ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿರುವ ಆರೋಪದ ಮೇಲೆ ಲಾರಿಯೊಂದಕ್ಕೆ ಬೆಂಕಿ ಇಟ್ಟ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಅಕ್ರಮ ಗೋ ಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಲಾರಿಗೆ ಬೆಂಕಿ ಹಚ್ಚಿದ್ದಾರೆ.
ರಾಯಬಾಗ ತಾಲ್ಲೂಕಿನ ಕುಡಚಿಯಿಂದ ಹೈದರಾಬಾದ್ ಕಡೆಗೆ ಮಾಂಸ ಸಾಗಿಸುತ್ತಿದ್ದ ವಾಹನ ಇದಾಗಿದ್ದು, ಐನಾಪುರ ದಾಟುತ್ತಿತ್ತು. ಆ ವೇಳೆ ಅದರಲ್ಲಿ ಗೋಮಾಂಸ ಇದೆ ಎಂದು ಶಂಕಿಸಿ ಕೆಲವು ಕಾರ್ಯಕರ್ತರು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಇದೇ ವೇಳೆ ಚಾಲಕನನ್ನು ಹೊರಗೆಳೆದು ಥಳಿಸಿ, ಕೂಡಿಹಾಕಿದ್ದಾರೆ ಎನ್ನಲಾಗಿದೆ.
ಪೊಲೀಸರು ಬರುವ ಹೊತ್ತಿಗೆ ಲಾರಿ ಪೂರ್ತಿ ಸುಟ್ಟು ಹೋಗಿದೆ. ಐನಾಪುರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ಇಬ್ಬರು ಡಿಎಸ್‌ಪಿ, ನಾಲ್ಕು ಸಿಪಿಐ, ಎಂಟು ಪಿಎಸ್‌ಐ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ಡಾ.ಭೀಮಾಶಂಕರ ಗುಳೇದ, “ಈ ಘಟನೆಗೆ ಸಂಬಂಧಿಸಿ ಎರಡು ಪ್ರಕರಣ ದಾಖಲಿಸಿದ್ದೇವೆ. ಗೋಹತ್ಯೆ ಕಾಯ್ದೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಮೂರು ಜನರನ್ನು ಬಂಧಿಸಿದ್ದೇವೆ. ಲಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಇದುವರೆಗೆ ಐವರನ್ನು ಬಂಧಿಸಲಾಗಿದ್ದು, ಅವರ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ” ಎಂದಿದ್ದಾರೆ.