ಸಲಿಂಗ ಸಂಬಂಧಗಳಿಗೆ ನಿಷೇಧ ಹೇರುವ ಮಹತ್ವದ ಮಸೂದೆಗೆ ಉಗಾಂಡ ದೇಶದ ಸಂಸತ್ತು ಅಂಗೀಕಾರ ನೀಡಿದೆ.
ಕಟ್ಟುನಿಟ್ಟಾದ ಹೊಸ ಕಾನೂನಿನ ಪ್ರಕಾರ, ದೇಶದಲ್ಲಿ ವ್ಯಕ್ತಿಗಳು ತಾವು ಎಲ್‌ಜಿಬಿಟಿಕ್ಯೂ (ಸಲಿಂಗಕಾಮಿ, ಸಲಿಂಗ ಮಹಿಳಾ ಪ್ರೇಮಿಗಳು, ದ್ವಿಲಿಂಗಿ, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಕ್ವೀರ್) ಎಂದು ಗುರುತಿಸಿಕೊಳ್ಳುವುದು ಅಪರಾಧವಾಗಲಿದೆ.
ಕಾನೂನನ್ನು ಉಲ್ಲಂಘಿಸುವವರು ಭಾರಿ ದಂಡದ ಜೊತೆಗೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಗೇ ಸೆಕ್ಸ್‌ನಲ್ಲಿ ಭಾಗಿಯಾದರೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಹೊಸ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. 18 ವರ್ಷ ಕಡಿಮೆ ವಯಸ್ಸಿನ ವ್ಯಕ್ತಿಯೊಂದಿಗೆ ಒತ್ತಾಯದ ಸಲಿಂಗಕಾಮ ಅಥವಾ ಗೇ ಸೆಕ್ಸ್‌ನಲ್ಲಿ ಭಾಗಿಯಾದಲ್ಲಿ, ಎಚ್‌ಐವಿ ಪಾಸಿಟಿವ್ ಆಗಿರುವ ವ್ಯಕ್ತಿ ಮತ್ತು ಇತರ ಗಂಭೀರ ಕಾಯಿಲೆ ಇರುವ ವ್ಯಕ್ತಿ ಸಲಿಂಗಕಾಮದಲ್ಲಿ ಭಾಗಿಯಾದಲ್ಲಿ, ಅಂಥವರಿಗೆ ಮರಣದಂಡನೆ ಶಿಕ್ಷೆಯನ್ನು ಕಾನೂನಿನ ಅಡಿಯಲ್ಲಿ ವಿಧಿಸಲಾಗಿದೆ.
ಈ ಮೂಲಕ ಸಲಿಂಗ ಸಂಬಂಧಗಳ ಮೇಲೆ ನಿಷೇಧ ಹೇರುತ್ತಿರುವ ಆಫ್ರಿಕಾದ 30ನೇ ದೇಶವಾಗಿ ಉಗಾಂಡ ಹೊರಹೊಮ್ಮಿದೆ. ಸಲಿಂಗ ಸಂಬಂಧಗಳನ್ನು ನಿಷೇಧಿಸುವುದರ ಜೊತೆಗ ಸಲಿಂಗಕಾಮಿ ನಡವಳಿಕೆಗೆ ಸಹಾಯ ಮತ್ತು ಪ್ರೋತ್ಸಾಹ ನೀಡುವುದು, ಸಲಿಂಗಕಾಮಿ ಚಟುವಟಿಕೆಯಲ್ಲಿ ತೊಡಗುವುದಕ್ಕೆ ನೂತನ ಕಾನೂನಿಲ್ಲಿ ತಡೆ ಒಡ್ಡಲಾಗಿದೆ.
ಉಗಾಂಡ ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಗೆ 389 ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಕೌಟುಂಬಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿದು ಲೈಂಗಿಕ ಅಶ್ಲೀಲತೆಯಿಂದ ದೇಶವನ್ನು ಕಾಪಾಡಬೇಕಿದೆ. ಮಸೂದೆಯ ಪ್ರತಿಯನ್ನು ಅಧ್ಯಕ್ಷ ಯೊವೆರೆ ಮುಸೆವೆನಿಯವರ ಸಹಿಗೆ ಕಳುಹಿಸಿ ಕೊಡಲಾಗುವುದು ಎಂದು ಮಸೂದೆ ಮಂಡಿಸಿರುವ ಶಾಸಕ ಅಸುಮಾನ್ ಬಸಲಿರ್ವಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಇದುಉಗಾಂಡದ ಇತಿಹಾಸದಲ್ಲಿ ದುರಂತದ ದಿನ. ದ್ವೇಷಕ್ಕೆ ಮಹತ್ವ ಕೊಟ್ಟು ಎಲ್‍ಜಿಬಿಟಿಐಕ್ಯೂ ಸಮುದಾಯದ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಕಾನೂನು ಇದಾಗಿದೆ” ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.