ತೋಷಾಖಾನಾ ಮೊಕದ್ದಮೆಯಲ್ಲಿ ಇಮ್ರಾನ್‌ ಖಾನ್‌ ಅವರಿಗೆ ಇಸ್ಲಾಮಾಬಾದಿನ ಸೆಷನ್ಸ್‌ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಈ ಕಾರಣದಿಂದ ಅವರು ಬಹುತೇಕ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ನಿರ್ಬಂಧ ಏರ್ಪಡುತ್ತದೆ.

ಪೊಲೀಸರು ಇಮ್ರಾನ್‌ ಖಾನ್‌ ಅವರನ್ನು ಅವರ ಲಾಹೋರ್‌ ಮನೆಯಿಂದ ಬಂಧಿಸಿದ್ದಾರೆ ಎಂದು ಅವರ ವಕೀಲ ಇಂತೆಝಾರ್‌ ಪಂಜೋತಾ ಅವರು ಖಚಿತಪಡಿಸಿದ್ದಾರೆ.

ಲಾಹೋರ್‌ ಪೊಲೀಸ್‌ ಮುಖ್ಯಸ್ಥ ಬಿಲಾಲ್‌ ಸಿದ್ದಿಕ್‌ ಕಮಿಯಾನಾ ಪ್ರಕಾರ ಖಾನ್‌ ಅವರನ್ನು ಇಸ್ಲಾಮಾಬಾದಿಗೆ ಸ್ಥಳಾಂತರಿಸಿ ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲಿ ಇರಿಸಲಾಗುವುದು.

70 ವರ್ಷದ ಇಮ್ರಾನ್‌ ಖಾನ್‌ ಅವರು ಈ ಹಿಂದೆ ಪಾಕಿಸ್ತಾನದ ಜನಪ್ರಿಯ ಕ್ರಿಕೆಟ್‌ ಪಟುವಾಗಿದ್ದು, ತಂಡದ ನಾಯಕನಾಗಿದ್ದರು. ನಂತರ ರಾಜಕಾರಣ ಪ್ರವೇಶಿಸಿ 2018ರಿಂದ 2022ರವರೆಗೆ ದೇಶದ ಪ್ರಧಾನಿಯಾಗಿದ್ದರು.

ಅವರು ಪ್ರಧಾನಿಯಾಗಿದ್ದಾಗ ಪ್ರಧಾನಿಗೆ ಬಂದಿದ್ದ ಉಡುಗೊರೆಗಳನ್ನು ಮಾರಿಬಿಟ್ಟಿದ್ದಾರೆ ಎಂಬ ಆರೋಪವೇ ಈಗ ಅವರನ್ನು ಜೈಲಿನವರಗೆ ಕರೆತಂದಿದೆ.

ಇಮ್ರಾನ್‌ ಖಾನ್‌ ಅವರು ಪ್ರಧಾನಿಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡು 14 ಕೋಟಿ ಪಾಕಿಸ್ತಾನಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಕೊಳ್ಳಲು ಮತ್ತು ಮಾರಲು ಪ್ರಯತ್ನಿಸಿದ್ದಾರೆ ಎಂಬುದೇ ಆರೋಪ.

ಆ ನಂತರ ಈಗಿನ ಸೈನ್ಯದ ಮುಖ್ಯಸ್ಥ ಜನರಲ್‌ ಅಸೀಮ್‌ ಮುನಿರ್‌ ಅವರು ತನ್ನನ್ನು ಮತ್ತು ತನ್ನ ಪಕ್ಷವನ್ನು ಗುರಿ ಮಾಡುತ್ತಿದ್ದಾರೆ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲದಂತೆ ಮಾಡುತ್ತಿದ್ದಾರೆಂದು ಇಮ್ರಾನ್‌ ಆರೋಪಿಸಿದ್ದರು.

ಇಂದಿನ ಬಂಧನದ ಮುನ್ಸೂಚನೆ ಇದ್ದ ಇಮ್ರಾನ್‌ ಅವರು ಒಂದು ವಿಡಿಯೋ ಮೂಲಕ ಜನರಿಗೆ ಶಾಂತಿಯುತವಾಗಿ ಪ್ರತಿಭಟಿಸಲು ಕರೆ ನೀಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳಿಗಾಗಿ ಈದಿನ.ಕಾಮ್‌ ಫಾಲೋ ಮಾಡಿ