮಾರ್ ಭೇಟಿ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ಬುಧವಾರ...

ಕಾಂಗ್ರೆಸ್‌ ಪ್ರತಿಭಟನೆ | ಬರ ಪರಿಹಾರ ನೀಡಿ, ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಬರ ಪರಿಹಾರದಲ್ಲಿ ತಾರತಮ್ಯ ವಿರೋಧಿಸಿ...

ಬೈಡನ್ ಅವರನ್ನು ಬೇಕಾದರೆ ಭೇಟಿ ಮಾಡಬಹುದು, ಆದರೆ ತೇಜಸ್ವಿಸೂರ್ಯ ಭೇಟಿಗೆ ಸಿಗ್ತಾ ಇಲ್ಲ!

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಹಣವಿಟ್ಟು ವಂಚನೆಗೊಳಗಾದ ಸಾವಿರಾರು ಜನರು ಸಂಸದ...