ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳ್ಳಾವಿ ಸರ್ಕಾರಿ ಪದವಿ ಕಾಲೇಜಿನ ಸಮಸ್ಯೆಗಳ ಬಗ್ಗೆ ‘ಜೋಪಡಿಯಡಿ ಪದವಿ ವಿದ್ಯಾರ್ಥಿಗಳಿಗೆ ಪಾಠ’ ಎಂಬ ಶಿರ್ಷಿಕೆಯಲ್ಲಿ ಈದಿನ.ಕಾಮ್ ಫೆ.1ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ವರದಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ದೊರೆದಿದ್ದು, ಕ್ಷೇತ್ರದ ಶಾಸಕರು ಕಾಲೇಜಿಗೆ ಹೊಸ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.
ಕಾಲೇಜಿನಲ್ಲಿ ಫೆಬ್ರವರಿ 2ರಂದು ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ, “ಒಂದು ವರ್ಷದಲ್ಲಿ ಪದವಿ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುತ್ತೇವೆ. ಶಿಕ್ಷಣ ಇಲಾಖೆಯ ಅನುದಾನ ವಿಳಂಬವಾದರೆ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲೇ ಒಂದು ಕೋಟಿ ರೂ. ಅನುದಾನ ನೀಡಿ, ಕಟ್ಟಡ ನಿರ್ಮಾಣ ಮಾಡಿಸುತ್ತೇನೆ” ಎಂದು ಭರವಸೆ ನೀಡಿದ್ದಾರೆ.
“ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಬೆಳ್ಳಾವಿ ಹೋಬಳಿಯ ತಿಮ್ಮಲಪುರ ಬಳಿಯ ಬ್ಯಾಲದಲ್ಲಿ ಐದು ಎಕರೆ ಭೂಮಿ ಗುರುತಿಸಲಾಗಿದೆ. ಶೀಘ್ರವಾಗಿ, ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗುವುದು” ಎಂದು ಶಾಸಕರು ಹೇಳಿದ್ದಾರೆ.